ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಸಕಲ ಸಿದ್ಧತೆ

Last Updated 21 ಮಾರ್ಚ್ 2011, 9:20 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಮಾರ್ಚ್ 22ರಂದು  ನಡೆಯಲಿರುವ ರಾಜ್ಯಪ್ರಸಿದ್ಧ ಗುರುತಿಪ್ಪೇರುದ್ರಸ್ವಾಮಿ ಜಾತ್ರೆಗೆ ನಾಯಕನಹಟ್ಟಿ  ಸಕಲ ರೀತಿಯಿಂದ ಸಿದ್ಧಗೊಂಡಿದೆ. ಈಗಾಗಲೇ  ಜಿಲ್ಲಾಡಳಿತ, ಮತ್ತು ದೇವಸ್ಥಾನ ಸಮಿತಿ, ಸ್ಥಳೀಯ  ಆಡಳಿತ, ಗ್ರಾಮಸ್ಥರು ಒಂದು ತಿಂಗಳಿನಿಂದ ಜಾತ್ರೆಗೆ ಗ್ರಾಮವನ್ನು ಸಜ್ಜುಗೊಳಿಸಿದ್ದಾರೆ.
ಕುಡಿಯುವ ನೀರಿನ ವ್ಯವಸ್ಥೆ

ಕುಡಿಯುವ ನೀರಿಗಾಗಿ ಐದು ಬೋರ್‌ವೆಲ್‌ಗಳನ್ನು ರೀ-ಬೋರಿಂಗ್ ಮಾಡಲಾಗಿದೆ. ಅಲ್ಲದೇ, ಎರಡು ಹೊಸ ಬೋರ್‌ವೆಲ್‌ಗಳನ್ನು ಕೊರೆಸಲಾಗಿದೆ.ಭಕ್ತರ ವಸತಿ ಇರುವೆಡೆ ತಾತ್ಕಾಲಿಕವಾಗಿ ನೀರಿನ ಸೌಲಭ್ಯ ಒದಗಿಸಲು ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು  12 ನೀರಿನ  ಟ್ಯಾಂಕರ್‌ಗಳನ್ನು ತರಿಸಲಾಗಿದೆ. ಗ್ರಾಮದ ಪ್ರಮುಖ ಬೀದಿಗಳಲ್ಲಿ ದೂಳು ಕಡಿಮೆ ಮಾಡಲು ಭಾನುವಾರ ನೀರನ್ನು ಸಿಂಪಡಿಸಲಾಗಿದೆ ಎಂದು ಪಿಡಿಒ ತಿಮ್ಮನಾಯ್ಕ ತಿಳಿಸಿದರು.

ಅಂಬುಲೆನ್ಸ್ ಸೌಲಭ್ಯ
ಭಕ್ತರ ಆರೋಗ್ಯದ ದೃಷ್ಟಿಯಿಂದ ಮೂರು ಅಂಬುಲೆನ್ಸ್‌ಗಳನ್ನು ತರಿಸಲಾಗಿದೆ. ಗ್ರಾಮದ ನಾಲ್ಕು ಕಡೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯಲಾಗಿದ್ದು, ಆ ಕೇಂದ್ರದಲ್ಲಿ ಒಬ್ಬ ವೈದ್ಯರು, ಒಬ್ಬ ನರ್ಸ್, ಒಬ್ಬ ‘ಡಿ’ ಗ್ರೂಪ್ ಸಿಬ್ಬಂದಿ ಇರುತ್ತಾರೆ.ಒಟ್ಟು 12 ವೈದ್ಯರನ್ನು ಜಾತ್ರೆಗಾಗಿ ನಿಯೋಜಿಸಲಾಗಿದೆ. ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ 90 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು  ತಾಲ್ಲೂಕು ವೈದ್ಯಾಧಿಕಾರಿ ಡಾ.ಪಾಲಾಕ್ಷ ತಿಳಿಸಿದ್ದಾರೆ. ಜಾತ್ರೆಯಲ್ಲಿ ತೆರೆದ ಗಾಡಿಗಳಲ್ಲಿರುವ ತಿಂಡಿ- ತಿನಿಸುಗಳನ್ನು ತಿನ್ನದಿರಲು, ನೈರ್ಮಲ್ಯ ತಿಳಿವಳಿಕೆಗಾಗಿ ಭಾನುವಾರ ಬೆಳಿಗ್ಗೆಯಿಂದಲೇ ಪ್ರಚಾರ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಾರಿಗೆ ಸೌಕರ್ಯ
 ಲಕ್ಷಾಂತರ ಭಕ್ತರು ಬಂದು ಸೇರುವ ಬಹುದೊಡ್ಡ ಜಾತ್ರೆಗೆ ಸುರಕ್ಷಿತ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಚಿತ್ರದುರ್ಗ, ಚಳ್ಳಕೆರೆ ಕಡೆಗಳಿಂದ ಬರುವ ಬಸ್‌ಗಳಿಗಾಗಿ ಒಳಮಠದ ಪೆಟ್ರೋಲ್ ಬಂಕ್ ಮುಂಭಾಗದಲ್ಲಿ ತಾತ್ಕಾಲಿಕ ನಿಲ್ದಾಣವನ್ನು ಮಾಡಲಾಗಿದೆ. ದಾವಣಗೆರೆ, ಜಗಳೂರು ಮತ್ತಿತರ ಕಡೆಗಳಿಂದ ಬರುವ ವಾಹನಗಳಿಗಾಗಿ ಎಸ್‌ಟಿಎಸ್‌ಆರ್ ಶಾಲಾ ಆವರಣದಲ್ಲಿ ನಿಲ್ದಾಣವನ್ನು ನಿರ್ಮಿಸಲಾಗಿದ್ದು,  ಬಿಎಸ್‌ಎನ್‌ಎಲ್ ಕಚೇರಿ ಬಳಿಯೂ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ.

ಪೊಲೀಸ್ ಬಂದೋಬಸ್ತ್
ಜಾತ್ರೆಯ ಬಿಗಿ ಭದ್ರತೆಗಾಗಿ  ಗೃಹರಕ್ಷಕ ದಳ ಸಿಬ್ಬಂದಿ  ಸೇರಿದಂತೆ ಒಟ್ಟು 1,031 ಮಂದಿಯನ್ನು ನಿಯೋಜಿಸಲಾಗಿದೆ.  ನಾಲ್ವರು ಡಿವೈಎಸ್ಪಿ, 9ಸಿಪಿಐ, 33 ಪಿಎಸ್‌ಐ, 46 ಎಎಸ್‌ಐ, 173 ಹೆಡ್‌ಕಾನ್‌ಸ್ಟೇಬಲ್, 374 ಪೊಲೀಸ್, 30 ಮಹಿಳಾ ಪೊಲೀಸ್, 362 ಹೋಮ್‌ಗಾರ್ಡ್, 6 ಡಿಆರ್‌ಡಿ ವ್ಯಾನ್, 2 ಕೆಎಸ್‌ಆರ್‌ಪಿ ವ್ಯಾನ್  ಸಜ್ಜುಗೊಳಿಸಲಾಗಿದೆ. ಗ್ರಾಮದ ಒಳಗೆ ಅವಶ್ಯ ವಾಹನಗಳನ್ನು ಹೊರತು ಪಡಿಸಿ ಬೇರೆ ವಾಹನಗಳು ಬರದಂತೆ ಬ್ಯಾರಿಕೇಡ್ ನಿರ್ಮಿಸಲಾಗಿದೆ. ವಾಹನಗಳು ಬೈಪಾಸ್ ರಸ್ತೆಯ ಮೂಲಕ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಸಿಪಿಐ ವಾಸುದೇವ್ ತಿಳಿಸಿದರು. ಒಳಮಠ, ಹೊರಮಠದಲ್ಲಿ ಭಕ್ತರ ದರ್ಶನಕ್ಕಾಗಿ ಬ್ಯಾರಿಕೆಡ್‌ಗಳನ್ನು ನಿರ್ಮಿಸಲಾಗಿದ್ದು, ಸರತಿಯಲ್ಲಿ ದರ್ಶನ ಪಡೆಯಲು ವ್ಯವಸ್ಥೆಯನ್ನು ಮಾಡಲಾಗಿದೆ.

ಜಾತ್ರಾ ಸಿದ್ಧತೆ ಪರಿಶೀಲನೆ
ಸೋಮವಾರ ಜಾತ್ರೆಯ ಪೂರ್ವಸಿದ್ಧತಾ ಪರಿಶೀಲನೆಯನ್ನು ಪ್ರಭಾರ ಜಿಲ್ಲಾಧಿಕಾರಿ ನಿರ್ವಾಣಪ್ಪ ಭಾನುವಾರ ಸಂಜೆ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
 ಉಪ ವಿಭಾಗಾಧಿಕಾರಿ ವೆಂಕಟೇಶ್, ಮುಜರಾಯಿ ತಹಶೀಲ್ದಾರ್ ಹಿಟ್ಟಿನ ಮಠ, ತಹಶೀಲ್ದಾರ್ ಅಲ್ಕೂರ ಭೋವಿ, ಇಒ ಎಚ್. ಹಾಲಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಪಿ. ತಿಪ್ಪೇಸ್ವಾಮಿ ಮತ್ತು ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT