ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪಸಂದ್ರ: ಬರದಲ್ಲೂ ಅರಳಿದ ತೊಗರಿ

Last Updated 20 ಅಕ್ಟೋಬರ್ 2011, 8:40 IST
ಅಕ್ಷರ ಗಾತ್ರ

ಕೋಲಾರ: ಬರದ ನೆರಳಲ್ಲಿ ನಲುಗುತ್ತಿರುವ ಜಿಲ್ಲೆಯ ರೈತರಲ್ಲಿ ತೊಗರಿ ಬೆಳೆ ಭರವಸೆ ಮೂಡಿಸುತ್ತಿದೆ.
ಪ್ರಧಾನ ಬೆಳೆಗಳಾದ ರಾಗಿ, ಭತ್ತ, ನೆಲಗಡಲೆ ನಷ್ಟದ ಹಾದಿಯಲ್ಲಿರುವಾಗಲೇ ಹಲವು ಹಳ್ಳಿಗಳಲ್ಲಿ, ಅಕ್ಟೋಬರ್ ಮೊದಲ ವಾರದಲ್ಲಿ ಬಿದ್ದ ಮಳೆ ಪರಿಣಾಮ ತೊಗರಿ ಚೇತರಿಸಿಕೊಂಡಿದೆ. ಪ್ರಸ್ತುತ ಹೂ ಬಿಡುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಾಯಿ ಬಿಡುವ ನಿರೀಕ್ಷೆ ಇದೆ.

ಹಿಂದಿನ ಎರಡು-ಮೂರು ವರ್ಷಗಳಲ್ಲಿ ಜಿಲ್ಲೆಯ ರೈತರು ಹಸಿ ತೊಗರಿ ಕಾಯಿ ಕಿತ್ತು ಮಾರಾಟ ಮಾಡಿ ಉತ್ತಮ ಬೆಲೆ ಪಡೆದಿದ್ದು, ಈ ಬಾರಿಯೂ ಉತ್ತಮ ಇಳುವರಿ ಹಾಗೂ ಧಾರಣೆ ನಿರೀಕ್ಷಿಸುತ್ತಿದ್ದಾರೆ. ರೈತರ ನಿರೀಕ್ಷೆ ಮುಂದಿನ ದಿನಗಳಲ್ಲಿ ಬೀಳಲಿರುವ ಮಳೆ ಮತ್ತು ಕೀಟಗಳ ಬಾಧೆ ಮೇಲೆ ಅವಲಂಬಿತವಾಗಿದೆ ಎಂಬುದು ಗಮನಾರ್ಹ.

ಹಿಂದಿನ ವರ್ಷಗಳಲ್ಲಿ ಹಸಿ ಕಾಯಿಯನ್ನು ಪ್ರತಿ ಕೆಜಿಗೆ ಸರಾಸರಿ 18ರಿಂದ 20 ರೂಪಾಯಿ ದರದಲ್ಲಿ ಹೊಲದ ಬಳಿಯೇ ಹೆಚ್ಚು ರೈತರು ಮಾರಿದ್ದಾರೆ ಎಂಬುದು ವಿಶೇಷ. ಕಳೆದ ಬಾರಿಗಿಂತಲೂ ಬೆಳೆಯ ವಿಸ್ತೀರ್ಣ ಕಡಿಮೆ ಇರುವುದರಿಂದ ಮತ್ತು ಈ ಬಾರಿ ಬರ ಆವರಿಸಿರುವುದರ ಪರಿಣಾಮ ಇನ್ನೂ ಹೆಚ್ಚಿನ ಬೆಲೆ ದೊರಕಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.

`ಮೇ ಎರಡನೇ ವಾರದಲ್ಲಿ ಬಿಆರ್‌ಜಿ 1 ತಳಿ ತೊಗರಿ ಬಿತ್ತನೆ ಮಾಡಿದ್ದು, ಹೂ ಬಿಟ್ಟಿದೆ. ಕೀಟಬಾಧೆ ತಡೆಗಟ್ಟಲೆಂದು ಈಗಾಗಲೇ ಎರಡು ಬಾರಿ ಔಷಧಿ ಸಿಂಪಡಿಸಿದ್ದೇವೆ. 15 ದಿನಗಳಲ್ಲಿ ಕಾಯಿ ಕೀಳಲಿದ್ದೇವೆ~ ಎಂದು ತಿಪ್ಪಸಂದ್ರದ ರೈತ ವೆಂಕಟಮುನಿಯಪ್ಪ ತಿಳಿಸಿದರು.

ಸ್ಥಳಕ್ಕೆ ಭೇಟಿ ನೀಡಿದ್ದ `ಪ್ರಜಾವಾಣಿ~ಯೊಡನೆ ಮಾತನಾಡಿದ ಅವರು, `ಇದೇ ಮೊದಲ ಬಾರಿಗೆ ತೊಗರಿ ಬೆಳೆದಿದ್ದೇವೆ. ಸುಗಟೂರು ಹೋಬಳಿ ಸುತ್ತಮುತ್ತಲಿನ ರೈತರು ಬೆಳೆದ ತೊಗರಿಗೆ ಕಳೆದ ಬಾರಿ ಉತ್ತಮ ಬೆಲೆ ದೊರಕಿದೆ. ಹೀಗಾಗಿ ರಾಗಿ ಮತ್ತು ನೆಲಗಡಲೆ ಬದಲು, ನಾವು ಕಡಿಮೆ ಖರ್ಚಿನ ತೊಗರಿ ಬೆಳೆ ಬೆಳೆಯಲು ಈ ಬಾರಿ ಮನಸು ಮಾಡಿದ್ದೇವೆ~ ಎಂದರು.

ಪ್ರತಿ ಎಕರೆಗೆ 5 ಕೆಜಿಯಂತೆ ಬಿತ್ತನೆ ಬೀಜ ಬಳಸಿ ಅವರು ಮೂರು ಎಕರೆಯಲ್ಲಿ ತೊಗರಿ ಬೆಳೆದಿದ್ದಾರೆ. ಈಗ ಅವರ ಜಮೀನಿನಲ್ಲಿ ತೊಗರಿ ಸರಾಸರಿ ಆರು-ಏಳು ಅಡಿ ಎತ್ತರ ಬೆಳೆದಿದೆ. ಸಾಲಿನಿಂದ ಸಾಲಿಗೆ ನಾಲ್ಕು ಅಡಿ ಅಂತರ ಕಾಯ್ದುಕೊಳ್ಳಲಾಗಿದೆ.

ಈ ಬಾರಿ ಮೇ ತಿಂಗಳ ಕೊನೆ ವಾರದಲ್ಲಿ ಮತ್ತು ಜುಲೈ ಮೊದಲ ವಾರದಲ್ಲಿ ತೊಗರಿ ಬಿತ್ತನೆ ಮಾಡಿದ್ದು, ಹೂವು ಮತ್ತು ಪಿಂದೆ ಕಾಣಿಸಿಕೊಳ್ಳುವ ಹಂತದಲ್ಲಿದೆ. ಕೀಟಬಾಧೆ ತಡೆಗಟ್ಟಲು ನೀಮ್ ಮತ್ತು ಸರ್ಫ್ ಮಿಶ್ರಣ ಸಿಂಪಡಿಸುವಂತೆ ಕೃಷಿ ಇಲಾಖೆ ಸೂಚಿಸಿದೆ. ಅದರಂತೆ ರೈತರಿಗೆ ಮಾಹಿತಿ ಮಾರ್ಗದರ್ಶನ ನೀಡಲಾಗುತ್ತಿದೆ ಎಂದು ತಾಲ್ಲೂಕಿನ ತೊಟ್ಲಿ ರೈತ ಅನುವುಗಾರ ರಮೇಶ್ ತಿಳಿಸಿದ್ದಾರೆ.

ಜಿಲ್ಲೆಯ ತೊಗರಿಕಾಯಿ ಇನ್ನು 15-20 ದಿನಗಳಲ್ಲಿ ಮಾರುಕಟ್ಟೆಗೆ ದೊರಕುವ ಸಂಭವವಿದೆ. ಹೊರ ಜಿಲ್ಲೆಗಳ ತೊಗರಿಕಾಯಿಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 25 ರಿಂದ 30 ರೂಪಾಯಿ ಬೆಲೆ ಇದೆ. ಜಿಲ್ಲೆಯ ರೈತರಿಗೆ ಇದಕ್ಕಿಂತಲೂ ಹೆಚ್ಚಿನ ದರ ದೊರಕುವ ಸಾಧ್ಯತೆ ಇದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.

ಮುಖ್ಯವಾಗಿ ರಾಗಿಯ ಮಿಶ್ರ ಬೆಳೆಯಾಗಿದ್ದ ತೊಗರಿಯನ್ನು ಈಗ ಜಿಲ್ಲೆಯ ರೈತರು ಪ್ರಮುಖ ವಾಣಿಜ್ಯ ಬೆಳೆಯನ್ನಾಗಿ ಪರಿಗಣಿಸಿ ಬೆಳೆಯುತ್ತಿದ್ದಾರೆ. ಮಳೆಯನ್ನೆ ಆಧರಿಸಿದ ಜಿಲ್ಲೆಯ ಕೃಷಿ ಭೂಮಿಯಲ್ಲಿ ರಾಗಿ ಬಿತ್ತನೆಗೆ ಮುಂಚೆಯೇ ತೊಗರಿಯನ್ನು ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT