ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಕನೂರೆಂಬ ಶೈಕ್ಷಣಿಕ, ಸಾಂಸ್ಕೃತಿಕ ಕ್ರಾಂತಿಯ ತವರು

Last Updated 21 ಜೂನ್ 2012, 5:00 IST
ಅಕ್ಷರ ಗಾತ್ರ

ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿ ಎಂಬ ಗ್ರಾಮ ರಾಘವೇಂದ್ರ ಸ್ವಾಮೀಜಿ ಸ್ಥಾಪಿಸಿದ ಅನಾಥ ಸೇವಾಶ್ರಮದಿಂದ ರಾಜ್ಯ, ರಾಷ್ಟ್ರಮಟ್ಟದಲ್ಲಿ ಹೆಸರು ಗಳಿಸಿದೆ.

ಯೋಗ, ಆಯುರ್ವೇದದಲ್ಲಿ ಸಾಕಷ್ಟು ಪರಿಣಿತಿ ಹೊಂದಿದ್ದ ಅವರನ್ನು ಮೊದಲು `ವ್ಯಾಯಾಮ ಮೇಷ್ಟ್ರು~ ಎಂದೇ ಕರೆಯಲಾಗುತ್ತಿತ್ತು. ಅವರಲ್ಲಿನ ಸೇವಾ ಮನೋಭಾವ, ನಿಸ್ವಾರ್ಥ ಮತ್ತು ಮೃದು ವ್ಯಕ್ತಿತ್ವವನ್ನು ಕಂಡ ಜನ ಪ್ರೀತಿಯಿಂದ `ಸ್ವಾಮೀಜಿ~ ಎಂದು ಕರೆದರು. ದೇಶ ಸಂಚಾರಿಯಾದ ಸ್ವಾಮೀಜಿ ಬರೋಡಾದಲ್ಲಿ ಬಿಪಿಇ ಎಂಬ ಯೋಗ ಪದವಿ ಪಡೆದು, ಕರಾಚಿಯಲ್ಲಿ ಆಯುರ್ವೇದ ವಿದ್ಯೆಯನ್ನು ಕಲಿತರು. ನಂತರ ಗಾಂಧೀಜಿಯ ಪ್ರಭಾವಕ್ಕೆ ಒಳಗಾಗಿ ಊರೂರು ಅಲೆದು, ಉಚಿತವಾಗಿ ಜನಸೇವೆ ಮಾಡುತ್ತಾ ಬಂದರು.

ಒಂದೊಂದು ಗ್ರಾಮದಲ್ಲಿ 41 ದಿನಗಳ ಶಿಬಿರ ನಡೆಸುತ್ತ, ಅಲೆಮಾರಿಯಾಗಿದ್ದ ಸ್ವಾಮೀಜಿ 1942ರಲ್ಲಿ ಮಲ್ಲಾಡಿಹಳ್ಳಿಗೆ ಬಂದರು.

ಸ್ವಾಮೀಜಿ ಗ್ರಾಮಕ್ಕೆ ಬಂದಾಗ ಕಾಲರಾ ರೋಗ ಹರಡಿತ್ತು. ರೋಗಿಗಳ ಶೂಶ್ರೂಷೆ ಮಾಡಿದ ಅವರು, ಮುಗ್ಧ ಜನರಿಗೆ ಸ್ವಚ್ಛತೆ, ಕ್ರಮಬದ್ಧ ಆಹಾರ ಪದ್ಧತಿಗಳ ಬಗ್ಗೆ ತಿಳಿ ಹೇಳಿದರು. ಬೆಳಗಿನ ಜಾವಕ್ಕೇ ಎದ್ದು, ಪ್ರತಿ ಮನೆಯ ಮುಂದೆಯೂ ಕಸ ಗುಡಿಸಿ, ರಂಗೋಲಿ ಹಾಕುವ ಮೂಲಕ ಶಿಸ್ತಿನ ಅರಿವು ಮೂಡಿಸಿದರು.

ಸ್ವಾಮೀಜಿಯ ಸೇವೆಗೆ ಮನಸೋತ ಗ್ರಾಮದ ಜನ ಶಿಬಿರ ಮುಗಿದ ಮೇಲೂ ಬೇರೆಡೆಗೆ ಕಳಿಸಲು ಒಪ್ಪಲಿಲ್ಲ. ನಮ್ಮ ಗ್ರಾಮದಲ್ಲಿಯೇ ಇರಬೇಕು ಎಂದು ಪಟ್ಟು ಹಿಡಿದು ಆಶ್ರಮ ಕಟ್ಟಲು ಜಾಗ ನೀಡಿದರು. ಸಂಕಜ್ಜಿ ಎಂಬ ಅನಾಥ ಮಹಿಳೆ ತಾನು ಕೂಡಿಟ್ಟಿದ್ದ ್ಙ 150ರ ಗಂಟನ್ನು ಸ್ವಾಮೀಜಿಗೆ ನೀಡಿದಳು. ಈ ಹಣದೊಂದಿಗೆ 1943ರಲ್ಲಿ ಶಿವರಾತ್ರಿಯಂದು ಸ್ವಾಮೀಜಿ ಆಶ್ರಮ ಆರಂಭಿಸಿದರು. ತನ್ನನ್ನು `ತಿರುಕ~ ಎಂದು ಸ್ವಾಭಿಮಾನದಿಂದ ಹೇಳಿಕೊಳ್ಳುತ್ತಿದ್ದ ಸ್ವಾಮೀಜಿ ಜೋಳಿಗೆ ಹಿಡಿದು ಊರೂರು ಅಲೆದು ಹಣ ಸಂಗ್ರಹಿಸಿ ಆಶ್ರಮ ಕಟ್ಟಿದರು. ಅವರಿಗೆ ಸೂರ್‌ದಾಸ್‌ಜೀ ಕೂಡ ಹೆಗಲು ಕೊಟ್ಟರು. ಈ ಇಬ್ಬರೂ ಸ್ವಾಮೀಜಿಗಳ ನಿಧನದ ನಂತರ 2002ರಲ್ಲಿ ಆಶ್ರಮ ಚಿತ್ರದುರ್ಗದ ಮುರುಘಾಮಠದ ಅಧೀನಕ್ಕೆ ಒಳಪಟ್ಟಿತು.

`ರಾಘವೇಂದ್ರ ಸ್ವಾಮೀಜಿ ಇಲ್ಲಿಗೆ ಬಂದು ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದರು. ತೀರಾ ಹಿಂದುಳಿದಿದ್ದ, ಅಕ್ಷರ ಜ್ಞಾನವನ್ನೇ ಅರಿತಿರದ ಮುಗ್ದ ಜನರಲ್ಲಿ ಬದಲಾವಣೆಯ ಗಾಳಿ ಬೀಸಿದರು. ್ಙ 150ರ ಮೂಲ ಬಂಡವಾಳದಿಂದ ಆರಂಭವಾದ ಆಶ್ರಮ ಇಂದು ಹೆಮ್ಮರವಾಗಿ ಬೆಳೆದಿದೆ. 96 ಎಕರೆ ವಿಸ್ತೀರ್ಣದಲ್ಲಿ ಹರಡಿರುವ ವಿಶಾಲ ಆಶ್ರಮದಲ್ಲಿ ಗುರುಕುಲ, ಪ್ರಾಥಮಿಕ ಶಾಲೆಯಿಂದ ಹಿಡಿದು, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಡಿ.ಇಡಿ, ಬಿ.ಇಡಿ, ಸಿಪಿಇಡಿ, ಬಿಪಿಇಡಿ, ಪದವಿ, ಐಟಿಐ, ಆಯುರ್ವೇದ ಕಾಲೇಜುಗಳು, ಸಂಗೀತ, ಕಂಪ್ಯೂಟರ್, ಯೋಗ ಶಾಲೆಗಳು ನಡೆಯುತ್ತಿವೆ. ರಾಜ್ಯ, ಹೊರರಾಜ್ಯದ ಸುಮಾರು 3 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಶ್ರಮದಲ್ಲಿ ಓದುತ್ತಿದ್ದು, 7 ಹಾಸ್ಟೆಲ್‌ಗಳಿವೆ. ಇಂದಿಗೂ ಶಿಸ್ತು ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಸರಾಗಿರುವ ಆಶ್ರಮದಲ್ಲಿ ಕಲಿತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್‌ನಂತಹ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 1973ರಲ್ಲಿ ಇಲ್ಲಿಗೆ ಬಂದ ಮೇಲೆ ನನ್ನ ಸಾಹಿತ್ಯದ ಬೇರುಗಳು ಇನ್ನಷ್ಟು ಆಳಕ್ಕೆ ಇಳಿದವು. ಇದೇ ಪವಿತ್ರ ನೆಲದಲ್ಲಿ ರಚಿಸಿದ ನನ್ನ `ತೇರು~ ಕೃತಿಗೆ 2005ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿತು~ ಎನ್ನುತ್ತಾರೆ ಆಡಳಿತಾಧಿಕಾರಿ ರಾಘವೇಂದ್ರ ಪಾಟೀಲ.

ಈಗ ಅನೇಕ ಬದಲಾವಣೆಗಳನ್ನು ಕಂಡಿರುವ ಮಲ್ಲಾಡಿಹಳ್ಳಿ ತಾಲ್ಲೂಕಿನ ಮುಖ್ಯ ಗ್ರಾಮಗಳಲ್ಲಿ ಒಂದಾಗಿದೆ. ದೇವಾಂಗ ಮತ್ತು ಕುರುಬ ಸಮುದಾಯದವರ ಪ್ರಾಬಲ್ಯವಿರುವ ಗ್ರಾಮದಲ್ಲಿ ಸುಮಾರು 1,500 ಮನೆಗಳಿದ್ದು, 7 ಸಾವಿರ ಜನಸಂಖ್ಯೆ ಇದೆ. ತೆಂಗು, ಅಡಿಕೆಯ ಸೀಮೆಯಾದರೂ, ಸುತ್ತಲೂ ಕಪ್ಪು ಮಣ್ಣಿನ ಎರೆ ಭೂಮಿ ಇದ್ದು, ರೈತರು ಈರುಳ್ಳಿ, ಮೆಣಸಿನ ಕಾಯಿ, ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತಾರೆ.

ಮಳೆಯೊಂದಿಗೆ ಜೂಜಾಟ ನಡೆಸುವ ಇಲ್ಲಿನ ರೈತರಿಗೆ ಶಾಶ್ವತ ನೀರಾವರಿ ಸೌಲಭ್ಯಗಳಿಲ್ಲ. ಗ್ರಾಮಕ್ಕೆ ಇನ್ನೂ ಅನೇಕ ಮೂಲಸೌಕರ್ಯ ಬೇಕಾಗಿವೆ. 

`ಅನಾಥ ಸೇವಾಶ್ರಮದಿಂದ ಮಲ್ಲಾಡಿಹಳ್ಳಿ ದೇಶದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇಲ್ಲಿ ಅನೇಕ ಶಾಲಾ-ಕಾಲೇಜುಗಳಿದ್ದು, ಸಾವಿರಾರು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಗ್ರಾಮ ವಾಣಿಜ್ಯ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು, ವಿದ್ಯುತ್ ಸಮಸ್ಯೆ ಎದುರಿಸುತ್ತಿದೆ. ಆದ್ದರಿಂದ, ಇಲ್ಲಿಗೆ ಒಂದು ವಿದ್ಯುತ್ ವಿತರಣಾ ಕೇಂದ್ರದ ತುರ್ತು ಅಗತ್ಯವಿದೆ.
 
ರಾಷ್ಟ್ರೀಯ ಹೆದ್ದಾರಿ-13ರ ದೊಗ್ಗನಾಳ್ ಗೇಟ್‌ನಿಂದ ಗ್ರಾಮದವರೆಗೆ ರಸ್ತೆ ಹದಗೆಟ್ಟಿದ್ದು, ಶಿವಮೊಗ್ಗ-ಚಿತ್ರದುರ್ಗ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಗ್ರಾಮಕ್ಕೆ ಬರದೆ ಮುಖ್ಯರಸ್ತೆಯಲ್ಲೇ ಹೋಗುತ್ತವೆ. ರಾತ್ರಿ ವೇಳೆಯಲ್ಲೂ ಪ್ರಯಾಣಿಕರನ್ನು ಮುಖ್ಯರಸ್ತೆಯಲ್ಲೇ ಇಳಿಸಿ ಹೋಗುವುದರಿಂದ ಕತ್ತಲಲ್ಲೇ ಎರಡು ಕಿ.ಮೀ. ನಡೆದು ಬರುವ ಪರಿಸ್ಥಿತಿ ಇದೆ. ಆದ್ದರಿಂದ, ಈ ರಸ್ತೆಯನ್ನು ಅಭಿವೃದ್ಧಿಪಡಿಸಬೇಕು~ ಎನ್ನುತ್ತಾರೆ ಗ್ರಾಮದ ಉದ್ಯಮಿ ಕೆ. ನಾಗರಾಜ್.

`ಗ್ರಾಮದಲ್ಲಿ 7 ಸಾವಿರ ಜನಸಂಖ್ಯೆ ಇರುವುದರಿಂದ ಇನ್ನೂ ಎರಡು `ಓವರ್‌ಹೆಡ್ ಟ್ಯಾಂಕ್~ಗಳು ಬೇಕು. ಕೆಲವು ಕಾಲೊನಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಿಸಬೇಕಿದೆ. ಹೊರ ರಾಜ್ಯದ ವಿದ್ಯಾರ್ಥಿಗಳೂ ಇಲ್ಲಿ ಓದುತ್ತಿದ್ದು, ಒಂದು ಎಟಿಎಂ ಅಗತ್ಯವಿದೆ. ವಿದ್ಯಾರ್ಥಿಗಳ ರಕ್ಷಣೆ, ಶಾಂತಿ, ಸುವ್ಯವಸ್ಥೆಗಾಗಿ ಪೊಲೀಸ್ ಠಾಣೆ ಬೇಕಾಗಿದೆ~ ಎನ್ನುತ್ತಾರೆ ಬನಶಂಕರಿ ದೇವಸ್ಥಾನದ ಅಧ್ಯಕ್ಷ ಎಂ.ಜಿ. ರಾಮದಾಸ್.

`ದೊಡ್ಡ ಗ್ರಾಮವಾದರೂ ಸಂತೆಗೆ ಒಂದು ಸೂಕ್ತ ಜಾಗವಿಲ್ಲ. ಮುಖ್ಯರಸ್ತೆಯ ಪಕ್ಕದಲ್ಲೇ ಸಂತೆ ನಡೆಯುತ್ತಿದ್ದು, ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ತೊಂದರೆಯಾಗಿದೆ. ಇಲ್ಲಿ ಬಸ್‌ನಿಲ್ದಾಣವಿಲ್ಲದೆ ಇರುವುದರಿಂದ ಗ್ರಾಮದ ಒಳಗೆ ಹೆಚ್ಚು ಬಸ್‌ಗಳು ಬರುತ್ತಿಲ್ಲ. ಸ್ಥಳೀಯ ಗ್ರಾಮ ಪಂಚಾಯ್ತಿ ಬಸ್‌ನಿಲ್ದಾಣ ನಿರ್ಮಿಸಿ, ಕಡ್ಡಾಯವಾಗಿ ಎಲ್ಲಾ ಬಸ್‌ಗಳೂ ಬರುವಂತೆ ವ್ಯವಸ್ಥೆ ಮಾಡಬೇಕು. ಕುಡಿಯುವ ನೀರಿನಲ್ಲಿ ಫ್ಲೋರೈಡ್ ಅಂಶವಿದ್ದು, ಸೂಳೆಕೆರೆ ನೀರು ಹರಿಸಬೇಕು~ ಎಂಬುದು ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ಕೆ.ಎನ್. ಚಿಕ್ಕಪ್ಪ ಅವರ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT