ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಂಗಳಿನಿಂದ ಚಡಚಣಕ್ಕೆ ನೀರು ಪೂರೈಕೆ ಸ್ಥಗಿತ

Last Updated 15 ಆಗಸ್ಟ್ 2012, 10:05 IST
ಅಕ್ಷರ ಗಾತ್ರ

ಚಡಚಣ: ಇಂಡಿ ತಾಲ್ಲೂಕಿನಲ್ಲಿ  ಅದರಲ್ಲೂ ಚಡಚಣ ಕಂದಾಯ ಗ್ರಾಮಗಳ ಜೀವನಾಡಿಯಾದ ಭೀಮಾ ನದಿ ಸಂಪೂರ್ಣವಾಗಿ ಬತ್ತಿರುವುದರಿಂದ ನದಿ ಪಾತ್ರದಲ್ಲಿನ ಹತ್ತಾರು ಗ್ರಾಮಗಳ ಜನ ಹಾಗೂ ಜಾನುವಾರುಗಳನ್ನು ಸಂಕಷ್ಟದಲ್ಲಿ ಸಿಲುಕಿಸಿದೆ.

ಬಹು ಹಳ್ಳಿಗಳ ಶಾಶ್ವತ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಭೀಮಾ ನದಿಯಿಂದ ಚಡಚಣ ಪಟ್ಟಣಕ್ಕೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ದೂರದೃಷ್ಟಿಯ  ಕೊರತೆಯಿಂದಾಗಿ ಬಾಂದಾರ ಖಾಲಿಯಾಗಿ, ನೀರು ಪೂರೈಕೆ ಸ್ಥಗಿತಗೊಂಡು ಚಡಚಣದಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗಿದೆ.

ಒಂದು ಕಡೆ ಸರ್ಕಾರ ಜಿಲ್ಲೆಯ ಕೆರೆ ಕಟ್ಟೆಗಳನ್ನು ತುಂಬುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೋಟ್ಯಂತರ ಹಣ ವ್ಯಯಿಸುತ್ತಿರುವಾಗಿ, ಇನ್ನೊಂದೆಡೆ ನೀರಾವರಿ ಇಲಾಖೆ ಅಧಿಕಾರಿಗಳ ಹೊಣೆಗೇಡಿತನದಿಂದ ತುಂಬಿದ ಬ್ಯಾರೇಜ್‌ಗಳನ್ನು ತೆರವು ಮಾಡಲಾಗಿದೆ.

ಇದಕ್ಕೆ ಉತ್ತಮ ನಿದರ್ಶನ ಎಂದರೆ ಸಮೀಪದ ಉಮರಾಣಿ, ಉಮರಾಜ ಗ್ರಾಮಗಳ ಹತ್ತಿರ ನಿರ್ಮಿಸಲಾದ ಬಾಂದಾರಗಳು ತುಂಬಿ ತುಳುಕುತ್ತಿದ್ದವು. ಮಳೆಗಾಲ ಆರಂಭವಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಎಲ್ಲ ಗೇಟ್‌ಗಳನ್ನು ತೆರೆದು ನೀರು ಹೊರಕ್ಕೆ ಬಿಟ್ಟು ತನ್ನ ಬೇಜವಾಬ್ದಾರಿ ಮೆರೆದಿದೆ.

ಈ ಬಾಂದಾರದ ನೀರನ್ನು ನಂಬಿದ ದಸೂರ, ಉಮರಜ, ಉಮರಾಣಿ, ಹೊಳೆಸಂಖ, ಟಾಕಳಿ, ಗೋವಿಂದಪುರ, ನೀವರಗಿ ಗ್ರಾಮದ ರೈತರು ಚಿಂತಾಜನಕ ಸ್ಥಿತಿ  ತಲುಪಿದ್ದಾರೆ. ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದಾರೆ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತ ಕಬ್ಬು, ಬಾಳೆ ಒಣಗುತ್ತಿವೆ.

ಈ ಬಗ್ಗೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ತಮಗೆ ಸರ್ಕಾರದ ಆದೇಶವಿದೆ. ಅದಕ್ಕಾಗಿ ಗೇಟ್‌ಗಳನ್ನು ತೆರೆಯಲಾಗಿದೆ ಎಂದು ತಿಳಿಸುತ್ತಿರುವುದು ಅವರ ಕರ್ತವ್ಯ ನಿರ್ವಹಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಇದೇ ನದಿಗೆ ನಿರ್ಮಿಸಲಾದ ಶಿರನಾಳ ಹಾಗೂ ಚಿತ್ತಾಪುರ ಬಾಂದಾರಗಳ ಗೇಟ್‌ಗಳನ್ನು ಮುಚ್ಚಿ ನೀರು ಸಂಗ್ರಹಿಸಿ ಡಲಾಗಿದೆ. ಇದಕ್ಕೇನು ಕಾರಣ ಎಂದು ಕೇಳಿದರೆ, ಇಲ್ಲಿಂದ ಸೊಲ್ಲಾಪೂರಕ್ಕೆ ನೀರು ಪೂರೈಕೆ ಮಾಡಲಾಗುತ್ತದೆ ಅದಕ್ಕಾಗಿ ಬ್ಯಾರೇಜ್‌ಗಳಲ್ಲಿ ನೀರು ಸಂಗ್ರಹಿಸಲಾಗಿದೆ ಎನ್ನುತ್ತಾರೆ ಅಧಿಕಾರಿ ಗಳು. ಒಂದೆಡೆ ರಾಜ್ಯದ ಹಿತಕ್ಕಿಂತ, ಮಹಾರಾಷ್ಟ್ರದ ಸೊಲ್ಲಾಪೂರ ಪಟ್ಟಣದ ಹಿತ ಬಯಸುವ ಅಧಿಕಾರಿಗಳ ಕಾಳಜಿ ವಹಿಸುವ ಅಧಿಕಾರಗಳ ಸೇವೆ ಮೆಚ್ಚಲೇಬೇಕು.

ಉಮರಾಣಿ ಬಾಂದಾರ ಖಾಲಿ ಮಾಡದಂತೆ ತಾವು ಅಧಿಕಾರಿಗಳಿಗೆ ಮನವಿ ಮಾಡಿದರೂ, ತಮ್ಮ ಮನವಿಗೆ ಸ್ಪಂದಿಸದ ಅಧಿಕಾರಿಗಳು ಪೋಲಿಸ್ ಬೆದರಿಕೆ ಹಾಕಿ ನೀರು ಖಾಲಿ ಮಾಡಿದ್ದಾರೆ ಎನ್ನುತ್ತಾರೆ ಉಮರಾಣಿ ಗ್ರಾಮದ ಪ್ರಗತಿಪರ ರೈತರಾದ ಜಗದೇವ ಸಾಹುಕಾರ ಭೈರಗೊಂಡ, ಶ್ರೀಶೈಲ ಭೈರಗೊಂಡ, ಭೀಮಣ್ಣ ಭೈರಗೊಂಡ, ಶ್ರೀಶೈಲ ಬಿರಾದಾರ, ಭೀಮಾಶಂಕರ ಭೈರಾಮಡಿ.

ಈ ಬಗ್ಗೆ ಸರ್ಕಾರ ಕೂಡಲೇ ಎಚ್ಚೆತ್ತು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಹಾಗೂ ನಾರಾಯಣ ಪೂರ ಡ್ಯಾಂನಿಂದ ಬಿಡಲಾದ ಕೃಷ್ಣಾ ಕಾಲುವೆ ನೀರನ್ನು ಹಾವಿನಾಳ ಗ್ರಾಮದ ಹಳ್ಳದ ಮೂಲಕ ಭೀಮಾ ನದಿಗೆ ಹರಿಸಿ ಬಾಂದಾರ ತುಂಬುವ ಕಾರ್ಯ ಕೂಡಲೇ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಉಮರಾಣಿ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಶ್ರೀಶೈಲಗೌಡ ಬಿರಾದಾರ, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೂ, ಜಿಲ್ಲಾಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದಾಗಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT