ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲಿಬಾನಿಗಳ ವಿರುದ್ಧ ಫತ್ವಾ ಹೊರಡಿಸಿದ ಮೌಲ್ವಿಗಳು

Last Updated 12 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಲಾಹೋರ್(ಪಿಟಿಐ): ಹೆಣ್ಣು ಮಕ್ಕಳ ಶಿಕ್ಷಣದ ಪರವಾಗಿ ದನಿಯೆತ್ತಿದ ಬಾಲಕಿ ಮಲಾಲಾ ಯೂಸೂಫ್‌ಝೈ ಮೇಲಿನ ದಾಳಿ `ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು~ ಎಂದು ಖಂಡಿಸಿರುವ ಪಾಕ್‌ನ 50ಕ್ಕೂ ಹೆಚ್ಚು ಸುನ್ನಿ ಮೌಲ್ವಿಗಳು, ಶುಕ್ರವಾರ ತಾಲಿಬಾನಿಗಳ ವಿರುದ್ಧ ಸಾಮೂಹಿಕ ಫತ್ವಾ ಹೊರಡಿಸಿದ್ದಾರೆ.

`ಇಸ್ಲಾಂ ಧರ್ಮಕ್ಕೆ ತಾಲಿಬಾನಿಗಳು ನೀಡುತ್ತಿರುವ ಅರ್ಥವಿವರಣೆ ಅಸಮಂಜಸವಾದುದು. ಮಹಿಳೆಯರ ಶಿಕ್ಷಣದ ಮೇಲೆ ನಮ್ಮ ಧರ್ಮ ನಿಷೇಧ ಹೇರುವುದಿಲ್ಲ. ಹಾಗಾಗಿ ತಾಲಿಬಾನಿಗಳು ಇಸ್ಲಾಂ ಧರ್ಮದ ಮೂಲತತ್ವಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಮೌಲ್ವಿಗಳ `ಸುನ್ನಿ ಇತ್ತೆಹಾದ್ ಕೌನ್ಸಿಲ್~ ತಾಲಿಬಾನಿಗಳ ವಿರುದ್ಧ ಗುಡುಗಿದೆ.

`ಅಮಾಯಕ ವ್ಯಕ್ತಿಯನ್ನು ಕೊಲ್ಲುವುದೆಂದರೆ, ಇಡೀ ಮಾನವತೆಯನ್ನು ಕೊಲ್ಲುವುದಕ್ಕೆ ಸಮ.  ಇಸ್ಲಾಂ ಧರ್ಮದಲ್ಲಿ ಅಮಾಯಕರನ್ನು ಕೊಲ್ಲುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿಸಲಾಗಿದ್ದು, ತಪ್ಪು ಮಾಡುವವರು ಕೂಡ ಅದೇ ರೀತಿಯ ಶಿಕ್ಷೆ ಅನುಭವಿಸುತ್ತಾರೆ~ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳ ಮಾಜಿ ಸಚಿವ ಹಮೀದ್ ಸಾಹೀದ್ ಕಜ್ಮಿ ಹೇಳಿದ್ದಾರೆ.

ಶಾಲೆಗೆ ತೆರಳಿದ್ದ ಮಲಾಲಾ ಯೂಸೂಫ್‌ಝೈ ಮೇಲೆ ಸ್ವಾತ್ ಕಣಿವೆಯಲ್ಲಿ ನಿಷೇಧಿತ ತೆಹ್ರಿಕ್-ಈ-ತಾಲಿಬಾನ್ ಉಗ್ರರ ಸಂಘಟನೆ  ಕಳೆದ ಮಂಗಳವಾರ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲು ಪ್ರಯತ್ನಿಸಿತ್ತು. ಘಟನೆಯ ಹೊಣೆಯನ್ನು ಹೊತ್ತುಕೊಂಡಿರುವ ಸಂಘಟನೆ, ಮಲಾಲ ಬದುಕುಳಿದರೆ ಮತ್ತೆ ದಾಳಿ ನಡೆಸಿ ಕೊಲ್ಲುವುದಾಗಿ ಹೇಳಿದೆ.

ಮಲಾಲ ಸ್ಥಿತಿ ಗಂಭೀರ: ಮಲಾಲಾ ಸ್ಥಿತಿ ಇನ್ನೂ ಗಂಭೀರವಾಗಿದ್ದು,  ಮುಂದಿನ 48 ಗಂಟೆಗಳವರೆಗೆ ಕಾದು ನೋಡಬೇಕಿದೆ ಎಂದು ಎಂದು ರಾವಲ್ಪಿಂಡಿ ಸೇನಾ ಆಸ್ಪತ್ರೆಯ ವಕ್ತಾರರು ತಿಳಿಸಿದ್ದಾರೆ. `ಸದ್ಯ ಆಕೆಗೆ ಕೃತಕ ಉಸಿರಾಟದ ನೆರವು ನೀಡಲಾಗಿದ್ದು, ಮುಂದಿನ 36-48 ಗಂಟೆಗಳ ಅವಧಿ ಮಹತ್ವದ್ದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ದೇಶದಾದ್ಯಂತ ಪ್ರಾರ್ಥನೆ: ಆಸ್ಪತ್ರೆಯಲ್ಲಿ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಬಾಲಕಿ ಮಲಾಲಾಳ ಶೀಘ್ರ ಚೇತರಿಕೆಗೆ ಪವಿತ್ರ ಶುಕ್ರವಾರದಂದು ಪಾಕಿಸ್ತಾನದಾದ್ಯಂತ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ ಜರುಗಿತು. `ಮಲಾಲಾ ಚೇತರಿಕೆಗೆ ಹಾರೈಸಿ  ಶುಕ್ರವಾರವನ್ನು `ಪ್ರಾರ್ಥನಾ ದಿನ~ವನ್ನಾಗಿ ಆಚರಿಸಬೇಕು ಎಂದು ಮೌಲ್ವಿಗಳು ಹಾಗೂ ರಾಜಕೀಯ ಮುಖಂಡರು ಗುರುವಾರ ನೀಡಿದ್ದ ಕರೆಗೆ ಇಡೀ ದೇಶಅಭೂತಪೂರ್ವವಾಗಿ ಸ್ಪಂದಿಸಿತು.

ಮೂವರ ಬಂಧನ
ಇಸ್ಲಾಮಾಬಾದ್ (ಪಿಟಿಐ):
ಮಲಾಲಾ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪದ ಮೇಲೆ ಮೂವರು ಶಂಕಿತ ಆರೋಪಿಗಳನ್ನು ಶುಕ್ರವಾರ ಪೊಲೀಸರು ವಾಯುವ್ಯ ಪಾಕಿಸ್ತಾನದ ಸ್ವಾತ್ ಪ್ರದೇಶದಲ್ಲಿ ಬಂಧಿಸಿದ್ದಾರೆ. ಆದರೆ, ಈ ದಾಳಿಯ ಸೂತ್ರಧಾರ ಅತಾವುಲ್ಲ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT