ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮಪ್ಪನಿಗೆ ಇನ್ನು 90 ನಿಮಿಷ ವಿಶ್ರಾಂತಿ!

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೈದರಾಬಾದ್: ಭಾರತದ ಶ್ರೀಮಂತ ದೇವರು ಎಂಬ ಖ್ಯಾತಿಯ ತಿರುಪತಿ ವೆಂಕಟೇಶ್ವರನಿಗೆ  ನಿದ್ದೆ ಮಾಡಲೂ ಸಮಯವಿಲ್ಲವಂತೆ. ದಿನೇದಿನೇ ಹೆಚ್ಚಾಗುತ್ತಿರುವ ಭಕ್ತಾದಿಗಳಿಗೆ ಆರ್ಶಿರ್ವಾದ ಮಾಡುವಲ್ಲೇ ಅಷ್ಟೂ ಸಮಯ ಕಳೆಯುತ್ತಿದ್ದಾನಂತೆ!

ಏಳು ಬೆಟ್ಟ ಸುತ್ತಿ ಬರುವ ಭಕ್ತಾದಿಗಳಿಗೆ ನಿರಾಶೆಯಾಗದಿರಲೆಂದು  ಅಲ್ಲಿನ ಆಡಳಿತಾಧಿಕಾರಿಗಳು ದಿನವಿಡೀ ವೆಂಕಟೇಶ್ವರನ ದರ್ಶನಕ್ಕೆ ಅನುವು ಮಾಡಿಕೊಡುತ್ತಿರುವುದರಿಂದ ವೆಂಕಟೇಶ್ವರನಿಗೆ ಕೇವಲ ಹತ್ತು ನಿಮಿಷ ಮಾತ್ರ ವಿಶ್ರಾಂತಿ ದೊರೆಯುತ್ತಿತ್ತು. ಈ ಬಗ್ಗೆ ಕೆಲವರು ಆಕ್ಷೇಪವನ್ನೂ ಎತ್ತಿದ್ದರು. ಇದನ್ನು ಪರಿಗಣಿಸಿರುವ ದೇವಾಲಯದ ಆಡಳಿತಾಧಿಕಾರಿಗಳು ಇನ್ನು ಮುಂದೆ`ಆಗಮ ಶಾಸ್ತ್ರ~ (ದೇವಾಲಯದ ಸಂಪ್ರದಾಯ) ಅನುಸರಿಸಲು ನಿರ್ಧರಿಸಿದ್ದಾರೆ. 

 ಹಾಗಾಗಿ ಇನ್ನು ಗರ್ಭಗುಡಿಯ ಬಾಗಿಲನ್ನು ಪ್ರತಿದಿನ 90 ನಿಮಿಷಗಳ ಕಾಲ ಮುಚ್ಚುವ ನೀತಿಯನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತದೆ. ಪ್ರತಿದಿನ ಬೆಳಗಿನಜಾವ 1.30ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಿ ಬೆಳಿಗ್ಗೆ 3 ಗಂಟೆಗೆ ತೆರೆಯುವ ಮೂಲಕ ತಿರುಮಲನಿಗೆ ವಿಶ್ರಾಂತಿ ನೀಡಲಾಗುತ್ತದೆ  ಎಂದು ತಿರುಪತಿ ತಿರುಮಲ ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

ಈವರೆಗೆ ಬೆಳಗಿನ ಜಾವ 2.40ರವರೆಗೂ ಭಕ್ತರು ದರ್ಶನ ಪಡೆಯಬಹುದಿತ್ತು. ಮತ್ತೆ ನಸುಕಿನ 3 ಗಂಟೆಗೇ ಅರ್ಚಕರ `ಸುಪ್ರಭಾತ ಸೇವೆ~ಯೊಂದಿಗೆ ತಿರುಮಲ ಏಳಬೇಕಿತ್ತು.

ಇದಕ್ಕೂ ಮೊದಲು ರಾತ್ರಿ ವೇಳೆ ದರ್ಶನಕ್ಕೆ ಅವಕಾಶವೇ ಇರಲಿಲ್ಲ. ಆದರೆ ಕ್ರಮೇಣ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದಂತೆ ರಾತ್ರಿಯೂ ದೇವಾಲಯಕ್ಕೆ ಪ್ರವೇಶಾವಕಾಶ ಒದಗಿಸಲಾಗಿತ್ತು.

ಪ್ರತಿದಿನ 60 ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ತಿರುಮಲನ ದರ್ಶನ ಪಡೆಯಲು ಬರುತ್ತಿದ್ದಾರೆ. ಹಬ್ಬ ಹಾಗೂ ವಿಶೇಷ ದಿನಗಳಲ್ಲಿ ಈ ಸಂಖ್ಯೆ ಒಂದು ಲಕ್ಷ ದಾಟುತ್ತದೆ. ವಾರ್ಷಿಕ ವಹಿವಾಟು 1,700 ಕೋಟಿ ದಾಟುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT