ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪಟೂರಿನಲ್ಲಿ ಮೊಳಗಿತು ಕಲಾವಿದರ ಶಬ್ದಾಕ್ರೋಶ

Last Updated 24 ಜುಲೈ 2012, 6:20 IST
ಅಕ್ಷರ ಗಾತ್ರ

ತಿಪಟೂರು: ಅರೆ, ತಮಟೆ, ಕಹಳೆ, ದೋಣು ಮೊಳಗಿಸಿ ಅಪರೂಪಕ್ಕೆ ದನಿ ಎತ್ತಿದ ನೂರಾರು ಕಲಾವಿದರು ಅನ್ಯಾಯದ ವಿರುದ್ಧ ಪಟ್ಟಣದಲ್ಲಿ ಸೋಮವಾರ ಭಾರಿ ಪ್ರತಿಭಟನೆ ನಡೆಸಿದರು.

ನಗರದ ಕೆಂಪಮ್ಮ ದೇಗುಲದಿಂದ ಅಪಾರ ಸಂಖ್ಯೆಯಲ್ಲಿ ತಮ್ಮ ವಾದ್ಯಗಳೊಂದಿಗೆ ಮೆರವಣಿಗೆ ಹೊರಟ ಕಲಾವಿದರು ವಿನೂತನ ಶಬ್ದಾಕ್ರೋಶ ವ್ಯಕ್ತಪಡಿಸಿದರು. ದೌರ್ಜನ್ಯಕ್ಕೆ ಬಲಿಯಾದ ದಸರೀಘಟ್ಟದ ರವಿಕುಮಾರ್ ಸಾವಿಗೆ ಕಾರಣರಾದವನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರವಿಕುಮಾರ್ ಸಾವಿನಿಂದ ಕಂಗೆಟ್ಟಿರುವ ಕುಟುಂಬಕ್ಕೆ ತಕ್ಷಣ ರೂ 10 ಲಕ್ಷ ಪರಿಹಾರ ನೀಡಬೇಕು. ಈ ಕುಟುಂಬದ ಒಬ್ಬರಿಗೆ ಸರ್ಕಾರಿ ನೌಕರಿ ಮತ್ತು ಭೂಮಿ ಕೊಡಬೇಕು. ಅರೆ, ತಮಟೆ, ಮೌರಿ, ದೋಣು, ಕಹಳೆ ವಾದ್ಯಗಾರರನ್ನು ಗೌರವಾನ್ವಿತ ಕಲಾವಿದರೆಂದು ಪರಿಗಣಿಸಿ ಅಸ್ಪಶ್ಯತೆ, ಅವಮಾನ, ದೌರ್ಜನ್ಯದಿಂದ ಪಾರು ಮಾಡಬೇಕು ಎಂದು ಒತ್ತಾಯಿಸಿದರು.

ಅಗೌರವ, ಅತಂತ್ರದ ಬದುಕು ಸವೆಸುತ್ತಿರುವ ಈ ಕಲಾವಿದರಿಗೆ ರಕ್ಷಣೆ ಮತ್ತು ಜೀವನ ಭದ್ರತೆ ಒದಗಿಸಬೇಕು. ಮಾಸಾಶನ, ಜೀವವಿಮೆ, ಸ್ವಾಸ್ಥ್ಯ ಭೀಮಾ ಯೋಜನೆ ಸೌಲಭ್ಯ ದೊರಕಿಸಬೇಕು. ಮುಜರಾಯಿ ದೇಗುಲಗಳ ವಾದ್ಯಗಾರರಿಗೆ ಜೀವನ ಸಾಗಿಸುವಷ್ಟು ಸಂಬಳ ನೀಡಬೇಕು. ಕುಲವಾಡಿಗಳನ್ನು ವೃತ್ತಿಪರ ಮಾಹಿತಿ ಪ್ರಚಾರಕರೆಂದು ಪರಿಗಣಿಸಿ ಸೌಲಭ್ಯ ನೀಡಬೇಕು. ಎಲ್ಲ ಹಿರಿಯ ಕುಲವಾಡಿಗಳಿಗೆ ಮಾಸಾಶನ ಮಂಜೂರು ಮಾಡಬೇಕು ಎಂದು ಕೋರಿದರು.

ಸಿಂಗ್ರಿ ವೃತ್ತದಲ್ಲಿ ಸುಮಾರು ಒಂದು ಗಂಟೆ ರಸ್ತೆ ತಡೆ ನಡೆಸಿದರು. ಚಿಂತಕರಾದ ಕೋಟೆಗಾನಹಳ್ಳಿ ರಾಮಯ್ಯ, ಪ್ರೊ.ದೊರೈರಾಜ್, ವಡ್ಡಗೆರೆ ನಾಗರಾಜಯ್ಯ, ಹಿರಿಯ ಕಲಾವಿದ ಡಾ.ಲಕ್ಷ್ಮಣದಾಸ್, ದಿ.ರವಿಕುಮಾರ್ ಪತ್ನಿ ಯಶೋದಮ್ಮ, ದಲಿತ ಮುಖಂಡರಾದ ಚೇಳೂರು ವೆಂಕಟೇಶ್, ಬಿ.ಶಾಂತರಾಜು, ಭಾನುಪ್ರಕಾಶ್, ಬಿಳಿಗೆರೆ ಮಹದೇವ್, ಶಾಂತಪ್ಪ, ರಂಗಸ್ವಾಮಿ, ಬಜಗೂರು ಮಂಜುನಾಥ್, ಕರಡಾಳು ಚಂದ್ರು, ನಾರಾಯಣರಾಜು, ಕುಂದೂರು ತಿಮ್ಮಯ್ಯ, ನಾಗತಿಹಳ್ಳಿ ಕೃಷ್ಣಮೂರ್ತಿ, ಶ್ರೀನಿವಾಸ್, ಸೂರ್ಯಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

ಮುಖ್ಯರಸ್ತೆಯಲ್ಲಿ ಮೆರವಣಿಗೆ ಮೂಲಕ ಸಾಗಿ ಉಪ ವಿಭಾಗಾಧಿಕಾರಿ ಮತ್ತು ಎಎಸ್‌ಪಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

ಘೋರ ಅನ್ಯಾಯ
ಭಾರತದ ಬಹುದೊಡ್ಡ ಸಾಂಸ್ಕೃತಿಕ ಶಕ್ತಿಯಾದ ಪಾರಂಪರಿಕ ಕಲೆಗಳ ವಾರಸುದಾರರನ್ನು ನಿರ್ಲಕ್ಷ್ಯ, ಅವಮಾನ, ಅಸ್ಪಶ್ಯತೆಯಿಂದ ಕಾಣುವುದು ಘೋರ ಅಪರಾಧ ಎಂದು ಖ್ಯಾತ ಚಿಂತಕ ಕೋಟೆಗಾನಹಳ್ಳಿ ರಾಮಯ್ಯ ತಿಳಿಸಿದರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅರೆ, ತಮಟೆ ಕಲಾವಿದರ ಸಂಘದ ನೇತೃತ್ವದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಭಾರತದ ಸಾಂಸ್ಕೃತಿಕ ಜೀವಾಳವೇ ಈ ನಿರ್ಲಕ್ಷಿತ ಕಲಾವಿದರು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಹಣ, ಅಂತಸ್ತು, ಜಾತಿ ದ್ರಾಷ್ಟ್ಯದ ಮಾನಸಿಕ ವಿಕಾರಿಗಳ ಮತ್ತು ನ್ಯಾಯ ದೇವತೆಯ ಕಣ್ಣು ತೆರೆಸಲು ಕಲಾವಿದರು ತಮ್ಮ ವಾದ್ಯದೊಂದಿಗೆ ಬೀದಿಗಿಳಿಯಬೇಕಾಗಿ ಬಂದಿದ್ದು ದುರ್ದೈವ. ಮಠಾಧೀಶರು ಜಾತಿಯನ್ನು ಗುಂಪುಗೂಡಿಸುವ ಬದಲು ಮನಷ್ಯರನ್ನು ಒಗ್ಗೂಡಿಸಲಿ. ಶಾಲಾ ಕಾಲೇಜುಗಳನ್ನು ತೆರೆಯುವ ಬದಲು ಕಪಟ, ದರ್ಪದ ಮನಸ್ಸುಗಳಿಗೆ ಚಿಕಿತ್ಸೆ ನೀಡಲಿ ಎಂದು ಆಗ್ರಹಿಸಿದರು.

ಸಾಹಿತಿ ವಡ್ಡಗೆರೆ ನಾಗರಾಜಯ್ಯ ಮಾತನಾಡಿ, ಕಲಾವಿದರಿಗೆ ಗೌರವ ಕೊಡದೆ ಕಲೆಯನ್ನು ಮಾತ್ರ ಅನುಭವಿಸುವ ಸಮಾಜಕ್ಕೆ ಘನತೆ ಇರುವುದಿಲ್ಲ. ಜಾತಿ ಮನಸ್ಸುಗಳೂ ಕೂಡ ಭ್ರಷ್ಟಾಚಾರದ ಭಾಗ. ಅರೆ, ತಮಟೆ, ಕಹಳೆ ಕಲಾವಿದರಿಗೆ ಮತ್ತು ಸಮಾಜದ ಕೆಲಸ ಮಾಡುವ ಕುಲವಾಡಿಗರಿಗೆ ಸರ್ಕಾರ ಜೀವನ ಭದ್ರತೆ, ಮಾಶಾಸನ, ವಿಮೆ ನೀಡದಿರುವುದು ಅನ್ಯಾಯ. ಕಲಾವಿದರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವವರೆಗೆ ಈ ಹೋರಾಟ ನಿಲ್ಲಬಾರದು ಎಂದರು. ಚಿಂತಕ ಪ್ರೊ.ದೊರೈರಾಜ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT