ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗಿಬಿದ್ದ ನಗರಸಭೆ ನೌಕರರು, ಒಟ್ಟಾದ ಸದಸ್ಯರು

ಮಹಿಳಾ ಎಂಜಿನಿಯರ್‌ಗೆ ಕಿರುಕುಳ ಆರೋಪ, ನಾಳೆ ಮುಷ್ಕರಕ್ಕೆ ನಿರ್ಧಾರ
Last Updated 6 ಡಿಸೆಂಬರ್ 2013, 10:23 IST
ಅಕ್ಷರ ಗಾತ್ರ

ಕೊಪ್ಪಳ: ನಗರಸಭೆಯ ಚುನಾಯಿತ ಪ್ರತಿನಿಧಿಗಳು ಮತ್ತು ಪೌರಸೇವಾ ನೌಕರರ ಮಧ್ಯೆ ಬಿಕ್ಕಟ್ಟು ಸೃಷ್ಟಿಯಾಗಿದ್ದು ಪರಸ್ಪರ ಆರೋಪ, ಪ್ರತ್ಯಾರೋಪಗಳ ಕೆಸರೆರಚಾಟ ಆರಂಭವಾಗಿದೆ.

ಸದಸ್ಯರು ತಮಗೆ ಸಾರ್ವಜನಿಕವಾಗಿ ಕಿರುಕುಳ, ಮಾನಸಿಕ ಹಿಂಸೆ  ನೀಡುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಪೌರ ಸೇವಾ ನೌಕರರ ಸಂಘದ ಕೊಪ್ಪಳ ಘಟಕದ ಪದಾಧಿಕಾರಿಗಳು ನಗರಸಭೆಯ ಕಿರಿಯ ಎಂಜಿನಿಯರ್‌ ಜಿ. ಶಿಲ್ಪಾ ಅವರ ಪ್ರಕರಣ ಉದಾಹರಿಸಿ ಪೌರಾಯುಕ್ತರಿಗೆ ದೂರು ನೀಡಿರುವುದು ಇದಕ್ಕೆಲ್ಲಾ ಕಾರಣ.

ಈ ದೂರಿಗೆ ಪ್ರತಿದೂರು ರೂಪಿಸಲು ಗುರುವಾರ ನಗರಸಭೆಯ ಸರ್ವ ಸದಸ್ಯರ ಸಭೆ ನಡೆದಿದೆ. ಅಲ್ಲಿ ಎಲ್ಲರೂ ಒಗ್ಗಟ್ಟಾಗಿ ನೌಕರರ ಆರೋಪಗಳನ್ನು ಎದುರಿಸುವ ಬಗ್ಗೆ ಚರ್ಚಿಸಿದ್ದಾರೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ನಗರಸಭೆಯ ಪ್ರಮುಖ ಸದಸ್ಯರೊಬ್ಬರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೂ ಮನವರಿಕೆ ಮಾಡಲು ಮುಂದಾಗಿದ್ದಾರೆ. ಜಿ. ಶಿಲ್ಪಾ ಅವರ ಪ್ರಕರಣ ಆಧರಿಸಿ ಪೌರ ನೌಕರರ ಸಂಘ ನೀಡಿದ ದೂರಿನ ಸಾರಾಂಶ ಹೀಗಿದೆ.

ನಗರಸಭೆಯ ಕೆಲವು ಸದಸ್ಯರು ಹಾಗೂ ಸದಸ್ಯರಲ್ಲದ/ ಗುತ್ತಿಗೆದಾರ ಜನರು ಸುಖಾ ಸುಮ್ಮನೆ ನಗರಸಭೆ ಕಚೇರಿಯ ಎಲ್ಲ ಶಾಖೆಗಳ ಆಡಳಿತ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು, ಕಚೇರಿಯ ಅಧಿಕಾರಿಗಳು, ಸಿಬ್ಬಂದಿ ಮೇಲೆ ಸಲ್ಲದ ಆರೋಪ ಮಾಡುತ್ತಿದ್ದಾರೆ. ಶಿಲ್ಪಾ ಹಾಗೂ ಇತರ ಎಂಜಿನಿಯರ್‌ಗಳಿಗೆ ತಾವು (ಸದಸ್ಯರು, ಸದಸ್ಯರಲ್ಲದವರು) ಹೇಳಿದ ಕಾರ್ಯ ನಿರ್ವಹಿಸದಿದ್ದಾಗ ಅವರನ್ನು ಸಾರ್ವಜನಿಕವಾಗಿಯೇ ತರಾಟೆಗೆ ತೆಗೆದುಕೊಳ್ಳುವುದು, ಮಾನಸಿಕ ಹಿಂಸೆ ನೀಡುವುದು, ಜಿಲ್ಲಾಧಿಕಾರಿಗೆ, ಶಾಸಕರಿಗೆ ದೂರು ನೀಡುವುದು ಮಾಡುತ್ತಿದ್ದಾರೆ. ಇಡೀ ಆಡಳಿತ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವುದು ಎಷ್ಟು ಸರಿ?  ನಗರಸಭೆ ರಚನೆಯಾಗಿ ಮೂರು ತಿಂಗಳಾಗಿದೆ. ಅಷ್ಟರೊಳಗೆ ಏಕಾಏಕಿ ನಗರವನ್ನು ಸಿಂಗಾಪುರವನ್ನಾಗಿಸಬೇಕೆಂದರೆ ಹೇಗೆ ಸಾಧ್ಯ?

ಧಾರವಾಡದ ಹೈಕೋರ್ಟ್‌ ಪೀಠದಲ್ಲಿ ನಡೆಯುತ್ತಿರುವ ( ಖಲೀಲ್‌ ಅಹಮದ್‌ ಅವರ ಭೂಸ್ವಾಧೀನಕ್ಕೆ ಸಂಬಂಧಿಸಿ ಅಧಿಕಾರಿಗಳು ರೂ 40 ಲಕ್ಷ ದಂಡ ಕಟ್ಟಬೇಕು ಎಂಬ ಆದೇಶ) ರಿಟ್‌ ಅರ್ಜಿಗೆ ಸಂಬಂಧಿಸಿ ನಗರಸಭೆ ಸದಸ್ಯರು ಯಾವೊಬ್ಬ ಅಧಿಕಾರಿ/ ಸಿಬ್ಬಂದಿಯನ್ನು ರಕ್ಷಿಸಲಿಲ್ಲ. 

ಮಹಿಳಾ ಎಂಜಿನಿಯರ್‌ (ಜಿ.ಶಿಲ್ಪಾ) ಅವರ ಮೇಲೆ ಒತ್ತಡ ತಂದು, ಮಾನಸಿಕ ಹಿಂಸೆಗೆ ಒಳಗಾಗಿ ರಜೆಯ ಮೇಲೆ ತೆರಳಿದ್ದಾರೆ. ಅವರ ಮೇಲೇನಾದರೂ ಗಂಭೀರ ಪರಿಣಾಮವಾದರೆ ಯಾರು ಹೊಣೆ ಎಂದು ಸಂಘ ತನ್ನ ದೂರಿನಲ್ಲಿ ಪ್ರಶ್ನಿಸಿದೆ.

ಇಂಥ ಪ್ರಕರಣಗಳನ್ನು ತಡೆಗಟ್ಟಬೇಕು. ಇಲ್ಲವಾದಲ್ಲಿ ಡಿ.7ರಂದು ( ನಗರಸಭೆ ಸಾಮಾನ್ಯ ಸಭೆಯ ದಿನ) ಮುಷ್ಕರ ನಡೆಸುವುದಾಗಿ ಸಂಘದ ಅಧ್ಯಕ್ಷ ಅಖ್ತರ್‌ ಅಲಿ ಎಚ್ಚರಿಕೆ ನೀಡಿದ್ದಾರೆ.

‘ಮುಷ್ಕರ ಮಾಡಲಿ ಬಿಡಿ’

ನಗರಸಭೆಯಲ್ಲಿ ಒಟ್ಟಾರೆ ಅಭಿ­ವೃದ್ಧಿಗೆ ಶ್ರಮಿಸಬೇಕು ಎಂಬುದು ನಮ್ಮ ಅಭಿಲಾಷೆ. ನಮ್ಮನ್ನು ಜನ, ಮಾಧ್ಯಮದವರು ಪ್ರಶ್ನಿಸುತ್ತಿದ್ದಾರೆ. ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳನ್ನು ಪ್ರಶ್ನಿಸಬಾರದೇ?
ಮಾತ್ರವಲ್ಲ ಅತ್ಯಂತ ಕೆಳಹಂತದ ನೌಕರರು ಮದ್ಯವರ್ತಿಗಳಂತೆ ಕೆಲಸ ಮಾಡಿ ನಗರಸಭೆಯ ಪ್ರಮುಖ (ಪರವಾನಗಿ, ನವೀಕರಣ ಇತ್ಯಾದಿ) ಕಾರ್ಯಗಳನ್ನು ಮಾಡುತ್ತಿದ್ದಾರೆ. ಅಂಥವರು ಮುಷ್ಕರ ಮಾಡುವುದಿದ್ದರೆ ಮಾಡಲಿ ಬಿಡಿ.
–ಲತಾ ವೀರಣ್ಣ ಸಂಡೂರ, ನಗರಸಭೆ ಅಧ್ಯಕ್ಷೆ

‘ನಿರ್ದಿಷ್ಟ ಹೆಸರು ಹೇಳುತ್ತೇವೆ’

ನಗರಸಭೆ ಸದಸ್ಯರಲ್ಲದ ಸದಸ್ಯರು (ನಗರಸಭೆ ಅಧ್ಯಕ್ಷರ ಪತಿ) ಸೇರಿದಂತೆ, ಆಪ್ತ ಸಹಾಯಕರು, ಬೆಂಬಲಿಗರು ಒತ್ತಡ ಹೇರುತ್ತಿರುವುದು ಮಾಡುತ್ತಿದ್ದಾರೆ. ಒಂದುವೇಳೆ ಶಿಲ್ಪಾ ಅವರು ಸರಿಯಾಗಿ ಕೆಲಸ ಮಾಡದಿದ್ದರೆ ಮೇಲಧಿಕಾರಿಗಳಿಗೆ ದೂರು ನೀಡಬಹುದು. ಅದುಬಿಟ್ಟು ಕ್ಷೇತ್ರಗಳಲ್ಲಿ ಕಾಮ­ಗಾರಿಗೆ ಅಡ್ಡಿಪಡಿಸುವುದು, ಗರ್ಭಿಣಿ ಆಗಿರುವ ಅವರಿಗೆ ಕಿರುಕುಳ ನೀಡುವುದು ಎಷ್ಟು ಸರಿ. ಪೌರಾಯುಕ್ತರು ಈ ಬಿಕ್ಕಟ್ಟು ಸರಿಪಡಿಸಿದರೆ ಆಯಿತು. ಇಲ್ಲವಾದರೆ, ಅಂಥ ನಿರ್ದಿಷ್ಟ ವ್ಯಕ್ತಿಗಳ ಹೆಸರು ಸೇರಿಸಿ ಇನ್ನೊಂದು ದೂರು ನೀಡುತ್ತೇವೆ. ಡಿ. 7ರಂದು ಮುಷ್ಕರ ನಡೆಸುತ್ತೇವೆ.
–ಅಖ್ತರ್‌ ಆಲಿ ಅಧ್ಯಕ್ಷರು ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ

‘ಸಮಸ್ಯೆ ನಿವಾರಣೆ ಯತ್ನ’

ಸಂಘದವರು ನಿರ್ದಿಷ್ಟವಾಗಿ ಯಾರ ಮೇಲೂ ದೂರು ಕೊಟ್ಟಿಲ್ಲ. ಮುಷ್ಕರ ಮಾಡುವಂಥ ದುಡುಕಿನ ನಿರ್ಧಾರ ಬೇಡ. ಎರಡೂ ಕಡೆಯವರ ಜತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತೇವೆ. ಅಧ್ಯಕ್ಷ ಉಪಾಧ್ಯಕ್ಷರ ಜತೆ ಮಾತನಾಡುತ್ತೇನೆ. ಸಣ್ಣ ಸಮಸ್ಯೆಯನ್ನು ದೊಡ್ಡದಾಗಿಸುವುದು ಬೇಡ ಎಂದು ಸಂಘದವರಿಗೆ ತಿಳಿಸಿದ್ದೇನೆ.
–ಮಂಜುನಾಥ್‌, ನಗರಸಭೆ ಪೌರಾಯುಕ್ತ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT