ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್: ಈಗ ಅಮರ್ ಸರದಿ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ತೀವ್ರ ಕುತೂಹಲ ಮೂಡಿಸಿದ್ದ 2008ರ ವೋಟಿಗಾಗಿ ನೋಟು ಪ್ರಕರಣದ ಆರೋಪಿಗಳಾದ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಹಾಗೂ ಬಿಜೆಪಿಯ ಇಬ್ಬರು ಮಾಜಿ ಸಂಸದರಿಗೆ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದ್ದು, ಮೂವರನ್ನೂ ಮಂಗಳವಾರ ಬಂಧಿಸಲಾಯಿತು.

ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸುತ್ತಿದ್ದಂತೆ, ಅಮರ್  (55) ಅವರನ್ನು ತಿಹಾರ್ ಜೈಲಿಗೆ ಕರೆದೊಯ್ಯಲಾಯಿತು. ಕೋರ್ಟ್ ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ಮುಂಚೆ ತನಿಖಾ ವೈಖರಿ ವಿರುದ್ಧ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಅಮರ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ಅಮರ್ ಬಂಧನಕ್ಕೆ ಮುನ್ನ ನಾಟಕೀಯ ವಿದ್ಯಮಾನಗಳು ನಡೆದವು. ಬೆಳಿಗ್ಗೆ ಅಮರ್, ತಮ್ಮ ವಕೀಲರ ಮೂಲಕ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿದರು. ಇದಾದ ಕೆಲವೇ ಗಂಟೆಗಳ ನಂತರ ನ್ಯಾಯಾಲಯಕ್ಕೆ ಹಾಜರಾಗಿ ಐದು ನಿಮಿಷ ಕಾಲ ಸ್ವತಃ ವಾದ ಮಂಡಿಸಿ ತಮ್ಮ ಅನಾರೋಗ್ಯದ ಬಗ್ಗೆ ಭಾವುಕವಾಗಿ ವಿವರಿಸಿ ಜಾಮೀನು ಕೋರಿದರು. ಇದನ್ನು ಪುರಸ್ಕರಿಸದ ವಿಶೇಷ ನ್ಯಾಯಾಧೀಶೆ ಸಂಗೀತಾ ಧಿಂಗ್ರ ಸೆಹಗಾಲ್, `ಆರೋಪಿಗಳೆಲ್ಲರನ್ನೂ ಸಮಾನ ದೃಷ್ಟಿಯಲ್ಲಿ ನೋಡಬೇಕಾಗುತ್ತದೆ~ ಎಂದು ಸ್ಪಷ್ಟಪಡಿಸಿದರು.

ಫಗ್ಗನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ್ ಸಿಂಗ್ ಭಗೋಡ ಬಂಧಿತರಾದ ಬಿಜೆಪಿ ಮಾಜಿ ಸಂಸದರು. ನ್ಯಾಯಾಲಯ ಹೊರಡಿಸಿದ್ದ ಸಮನ್ಸ್ ಮೇರೆಗೆ ವಿಚಾರಣೆಗೆ ಅವರೂ ಖುದ್ದು ಹಾಜರಾಗಿದ್ದರು.

`ಎಲ್ಲ ಮೂವರು ಆರೋಪಿಗಳೂ ಒಂದೇ ತರಹದ ಕಾರಣಗಳನ್ನು ನೀಡಿ ಮಧ್ಯಂತರ ಜಾಮೀನು ಕೋರಿದ್ದಾರೆ.  ಇದನ್ನು ಸೂಕ್ತ ಸಮಯದಲ್ಲಿ ಪರಿಗಣಿಸಲಾಗುವುದು~ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು. ಇದೇ ವೇಳೆ, ಆರೋಪಿಗಳ ಅರ್ಜಿಗಳಿಗೆ ಪ್ರತಿಕ್ರಿಯೆ ದಾಖಲಿಸಲು ದೆಹಲಿ ಪೊಲೀಸರಿಗೆ ಸೂಚಿಸಿದರು. `ಈಚೆಗಷ್ಟೇ ಸಿಂಗಪುರದಲ್ಲಿ ಮೂತ್ರಪಿಂಡ ಕಸಿಗೆ ಒಳಗಾಗಿರುವ ನನ್ನ ಆರೋಗ್ಯ ತೀರಾ ಸೂಕ್ಷ್ಮವಾಗಿದ್ದು ದಿನದ 24 ಗಂಟೆಯೂ ತೀವ್ರ ನಿಗಾ ಅಗತ್ಯವಿದೆ. ಇದೇ ವೇಳೆ ಮೂತ್ರನಾಳದ ಸೋಂಕು ಸಹ ಆಗಿರುವುದರಿಂದ ದಾನಿ ಮೂತ್ರಪಿಂಡಕ್ಕೂ ಹಾನಿಯಾಗುವ ಅಪಾಯವಿದೆ.  ಪ್ರತಿ ಸಮೂರು ತಿಂಗಳಿಗೊಮ್ಮೆ ತಪಾಸಣೆಗೆ ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಹೋಗಬೇಕು. ಅಲ್ಲದೆ, ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು.

ಸೋಮವಾರದಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನ್ಯಾಯಾಂಗ ಮತ್ತು ಸಂವಿಧಾನದಲ್ಲಿ ನನಗೆ ಗೌರವವಿದೆ~ ಎಂದು ಅಮರ್ ವಿವರಿಸಿದರು. ಸಿಂಗ್ ಸಲ್ಲಿಸಿದ ದಾಖಲೆಗಳ ಮೇಲೆ ಕಣ್ಣಾಡಿಸಿದ ನ್ಯಾಯಾಧೀಶೆ ಸೆಹ್‌ಗಾಲ್, ಸಲ್ಲಿಸಿರುವ ದಾಖಲೆಗಳೆಲ್ಲಾ 2010ರ ಸೆಪ್ಟೆಂಬರ್‌ಗಿಂತ ಮುಂಚಿನವಾಗಿದ್ದು, ಪ್ರಸ್ತುತ ಅಮರ್ ಆರೋಗ್ಯ ಸ್ಥಿತಿ ಬಗ್ಗೆ ಅವು ಏನನ್ನೂ ತಿಳಿಸದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಮರ್, `ಇವತ್ತು ಸಮಯದ ಅಭಾವ ಇದ್ದುದರಿಂದ ಎಲ್ಲ ದಾಖಲೆಗಳನ್ನೂ ತರಲಾಗಲಿಲ್ಲ~ ಎಂದರು.

ಅಮರ್ ಪರವಾಗಿ ವಕೀಲರಾದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮರೇಂದ್ರ ಶರಣ್ ಮತ್ತು ಹರಿಹರನ್ ಕೂಡ ವಾದಿಸಿದರು. `ಈ ಪ್ರಕರಣದಲ್ಲಿ ಯಾವ ಹುರುಳೂ ಇಲ್ಲವಾದ್ದರಿಂದ ಆರೋಪಿಗಳು ಅಂತಿಮವಾಗಿ ದೋಷಮುಕ್ತರಾಗಿ ಬಿಡುಗಡೆಯಾಗುವ ಸಾಧ್ಯತೆಯೇ ಹೆಚ್ಚು. ನಮ್ಮ ಕಕ್ಷಿದಾರರು ಸಾಕ್ಷ್ಯಗಳನ್ನು ತಿರುಚುತ್ತಾರೆಂಬ, ಅವರ ಮೇಲೆ ಪ್ರಭಾವ ಬೀರುತ್ತಾರೆಂಬ ಅಥವಾ ನಾಪತ್ತೆಯಾಗುತ್ತಾರೆಂಬ ಭಾವನೆ ಅನಗತ್ಯ. ಬೇಕಿದ್ದರೆ ಅವರ ಪಾಸ್‌ಪೋರ್ಟ್‌ನ್ನು ವಶದಲ್ಲಿ ಇರಿಸಿಕೊಳ್ಳಿ~ ಎಂದರು.

ಅನಾರೋಗ್ಯದ ನಡುವೆಯೂ ನ್ಯಾಯಾಲಯದ ಮುಂದೆ ಖುದ್ದು ಹಾಜರಿರುವ ಸಿಂಗ್ ಅವರ ಸದ್ವರ್ತನೆ ಗಮನದಲ್ಲಿರಿಸಿಕೊಂಡು ಮಧ್ಯಂತರ ಜಾಮೀನು ನೀಡಬೇಕು ಎಂದು ಶರಣ್ ಮನವಿ ಮಾಡಿದರು.

ಇದನ್ನು ಆಕ್ಷೇಪಿಸಿದ ಪ್ರಾಸಿಕ್ಯೂಷನ್, ಅರ್ಹತೆಯೊಂದನ್ನೇ ಮಾನದಂಡವನ್ನಾಗಿಸಿಕೊಂಡು ಜಾಮೀನು ಅರ್ಜಿ ಪರಿಶೀಲಿಸಬೇಕು ಎಂದು ವಾದಿಸಿತು. ಸಮಾಜದಲ್ಲಿ ಅಮರ್ ಸ್ಥಾನ, ಪ್ರಕರಣದ ಗಂಭೀರತೆ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಮರ್ಥ್ಯ ಇವನ್ನು ಗಣನೆಗೆ ತೆಗೆದುಕೊಂಡು ಜಾಮೀನು ನಿರಾಕರಿಸಬೇಕು ಎಂದು ಕೋರಿತು.

ಎಲ್ಲ ಆರೋಪಿಗಳನ್ನು ಸೆ.19ರಂದು ನ್ಯಾಯಲಯದ ಮುಂದೆ ಹಾಜರುಪಡಿಸಲು ನ್ಯಾಯಾಧೀಶರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT