ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿಯನ್ನು ಒಪ್ಪಿಕೊಳ್ಳುವ ಮುನ್ನ

Last Updated 21 ಡಿಸೆಂಬರ್ 2012, 19:44 IST
ಅಕ್ಷರ ಗಾತ್ರ

ಕಾನೂನು ಸಂಹಿತೆಗಳ ಪೈಕಿ `ನ್ಯಾಯಾಂಗ ನಿಂದನೆ' ಕಾಯ್ದೆಯನ್ನು ಟೀಕಿಸಿದಾಗ ಮತ್ತು ಚರ್ಚಿಸಿದಾಗ ಕಂಡುಬಂದಿರುವಷ್ಟು ಕೋಪ, ಧಿಕ್ಕಾರಗಳನ್ನು ಒಳಗೊಂಡ ಚರ್ಚೆ ಈತನಕ ಬೇರೆ ಯಾವ ಸಂಹಿತೆಯ ವಿಷಯದಲ್ಲೂ ಕಂಡುಬಂದಿಲ್ಲ.

ರಾಜೀವ್ ಧವನ್ ಮತ್ತು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರು ಮಾಡಿರುವ ಟೀಕೆ ಮತ್ತು ಕೊಟ್ಟಿರುವ ಸಲಹೆ ಈ ಸಂದರ್ಭದಲ್ಲಿ  ಸಮಂಜಸ. ಬ್ರಿಟಿಷರ ಆಳ್ವಿಕೆಯಲ್ಲಿ ಭಾರತೀಯರು ಕೋರ್ಟ್ ಕಲಾಪಗಳಲ್ಲಿ ಭಾಗವಹಿಸುವಾಗ, ತೀರ್ಪನ್ನು ಅನುಭವಿಸುವಾಗ ಅನ್ಯಾಯವಾದರೂ ನ್ಯಾಯಾಧೀಶರ ವಿರುದ್ಧ ಸೊಲ್ಲೆತ್ತಬಾರದೆಂಬುದೇ ಈ ಕಾಯ್ದೆಯ ಮುಖ್ಯ ಗುರಿಯಾಗಿತ್ತು. ಜನರ ಪ್ರತಿಕ್ರಿಯೆಯನ್ನು ಹತ್ತಿಕ್ಕುವ ಸಲುವಾಗಿ ಬ್ರಿಟಿಷರು ಈ ಕಾಯ್ದೆಯನ್ನು ಜಾರಿಗೊಳಿಸಿದರು. ಬ್ರಿಟಿಷರು ಭಾರತವನ್ನು ಆಳಿದಷ್ಟು ಕಾಲವೂ ತುಪಾಕಿ ಮತ್ತು ಗುಂಡುಗಳು ಮಾಡಿದಷ್ಟೇ ಕೆಲಸವನ್ನು ನ್ಯಾಯಾಂಗ ನಿಂದನೆಯ ಕಾಯ್ದೆಯೂ ಮಾಡಿತು. ಹೀಗಾಗಿ ಅಂದಿನಿಂದಲೂ ಈ ಕಾಯ್ದೆ ಗುರುತರ ಚರ್ಚೆಗೆ ಕಾರಣವಾಗುತ್ತಲೇ ಬಂದಿದೆ.

ಸ್ವಾತಂತ್ರ್ಯೋತ್ತರದಲ್ಲಿ ಈ ಕಾಯ್ದೆಯನ್ನು ಇಡಿಯಾಗಿ ಒಪ್ಪಿಕೊಂಡು ಅನುಸರಿಸಲು ನಮ್ಮ ನ್ಯಾಯಾಂಗ ಮುಂದಾಯಿತು. ಭಾರತ ಸಂವಿಧಾನದ ಆಶೋತ್ತರಕ್ಕೆ ಈ ಕಾಯ್ದೆಯ ಆಶಯಗಳನ್ನು ಒಗ್ಗಿಸಿಕೊಳ್ಳುವ ನಿಟ್ಟಿನಲ್ಲಿ ಚರ್ಚೆಗಳು ಪ್ರಾರಂಭವಾದವು. ಆದರೂ ಈ ಕಾಯ್ದೆಗೆ 2004ರ ವರೆಗೂ ಗಮನಾರ್ಹ ಬದಲಾವಣೆಯನ್ನು ತರಲಾಗಲಿಲ್ಲ ಎಂಬುದೇ ನೋವಿನ ವಿಚಾರ.

ಪ್ರಾಜ್ಞರು, ಸಾಮಾಜಿಕ ಕಾರ್ಯರ್ತರು, ಕಾನೂನು ತಜ್ಞರು ಇಂದಿಗೂ ಈ ಕಾಯ್ದೆಯಲ್ಲಿ ಜೀವ ದ್ರವ್ಯದ ಸೋಂಕಿನ ನಿರಾಕರಣೆಯಿದೆ ಎಂದು ಚಡಪಡಿಸುತ್ತಲೇ ಇದ್ದಾರೆ. ಈ ಕಾಯ್ದೆ ಅಡಿಯಲ್ಲಿ ವಿಚಾರಣೆಯನ್ನು ಎದುರಿಸಲು ಕ್ರಮಬದ್ಧವಾದ ಮತ್ತು ಶಾಸ್ತ್ರೀಯ ಪ್ರಕ್ರಿಯಾ ವಿಧಾನಗಳಿಲ್ಲ ಎಂಬ ಆರೋಪವೂ ಇದೆ.

ಅಷ್ಟೇ ಅಲ್ಲದೆ ಎಲ್ಲಾ ಸಂದರ್ಭದಲ್ಲಿ ನ್ಯಾಯಾಲಯ ಅಥವಾ ನ್ಯಾಯಾಧೀಶ ಒಂದು ಪಕ್ಷಗಾರನಾಗುವ ಕಾರಣ ವಿಚಾರಣೆಯ ಸಂದರ್ಭದಲ್ಲಿ ಕಾನೂನು, ಕಟ್ಟಳೆ ಮೀರಿ ನಿಲ್ಲುವ ಮತ್ತು ತೀರ್ಪಿಗೆ ಸಮಂಜಸವೂ ಮುಖ್ಯವೂ ಆಗುವ ಅಂಶಗಳು ತೇಲಿ ಬರಲು ಸಾಧ್ಯವಿರುವುದಿಲ್ಲ ಎಂದು ಭಾವಿಸುವಂತಾಗಿದೆ. ಇಂತಹ ಶ್ರೇಷ್ಠ ಅಂಶಗಳ ನಿರಾಕರಣೆಯಿಂದ ತೀರ್ಪು ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಎಂಬ ಪ್ರಬುದ್ಧ ಪ್ರಶ್ನೆ ಕಾಡಲು ಪ್ರಾರಂಭಿಸುತ್ತದೆ.

ಈ ಕಾಯಿದೆಯಲ್ಲಿ ಎರಡು ವಿಧದ ಅಪರಾಧಗಳಾಗಲು ಸಾಧ್ಯ: ಒಂದು- ಸಿವಿಲ್ ಕಂಟೆಮ್ಟ ಮತ್ತು ಎರಡನೆಯದು- ಕ್ರಿಮಿನಲ್ ಕಂಟೆಮ್ಟ.

ನ್ಯಾಯಾಲಯಗಳು ಕೊಡಮಾಡುವ ತೀರ್ಪು, ಆದೇಶ, ಮುಂತಾದವುಗಳಿಗೆ ಧಿಕ್ಕಾರ, ಉಪೇಕ್ಷೆ ತೋರಿಸುವುದು, ಪಾಲನೆ ಮಾಡದೇ ಇರುವುದು, ಕಡೆಗಣಿಸುವುದು ಇವು `ಸಿವಿಲ್ ಕಂಟೆಮ್ಟ' ಉಂಟುಮಾಡುತ್ತವೆ.

ನ್ಯಾಯಾಲಯಗಳ ಇಲ್ಲವೇ ನ್ಯಾಯಾಧೀಶರ ನಿಂದನೆ, ಅವಹೇಳನ ಮತ್ತು ಅವುಗಳ ಹಾಗೂ ನ್ಯಾಯಾಧೀಶರ ಏಕತೆಗೆ ಹಾಗೂ ನ್ಯಾಯಾಂಗದ ವಿಶ್ವಾಸಾರ್ಹತೆಗೆ ಧಕ್ಕೆ ಉಂಟು ಮಾಡುವಂತಹ ಕೃತ್ಯಗಳು `ಕ್ರಿಮಿನಲ್ ಕಂಟೆಮ್ಟ' ಎನಿಸಿಕೊಳ್ಳುತ್ತವೆ. ಇವುಗಳು ಯಾವುದೇ ರೀತಿಯ ಅಭಿವ್ಯಕ್ತಿಗಳಿಂದ ಅಂದರೆ ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಅಥವಾ ಸಾಹಿತ್ಯ ಪ್ರಕಾರ ಅಥವಾ ಇನ್ನಾವುದೇ ವಿಧದ ಮಾಧ್ಯಮಗಳ ಮೂಲಕ ಉಂಟಾದರೆ `ಕ್ರಿಮಿನಲ್ ಕಂಟೆಮ್ಟ' ಅಡಿಯಲ್ಲಿ ಗುರುತಿಸಲಾಗುತ್ತದೆ.

ಯಾವ ಟೀಕಾಕಾರರೂ `ಸಿವಿಲ್ ಕಂಟೆಮ್ಟ' ಕುರಿತು ಹೆಚ್ಚಾಗಿ ಟೀಕಿಸಿರುವ ಸಂದರ್ಭಗಳು ಕಂಡುಬರುವುದಿಲ್ಲ. ಎಲ್ಲರ ಟೀಕೆಯೂ `ಕ್ರಿಮಿನಲ್ ಕಂಟೆಮ್ಟ' ಕುರಿತಾದದ್ದೇ. ಕಾರಣ ಇಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ತನ್ನ ಪಾತ್ರವನ್ನು ಸದ್ದು ಮಾಡುತ್ತಲೇ ತೋರಿಸಿಕೊಳ್ಳಲು ಮುಂದಾಗುತ್ತದೆ.

ನಾಗರಿಕರ ಅಭಿವ್ಯಕ್ತಿಯ ಸ್ವಾತಂತ್ರ್ಯದ ಹಕ್ಕು ಎಲ್ಲಕ್ಕೂ ಮೀರಿದ್ದಾಗಿರಬೇಕು ಮತ್ತು ಅದನ್ನು `ಚಲಾಯಿಸಬೇಕು' ಎಂಬುದೇ ಆಗಿರುತ್ತದೆ. ಆದರೆ, ಸಂವಿಧಾನ ಈ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಕೆಲವು ನಿರ್ಬಂಧಗಳಿಗೆ ಒಳಪಡಿಸಿ ಚಲಾಯಿಸಲು ಅನುವು ಮಾಡಿಕೊಟ್ಟಿದೆ. ಇಲ್ಲಿ ಉದ್ಭವಿಸುವ ಸಂದರ್ಭಗಳು ನ್ಯಾಯಾಲಯ ಮತ್ತು ನ್ಯಾಯಾಧೀಶರ ಘನತೆಯನ್ನು ಎತ್ತಿ ಹಿಡಿಯುವ ಮೌಲ್ಯಕ್ಕೆ ಒತ್ತು ಕೊಡುತ್ತವೆ. ಈ ನಿಟ್ಟಿನಲ್ಲಿ ನಾಗರಿಕರನ್ನು ಹೊಣೆಗಾರರನ್ನಾಗಿಸುತ್ತದೆ. ಹೀಗಾಗಿ ನ್ಯಾಯಾಂಗ ನಿಂದನೆ ಎಂಬ ವಿಷಯದ ಚರ್ಚೆ ಕಂಡು ಬಂದಾಗ ಅನೇಕ ಸಂಕಟ ಮತ್ತು ಸಂಕಷ್ಟ ಸಂದರ್ಭಗಳು, ಸಂಘರ್ಷಗಳು ಏರ್ಪಡಲು ಅವಕಾಶವಾಗುತ್ತಿದೆ.

ಇತ್ತೀಚೆಗೆ ನ್ಯಾಯಾಂಗ ನಿಂದನಾ ಕಾಯ್ದೆಗೆ ತಂದಿರುವ ತಿದ್ದುಪಡಿ ಅಂದರೆ `Justification by truth is a valid defence' ಟೀಕಾಕಾರನ್ನು ನಿರಸ್ತ್ರರನ್ನಾಗಿಸುತ್ತಿದೆ.truthಎಂಬುದು ನ್ಯಾಯಾಂಗ ನಿಂದನೆಯ ಪ್ರಕರಣದಲ್ಲಿ ಒಂದು valid defence ಆಗಿರದಿದ್ದ ಕಾಲದಲ್ಲಿ ಈ ಕಾಯ್ದೆಯು `ಭಯೋತ್ಪಾದನೆ'ಯನ್ನು ಮಾಡುವ ಲಕ್ಷಣಗಳನ್ನು ಹೊಂದಿತ್ತೆಂದು ಭಾವಿಸಲು ಸಾಧ್ಯವಾಗಿತ್ತು. ಇತ್ತೀಚಿನ ತಿದ್ದುಪಡಿ ಇದೆಲ್ಲವನ್ನೂ ಸರಿಪಡಿಸಿಕೊಡುತ್ತಾ "contempt of courts act’ ಒಂದು "necessary evil’ಎಂಬುದನ್ನು ಖಾತ್ರಿ ಮಾಡಿಕೊಟ್ಟಿದೆ. ಹೀಗಾಗಿ ಈ ಕಾಯ್ದೆಯನ್ನು ಒಪ್ಪಿಕೊಳ್ಳಲು ಸಹಿಸಿಕೊಳ್ಳಲು ನಮಗೆ ಸಾಧ್ಯವಾಗಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT