ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ತಿಕೋಟಾ ನೀರಿನ ಸಮಸ್ಯೆ ನಿವಾರಣೆಗೆ ಕ್ರಮ'

Last Updated 18 ಡಿಸೆಂಬರ್ 2012, 8:54 IST
ಅಕ್ಷರ ಗಾತ್ರ

ವಿಜಾಪುರ: ತಾಲ್ಲೂಕಿನ ತಿಕೋಟಾ ಗ್ರಾಮದ ಕುಡಿಯುವ ನೀರು ಸರಬರಾಜು ಯೋಜನೆಯ 2.50 ಲಕ್ಷ ಲೀಟರ್ ಸಾಮರ್ಥ್ಯದ ರೂ.25 ಲಕ್ಷ ಮೊತ್ತದ ಮೇಲ್ಮಟ್ಟದ ಜಲಸಂಗ್ರಹಾಲಯಕ್ಕೆ ಶಾಸಕ ಎಂ.ಬಿ. ಪಾಟೀಲ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.

ತಿಕೋಟಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪರಿಹಾರಕ್ಕೆ ಶಾಶ್ವತ ಯೋಜನೆ ರೂಪಿಸಲಾಗಿದೆ. ನದಿ ಮೂಲದಿಂದ ನೀರು ತಂದು ಶುದ್ಧೀಕರಿಸಿ ತಿಕೋಟಾ ಹಾಗೂ ಸುತ್ತಲಿನ 23 ಹಳ್ಳಿಗಳಿಗೆ ಬಹುಹಳ್ಳಿಗಳ ಕುಡಿಯುವ ನೀರಿನ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಅದು ಜಾರಿಗೊಳ್ಳುವವರೆಗೆ ಹೊನವಾಡ ರಸ್ತೆ ನಾಯಿ ಹಳ್ಳದ ಹತ್ತಿರ ಬೋರವೆಲ್ ಕೊರೆದು ಪೈಪ್‌ಲೈನ್ ಅಳವಡಿಸಿ ತುರ್ತಾಗಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆಯನ್ನೂ ಆರಂಭಿಸಲಾಗಿದೆ ಎಂದರು.

ಜಿ.ಪಂ. ಉಪಾಧ್ಯಕ್ಷ ತಮ್ಮಣ್ಣ ಹಂಗರಗಿ, ಜಿ.ಪಂ. ಎ.ಇ.ಇ ಎಸ್.ಕೆ. ಕೊಳ್ಳಿ ಮಾತನಾಡಿದರು. ಕಾಂಗ್ರೆಸ್ ಸೇವಾದಳ ಮುಖಂಡ ಎಚ್.ಎಸ್. ಕೋರಡ್ಡಿ, ತಾ.ಪಂ. ಸದಸ್ಯ ವಿಜಯಕುಮಾರ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಸಾಹೇಬಗೌಡ ಕೆಂಪವಾಡ, ಉಪಾಧ್ಯಕ್ಷೆ ಭಾರತಿ ಈರಪ್ಪ ತೇಲಿ, ಮಾಜಿ ಅಧ್ಯಕ್ಷ ಸಂತೋಷ ಕೊಲ್ಹಾರ, ಗುತ್ತಿಗೆದಾರ ಪ್ರಭು ಲಿಂಗದಳ್ಳಿ, ಹಾಜಿಲಾಲ ನಗಾರ್ಚಿ, ಸೈದಪ್ಪ ಶಿರಹಟ್ಟಿ, ಆರ್.ಕೆ.ಜವನರ, ಹಾಜಿಲಾಲ ಕೊಟ್ಟಲಗಿ ಉಪಸ್ಥಿತರಿದ್ದರು.

ಆರೋಗ್ಯ ಶಿಬಿರ: ಗುಡ್ಡಾಪುರ ದಾನಮ್ಮೋದೇವಿ ಜಾತ್ರೆಗೆ ಪಾದಯಾತ್ರೆ ಕೈಗೊಂಡ ಯಾತ್ರಿಕರಿಗಾಗಿ ಗಡಿ ಭಾಗದ ತಿಕ್ಕುಂಡಿ ಗ್ರಾಮದಲ್ಲಿ ಇಲ್ಲಿಯ ಬಿ.ಎಲ್.ಡಿ.ಇ ಸಂಸ್ಥೆಯ ಎವಿಎಸ್ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು.

ಪಾದಯಾತ್ರೆಯಿಂದ ಬಳಲಿದವರಿಗೆ ಶಿಬಿರದಲ್ಲಿ ಆಯುರ್ವೇದ ಕಾಲೇಜು ವಿದ್ಯಾರ್ಥಿ -ವಿದ್ಯಾರ್ಥಿನಿಯರು ಅಭ್ಯಂಗ ಮತ್ತು ನಾಡಿಸ್ವೇದ ಚಿಕಿತ್ಸೆ ನೀಡಿದರು. ಸುಮಾರು ಹತ್ತುಸಾವಿರಕ್ಕೂ ಅಧಿಕ ಪಾದಯಾತ್ರಿಕರಿಗೆ ಇಲ್ಲಿ ಚಿಕಿತ್ಸೆ ಹಾಗೂ ಅಭ್ಯಂಗ ಸೇವೆ ನೀಡಲಾಯಿತು.

ಕಾಲೇಜಿನ ನಿರ್ದೇಶಕಿ ಡಾ.ಕೆ.ಎಸ್. ಜಯಶ್ರಿ, ಪ್ರಾಚಾರ್ಯ ಡಾ.ಎಸ್.ಆರ್. ಬಿರಾದಾರ, ಎನ್.ಎಸ್.ಎಸ್. ಯೋಜನಾಧಿಕಾರಿ ಡಾ.ಎಸ್.ಎಸ್. ಪಾಟೀಲ, ಡಾ.ಎಸ್.ಪಿ. ನಾಯಕ್, ಡಾ.ಎಂ.ಎಸ್. ಯಲಗೊಂಡ ಡಾ.ಪಿ.ಆರ್. ವಸ್ತ್ರದ ಇತರರು ಇದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT