ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಳವಾದ್ಯೋತ್ಸವದಲ್ಲಿ ನಾದಝರಿ

Last Updated 18 ಜುಲೈ 2012, 19:30 IST
ಅಕ್ಷರ ಗಾತ್ರ

ಡಾ.ಟಿ.ಎಸ್.ಸತ್ಯವತಿಯವರು ಗಾಯಕಿ ಮಾತ್ರವಲ್ಲ ಬೋಧಕಿಯಾಗಿಯೂ ಮಾನಿತರು. ಅವರು ಶಾಸ್ತ್ರಜ್ಞೆಯಾಗಿ ಸಹ ಗೌರವಾನ್ವಿತರು. ಮಾನಸೋಲ್ಲಾಸದ ಮೇಲೆ ಮಾಡಿದ ಅಧ್ಯಯನಕ್ಕೆ ಡಾಕ್ಟರೇಟ್ ಪದವಿಯೂ ಸಿಕ್ಕಿದೆ. ಅವರ ಗಾಯನ, ಅಧ್ಯಯನ, ವಿದ್ವತ್‌ಗಳನ್ನು ಗೌರವಿಸಿ, ಕರ್ನಾಟಕ ಗಾನಕಲಾ ಪರಿಷತ್ತು `ಗಾನಕಲಾಶ್ರೀ~ ಬಿರುದು ನೀಡಿ ಗೌರವಿಸಿದೆ.

ಸತ್ಯವತಿಯವರ ಕಛೇರಿ ಯಾವಾಗಲೂ ವಿದ್ವತ್‌ಪೂರ್ಣ!  ತಾಳವಾದ್ಯೋತ್ಸವದಲ್ಲಿ- ಸೋಮವಾರ ಮಾಡಿದ ಕಛೇರಿಯಲ್ಲಿ ಸಂಗೀತೋತ್ಸವಕ್ಕೆ ಹೊಂದುವಂತೆ ಭವ್ಯವಾದ ಪಲ್ಲವಿಯೊಂದನ್ನು ಆಯ್ದುಕೊಂಡಿದ್ದರು. ಮಿಶ್ರಝಂಪೆಯಲ್ಲಿದ್ದ ಹಾಸನ್ನು (ಅಚ್ಯುತಾನಂತ ಗೋವಿಂದ ಪಾಹಿಮಾಂ) ಮೂರು ವಿಭಾಗಗಳಲ್ಲಿ ಅರಳಿಸಿದರು.
 
ಹಿಂದಿನ ಕಾಲ, ಮೇಲ್ ಕಾಲ, ತಿಶ್ರದಲ್ಲಿ ಸಾಂಪ್ರದಾಯಕವಾಗಿ ಬೆಳೆಸಿದರು. ಸಮದಿಂದ ಚತುಶ್ರಕಳೆ ಮಾಡಿ, ಅಕ್ಷರ ತ್ರಿಕಾಲ ರೋಚಕವಾಗಿತ್ತು. ಸ್ವರಪ್ರಸ್ತಾರವೂ ಸ್ವಾರಸ್ಯಕರ. ಕಾಮವರ್ಧಿನಿ ರಾಗದ ಎಲ್ಲ ಮಗ್ಗಲುಗಳು ಗೋಚರವಾಗುವಂತೆ ಪಲ್ಲವಿಯು ಪಲ್ಲವಿಸಿತು.

ಆ ಮೊದಲು ಹಾಡಿದ ದೇವಮನೋಹರಿ ರಾಗವು ಒಳ್ಳೆಯ ವಜನ್‌ನಿಂದ ಕೂಡಿತ್ತು. ಖರಹರಪ್ರಿಯ ಕುಟುಂಬಕ್ಕೆ ಸೇರಿದ ಇದೊಂದು ಜನಪ್ರಿಯ ಪ್ರಾಚೀನ ರಕ್ತಿ ರಾಗ. ಕುಪ್ಪಯ್ಯರ್ ಅವರ ಮಹದೇವ ಮನೋಹರಿ ಒಂದು ಹಸನಾದ ಕೃತಿ. ತ್ಯಾಗರಾಜರ `ರಾಮನೀ ಪೈ~ ನಂತರ ಶ್ಯಾಮಾಶಾಸ್ತ್ರಿಗಳ ಪ್ರಸಿದ್ಧ ಕೃತಿ `ಬ್ರೋವಮ್ಮ~ ವಿಳಂಬದಲ್ಲಿ ಭಾವಪೂರ್ಣವಾಗಿ ಹೊಮ್ಮಿತು.

ಪಿಟೀಲಿನಲ್ಲಿ ನಳಿನಾ ಮೋಹನ್, ಮೃದಂಗದಲ್ಲಿ ಕೆ.ಯು. ಜಯಚಂದ್ರರಾವ್ ಹಾಗೂ ಘಟದಲ್ಲಿ ಫಣೀಂದ್ರ ಭಾಸ್ಕರ್ ಪಕ್ಕವಾದ್ಯಗಳನ್ನು ನುಡಿಸಿದರು. ಕಿರಿಯ ವಿದ್ಯಾರ್ಥಿನಿ ಲಾವಣ್ಯ ಕೃಷ್ಣಮೂರ್ತಿ ಹಿನ್ನೆಲೆಯಲ್ಲಿ ಹಾಡುತ್ತಾ ನೆರವಾದರು.

ತಾಳವಾದ್ಯ ಕಲಾಕೇಂದ್ರ ಆಶ್ರಯದಲ್ಲಿ ನಡೆಯುತ್ತಿರುವ ವಾರ್ಷಿಕ ತಾಳವಾದ್ಯೋತ್ಸವದ ಅಂಗವಾಗಿ ಡಾ. ಸತ್ಯವತಿ ಅವರ ಗಾಯನ ಕಾರ್ಯಕ್ರಮ ನಡೆಯಿತು. ಸಂಗೀತ ಕಛೇರಿಗಳಲ್ಲದೆ (ಗಾಯನ, ವಾದ್ಯ ದ್ವಯ, ಜುಗಲ್ ಬಂದಿ) ಪ್ರಾತ್ಯಕ್ಷಿಕೆ, ಉಪನ್ಯಾಸ, ಲಯವಿನ್ಯಾಸ ಹಾಗೂ ವಿಚಾರ ಸಂಕಿರಣಗಳೂ ಸೇರಿ ಉತ್ಸವದ ಉಪಯುಕ್ತತೆಯನ್ನು ಹೆಚ್ಚಿಸಿವೆ.

ಪ್ರೌಢ ಗಾಯನ
ಮಧುರೆ ಮಣಿ ಅಯ್ಯರ್ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಟಿ.ವಿ. ಶಂಕರನಾರಾಯಣನ್ ಅವರ ಕಾರ್ಯಕ್ರಮ ಏರ್ಪಡಿಸಿದ್ದು ಉಚಿತವಾಗಿತ್ತು. ಸಂಗೀತ ಕಳಾನಿಧಿ ಟಿ.ವಿ. ಶಂಕರನಾರಾಯಣನ್ ತಮ್ಮ ಗಾಯನದಲ್ಲಿ ಪ್ರಮುಖವಾಗಿ ಎರಡು ರಾಗಗಳನ್ನು ವಿಸ್ತರಿಸಿದರು.
 
ತೋಡಿಯನ್ನು ಶಾಸ್ತ್ರೀಯವಾಗಿ ಅರಳಿಸಿ ಕೃತಿಗೆ ಭದ್ರವಾದ ಹಿನ್ನೆಲೆ ಒದಗಿಸಿದರು. ತ್ಯಾಗರಾಜರ `ರಾಜುವೆಡಲೆ ಚೂತಮು ರಾರೇ~ ಕೃತಿಯನ್ನು ಹಿರಿಯರು ಮೊದಲಿನಿಂದಲೂ ವಿಸ್ತಾರಕ್ಕೆ ಆಯ್ದುಕೊಂಡು ಬಂದಿದ್ದಾರೆ.

ಶಂಕರನಾರಾಯಣನ್ ಆ ಕೃತಿ ಹಾಗೂ ಸ್ವರ ರಾಗಕ್ಕೆ ಪೂರಕವಾಗಿ ಹಾಡಿದ ಬಗೆ ಅನುಪಮವಾದುದು. ಹಾಗೆಯೇ ನೆರವಲ್ (ಕಾವೇರಿ ತೀರಮುನನು ಪಾವನಮಗು ರಂಗಪುರನಿ) ಸಹ ರಾಗ-ಕೃತಿಗಳೆರಡಕ್ಕೂ ಪೂರಕವಾಗಿ ಬೆಳಗಿತು. ಸ್ವರವನ್ನೂ ಅತಿಚಾಚದೆ ಹಿತಮಿತವಾಗಿ ಅಡಕಗೊಳಿಸಿದ್ದು ಗಮನಾರ್ಹ.

ಕಾಂಬೋಧಿಯನ್ನು ಹಂತಹಂತವಾಗಿ ಬೆಳೆಸುತ್ತಾ ಪೂರ್ಣತ್ವ ನೀಡಿದರು. ನೆರವಲ್ ಮಾಡಿ ಸರ್ವಲಫುವಿನಲ್ಲಿ ಹಾಕಿದ ಸ್ವರಪ್ರಸ್ತಾರ ಸೊಗಸಾಗಿತ್ತು. ಆ ಮೊದಲು ವಲ್ಲಭ ನಾಯಕಸ್ಯ, `ಓ ಜಗದಂಬ~, `ಭುವನೇಶ್ವರಿಯ~, `ವೆಂಕಟಾಚಲ ನಿಲಯಂ~ ಕೃತಿಗಳು ಕಛೇರಿಯ ಮೌಲ್ಯ ವರ್ಧಿಸಿದವು.
 
ಮಗ ಮಹದೇವನ್ ರಾಗಾಲಾಪನೆ, ಸ್ವರ ಪ್ರಸ್ತಾರಗಳಲ್ಲಿ ತನ್ನ ಪ್ರತಿಭೆಯನ್ನು ತೋರಿದ. ಸಿ.ಎನ್. ಚಂದ್ರಶೇಖರ್ ಪಿಟೀಲಿನಲ್ಲಿ ಒತ್ತಾಸೆಯಾಗಿ ನಿಂತರು. ಲಯ ವಾದ್ಯಗಳಲ್ಲಿ ಗುರು-ಶಿಷ್ಯರ ಜೋಡಿ ಶ್ರೀಮುಷ್ಣಂ ರಾಜಾರಾಂ ಮತ್ತು ಎಚ್.ಎಸ್. ಸುಧೀಂದ್ರ ಗಾಯನಕ್ಕೆ ಪೂರಕವಾಗಿ ನುಡಿಸಿದರು.

ಸುಂದರ ಮೋಹಿನಿ ಆಟ
ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ ಮಾಲೆಯಲ್ಲಿ ಮೋಹಿನಿ ಆಟ ನೃತ್ಯ ಮಾಡಿದ ಸಂಗೀತಾ ಭರತನಾಟ್ಯ, ಮೋಹಿನಿ ಆಟ,ಕಥಕ್ಕಳಿ - ಮೂರು ಪ್ರಕಾರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ. ಅನೇಕ ಗುರುಗಳಿಂದ ಕಲಿತು ಇದೀಗ ಕಲಾಮಂಡಳಂ ಹೈಮಾವತಿ ಅವರಲ್ಲಿ ಪ್ರೌಢ ಶಿಕ್ಷಣ ಮುಂದುವರೆಸಿದ್ದಾರೆ.

ಪ್ರಸ್ತುತ ಕಾರ್ಯಕ್ರಮವನ್ನು ಸಂಗೀತಾ `ಶರಣಂ ಸಿದ್ಧಿವಿನಾಯಕ~ದೊಂದಿಗೆ ಪ್ರಾರಂಭಿಸಿ, ವರ್ಣ `ದಾನಿಗಾಮಜೇಂದ್ರ~ (ಸ್ವಾತಿ ತಿರುನಾಳ್)ದೊಂದಿಗೆ ಮುಂದುವರಿಸಿದರು. ಪದ (ಸ್ವಾತಿ ತಿರುನಾಳ್) ಮತ್ತು ಜಾವಡಿ (ಇದೇನೇ ಸಖಿ) ಗಳೆರಡರಲ್ಲೂ ಅಭಿನಯ ಸಂಯಮ ಪೂರ್ಣವಾಗಿತ್ತು.
 
ದೀಕ್ಷಿತರ `ಕಂಜದಳಾಯತಾಕ್ಷಿ~ ಹಾಗೂ ಕುರಂಜಿ ರಾಗದ ಲಾಲಿಯೊಂದಿಗೆ ಮುಕ್ತಾಯಗೊಳಿಸಿದರು. ಮರಕತವಲ್ಲಿಯವರ ಹಿನ್ನೆಲೆ ಗಾಯನ ಪ್ರಖರವಾಗಿದ್ದರೆ, ಲಕ್ಷ್ಮೀ ತಂಗವೇಲು ಅವರ ನಟುವಾಂಗ, ತಂಗವೇಲು ಮೃದಂಗ, ಭುವನೇಶ್ವರಿಯ ಪಿಟೀಲು ಹಾಗೂ ಅಚ್ಯುತ ಅನಂತ ಮಾರನ್‌ರ ಎಡಕ್ಕ- ನೃತ್ಯದ ಯಶಸ್ಸಿಗೆ ನೆರವಾಯಿತು.

ಅನನ್ಯದ `ನಿರಂತರ~

ಅನನ್ಯದ `ನಿರಂತರ~ ಮಾಲೆಯಲ್ಲಿ ಹಾಡಿದ ವಿವೇಕ ಸದಾಶಿವಂ ಸಂಗೀತಗಾರರ ಕುಟುಂಬದಿಂದ ಬಂದವ. ತಾತ ಅನಂತರಾಮನ್ ಅಯ್ಯರ್ ಮತ್ತು ತಂದೆ ಎ. ಸದಾಶಿವ ಇಬ್ಬರೂ ಗಾಯಕರು. ಚಿಕ್ಕಮ್ಮ ಎ. ಚಂಪಕವಲ್ಲಿ ಮತ್ತು ತಾಯಿ ರೇವತಿ ಸದಾಶಿವಂ ಇಬ್ಬರೂ ಹಿರಿಯ ಕಲಾವಿದೆಯರು.

ಕೆಲ ಕಾಲದಿಂದ ಆರ್.ಎನ್. ತ್ಯಾಗರಾಜನ್ ಅವರಲ್ಲಿ ಪ್ರೌಢ ವ್ಯಾಸಂಗ ಮಾಡುತ್ತಿರುವ ವಿವೇಕ್ ಇಂಜಿನಿಯರ್ ಪದವೀಧರ. ಆಕಾಶವಾಣಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿರುವ ವಿವೇಕ್ ಮೃದಂಗವನ್ನೂ ಅಭ್ಯಾಸ ಮಾಡುತ್ತಿದ್ದಾರೆ.

ವಿವೇಕ್ ಪ್ರಸ್ತುತ ಕಛೇರಿಯಲ್ಲಿ ಅಮೃತವರ್ಷಿಣಿ ರಾಗವನ್ನು ಅದ್ಭುತವಾಗಿ ಅರಳಿಸಿದರು. ವಿಳಂಬದಲ್ಲಿ ಹಾಡಿದ `ಮಾಯಮ್ಮ~ ಕೃತಿಯಲ್ಲಿ ಮೂಡಿದ ಭಾವ ಅನುಪಮವಾದುದು.
ಶಂಕರಾಭರಣವನ್ನು ವಿಸ್ತಾರವಾಗಿ ಹಾಡಿ `ಎಂದುಕು ಪೆದ್ದಲ~ ಬೆಳೆಸಿದರು.

ನೆರವಲ್ ಮಿತವಾಗಿತ್ತು ಹಾಗೂ ಅವರೋಹಣದಲ್ಲಿ ಒಂದೆರಡು ಕಡೆ ತಡವರಿಸಿದರೂ, ಗಾಯಕರ ಒಳ್ಳೆಯ ಪಾಠಾಂತರ ಸುವ್ಯಕ್ತವಾಯಿತು. ಷಣ್ಮುಖಪ್ರಿಯ ರಾಗದಲ್ಲಿ ಆದಿ ತಾಳದಲ್ಲಿ ಪಲ್ಲವಿಯನ್ನು ಮಿತ ವ್ಯಾಪ್ತಿಯಲ್ಲಿ ಪ್ರಸ್ತುತ ಪಡಿಸಿದರು.

ಒಳ್ಳೆಯ ಕಂಠ ಹೊಂದಿರುವ ವಿವೇಕ್ ಹೆಚ್ಚಿನ ಅನುಭವ, ಪ್ರೌಢ ಶಿಕ್ಷಣಗಳಿಂದ ಮುಗಿಲು ಮುಟ್ಟಬಹುದು. ಪ್ರೇಮ್ ವಿವೇಕ್ (ಪಿಟೀಲು) ಮತ್ತು ಬಿ.ಎಸ್. ಪ್ರಶಾಂತ್ (ಮೃದಂಗ) ಸಹ ತಮ್ಮ ಪ್ರತಿಭೆ ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT