ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಲ್ಲೂಕು ಪಂಚಾಯ್ತಿಗೆ ಸೌಕರ್ಯದ ಕೊರತೆ!

Last Updated 25 ಜನವರಿ 2012, 5:45 IST
ಅಕ್ಷರ ಗಾತ್ರ

ಜಗಳೂರು: ತಾಲ್ಲೂಕಿನಲ್ಲಿ ಮೂಲಸೌಲಭ್ಯ ಯೋಜನೆಗಳನ್ನು ಜಾರಿಗೊಳಿಸುವ  ಮಹತ್ವದ ಇಲಾಖೆಯಾಗಿರುವ ಪಟ್ಟಣದ  ತಾ.ಪಂ. ಕಚೇರಿಯೇ ಮೂಲ ಸೌಕರ್ಯಗಳಿಲ್ಲದೆ  ನರಳುತ್ತಿದೆ.
 ಉದ್ಯೋಗ ಖಾತ್ರಿ, ವಸತಿ ಯೋಜನೆ ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನದ ಹೊಣೆ ಹೊತ್ತ ತಾ.ಪಂ. ಕಚೇರಿ ದಶಕಗಳಿಂದ ಬಾಲಗ್ರಹ ಪೀಡಿತವಾಗಿದೆ. ತಾಲ್ಲೂಕಿನ 22 ಗ್ರಾಮ ಪಂಚಾಯ್ತಿಗಳಿಗೆ ಮುಖ್ಯ ಕಚೇರಿಯಾಗಿರುವ ತಾ.ಪಂ. ಕಚೇರಿಯಲ್ಲಿ ಕುಡಿಯುವ ನೀರು, ಶೌಚಾಲಯ, ಪ್ಯಾಕ್ಸ್, ಪ್ರಿಂಟರ್, ಸ್ಕ್ಯಾನರ್‌ಗಳ ಸೌಲಭ್ಯಗಳಿಲ್ಲ.
 
ದಶಕಗಳಿಂದ ನೀರು ಸಂಗ್ರಹವಾಗದೆ ಖಾಲಿ ಬಿದ್ದಿರುವ ಎರಡು ಮಿನಿಟ್ಯಾಂಕ್‌ಗಳು  ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸುವ ಜನರನ್ನು ಸ್ವಾಗತಿಸುತ್ತವೆ. ಆಧಿಬಾರ ಶುಲ್ಕ ಯೋಜನೆಯಲ್ಲಿ ಕಳೆದ ವರ್ಷ ಆವರಣದಲ್ಲಿ ಕೊಳವೆಬಾವಿ ಕೊರೆಸಲಾಗಿದೆ. ದಾಖಲೆಯಲ್ಲಿ ಪೈಪ್‌ಲೈನ್ ಆಗಿದೆ ಎಂದು ತೋರಿಸಲಾಗಿದೆ. ಇದುವರೆಗೂ ಈ ನೀರು ಪೂರೈಕೆಯಾಗಿಲ್ಲ. ಲಕ್ಷಾಂತರ ರೂ ವೆಚ್ಚದಲ್ಲಿ ಕಳೆದ ಸಾಲಿನಲ್ಲಿ ಇಲ್ಲಿ  ಶೌಚಾಲಯ ನಿರ್ಮಿಸಲಾಗಿದೆ. ಆದರೆ, ನೀರಿನ ಸೌಲಭ್ಯ ಇಲ್ಲದೆ ಶೌಚಾಲಯ ದುರ್ನಾತ ಬೀರುತ್ತಿದೆ. ಇದಿರಿಂದಾಗಿ ಜನಪ್ರತಿನಿಧಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಶೌಚಾಲಯಕ್ಕಾಗಿ ಪರದಾಡುವ ಸ್ಥಿತಿ ಇದೆ.

ಮೇಲಿನ ಹಂತದಿಂದ ಬರುವ  ಫ್ಯಾಕ್ಸ್‌ಗಾಗಿ ಸಿಬ್ಬಂದಿ ಸಮೀಪದ ತಹಶೀಲ್ದಾರ್ ಕಚೇರಿಗೆ ಧಾವಿಸಬೇಕು.  ಉದ್ಯೋಗ ಖಾತ್ರಿ ಹಾಗೂ  ವಸತಿ ಯೋಜನೆಗಳ ಫಲಾನುಭವಿಗಳ ವಿವರ ದಾಖಲಿಸಲು ಸ್ಕ್ಯಾನರ್ ಇಲ್ಲ. ಕಚೇರಿಯಲ್ಲಿ ಒಂದು ಪ್ರಿಂಟರ್ ಇದ್ದರೂ ಸದಾ ದುಃಸ್ಥಿತಿಯಲ್ಲಿರುತ್ತದೆ. ಹೀಗಾಗಿ, ಕಚೇರಿಯ ಗೌಪ್ಯ ವಿವರಗಳನ್ನು ಒಳಗೊಂಡ ದಾಖಲೆಗಳ ಪ್ರಿಂಟಿಂಗ್ ಮತ್ತು ಸ್ಕ್ಯಾನಿಂಗ್‌ಗಾಗಿ ಸಿಬ್ಬಂದಿ ಹೊರಗೆ ತೆರಳಬೇಕಾದ ಅನಿವಾರ್ಯತೆ ಇದೆ.
 

 ಸಭಾಂಗಣವನ್ನು ರೂ 25 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅಚ್ಚರಿ ಎಂದರೆ ಆಧಿಬಾರ ಶುಲ್ಕ ಮುಂತಾದ ಯೋಜನೆಗಳಲ್ಲಿ 2009-2010 ಮತ್ತು 2011 ನೇ ಸಾಲಿನಲ್ಲಿ ಸಭಾಂಗಣಕ್ಕೆ  ಬಾಗಿಲು, ಕುಡಿಯುವ ನೀರಿನ ತೊಟ್ಟಿ, ಟೈಲ್ಸ್, ಶೌಚಾಲಯ ನಿರ್ಮಾಣ ಎಂದು ಪ್ರತ್ಯೇಕವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಲಾಗಿದೆ. ಸಭಾಂಗಣ ನಿರ್ಮಾಣದ ಸಮಯದಲ್ಲಿ ಎಂಜಿನಿಯರ್‌ಗಳು ಬಾಗಿಲು, ಶೌಚಾಲಯ, ಟೈಲ್ಸ್ ಸೌಲಭ್ಯಗಳನ್ನು ಇಲ್ಲದ ಅಂದಾಜು ಪಟ್ಟಿ ತಯಾರಿಸಿದ್ದರೇ ಎನ್ನುವುದು ಸಂಶಯಕ್ಕೆ ಕಾರಣವಾಗಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಶಾಮೀಲಾಗಿ ಲಕ್ಷಾಂತರ ರೂ ಅವ್ಯವಹಾರ ನಡೆಸಿರುವ ಸಾಧ್ಯತೆ ಇದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT