ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲೀಮು ನಡೆಸಿದ ತೆಂಡೂಲ್ಕರ್

Last Updated 22 ಫೆಬ್ರುವರಿ 2011, 18:00 IST
ಅಕ್ಷರ ಗಾತ್ರ

ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡದ ಆಟಗಾರರು ಉದ್ಯಾನನಗರಿಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಠಿಣ ತಾಲೀಮು ಕೈಗೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಮಂಗಳವಾರ ತಂಡವನ್ನು ಸೇರಿಕೊಂಡರು.

ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಮಂಡಿನೋವಿಗೆ ಒಳಗಾಗಿದ್ದ ಸಚಿನ್ ಮಂಗಳವಾರ ಪೂರ್ಣ ಪ್ರಮಾಣದ ತಾಲೀಮು ನಡೆಸಲಿಲ್ಲ. ಅವರು ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಜಿಮ್‌ನಲ್ಲಿ ಕೆಲಹೊತ್ತು ದೈಹಿಕ ಕಸರತ್ತು ನಡೆಸಿದರು.

ಸಚಿನ್ ಅವರು ಭಾನುವಾರ ಮುಂಬೈನಲ್ಲಿ ಎಂಆರ್‌ಐ ಸ್ಕ್ಯಾನ್‌ಗೆ ಒಳಗಾಗಿದ್ದರು. ಮಂಡಿಯ ಗಾಯ ಗಂಭೀರ ಸ್ವರೂಪದಲ್ಲ ಎಂಬುದನ್ನು ವೈದ್ಯರ ವರದಿ ತಿಳಿಸಿದೆ. ಇಂಗ್ಲೆಂಡ್ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಆಡುವುದು ಹೆಚ್ಚುಕಡಿಮೆ ಖಚಿತ.

ಮಂಗಳವಾರ ಅಭ್ಯಾಸದ ವೇಳೆ ಹರಭಜನ್ ಸಿಂಗ್ ಮತ್ತು ಜಹೀರ್ ಖಾನ್ ಅವರು ಬ್ಯಾಟಿಂಗ್ ಮೇಲೆ ಮಾತ್ರ ಗಮನ ನೀಡಿದರು. ಕೋಚ್ ಗ್ಯಾರಿ ಕರ್ಸ್ಟನ್ ಇಬ್ಬರಿಗೂ ಸೂಕ್ತ ಸಲಹೆ ನೀಡಿದರು. ಮಾಜಿ ಆಟಗಾರ ಜಿ.ಆರ್. ವಿಶ್ವನಾಥ್ ಅವರೂ ಆಟಗಾರರ ಜೊತೆ ಕಾಣಿಸಿಕೊಂಡರು.

ವೀರೇಂದ್ರ ಸೆಹ್ವಾಗ್, ಎಸ್. ಶ್ರೀಶಾಂತ್ ಮತ್ತು ಆರ್. ಅಶ್ವಿನ್ ಅಭ್ಯಾಸಕ್ಕೆ ಆಗಮಿಸಲಿಲ್ಲ. ಅವರು ಹೋಟೆಲ್‌ನಲ್ಲೇ ಕಾಲ ಕಳೆದರು.

ನಾಳೆ ಟಿಕೆಟ್ ಮಾರಾಟ: ಇಂಗ್ಲೆಂಡ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಇನ್ನು ಕೇವಲ ನಾಲ್ಕು ದಿನಗಳು ಮಾತ್ರ ಬಾಕಿಯುಳಿದಿವೆ. ಉದ್ಯಾನನಗರಿಯ ಕ್ರಿಕೆಟ್ ಪ್ರೇಮಿಗಳು ಪಂದ್ಯದ ಟಿಕೆಟ್ ಗಿಟ್ಟಿಸಲು ಕೊನೆಯ ಕ್ಷಣದ ಪ್ರಯತ್ನ ನಡೆಸುತ್ತಿದ್ದಾರೆ.

ಕೆಎಸ್‌ಸಿಎಯು ಗುರುವಾರ ಟಿಕೆಟ್ ಮಾರಾಟ ನಡೆಸುವುದಾಗಿ ಹೇಳಿದೆ. ಆದರೆ ಎಷ್ಟು ಟಿಕೆಟ್‌ಗಳು ಮಾರಾಟಕ್ಕಿವೆ ಎಂಬುದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಕ್ರೀಡಾಂಗಣದ ಕೌಂಟರ್ ಮೂಲಕ ಕೆಲವೇ ಟಿಕೆಟ್‌ಗಳು ಸಾರ್ವಜನಿಕರಿಗೆ ಲಭಿಸಲಿದೆ. ಅದನ್ನು ಗಿಟ್ಟಿಸಲು ಸಾವಿರಾರು ಮಂದಿ ಈಗಲೇ ಸಜ್ಜಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT