ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕಿನ 19 ಶ್ರದ್ಧಾ ಕೇಂದ್ರ ತೆರವು

Last Updated 24 ಸೆಪ್ಟೆಂಬರ್ 2011, 9:10 IST
ಅಕ್ಷರ ಗಾತ್ರ

ಹಾಸನ: ನಗರದಲ್ಲಿ ರಸ್ತೆ, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ 19 ಶ್ರದ್ಧಾ ಕೇಂದ್ರಗಳನ್ನು ಗುರುವಾರ ರಾತ್ರಿ ತೆರವುಗೊಳಿಸಲಾಗಿದೆ. ಕೆಲವು ತಿಂಗಳ ಹಿಂದೆಯೇ ಒಂದುಬಾರಿ ಕಾರ್ಯಾ–ಚರಣೆ ಆರಂಭಿಸಿದ್ದರೂ ವಿವಿಧ ಕಾರಣಗಳಿಂದ ಕೆಲವೇ ದಿನದಲ್ಲಿ ಕಾರ್ಯಾಚರಣೆ ಸ್ಥಿತಗೊಂಡಿತ್ತು. ಗುರುವಾರದ ಕಾರ್ಯಾಚರಣೆಯಿಂದ ಎಲ್ಲ ಒತ್ತುವರು ತೆರವಾದಂತಾಗಿದೆ.

ಸುಪ್ರೀಂಕೋರ್ಟ್ ತೀರ್ಪು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಂದ ಬಂದ ಒತ್ತಡದ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ತಹಶೀಲ್ದಾರ ಕೆ. ಮಥಾಯಿ ನೇತೃತ್ವ ಹಾಗೂ ನಗರಸಭೆ ಅಧಿಕಾರಿಗಳು, ಪೊಲೀಸ್ ಇಲಾಖೆಗಳ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಯಿತು.

`ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ 27 ಜಿಲ್ಲೆಗಳಲ್ಲಿ ಕೆಲವು ತಿಂಗಳ ಹಿಂದೆಯೇ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿಯಾಗಿತ್ತು. ಆದರೆ ವಿವಿಧ ಕಾರಣಗಳಿಂದ ಹಾಸನದಲ್ಲಿ ಆ ಕಾರ್ಯ ನೆನೆಗುದಿಗೆ ಬಿತ್ತಿತ್ತು. ಹಿಂದೆ ಒಮ್ಮೆ ನಾಲ್ಕು ಶ್ರದ್ಧಾಕೇಂದ್ರಗಳ ತೆರವು ಕಾರ್ಯಾಚರಣೆ ನಡೆದರೂ, ವಿವಿಧ ಕಾರಣದಿಂದ ಅದು ಸ್ಥಗಿತಗೊಂಡಿತ್ತು.
 
ಈಗ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೂರು ದಿನದ ಗಡುವು ನೀಡಿದ್ದರಿಂದ ಜಿಲ್ಲಾಧಿಕಾರಿ ತುರ್ತು ಸಭೆ ಕರೆದು ತೆರವು ಕಾರ್ಯಾಚರಣೆ ಆರಂಭಿಸುವಂತೆ ಸೂಚನೆ ನೀಡಿದ್ದರು. ಅದರಂತೆ ಕ್ರಮ ಕೈಗೊಂಡಿದ್ದೇವೆ. ವ್ಯವಸ್ಥಿತವಾಗಿ ಮತ್ತು ಶಾಂತಿಯುತವಾಗಿ ಕಾರ್ಯಾಚರಣೆ ನಡೆದಿದೆ~ ಎಂದು ಮಥಾಯಿ ತಿಳಿಸಿದರು.

ಕೆಲವು ದಿನಗಳ ಹಿಂದೆಯೇ ಇದಕ್ಕೆ ಸಿದ್ಧತೆ ಆರಂಭಿಸಿದ್ದೆವು. ಗುರುವಾರ ನಾಲ್ಕು ತಂಡಗಳನ್ನು ರಚಿಸಿ ನಗರದ ವಿವಿಧ ಭಾಗಗಳಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ಆರಂಭಿಸಿದ್ದೆವು. ನಾಲ್ಕು ಜೆಸಿಬಿ, ಎಂಟು ಟಿಪ್ಪರ್ ಹಾಗೂ ಆರು ಟ್ರ್ಯಾಕ್ಟರ್‌ಗಳ ಸಹಾಯದಿಂದ ಇಂಥ ಕೇಂದ್ರಗಳನ್ನು ಸಂಪೂರ್ಣವಾಗಿ ತೆರವು ಮಾಡಲಾಗಿದೆ. ಪೊಲೀಸ್ ಇಲಾಖೆ, ಕೆ.ಎಸ್.ಆರ್‌ಪಿ ಹಾಗೂ ಜಿಲ್ಲಾ ಮೀಸಲು ಪಡೆಯ ಪೊಲೀಸರನ್ನು ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗಿತ್ತು.

`ಜನರ  ಭಾವನೆಗಳಿಗೆ ನೋವಾಗಬಾರದೆಂಬ ಹಿನ್ನೆಲೆಯಲ್ಲಿ ಕೆಲವು ದಿನಗಳ ಹಿಂದೆಯೇ ಸ್ಥಳೀಯರೊಡನೆ ಮಾತುಕತೆ ನಡೆಸಿ, ಅವರಿಗೆ ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದೆವು. ಶ್ರದ್ಧಾಕೇಂದ್ರ ಕೆಡವುವ ಮೊದಲು ಬೇಕಾದಂತೆ ಪೂಜೆ - ಪುನಸ್ಕಾರಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದ್ದೆವು.
 
ಕೆಲವೆಡೆ ಗರುಡಗಂಬವನ್ನು ತೆರವು ಮಾಡುವುದಕ್ಕೂ ಮೊದಲು ಸ್ಥಳೀಯರು ಪೂಜೆ ಮಾಡಿ ಆರತಿ ಬೆಳಗಿ ಬಳಿಕ ಅವಕಾಶ ಮಾಡಿಕೊಟ್ಟರು. ರಾತ್ರಿ 11ಗಂಟೆಗೆ ಆರಂಭವಾದ ಕಾರ್ಯಾಚರಣೆ ಬೆಳಿಗ್ಗೆ 5.30ರವರೆಗೂ ನಡೆಯಿತು. ಒಂದೇ ರಾತ್ರಿಯಲ್ಲಿ 19 ಶ್ರದ್ಧಾ ಕೇಂದ್ರಗಳನ್ನು ತೆರವು ಮಾಡಿರುವ ಉದಾಹರಣೆ ರಾಜ್ಯದ ಯಾವ ಜಿಲ್ಲೆಯಲ್ಲೂ ಇಲ್ಲ~ ಎಂದು ಮಥಾಯಿ ತಿಳಿಸಿದರು.

ಹಾಸನ ನಗರದಲ್ಲಿ ಅತಿಕ್ರಮಣ ಮಾಡಿ ನಿರ್ಮಿಸಿದ 25  ಪೂಜಾ ಕೇಂದ್ರಗಳು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಒಟ್ಟು ಆರು ಕೇಂದ್ರಗಳನ್ನು ಗುರುತಿಸಲಾಗಿತ್ತು. ನಗರದ 25 ಕೇಂದ್ರಗಳಲ್ಲಿ ನಾಲ್ಕು ಕೇಂದ್ರಗಳನ್ನು ಕಳೆದ ಡಿಸೆಂಬರ್ ತಿಂಗಳಲ್ಲಿ ತೆರವುಗೊಳಿಸಲಾಗಿತ್ತು. ಇದಲ್ಲದೆ ಬಂಬೂ ಬಜಾರ್‌ನ ಅಮೃತೇಶ್ವರ ದೇವಸ್ಥಾನವನ್ನು ನಗರಸಭೆಯವರೇ ತೆರವುಗೊಳಿಸಿದ್ದರು. ಆರು ಕೇಂದ್ರಗಳ ಬಗ್ಗೆ ಇನ್ನೂ ಕೆಲವು ಗೊಂದಲಗಳಿರುವುದರಿಂದ ಆ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೋರಿ ಜಿಲ್ಲಾ ಸಮಿತಿಗೆ ಕಳುಹಿಸಲಾಗಿದೆ. ಉಳಿದ 14 ಕೇಂದ್ರಗಳು ಗುರುವಾರ ರಾತ್ರಿ ನೆಲಸಮಗೊಂಡಿವೆ.

ಗ್ರಾಮಾಂತರ ಪ್ರದೇಶದಲ್ಲಿ ಶಾಂತಿಗ್ರಾಮದ ಆಂಜನೇಯ ದೇವಸ್ಥಾನ ತೆರವಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು, ಉಳಿದ ಐದು ಕೇಂದ್ರಗಳು ತೆರವುಗೊಂಡಿವೆ ಎಂದು ತಹಶೀಲ್ದಾರರು ತಿಳಿಸಿದರು.

ಗುರುವಾರ ತೆರವಾಗಿರುವ ಶ್ರದ್ಧಾ ಕೇಂದ್ರಗಳು
ಹಾಸನ ನಗರ:
ಉದಯಗಿರಿ ಬಡಾವಣೆಯ ಅರಳೀಕಟ್ಟೆ ದೇವಸ್ಥಾನ, ಆಡುವಳ್ಳಿ ಬಡಾವಣೆಯ ಆಂಜನೇಯ ದೇವಸ್ಥಾನದ ಮುಂಭಾಗ, ಆ–ಡುವಳ್ಳಿ ಬಡಾವಣೆಯ ಕಲ್ಲಮ್ಮನ ದೇವಸ್ಥಾನ, ಬಸಟ್ಟಿಕೊಪ್ಪಲು ಬನ್ನಿಮಂಟಪ ದೇವಸ್ಥಾನ, ಸಾಲಗಾಮೆರಸ್ತೆ ಉತ್ತರ ಬಡಾವಣೆಯ ಸರಸ್ವತಿ ದೇವಸ್ಥಾನ (ಭಾಗಶಃ), ಶರೀಫ್  ಕಾಲೋನಿಯ ಚಲ್ತೇವಲಿ ಗೋರಿ, ದೊಡ್ಡಬಸ್ತಿ ರಸ್ತೆಯ ವಿರೂಪಾಕ್ಷ ದೇವಸ್ಥಾನದ ಮುಂಭಾಗ, ಹಳೇ ಗಾಣಿಗರ ಬೀದಿಯ ಗುಡ್ಡೇ ಮಾರಮ್ಮನ ದೇವಸ್ಥಾನ, ನಿರ್ಮಲ ನಗರ ಮಟನ್ ಮಾರ್ಕೆಟ್‌ನ ದೊಡ್ಡಮ್ಮ ನಲ್ಲಮ್ಮ (ಕರಿಮಾರಮ್ಮ) ದೇವಸ್ಥಾನ ಮತ್ತು ಅರಳೀಮರದ ಕಟ್ಟೆ, ಹುಣಸಿನಕೆರೆ ಬಡಾವಣೆಯ ಅಯ್ಯಪ್ಪಸ್ವಾಮಿ ದೇವಸ್ಥಾನ, ಹುಣಸಿನಕೆರೆ ರಸ್ತೆಯ ಹಾವೇರಮ್ಮ ದೇವಸ್ಥಾನ, ಸ್ಲಂಬೋರ್ಡ್ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಅಸೇನ್ ಹುಸೇನ್ ಮಸೀದಿ.

ಗ್ರಾಮಾಂತರ ಪ್ರದೇಶ: ಶಾಂತಿಗ್ರಾಮದ ಆಂಜನೇಯ ದೇವಸ್ಥಾನ, ದುದ್ದ ಆರ್.ಎಸ್‌ನ ಆಂಜನೇಯ ದೇವಸ್ಥಾನ, ದುದ್ದದ ಮುನಿಯಪ್ಪನ ದೇವಸ್ಥಾನ, ನಿಟ್ಟೂರಿನ ನಿಟ್ಟೂರಮ್ಮ ದೇವಸ್ಥಾನ  ಹಾಗೂ ಕರಿಕಲ್ಲಮ್ಮ ದೇವಸ್ಥಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT