ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಹಾರ್ ಜೈಲು: ಬೆಳೆಯುತ್ತಿರುವ ವಿಐಪಿಗಳ ಪಟ್ಟಿ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಭ್ರಷ್ಟಾಚಾರದ ಆರೋಪದ ಮೇಲೆ ರಾಜ್ಯಸಭಾ ಸದಸ್ಯ ಅಮರ್‌ಸಿಂಗ್ ಮಂಗಳವಾರ ತಿಹಾರ್ ಜೈಲು ಸೇರಿದ್ದಾರೆ. ಪಶ್ಚಿಮ ದೆಹಲಿಯಲ್ಲಿರುವ ಈ ಕಾರಾಗೃಹದಲ್ಲಿ ಈಗಾಗಲೇ  ಬಂಧಿಗಳಾಗಿರುವ ಪ್ರತಿಷ್ಠಿತ ರಾಜಕಾರಣಿಗಳು ಮತ್ತು ಪ್ರಮುಖ ಉದ್ದಿಮೆದಾರರ ಬಹಳಷ್ಟು ಉದ್ದದ ಸರತಿಯಲ್ಲಿ ಇವರು ಹೊಸ ಸೇರ್ಪಡೆ.

ಬಿಜೆಪಿಯ ಇಬ್ಬರು ಮಾಜಿ ಸಂಸದರಾದ ಫಗನ್ ಸಿಂಗ್ ಮತ್ತು ಮಹಾವೀರ್ ಭಗೋರ ಅವರೂ ಅಮರ್ ಸಿಂಗ್ ಜತೆ ಸೆರೆಮನೆ ಸೇರಿದ್ದಾರೆ.

ಸಮಾನ ಮನಸ್ಕರ ಜತೆ ಇವರು ಜೈಲಿನಲ್ಲಿ ದಿನಗಳನ್ನು ಕಳೆಯಲಿದ್ದಾರೆ. ಫೆಬ್ರುವರಿಯಿಂದ ತಿಹಾರ್ ಜೈಲಿಗೆ ವಿಐಪಿಗಳ `ಮಹಾಪೂರ~ವೇ  ಹರಿದಿದೆ.

ಫೆಬ್ರುವರಿ 2ರಂದು ದೂರಸಂಪರ್ಕ ಖಾತೆ ಮಾಜಿ ಸಚಿವ ಎ. ರಾಜಾ ಅವರನ್ನು 2ಜಿ ಹಗರಣಕ್ಕೆ ಸಂಬಂಧಿಸಿದ ಆರೋಪದಲ್ಲಿ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು.

ಇದೇ ಆರೋಪದ ಮೇಲೆ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ಧಾರ್ಥ ಬೆಹೂರ ಮತ್ತು ರಾಜಾ ಅವರ ಮಾಜಿ ಸಹಾಯಕ ಆರ್.ಕೆ. ಚಂದೋಲಿಯ ಅವರೂ ಈ ಜೈಲಿನ ವಾಸಿಗಳಾಗಿದ್ದಾರೆ.

2ಜಿ ಹಗರಣದಲ್ಲೇ ಡಿಎಂಕೆ ಸಂಸದೆ ಕನಿಮೊಳಿ ಮತ್ತು ಕಲೈಂಙರ್ ಟಿವಿ ವ್ಯವಸ್ಥಾಪಕ ನಿರ್ದೇಶಕ ಶರದ್‌ಕುಮಾರ್ ಅವರನ್ನು ಮೇ 20ರಂದು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಗಿದೆ. 2ಜಿ ಹಗರಣದಲ್ಲಿ ಭಾಗಿಯಾಗಿದ್ದಕ್ಕಾಗಿ ಕಾರಾಗೃಹ ವಾಸಿಗಳಾಗಿರುವ ಪ್ರಮುಖ ಉದ್ದಿಮೆದಾರರಲ್ಲಿ ಸ್ವಾನ್ ಟೆಲಿಕಾಂನ ಶಾಹಿದ್ ಉಸ್ಮಾನ್ ಬಲ್ವಾ ಮತ್ತು ವಿನೋದ್ ಗೋಯೆಂಕಾ, ಯೂನಿಟೆಕ್ ವೈರ್‌ಲೆಸ್‌ನ ಸಂಜಯ್‌ಚಂದ್ರ, ಸಿನೆಯುಗ್ ಫಿಲ್ಸಂನ ಕರೀಂ ಮೊರಾನಿ, ಕುಸೆಗಾಂವ್ ಫ್ರೂಟ್ಸ್ ಮತ್ತು ವೆಜಿಟೆಬಲ್ಸ್ ಕಂಪೆನಿ ನಿರ್ದೇಶಕರಾದ ಆಸಿಫ್ ಬಲ್ವಾ ಮತ್ತು ರಾಜೀವ್ ಅಗರವಾಲ್ ಸೇರಿದ್ದಾರೆ.

ಅನಿಲ್ ಅಂಬಾನಿ ಗುಂಪಿನ ಮೂವರು ಅಧಿಕಾರಿಗಳಾದ ಗೌತಮ್ ದೋಶಿ, ಹರಿ ನಾಯರ್ ಮತ್ತು ಸುರೇಂದ್ರ ಪಿಪರಾ ಅವರೂ 2ಜಿ ಹಗರಣದಲ್ಲಿ ಬಂಧಿತರಾಗಿದ್ದಾರೆ.

ಇದಲ್ಲದೆ ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣದಲ್ಲಿ ಆರೋಪಿಯಾಗಿರುವ ಸುರೇಶ್ ಕಲ್ಮಾಡಿ  ಏ. 25ರಂದು ಬಂಧನಕ್ಕೆ ಒಳಗಾಗಿ ತಿಹಾರ್ ಜೈಲಿನಲ್ಲಿದ್ದಾರೆ. ಇವರೊಂದಿಗೆ  ಸಹದ್ಯೋಗಿಗಳಾದ ಲಲಿತ್ ಭಾನಟ್, ವಿ.ಕೆ. ವರ್ಮಾ ಮತ್ತು ಎ.ಎಸ್.ವಿ. ಪ್ರಸಾದ್,  ಸರ್ಕಾರದ ಮಾಜಿ ಅಧಿಕಾರಿ ಸುರ್ಜಿತ್ ಲಾಲ್ ಅವರು ಸಹ ಇಲ್ಲಿ ಬಂಧಿಗಳು. ಈ ಪಟ್ಟಿ ಮತ್ತಷ್ಟು ಉದ್ದವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT