ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ, ಬೇಡಿಕೆ ಈಡೇರಿಕೆಗೆ ಒತ್ತಾಯ, ಅಂಚೆ ಸೇವೆ ಸ್ಥಗಿತ

Last Updated 17 ಅಕ್ಟೋಬರ್ 2012, 9:30 IST
ಅಕ್ಷರ ಗಾತ್ರ

ಶಿವಮೊಗ್ಗ: ಹುದ್ದೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಅಂಚೆ ಸೇವಕರು ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದ ನೇತೃತ್ವದಲ್ಲಿ ಮಂಗಳವಾರದಿಂದ ಅನಿರ್ದಿಷ್ಟ ಕಾಲ ಮುಷ್ಕರ ಆರಂಭಿಸಿದರು.

1977ರ ಏಪ್ರಿಲ್ 22ರಂದು ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಮತ್ತು ನ್ಯಾಯಮೂರ್ತಿ ತಲವಾರ್ ಸಮಿತಿ ವರದಿ ಅನುಸಾರ ಗ್ರಾಮೀಣ ಅಂಚೆ ಸೇವಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಅಂಚೆ ನೌಕಕರಿಗೆ ಪ್ರತಿನಿತ್ಯ 3ರಿಂದ 5 ಗಂಟೆ ಮಾತ್ರ ಕೆಲಸ ಎಂದು ಇಲಾಖೆ ಸೂಚನೆ ನೀಡಿದೆ. ಆದರೆ, ಈಗ ಪ್ರತಿ ನಿತ್ಯ 8ರಿಂದ 10 ಗಂಟೆಯವರೆಗೆ ದುಡಿಸಿಕೊಳ್ಳಲಾಗುತ್ತಿದೆ. ಆದರೆ, ಶ್ರಮಕ್ಕೆ ತಕ್ಕ ವೇತನ ನೀಡುತ್ತಿಲ್ಲ ಎಂದು ಮುಷ್ಕರ ನಿರತರು ದೂರಿದರು.

ಇಲಾಖೆಯ ಕಾಯಂ ನೌಕರರಿಗೆ ನೀಡುವ ಬೋನಸ್ ನೀಡಬೇಕು. ಅನುಕಂಪದ ಆಧಾರದ ಮೇಲೆ ತೆಗೆದುಕೊಳ್ಳುವ ನೌಕರರಿಗೆ ಈಗಿರುವ ಪದ್ಧತಿ ಕೈಬಿಟ್ಟು ಹಿಂದಿನಂತೆ ಎಲ್ಲಾ ವಾರಸುದಾರರಿಗೆ ಉದ್ಯೋಗ ನೀಡಬೇಕು. ಖಾಲಿ ಇರುವ ಜಿಡಿಎಸ್ ಹುದ್ದೆಗಳಿಗೆ ಶೀಘ್ರ ನೇಮಕಾತಿ ಮಾಡಿಕೊಳ್ಳಬೇಕು. ತಡೆಹಿಡಿದ ವೇತನವನ್ನು ತಕ್ಷಣವೇ ಮರುಪಾವತಿ ಮಾಡಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯನ್ನು ತಕ್ಷಣ ಜಾರಿಗೆ ತರಲು ಸಚಿವ ಸಂಪುಟದ ಮಂಜೂರಾತಿ ಪಡೆದುಕೊಳ್ಳಬೇಕು. ಹಾಗೆಯೇ, ದಿನಗೂಲಿ ನೌಕರರಿಗೆ 2006ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಿಸಿ ಎಲ್ಲಾ ಸೌಕರ್ಯಗಳನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ಮುಷ್ಕರದ ನೇತೃತ್ವವನ್ನು ಸಂಘದ ಪದಾಧಿಕಾರಿಗಳಾದ ಎಚ್.ವಿ. ರಾಜ್‌ಕುಮಾರ್, ಶಾಂತಪ್ಪ, ಕೆ. ಪ್ರಹ್ಲಾದರಾವ್, ರಾಘವೇಂದ್ರ ವಹಿಸಿದ್ದರು.

ವಿಲೇವಾರಿ ಆಗದ ಪತ್ರಗಳು  
ರಿಪ್ಪನ್‌ಪೇಟೆ:
ಗ್ರಾಮೀಣ ಅಂಚೆ ನೌಕರರರು ವಿವಿಧ ಬೇಡಿಕೆ ಮುಂದಿಟ್ಟುಕೊಂಡು ಮಂಗಳವಾರದಿಂದ ಆರಂಭಿಸಿರುವ ಮುಷ್ಕರದ ಬಿಸಿಯಿಂದ ಗ್ರಾಮೀಣ ಜನರಿಗೆ ಪತ್ರಗಳು, ಮನಿಆರ್ಡರ್ ಹಾಗೂ ಇತರ ಸೇವಾ ಸೌಲಭ್ಯಗಳು ದೊರಕಲಿಲ್ಲ.

ಪಟ್ಟಣದ ಅಂಚೆ ಕಚೇರಿಯಲ್ಲಿ ಪ್ರತಿಭಟನೆ ಮಾಡಿದ ನೌಕರರು ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಪಟ್ಟಣದ ಅಂಚೆ ಕಚೇರಿಯಿಂದ ಹಳ್ಳಿಪ್ರದೇಶಗಳಿಗೆ ಹೋಗುವ ಅಂಚೆ ಪತ್ರಗಳು ವಿತರಣೆಯಾಗದೇ ರಾಶಿರಾಶಿಯಾಗಿ ಬಿದ್ದಿವೆ.

1977ರ ಸುಪ್ರೀಂ ಕೋರ್ಟ್ ಆದೇಶ ಹಾಗೂ ನ್ಯಾಯಾಧೀಶ ತಲವಾರ್ ಸಮಿತಿಯ ವರದಿ ಅನುಸಾರ ದಿನದ 5 ಗಂಟೆಗಿಂತ ಹೆಚ್ಚು ಕಾಲ ಕಾರ್ಯ ನಿರ್ವಹಿಸುವ ಅಖಿಲ ಭಾರತ ಅಂಚೆ ಇಲಾಖೇತರರ ನೌಕರರ ಸಂಘದ (ಜಿಡಿಎಸ್) ನೌಕರರಿಗೆ ಉದ್ಯೋಗ ಕಾಯಂ ಗೊಳಿಸುವಂತೆ ಆಗ್ರಹಿಸಿ ಅನಿರ್ದಿಷ್ಟ ಕಾಲ ಮುಷ್ಕರ ಹೂಡಿ ಸೇವೆಯನ್ನು ಸ್ಥಗಿತಗೊಳಿಸಿದ್ದಾರೆ.

 ಉಮೇಶ, ವೀರಭದ್ರಪ್ಪ, ರಮೇಶ, ಪುರುಷೋತ್ತಮ, ನಾಗರಾಜ್, ನಾಗವೇಣಿ, ಮೀನಾಕ್ಷಪ್ಪ, ರವೀಂದ್ರಕುಮಾರ್, ನಾಗೇಶ, ಅಕ್ರಂ ಬಾಷಾ, ಚಂದ್ರಪ್ಪ, ಧನಲಕ್ಷ್ಮೀ ಹಾಜರಿದ್ದರು.

ಕಾರ್ಗಲ್: ಅಂಚೆ ಸೇವಕರ ಪ್ರತಿಭಟನೆ
ಕಾರ್ಗಲ್:
ದೇಶದಾದ್ಯಂತ ಗ್ರಾಮೀಣ ಅಂಚೆ ಸೇವಕರ ಅನಿರ್ದಿಷ್ಟಕಾಲ ಮುಷ್ಕರದ ಅಂಗವಾಗಿ ಇಲ್ಲಿನ ಅಂಚೆ ಕಚೇರಿ ಉಪ ಶಾಖೆಯ ಮುಂಭಾಗದಲ್ಲಿ ವೇತನ ಪರಿಷ್ಕರಣೆ ಆಗ್ರಹಿಸಿ ಗ್ರಾಮೀಣ ಅಂಚೆ ಸೇವಕರು ಪ್ರತಿಭಟನೆ ನಡೆಸಿದರು.

ತಾಲ್ಲೂಕಿನ ನಾಗವಳ್ಳಿ, ಭಾನುಕುಳಿ, ಕೋಗಾರ್, ಅರಲಗೋಡು, ಲಿಂಗನಮಕ್ಕಿ, ಇಡುವಾಣಿ, ತಲವಾಟ ಮತ್ತು ಕಾರ್ಗಲ್ ವಿಭಾಗದ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರಮುಖ 8 ಅಂಶಗಳ ಬೇಡಿಕೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದು, ಈ ಬಗ್ಗೆ ಕೇಂದ್ರಮಟ್ಟದ ನಾಯಕರು ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಮಾತುಕತೆಗಳು ಫಲಪ್ರದವಾದಲ್ಲಿ ಪ್ರತಿಭಟನೆಯನ್ನು ಸ್ಥಗಿತಗೊಳಿಸಲಾಗುವುದು.

ಇಲ್ಲವಾದರೆ ಸ್ಥಳೀಯ ಪ್ರಮುಖರು ಮತ್ತು ಸಂಘ-ಸಂಸ್ಥೆಗಳ ಸಹಕಾರ ಪಡೆದು ಅನಿರ್ದಿಷ್ಟಕಾಲ ಪ್ರತಿಭಟನೆ ಮುಂದುವರಿಯಲಿದೆ ಎಂದು ಸಂಘಟನೆಯ ಪ್ರಮುಖ ಸುಬ್ರಮಣಿ ತಿಳಿಸಿದರು.

ಗ್ರಾಮೀಣ ಅಂಚೆ ನೌಕರರ ಧರಣಿ
ಹೊಸನಗರ:
ಗ್ರಾಮೀಣ ಅಂಚೆ ಇಲಾಖೇತರ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಅಂಚೆ ಕಚೇರಿ ಎದುರು ಅನಿರ್ದಿಷ್ಟಾವಧಿಯ ಧರಣಿ ಪ್ರತಿಭಟನೆಯನ್ನು ಅಖಿಲ ಭಾರತ ಗ್ರಾಮೀಣ ಅಂಚೆ ಇಲಾಖೇತರ ನೌಕರರ ಸಂಘದ ತಾಲ್ಲೂಕು ಘಟಕದ ವೆಂಕಟೇಶ್ ಹಾಗೂ ಹಿರಿಯಣ್ಣ ನೇತೃತ್ವದಲ್ಲಿ ಮಂಗಳವಾರ ನಡೆಸಿದರು.

ದೇಶದಾದ್ಯಂತ ಸುಮಾರು 3 ಲಕ್ಷಕ್ಕೂ ಹೆಚ್ಚು ಗ್ರಾಮೀಣ ಅಂಚೆ ನೌಕರರು ಅತ್ಯಂತ ಕಡಿಮೆ ಸಂಬಳದಲ್ಲಿ ಜೀತದಾಳುಗಳಂತೆ ದುಡಿಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.ನ್ಯಾಯಮೂರ್ತಿ ತಳವಾರ್ ಸಮಿತಿ ವರದಿಯ ಮೇರೆಗೆ ಎಲ್ಲಾ ಗ್ರಾಮೀಣ ಅಂಚೆ ನೌಕರರನ್ನು ಕಾಯಂಗೊಳಿಸುವುದು. ಖಾಲಿ ಇರುವ ಎಲ್ಲಾ ಗ್ರಾಮೀಣ ಅಂಚೆ ನೌಕರರ ಹುದ್ದೆ ಭರ್ತಿ ಮಾಡುವುದು. ಜ್ಯೇಷ್ಠತಾ ಆಧಾರದ ಮೇರೆಗೆ ಬಡ್ತಿ ನೀಡಬೇಕು ಎಂದು ಅವರು ಆಗ್ರಹ ಮಾಡಿದರು.

ಅನುಕಂಪಾಧಾರಿತ ನೌಕರಿ ಮುಂದುವರಿಕೆ, ಗ್ರಾಮೀಣ ಅಂಚೆ ನೌಕರರಿಗೂ ಬೋನಸ್ ವಿತರಣೆ, ವೇತನ ಕಡಿತಕ್ಕೆ ವಿರೋಧ ಹಾಗೂ ಮಿತಿಯನ್ನು ಸಡಿಲಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಇಲಾಖೇತರ ಅಂಚೆ ನೌಕರರ ಪ್ರತಿಭಟನೆ
ಸಾಗರ:
ಅಂಚೆ ಇಲಾಖೆಯ ಗ್ರಾಮೀಣ ಭಾಗದ ಇಲಾಖೇತರ ನೌಕರರು ತಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಮಂಗಳವಾರ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  ನ್ಯಾಯಮೂರ್ತಿ ತಳವಾರ ಸಮಿತಿ ವರದಿಯ ಹಾಗೂ 1977ನೇ ಸಾಲಿನ ಸುಪ್ರೀಂ ಕೋರ್ಟ್‌ನ ಆದೇಶದ ಪ್ರಕಾರ ದಿನಕ್ಕೆ 5 ಗಂಟೆಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸುವ ನೌಕರರನ್ನು ಕಾಯಂ ನೌಕರರೆಂದು ಪರಿಗಣಿಸುವ ಮೂಲಕ ಇಲಾಖೇತರ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದಶಕಗಳಿಗೂ ಹೆಚ್ಚು ಕಾಲ ಉದ್ಯೋಗ ಭದ್ರತೆ ಇಲ್ಲದೇ ಅಂಚೆ ಇಲಾಖೆಯಲ್ಲಿ ಇಲಾಖೇತರ ನೌಕರರಾಗಿ ಕಾರ್ಯ ನಿರ್ವಹಿಸುತ್ತಿರುವ ನಮ್ಮನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಅದನ್ನು ಹೋಗಲಾಡಿಸಲು ನಮ್ಮನ್ನು ಕಾಯಂ ನೌಕರರು ಎಂದು ಅಂಚೆ ಇಲಾಖೆ ಪರಿಗಣಿಸುವಂತೆ ಸರ್ಕಾರ ಕಾನೂನು ರೂಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಷ್ಟ್ರೀಯ ಸ್ವಾಸ್ಥ್ಯ ಬೀಮಾ ಯೋಜನೆ ನೌಕರರಿಗೆ ಜಾರಿಗೊಳಿಸಬೇಕು. 2006ರಿಂದ ಪೂರ್ವಾನ್ವಯವಾಗುವ ರೀತಿಯಲ್ಲಿ ವೇತನ ಪರಿಷ್ಕರಣೆ ಮಾಡಬೇಕು. ಕಾಯಂ ನೌಕರರಿಗೆ ನೀಡುತ್ತಿರುವ ರೀತಿಯಲ್ಲಿ ಬೋನಸ್ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಖಾಲಿ ಇರುವ ಇಲಾಖೇತರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ಪೋಸ್ಟ್‌ಮ್ಯಾನ್, ಮೇಲ್ ಗಾರ್ಡ್, ಎಂಟಿಎಸ್ ಕೆಲಸಕ್ಕೆ ನೇಮಕ ಜ್ಯೇಷ್ಠತೆ ಆಧಾರದ ಮೇಲೆ ನಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಖಂಡಿಕಾದ ಮಂಜಪ್ಪ, ಮಾಲ್ವೆಯ ಸುರೇಶ್, ಕೆಳದಿಯ ರಮೇಶ್, ನಿಸ್ರಾಣಿಯ ಪ್ರಭಾಕರ್, ಯಡಜಿಗಳಮನೆಯ ಶಂಕರ ನಾರಾಯಣ, ಕಲ್ಮನೆಯ ಮಹಾಬಲಗಿರಿ, ಬೇಳೂರಿನ ವೆಂಕಟೇಶ್, ಸೀತಾರಾಮ್ ಶಾಸ್ತ್ರಿ, ರಾಘವೇಂದ್ರ ಭಟ್, ಐ.ಬಿ. ಪಟಗಾರ್, ಶಶಿಕಲಾ, ಸುರೇಶ್, ವೀಣಾ ನೀಚಡಿ, ಚಂದ್ರಕಲಾ ಕಾನ್ಲೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT