ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿದ್ದುಪಡಿಯಾದ ಲೋಕಪಾಲ ಮಸೂದೆ: ರಾಜ್ಯಸಭೆಯಲ್ಲಿ ಮಂಡನೆ

Last Updated 13 ಡಿಸೆಂಬರ್ 2013, 14:08 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆಗಳ ರಚನೆಯನ್ನು ಪ್ರತ್ಯೇಕಿಸುವುದರ ಜೊತೆಗೆ ಸರ್ಕಾರಿ ನೌಕರರನ್ನು ವಿಚಾರಣೆಗೆ ಒಳಪಡಿಸುವ ಅಧಿಕಾರಗಳನ್ನು ಸಾರ್ವಜನಿಕ ತನಿಖಾಧಿಕಾರಿಗಳಿಗೆ ವರ್ಗಾಯಿಸಲು ಅವಕಾಶ ಕಲ್ಪಿಸಿ ತಿದ್ದುಪಡಿ ಮಾಡಲಾದ ಲೋಕಪಾಲ ಮಸೂದೆಯನ್ನು ಸರ್ಕಾರವು ಶುಕ್ರವಾರ ಗದ್ದಲದ ಮಧ್ಯೆ ರಾಜ್ಯಸಭೆಯಲ್ಲಿ ಮಂಡಿಸಿತು.

ಸದನದಲ್ಲಿ ಮಸೂದೆಯನ್ನು ಮಂಡಿಸಿದ ಸಿಬ್ಬಂದಿ ಖಾತೆ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಅವರು ಮಸೂದೆ ಅಂಗೀಕಾರಕ್ಕೆ ಸಹಕರಿಸುವಂತೆ ಸದಸ್ಯರಿಗೆ ಮನವಿ ಮಾಡಿದರು.

ಏನಿದ್ದರೂ ಸಮಾಜವಾದಿ ಪಕ್ಷ ಮತ್ತು ತೆಲುಗುದೇಶಂ ಪಕ್ಷಗಳು ಕ್ರಮವಾಗಿ ಬೆಲೆ ಏರಿಕೆ ಮತ್ತು ಆಂಧ್ರಪ್ರದೇಶ ವಿಭಜನೆಯ ಪ್ರಶ್ನೆಯನ್ನು ಎತ್ತಿಕೊಂಡು ಕೋಲಾಹಲ ನಡೆಸುತ್ತಿದ್ದುದರಿಂದ ಮಸೂದೆಯನ್ನು ಪರಿಶೀಲನೆಗೆ ಎತ್ತಿಕೊಳ್ಳಲಾಗಲಿಲ್ಲ.

ಬಿಜೆಪಿ, ತೃಣಮೂಲ ಕಾಂಗ್ರೆಸ್ ಮತ್ತು ಇತರರು ಗದ್ದಲದಲ್ಲಿ ಏನೂ ಕೇಳುತ್ತಿಲ್ಲವಾದ್ದರಿಂದ ಮೊದಲು ಸದನವನ್ನು ಸುಸ್ಥಿತಿಗೆ ತನ್ನಿ ಎಂದು ಒತ್ತಾಯಿಸಿದರು.

ಇದು ಅತ್ಯಂತ ಪ್ರಮುಖ ವಿಷಯವಾದ್ದರಿಂದ ಮೊದಲು ಸದನವನ್ನು ಶಾಂತ ಸ್ಥಿತಿಗೆ ತನ್ನಿ ಎಂದು ಬಿಜೆಪಿಯ ರವಿಶಂಕರ ಪ್ರಸಾದ್ ಉಪ ಸಭಾಪತಿ ಪಿ.ಜೆ. ಕುರಿಯನ್ ಅವರನ್ನು ಆಗ್ರಹಿಸಿದರು. ಡೆರೆಜ್ ಒ'ಬ್ರೀನ್ ಅವರು ತಮಗೆ ಏನೂ ಕೇಳುತ್ತಿಲ್ಲ ಎಂದು ಇದೇ ವೇಳೆಗೆ ಸನ್ನೆ ಮಾಡಿ ತೋರಿಸಿದರು.

ಕೋಲಾಹಲ ಮುಂದುವರಿದದ್ದರಿಂದ ಸದನದಲ್ಲಿ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗಲಿಲ್ಲ. ಗದ್ದಲದ ಮಧ್ಯೆ ಸಭಾಪತಿಗಳು ಕಲಾಪವನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.

ಇದೇ ವರ್ಷ ಜನವರಿ 31ರಂದು ಸರ್ಕಾರವು ಲೋಕಪಾಲ ಮಸೂದೆಗೆ ಉಲ್ಲೇಖಿತ ತಿದ್ದುಪಡಿಗಳನ್ನು ಮಾಡಿತ್ತು.
ರಾಜ್ಯಸಭಾ ಆಯ್ಕೆ ಸಮಿತಿಯು ಶಿಫಾರಸು ಮಾಡಿದ್ದ 16 ಸಲಹೆಗಳ ಪೈಕಿ 14 ಸಲಹೆಗಳನ್ನು ಕೇಂದ್ರ ಸಂಪುಟ ಅಂಗೀಕರಿಸಿತ್ತು.

ರಾಜಕೀಯ ಪಕ್ಷಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಂಟಾದ ಪರಿಣಾಮವಾಗಿ 2011ರ ಡಿಸೆಂಬರ್ ನಿಂದ ಲೋಕಸಭೆಯಲ್ಲಿ ಮಸೂದೆ ನೆನೆಗುದಿಗೆ ಬಿದ್ದ ಬಳಿಕ ಕಳೆ ವರ್ಷ ಮೇ ತಿಂಗಳಲ್ಲಿ ಆಯ್ಕೆ ಸಮಿತಿಯನ್ನು ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT