ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಳಿ ಹಾಸ್ಯದ ಹೊನಲು

Last Updated 26 ಡಿಸೆಂಬರ್ 2010, 13:55 IST
ಅಕ್ಷರ ಗಾತ್ರ

ಹಿಂದಿ: ತೀಸ್ ಮಾರ್ ಖಾನ್
ನಿರ್ದೇಶಕಿ ಫರ್ಹಾ ಖಾನ್ ಮೂಲತಃ ನೃತ್ಯ ನಿರ್ದೇಶಕಿ. ಈ ಕಾರಣಕ್ಕಾಗಿ ಅವರು ಕಥೆಗಿಂತಲೂ ಹೆಚ್ಚು ಹಾಡು, ನೃತ್ಯ, ಸಂಗೀತಕ್ಕೆ ಮಹತ್ವ ನೀಡುತ್ತಾರೆ. ಎರಡೂವರೆ ತಾಸಿನ ‘ತೀಸ್ ಮಾರ್ ಖಾನ್’ ಸಿನಿಮಾವನ್ನು ಹಾಸ್ಯ ಹಾಗೂ  ಸಂಗೀತಮಯ ಚಿತ್ರವನ್ನಾಗಿ ರೂಪಿಸಿದ್ದಾರೆ. ಕಥೆಯಲ್ಲಿ ವಿಶೇಷ ಇಲ್ಲದಿದ್ದರೂ, ನಿರೂಪಣೆಯಲ್ಲಿ ತಾಜಾತನವಿದೆ, ಬಿಗಿ ಇದೆ. ಎಲ್ಲೂ ಬೋರ್ ಎನಿಸದೇ ಚಿತ್ರ ಪ್ರಯಾಣ ನಗೆಯ ಅಲೆಯಲ್ಲಿಯೇ ಸಾಗುತ್ತದೆ.

ಚಾಣಾಕ್ಷ ಕಳ್ಳ ತರ್ಬೇಜ್ ಮಿರ್ಜಾ ಖಾನ್ ಉರುಫ್ ತೀಸ್ ಮಾರ್ ಖಾನ್ (ಅಕ್ಷಯ್ ಕುಮಾರ್) ಕಥಾನಾಯಕ. ಇಂಗ್ಲೆಂಡ್‌ನಿಂದ ರೈಲಿನಲ್ಲಿ ಆಗಮಿಸುತ್ತಿರುವ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಅಮೂಲ್ಯ ವಸ್ತುಗಳನ್ನು ಕದಿಯುವ ಯೋಜನೆ ಹಾಕುತ್ತಾನೆ.ಮಾರ್ಗ ಮಧ್ಯೆದಲ್ಲಿ ಬರುವ ಹಳ್ಳಿಯೊಂದರ ನಿವಾಸಿಗಳನ್ನು ಸಿನಿಮಾ ಶೂಟಿಂಗ್ ಎಂದು ನಂಬಿಸಿ ತನ್ನ ದರೋಡೆ ಕಾರ್ಯದಲ್ಲಿ ಹೇಗೆ ಅವರ ಸಹಾಯ ಪಡೆದುಕೊಳ್ಳುತ್ತಾನೆ ಎನ್ನುವುದು ಕಥಾಹಂದರ.

ನಕಲಿ ಸಿನಿಮಾದ ನಾಯಕನಾಗಿ ಅಕ್ಷಯ್ ಖನ್ನಾ ಗಮನಸೆಳೆಯುತ್ತಾರೆ. ಆಸ್ಕರ್ ಅವಾರ್ಡ್ ಕೈತಪ್ಪಿ ಹೋಗಿರುವ ಬಗ್ಗೆ ಆತನಲ್ಲಿ ಪಶ್ಚಾತಾಪವಿದೆ. ಹೇಗಾದರೂ ಸರಿ ಆಸ್ಕರ್ ಪಡೆಯಲೇಬೇಕೆಂದು ನಕಲಿ ಸಿನಿಮಾಕ್ಕೆ ನಾಯಕನಾಗಲು ಒಪ್ಪಿಕೊಳ್ಳುತ್ತಾನೆ.ಈತನನ್ನು ಪಾತ್ರಕ್ಕೆ ಒಪ್ಪಿಸುವ ಸಂದರ್ಭದಲ್ಲಿ ‘ಭಾರತದ ಬಡತನವನ್ನು ತೋರಿಸಿದರೆ ಆಸ್ಕರ್ ಗ್ಯಾರಂಟಿ’ ಎಂದು ಅಕ್ಷಯ್‌ಕುಮಾರ್ ಹೇಳುವ ಮಾತು ಸ್ಲಮ್‌ಡಾಗ್ ಮಿಲೇನಿಯರ್ ಚಿತ್ರವನ್ನು ಕಿಚಾಯಿಸುವಂತಿದೆ.

ಹಾಸ್ಯಮಯ ಚಿತ್ರವನ್ನಾಗಿಸಲು ಏನೆಲ್ಲ ಸಾಧ್ಯವೋ ಅಷ್ಟನ್ನೂ ಫರ್ಹಾ ಖಾನ್ ಮಾಡಿದ್ದಾರೆ. ‘ಮಿಸ್ಟರ್ ಇಂಡಿಯಾ’ ಚಿತ್ರದಲ್ಲಿದ್ದಂತೆ ಕೈಗಡಿಯಾರ ಗುಂಡಿ ಒತ್ತಿ ಮಾಯವಾಗುವ ಪಾತ್ರವನ್ನು ಸೃಷ್ಟಿಸಿದ್ದಾರೆ. ಜನರಿಗೆ ಸಹಾಯ ಮಾಡದೆ, ಅವರ ಆಭರಣಗಳನ್ನು ಕದ್ದು ಮಾಯವಾಗುವ ಪಾತ್ರವಿದು. ಮತ್ತೊಂದು ದೃಶ್ಯದಲ್ಲಿ ದೀಪದ ಬೆಳಕಿನಂತೆ ಹೊಳೆಯುವ ಹಲ್ಲುಗಳನ್ನು ತೋರಿಸುವ ಚ್ಯೂಯಿಂಗ್‌ಗಮ್ ಜಾಹೀರಾತನ್ನು ಗೇಲಿ ಮಾಡಲಾಗಿದೆ.

ಇಂತಹ ಹಲ್ಲುಗಳನ್ನು ಹೊಂದಿರುವಾತ ಹೇಗೆ ಕಳ್ಳತನ ಮಾಡುತ್ತಾನೆ ಎನ್ನುವುದನ್ನು ತಮಾಷೆಯಾಗಿ ಚಿತ್ರೀಕರಿಸಲಾಗಿದೆ.ಎಂಟಿವಿ ರೋಡೀಸ್ ಖ್ಯಾತಿಯ ರಘುರಾಮ್ ಸಹೋದರರು ಸಯಾಮಿ ರೂಪದಲ್ಲಿದ್ದಾರೆ. ಸಿಬಿಐ ಅಧಿಕಾರಿಗಳಾಗಿ ಅಮನ್ ವರ್ಮಾ ಹಾಗೂ ಮುರಳಿ ಶರ್ಮಾ ಜೋಡಿ ಗಮನಸೆಳೆಯುತ್ತದೆ. ಇಲ್ಲಿನ ಪಾತ್ರಗಳಿಗೆ ಲಾಜಿಕ್‌ನ ಹಂಗಿಲ್ಲ, ಹಾಸ್ಯ ಉಕ್ಕಿಸುವುದಷ್ಟೇ ಅವುಗಳ ಉದ್ದೇಶ. ಈ ಉದ್ದೇಶದಲ್ಲಿ ಅವು ಬಹುಪಾಲು ಯಶಸ್ವಿಯೂ ಆಗಿವೆ.

ಸಿನಿಮಾದ ಮತ್ತೊಂದು ಆಕರ್ಷಣೆ ‘ಶೀಲಾ ಕಿ ಜವಾನಿ...’ ಹಾಡಿಗೆ ಹೆಜ್ಜೆಹಾಕಿರುವ ಕತ್ರೀನಾ ಕೈಫ್ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ.  ಸಿನಿಮಾ ಅದ್ಭುತವಾಗೇನೂ ಇಲ್ಲ, ಆದರೆ ಎರಡೂವರೆ ಗಂಟೆ ಟೈಂಪಾಸ್‌ಗೆ ಮೋಸವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT