ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುಗೇಟು ನೀಡುವ ಹಾದಿಯಲ್ಲಿ ನ್ಯೂಜಿಲೆಂಡ್‌

ಕ್ರಿಕೆಟ್‌: ಚಂದ್ರಪಾಲ್‌ ಅಜೇಯ ಶತಕ, ವೆಸ್ಟ್‌ ಇಂಡೀಸ್‌ ಉತ್ತಮ ಮೊತ್ತ
Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌ (ಎಎಫ್‌ಪಿ): ನ್ಯೂಜಿಲೆಂಡ್‌ ತಂಡದವರು ಇಲ್ಲಿ ನಡೆಯುತ್ತಿರುವ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೂರನೇ ಪಂದ್ಯದಲ್ಲಿ ವೆಸ್ಟ್‌ಇಂಡೀಸ್‌ಗೆ ತಿರುಗೇಟು ನೀಡುವ ಹಂತದಲ್ಲಿದ್ದಾರೆ.

ಸೆಡಾನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿ ರುವ ಈ ಪಂದ್ಯದಲ್ಲಿ ಪ್ರವಾಸಿ ವಿಂಡೀಸ್‌ನ 367 ರನ್‌ಗಳಿಗೆ ಉತ್ತರವಾಗಿ ನ್ಯೂಜಿಲೆಂಡ್‌ ತಂಡದವರು ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ ಎರಡನೇ ದಿನದಾಟದ ಅಂತ್ಯಕ್ಕೆ 64 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 156 ರನ್‌ ಗಳಿಸಿದ್ದಾರೆ. ಇನಿಂಗ್ಸ್‌ ಮುನ್ನಡೆ ಗಳಿಸಲು ಇನ್ನೂ 212 ರನ್‌ ಗಳಿಸಬೇಕಾಗಿದೆ.

ಇದಕ್ಕೂ ಮುನ್ನ ವಿಂಡೀಸ್‌ ಮೊದಲ ಇನಿಂಗ್ಸ್‌ನಲ್ಲಿ 116.2 ಓವರ್‌ಗಳಲ್ಲಿ 367 ರನ್‌ ಗಳಿಸಿದರು. ಇಷ್ಟು ಮೊತ್ತಕ್ಕೆ ಕಾರಣವಾಗಿದ್ದು ಶಿವನಾರಾಯಣ ಚಂದ್ರಪಾಲ್‌ ಗಳಿಸಿದ ಅಜೇಯ ಶತಕ. 229 ಎಸೆತ ಎದುರಿಸಿದ ಅವರು 11 ಬೌಂಡರಿ ಗಳ ಸಮೇತ 122 ರನ್‌ ಗಳಿಸಿದರು. ಇದು ಅವರ 29ನೇ ಶತಕ.

ಚಂದ್ರಪಾಲ್‌ ಮೈಲುಗಲ್ಲು: ಈ ಹಾದಿಯಲ್ಲಿ ಚಂದ್ರಪಾಲ್‌ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಅಲನ್‌ ಬಾರ್ಡರ್‌ ಅವರ ದಾಖಲೆ ಅಳಿಸಿ ಹಾಕಿದರು. ಈ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದರು. 153 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಅವರು 11,199 ರನ್‌ ಗಳಿಸಿದ್ದಾರೆ.  ಬಾರ್ಡರ್‌ 156 ಟೆಸ್ಟ್‌ ಪಂದ್ಯಗಳಿಂದ 11,174 ರನ್‌ ಪೇರಿಸಿದ್ದರು. ವಿಶೇಷವೆಂದರೆ ಅವರು ವಿದಾಯ ಹೇಳಿದ ತಿಂಗಳು ಚಂದ್ರಪಾಲ್‌ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದರು.

ಆರಂಭದಲ್ಲೇ ಆಘಾತ: ಮೊದಲ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಆರಂಭಿಕ ಬ್ಯಾಟ್ಸ್‌ಮನ್‌ ಗಳನ್ನು ಬಹುಬೇಗನೇ ಕಳೆದುಕೊಂಡಿತು. ಆದರೆ ಕೇನ್‌ ವಿಲಿಯಮ್ಸನ್‌ ಹಾಗೂ ನಾಯಕ ರಾಸ್‌ ಟೇಲರ್ ತಂಡಕ್ಕೆ ಆಸರೆಯಾದರು. ಇವರಿಬ್ಬರು ಮೂರನೇ ವಿಕೆಟ್‌ಗೆ 95 ರನ್‌ ಸೇರಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ಇಂಡೀಸ್‌: ಮೊದಲ ಇನಿಂಗ್ಸ್‌ 116.2 ಓವರ್‌ಗಳಲ್ಲಿ 367 (ಶಿವನಾರಾಯಣ ಚಂದ್ರಪಾಲ್‌ ಔಟಾಗದೆ 122, ಟಿನೊ ಬೆಸ್ಟ್‌ 25; ಟಿಮ್‌ ಸೌಥಿ 79ಕ್ಕೆ4, ಕೋರಿ ಜೆ.ಆ್ಯಂಡರ್ಸನ್‌ 47ಕ್ಕೆ3);

ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್ 64 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 156 (ಕೇನ್‌ ವಿಲಿಯಮ್ಸನ್‌ 58, ರಾಸ್‌ ಟೇಲರ್‌ ಬ್ಯಾಟಿಂಗ್‌ 56; ಸುನಿಲ್‌ ನಾರಾಯಣ 43ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT