ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪರಸನಾಳ: ಹಿಡಿ ಮೇವಿಲ್ಲದ ಗೋಶಾಲೆ

Last Updated 24 ಜೂನ್ 2012, 9:10 IST
ಅಕ್ಷರ ಗಾತ್ರ

ಕುಕನೂರು: ಬರಗಾಲದ ಬವಣೆಯಲ್ಲಿ ಜಾನುವಾರುಗಳನ್ನು ಸಂರಕ್ಷಿಸಲು ಸ್ಥಾಪಿಸಲಾದ ಕುಕನೂರು ಸಮೀಪದ ತಿಪ್ಪರಸನಾಳ ಗ್ರಾಮದ ಗೋಶಾಲೆಗೆ ಸಮರ್ಪಕ ಹುಲ್ಲು-ಮೇವು ಪೂರೈಸದ ಕಾರಣದಿಂದ ದನಕರುಗಳು ಕಂಗಾಲಾಗಿದ್ದ ದೃಶ್ಯ ಗುರುವಾರ ಕಂಡುಬಂತು.

ಬರಗಾಲದ ಸಮಯದಲ್ಲಿ ರೈತರ ಬಾಳಿಗೆ ಬೆನ್ನೆಲುಬಾಗಿದ್ದ ಜಾನುವಾರುಗಳನ್ನು ರಕ್ಷಿಸಬೇಕೆಂದು ಯೋಚಿಸಿ ಸರ್ಕಾರ ವಿವಿಧೆಡೆ ಗೋಶಾಲೆಯನ್ನು ಆರಂಭಿಸಿದೆ. ಇದರಿಂದ ಸಮಾಧಾನದ ನಿಟ್ಟಿಸಿರು ಬಿಟ್ಟ ರೈತರು ನಾವು ಉಪವಾಸ ಇದ್ದರೂ ಚಿಂತೆ ಇಲ್ಲ, ನಮ್ಮ ದನಕರುಗಳು ಬದುಕಿದರೆ ಸಾಕು ಎಂದು ತಮ್ಮ ಜಾನುವಾರುಗಳನ್ನು ಗೋಶಾಲೆಯಲ್ಲಿ ಬಿಟ್ಟಿದ್ದಾರೆ. ತಿಪ್ಪರಸನಾಳ ಗ್ರಾಮದಲ್ಲಿ ಸ್ಥಾಪಿಸಲಾಗಿರುವ ಗೋಶಾಲೆಯಲ್ಲಿ ಸುತ್ತ ಮುತ್ತಲು ಗ್ರಾಮಗಳ ಸುಮಾರು 1600 ವಿವಿಧ ಜಾನುವಾರುಗಳು ಇವೆ.

ಅವು ಬದುಕಬೇಕಾದಲ್ಲಿ ಕನಿಷ್ಠ ಎಂದರೂ ದಿನಕ್ಕೆ ಎರಡು ಹೊತ್ತು ಹುಲ್ಲು-ಮೇವನ್ನು ಹಾಕಬೇಕು. ದಿನಕ್ಕೆ ಕೇವಲ 2-3 ಲಾರಿಯಲ್ಲಿ ಪೂರೈಸಲಾಗುತ್ತಿರುವ ಹುಲ್ಲನ್ನು ಕೇವಲ ಹೆಸರಿಗೆ ಎನ್ನುವಂತೆ ದಿನಕ್ಕೆ ಒಂದು ಬಾರಿ ಮಾತ್ರ ಹಾಕಲಾಗುತ್ತಿದೆ. ಇದರಿಂದ ಜಾನುವಾರುಗಳು ಸಂಕಷ್ಟ ಎದುರಿಸುತ್ತಿವೆ. ಮೇಲಾಗಿ ಮಿಶ್ರ ತಳಿಯ ಆಕಳು ಕರುವೊಂದು ಸತ್ತು ಬಿದ್ದ ಸಂಗತಿ ರೈತರು ಆತಂಕಗೊಳ್ಳುವಂತಾಗಿದೆ. `ಇಲ್ಲಿರುವ ದನಕರುಗಳು ಬದುಕಬೇಕಾದರೆ ಕನಿಷ್ಠ 5-6 ಲಾರಿ ಹುಲ್ಲು ಬೇಕಾಗುತ್ತದೆ.

ಅಂದಾಗ ಮಾತ್ರ ಎಲ್ಲ ಜಾನುವಾರುಗಳಿಗೆ ತಕ್ಕಮಟ್ಟಿಗೆ ಎರಡು ಹೊತ್ತು ಸಾಕಾಗುತ್ತದೆ. ಈ ಸಂಗತಿಯನ್ನು ಮೇಲಧಿಕಾರಿಗಳಿಗೆ ಹೇಳಿದರು ಯಾವುದೇ ಪ್ರಯೋಜನ ಆಗಿಲ್ಲ~ ಎಂದು ರೈತ ಮುಖಂಡ ಪ್ರಕಾಶ ದೇಸಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.

`ಕೇವಲ ಹೆಸರಿಗೆ ಎನ್ನುವಂತೆ ದಿನಕ್ಕೆ ಒಂದುಬಾರಿ ಹುಲ್ಲನ್ನು ಹಾಕಲಾಗುತ್ತದೆ. ಯಾವುದೇ ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು ಭೇಟಿ ನೀಡುತ್ತಾರೆ ಅಂದಾಗ ಮಾತ್ರ ಅಂದಿನ ದಿನ ಗ್ವಾದಲಿಯಲ್ಲಿ ಹುಲ್ಲು ತುಂಬಿರುತ್ತದೆ. ಈ ಅವಘಡಕ್ಕೆ ಕಾರಣ ಯಾರು?, ನಾವು ಯಾರನ್ನು ಕೇಳಬೇಕು? ನಮ್ಮ ಕಷ್ಟ ಕೇಳೋರು ಯಾರು? ಎಂದು ಜಾನುವಾರು ಜೋಪಾನ ಮಾಡಲು ಬಂದಿದ್ದ ಮಲ್ಲಪ್ಪ ಮಡ್ಡಿ ರಾಜೂರ, ಷಣ್ಮುಖಪ್ಪ ಕುರಿ ಬೂದಗುಂಪಿ, ಭೀಮಪ್ಪ ಕಂಕಿ ಅರಕೇರಿ, ಕನಕಪ್ಪ ರ‌್ಯಾವಣಕಿ ಕೋನಾಪುರ, ಈರಪ್ಪ ಗೊಬ್ಬಿ ಅರಕೇರಿ ಸೇರಿದಂತೆ ಹಲವಾರು ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತರ ಜೀವಾಳವಾಗಿದ್ದ ಜಾನುವಾರು ರಕ್ಷಣೆಗೆ ವಿಶೇಷ ಕಾಳಜಿ ವಹಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT