ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರಂಗ ಭೋಜನವಿದು...

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ನಾವಿಲ್ಲಿ ಊಟಕ್ಕೆ ಬಣ್ಣಗಳನ್ನು ಬಳಸುವುದಿಲ್ಲ. ಆದರೆ ಇವೊತ್ತು ದೇಶಭಕ್ತಿಯ ಬಣ್ಣವನ್ನೇ ಕೊಡುವ ನಿರ್ಣಯ ಮಾಡಿದ್ದೆವು. ಪರಿಣಾಮ ಧ್ವಜದ ತ್ರಿವರ್ಣಗಳು ಎಲ್ಲೆಲ್ಲಿಯೂ ಕಾಣುತ್ತಿವೆ ಅಂತ ಹೇಳಿದ್ದು ಅಮಿತ್ ಬಕ್ಷಿ. ಇವರು ವೈಟ್‌ಫೀಲ್ಡ್‌ನಲ್ಲಿರುವ ಎಂಜಿಎಂ ಮಾರ್ಕ್ ಸಮೂಹದಲ್ಲಿ ಜಿ.ಎಂ. ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಎಂಜಿಎಂ ಮಾರ್ಕ್ ಗಣರಾಜ್ಯೋತ್ಸವದ ಮುನ್ನಾದಿನ `ತಿರಂಗಾ~ ಬಫೆಯನ್ನು ಪ್ರಸ್ತುತ ಪಡಿಸಿತ್ತು.

ಕಾಂಟಿನೆಂಟಲ್, ದಕ್ಷಿಣ ಭಾರತೀಯ, ಉತ್ತರ ಭಾರತೀಯ ಎಲ್ಲವನ್ನೂ ಇಲ್ಲಿ ಸಮನ್ವಯಗೊಳಿಸಲಾಗಿದೆ. ಭಾರತದ ಸಮಗ್ರ ವರ್ಣಗಳೂ ಈ ಮೂರು ಬಣ್ಣಗಳಲ್ಲಿಯೇ ಬಿಂಬಿಸಲಾಗಿದೆ ವೈವಿಧ್ಯ, ಸೌಹಾರ್ದ ಎರಡರ ಸಮ್ಮಿಲನದಂತಿದೆ ನಮ್ಮ ಮೆನು ಎಂದು ಅವರು ವಿವರಿಸಿದ್ದರು.

ಪಾಪಡಿ ಚಾಟ್ ಇರಲಿ, ಭೇಲ್ ಪುರಿ ಇರಲಿ, ಸ್ಟಾರ್ಟರ್ ಆಗಿ ನೀಡುವ ಪಾಸ್ತಾದಲ್ಲಿಯೂ ತ್ರಿವರ್ಣಗಳನ್ನು ಮೂಡಿಸುವಲ್ಲಿ ಇಲ್ಲಿಯ ಬಾಣಸಿಗ ಜಮಾಲ್ ತಮ್ಮ ತಂಡದೊಂದಿಗೆ ಸಜ್ಜಾಗಿದ್ದರು.

ನಾಲಿಗೆಗೆ ಚುರುಕು ಮುಟ್ಟಿಸಿ, ಜಿಹ್ವಾರಸ ಉಕ್ಕಿಸಿ, ಹಸಿವು ಕೆರಳಿಸುವಂಥ ಚಾಟ್‌ಗಳನ್ನಿಲ್ಲಿ ಸಿದ್ಧಪಡಿಸಿದ್ದರು.

ಒಂದು ವಾರದಿಂದ ಇಂಥದ್ದೊಂದು ಪರಿಕಲ್ಪನೆಯನ್ನು ಹುಟ್ಟು ಹಾಕಿದಾಗ ಸವಾಲೆನಿಸಲೇ ಇಲ್ಲ. ಕೃತಕ ಬಣ್ಣಗಳಿರದೇ ಕೇಸರಿ,ಬಿಳಿ ಹಸಿರು ವರ್ಣಗಳ ಖಾದ್ಯಗಳನ್ನು ರಚಿಸಬೇಕಿತ್ತು. ಅದಕ್ಕಾಗಿ ಕೇಸರಿ ಎಸಳು, ಪಿಸ್ತಾ ಹಾಗೂ ಗೋಡಂಬಿಗಳ ಮೊರೆ ಹೋದೆವು. ಇದೇ ಕಾರಣಕ್ಕೆ ಡೆಸಾರ್ಟ್‌ಗಳ ವರ್ಣ ಸಂಯೋಜನೆಗೆ ಕಷ್ಟವೆನಿಸಲಿಲ್ಲ.

ಕೇಸರಿ ಬಿಳಿ ಹಸಿರಿನ ಪೇಸ್ಟ್ರೀಸ್, ಪೌಸಸ್, ತಿರಂಗಾ ಬರ್ಫಿಯನ್ನು ಸಿದ್ಧಗೊಳಿಸಿದೆವು. ಇದನ್ನು ಇನ್ನಷ್ಟು ಆಕರ್ಷಕಗೊಳಿಸಲು ಕ್ಯಾರೆಟ್ ಹಲ್ವಾ, ಗುಲಾಬ್ ಜಾಮೂನು ಜೊತೆಗಿರಿಸಲಾಯಿತು ಎನ್ನುತ್ತ ಜಮಾಲ್ ತಮ್ಮ ಅನುಭವವನ್ನು ಹಂಚಿಕೊಂಡರು.
ಕೇಸರಿಗಾಗಿ ಟೊಮೆಟೊ ಸೂಪ್, ಜೊತೆಗೆ ಕಾರ್ನ್ ಸೂಪ್ ಮಾಂಸಾಹಾರಿಗಳಿಗೆ ಚಿಕನ್ ಪೈ ಹಸಿರು ವರ್ಣದ ಸೂಪ್‌ಗಳನ್ನು ಸಜ್ಜುಗೊಳಿಸಿದ್ದರು.

ಹಬೆಯಾಡುತ್ತಿದ್ದ ಈ ಸೂಪನ್ನು ವಾತಾನುಕೂಲಿ ವಾತಾವರಣದಲ್ಲಿ ಗಂಟಲಿಗೆ ಬಿಸಿ ತಾಕುವಂತೆ ಜನರು ಸೇವಿಸುತ್ತಿದ್ದರು. ರಾಜಸ್ತಾನ ಮೂಲದ ಟಾಟಾ ಕಂಪೆನಿಯ ಉದ್ಯೋಗಿ ತೃಪ್ತಿಗೆ ಸೂಪ್ ಹೀರಿದ ಸಂತೃಪ್ತಿ. ಕರಿಮೆಣಸು ಹಾಗೂ ಲವಂಗದ ಘಮ ಈ ಸೂಪಿನಿಂದ ತಂಗಾಳಿಯಂತೆ ಸುಳಿದಾಡುತ್ತಿದೆ ಎಂದವರು ಹೇಳಿದರು.

ಚಿಕನ್ ಮಖ್ನಿಗೆ ಮಸಾಲೆ ಬೇಕೆ ಬೇಕು. ಆದರೆ ಇಲ್ಲಿ ಕಣ್ಮುಚ್ಚಿಕೊಂಡು, ನಿಧಾನವಾಗಿ ಮಾಂಸದ ಪದರುಗಳಿಂದಲೂ ಸ್ವಾದವನ್ನು ಹೀರುವಂತೆ ಸಿದ್ಧಪಡಿಸಲಾಗುತ್ತಿತ್ತು. ಮಖ್ನಿಯ ಮೃದುತ್ವ ಚಿಕನ್‌ನಲ್ಲಿ ಎದ್ದುಕಾಣುತ್ತಿತ್ತು. ಮಟನ್ ಮೊಘಲಾಯ್ ಸ್ವಾದ ಕೈ ಬೆರಳು ಚೀಪುವಂತಿತ್ತು. ಫಿಶ್ ಹರಿಯಾಲಿಗಂತೂ ಪದೇಪದೇ ಬೇಡಿಕೆ.

ಎಲ್ಲಕ್ಕೂ ದೃಷ್ಟಿಬೊಟ್ಟಿನಂತೆ ಇ್ದ್ದದದ್ದು ವೆಜ್ ಬಿರಿಯಾನಿ ಮಾತ್ರ. ಸದಾ ಬಿಸಿ ಇರಲಿ ಎಂದು ಬೆಂಕಿಗೆ ಇಟ್ಟ ಕಾರಣವೋ, ಇನ್ನಾವುದಕ್ಕೋ ತುಸು ಸೀದ ವಾಸನೆ ರುಚಿಗೆ ಅಡ್ಡ ಬರುತ್ತಿತ್ತು. ಸ್ವಾಸ್ಥ್ಯಕ್ಕೆ ಹೆಚ್ಚು ಮಹತ್ವ ನೀಡುವವರಿಗೆ ಮನದಣಿಯೆ ತಿನ್ನುವಷ್ಟು ಸಲಾಡ್‌ಗಳನ್ನು ಸಜ್ಜುಗೊಳಿಸಲಾಗಿತ್ತು.

ತುಟಿಯಿಂದಲೇ ತುಂಡರಿಸಬಹುದಾದ ಮೆದುವಾದ ಜಾಮೂನು, ಇದಕ್ಕೆ ಮಂದವಾದ ರಬಡಿ. ಬಾಯಿಗಿಟ್ಟರೆ ಕರಗುವ ಪೇಸ್ಟ್ರಿಗಳು.

ಸ್ವಾದಿಷ್ಟ ರುಚಿಯ ನಡುವೆ ದೇಶ ಮರೀಬೇಡಿ ಅಂತ ಜಮಾಲ್ ಹೇಳುವುದು ಮಾತ್ರ ಮರೆಯಲಿಲ್ಲ. 

ವೈಟ್‌ಫೀಲ್ಡ್‌ನ ಐಟಿ ಉದ್ಯೋಗಿ ಯಶ್ ತಮ್ಮ  ಸ್ನೇಹಿತರೊಂದಿಗೆ ಊಟಕ್ಕೆ ಬಂದವರು ಹೇಳಿದ್ದು, ಇಲ್ಲಿ ಬರುವವರೆಗೂ ಗಣರಾಜ್ಯೋತ್ಸವವನ್ನು ಮರೆತೇ ಹೋಗಿದ್ದೆವು. ಇಲ್ಲಿಯ ಪರಿಕಲ್ಪನೆಯನ್ನು ಸವಿದ ಮೇಲೆ ಎಲ್ಲ ಸ್ನೇಹಿತರೂ ಸೇರಿ ಮನೆಯ ಮೇಲಾದರೂ ಧ್ವಜಾರೋಹಣ ಮಾಡುವ ಎಂದು ಮಾತಾಡಿಕೊಂಡೆವು ಎಂದು ಹೇಳಿದರು.

ಪರಿಕಲ್ಪನೆಯ ಹಿಂದೆ ಶ್ರಮಿಸಿದ ಡೆಹ್ರಾಡೂನ್‌ನ ಯುವಕ ಯತೀಶ್, ಕೋಲ್ಕತ್ತಾದ ಶೆಫ್ ಜಮಾಲ್ ಮುಗುಳ್ನಕ್ಕರು. ಸಾರ್ಥಕ್ಯ ಆ ನಗೆಯಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT