ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರದ ಅಕ್ಕಿಆಲೂರು ನಿವಾಸಿಗಳ ಬವಣೆ

ಮರೀಚಿಕೆಯಾದ ಮೂಲಸೌಕರ್ಯ
Last Updated 13 ಡಿಸೆಂಬರ್ 2012, 9:46 IST
ಅಕ್ಷರ ಗಾತ್ರ

ಅಕ್ಕಿಆಲೂರ: ಗಟಾರುಗಳಿಲ್ಲದೇ ದುರ್ನಾತ ಬೀರುತ್ತಿರುವ ಚರಂಡಿ ನೀರು, ರಸ್ತೆ ಇಕ್ಕೆಲಗಳಲ್ಲಿ ಕಾಂಗ್ರೆಸ್ ಕಸ ಬೆಳೆದಿರುವ ಪರಿಣಾಮ ಸಂಚಾರಕ್ಕೆ ಕಿರಿಕಿರಿಯಾಗಿರುವುದು, ನಿರ್ವಹಣೆ ಇಲ್ಲದೇ ಹುಳು, ಹುಪ್ಪುಡಿಗಳ ಆಶ್ರಯ ತಾಣವಾಗಿರುವ ಖಾಸಗಿ ನಿವೇಶನಗಳು, ಬೀದಿ ದೀಪಗಳ ನಿರ್ವಹಣೆ ಇಲ್ಲದೇ ಕತ್ತಲೆಯಲ್ಲಿಯೇ ಕಾಲ ನೂಕುವ ಸ್ಥಿತಿ... ಹೀಗೆ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳನ್ನು ಅಡಗಿಸಿಕೊಟ್ಟುಕೊಂಡು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಇಲ್ಲಿಯ ಹೊರವಲಯದಲ್ಲಿರುವ ಬಡಾವಣೆಗಳ ಗೋಳಿನ ವ್ಯಥೆಯಿದು...!

ಅಕ್ಕಿಆಲೂರಿಗೆ ಹೊಂದಿಕೊಂಡು ರಚನೆಯಾಗಿರುವ ಹೊಸ ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿದ್ದು, ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಇಲ್ಲಿಯ ಪರಿಸ್ಥಿತಿ ಗಂಭೀರತೆಯ ಅರಿವಿದ್ದರೂ ಸೌಕರ್ಯ ಒದಗಿಸುವ ಗೋಜಿಗೆ ಹೋಗದೇ ಇರುವುದು ವಿಪರ್ಯಾಸ.

ಹೊಸದಾಗಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಮನೆಕಟ್ಟಿಕೊಂಡು ನವ ಜೀವನದ ಕನಸು ಹೊತ್ತವರು ಮಾತ್ರ ಇಂದಿಗೂ ಸಹ ಕತ್ತಲೆಯಲ್ಲಿಯೇ ಕಾಲ ಕಳೆಯುವಂತಹ ಸ್ಥಿತಿ ಇದೆ. ಮುಖ್ಯವಾಗಿ ಚನ್ನವೀರೇಶ್ವರ ನಗರ, ಬಸವೇಶ್ವರ ನಗರ, ಶ್ರೀರಾಮ್ ನಗರ, ಇಂದಿರಾ ನಗರ, ನೇತಾಜಿ ನಗರ, ಲಕ್ಷ್ಮಿ ರೈಸ್ ಮಿಲ್ ಹಿಂಬಾಗದಲ್ಲಿನ ಬಡಾವಣೆಗಳು ಮೂಲಸೌಕರ್ಯದಿಂದ ವಂಚಿತವಾಗಿದ್ದು, ನಿವಾಸಿಗಳು ನೆಮ್ಮದಿ ಕಳೆದುಕೊಂಡು ಬದುಕುವಂತಾಗಿದೆ.

ಮಳೆ ಸುರಿದರೆ ಕೆಸರು ಗದ್ದೆಯಾಗಿ ಬದಲಾಗುವ ರಸ್ತೆಗಳಲ್ಲಿ ಸಂಚರಿಸಲು ಸರ್ಕಸ್ ಮಾಡಬೇಕಿರುವುದು ಅನಿವಾರ್ಯ. ದ್ವಿಚಕ್ರ ವಾಹನ ಸವಾರರು ಕನಿಷ್ಟ ಒಂದೆರಡು ಬಾರಿಯಾದರೂ ಬಿದ್ದು, ಎದ್ದು ತಮ್ಮ ಮನೆಗಳನ್ನು ತಲುಪಬೇಕು. 

ನೀರು ಸರಾಗವಾಗಿ ಮುಂದೆ ಹರಿದು ಸಾಗಲು ಇಲ್ಲಿ ಸಮರ್ಪಕ ಚರಂಡಿಗಳಿಲ್ಲ ನಿರ್ಮಾಣಗೊಂಡಿಲ್ಲ. ರಸ್ತೆಯಲ್ಲಿ ಸಂಚರಿಸುವರು ಚರಂಡಿಯನ್ನು ದಾಟಿ ಮುಂದೆ ತೆರಳಲು ಪ್ರಯಾಸ ಪಡಬೇಕಿದೆ. ಸಿಡಿ ನಿರ್ಮಾಣ ಕಾರ್ಯವೂ ಅಸಮರ್ಪಕವಾಗಿದ್ದು, ನೀರು ಎಲ್ಲೆಂದರಲ್ಲಿ ಹರಿಯುತ್ತಿರುವ ಪರಿಣಾಮ ನಿರ್ಮಿಸಲಾಗಿರುವ ಕೆಲವೇ ಕೆಲವು ರಸ್ತೆಗಳು ಸಹ ಕಿತ್ತು ಹೋಗುತ್ತಿವೆ. ಆಗೊಮ್ಮೆ ಈಗೊಮ್ಮೆ ಎಂಬಂತೆ ರಸ್ತೆಗಳಿಗೆ ಖಡಿ ಮೋರಂ ಹಾಕಲಾಗುತ್ತಿದ್ದರೂ ಮುಂದಿನ ಕೆಲವೇ ದಿನಗಳಲ್ಲಿ ಅದೂ ಕೂಡ ಹಾಳಾಗುತ್ತಿದೆ. ಬಸವೇಶ್ವರ ನಗರ, ಚನ್ನವೀರೇಶ್ವರ ನಗರ ಸೇರಿದಂತೆ ಇನ್ನೂ ಕೆಲವು ಪ್ರದೇಶಗಳಲ್ಲಿ ಬೀದಿ ದೀಪಗಳನ್ನು ಅಳವಡಿಸಲು ವಿದ್ಯುತ್ ಕಂಬಗಳು ಸಮರ್ಪಕವಾಗಿಲ್ಲ. ಸೌಕರ್ಯಗಳ ಕೊರತೆಯಿಂದ ನೂತನ ಬಡಾವಣೆಗಳಲ್ಲಿ ಜನರು ಹಿಂದೇಟು ಹಾಕುತ್ತಿದ್ದಾರೆ. ಪರಿಣಾಮ ನೂರಾರು ನಿವೇಶನಗಳು ನಿರ್ವಹಣೆಯನ್ನು ಕಾಣದೇ ಪಾಳು ಬಿದ್ದಿವೆ.

ಒಟ್ಟಾರೆ ನಿರ್ಲಕ್ಷ್ಯತೆಗೆ ಒಳಗಾಗಿರುವ ಇಲ್ಲಿಯ ಹೊರವಲಯದಲ್ಲಿನ ಬಹುತೇಕ ನಗರಗಳಲ್ಲಿ ನೆಮ್ಮದಿಯ ಜೀವನ ಎಂಬುದು ಕಷ್ಟಸಾಧ್ಯವಾಗಿ ಪರಿವರ್ತನೆಗೊಂಡಿದೆ. ಅನಾದರದಿಂದ ಹೊರಬಂದು ಇನ್ನಾದರೂ ಸಂಬಂಧಪಟ್ಟವರು ಮೂಲ ಸೌಕರ್ಯಗಳನ್ನು ಕಲ್ಪಿಸಲು ಮುಂದಾದರೆ ಮಾತ್ರ ಇಲ್ಲಿಯ ನಿವಾಸಿಗಳ ಮೊಗದಲ್ಲಿ ಮಂದಹಾಸ ಮೂಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT