ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಕೈಕೊಟ್ಟ ಮಳೆ, ಸಸಿಮಡಿಗೂ ನೀರಿಲ್ಲ

Last Updated 27 ಜೂನ್ 2012, 6:15 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಜೂನ್ ತಿಂಗಳು ಕಳೆಯುತ್ತಾ ಬಂದರೂ ಮಲೆನಾಡಿನಲ್ಲಿ ಮಳೆಯ ಸುಳಿವಿಲ್ಲ. ಆಗೊಮ್ಮೆ- ಈಗೊಮ್ಮೆ ತುಂತುರಾಗಿ ಬೀಳುವ ಮಳೆ ಸ್ವಲ್ಪ ಹೊತ್ತಿನಲ್ಲಿ ಮಾಯವಾಗುತ್ತದೆ. ಆಗಸದಲ್ಲಿ ಹೆಪ್ಪುಗಟ್ಟಿದ ಮೋಡಗಳು ಮಳೆ ಸುರಿಸದೇ ಸರಿಯುತ್ತಿವೆ. ಮಳೆಯನ್ನೇ ನಂಬಿಕೊಂಡ ರೈತರು ಬತ್ತದ ಸಸಿಮಡಿ ಸಿದ್ಧಪಡಿಸಿಕೊಳ್ಳಲು ನೀರಿಲ್ಲದೇ ಪರದಾಡುತ್ತಿದ್ದಾರೆ.

ಪಶ್ಚಿಮಘಟ್ಟಸಾಲಿನ ಆಗುಂಬೆ ಪ್ರದೇಶದ ಹಳ್ಳಿಗಳಲ್ಲೂ ಕೂಡ ಜೂನ್ ತಿಂಗಳಲ್ಲಿ ಬೀಳಬೇಕಿದ್ದ ವಾಡಿಕೆ ಮಳೆ ಸುರಿಯಲಿಲ್ಲ. ಜೂನ್ ಮೊದಲ ವಾರದಲ್ಲಿ ಭಾರೀ ಮಳೆಯನ್ನು ನಿರೀಕ್ಷಿಸಿದ್ದ ರೈತರು ಜೂನ್ ತಿಂಗಳು ಕಳೆಯುತ್ತಾ ಬಂದರೂ ಮಳೆ ಬೀಳದೇ ಇರುವುದರಿಂದ ಕಂಗಾಲಾಗಿದ್ದಾರೆ.

ಈ ಬಾರಿ ಮುಂಗಾರಿನ ಹಂಗಾಮಿಗೆ ಮಳೆ ಆಶ್ರಿತ ಬತ್ತದ ಗದ್ದೆಗಳಿಗೆ ಪ್ರದೇಶವಾರು ಮಳೆ ಬೀಳುವ ಪ್ರಮಾಣವನ್ನು ಪರಿಗಣಿಸಿ ಕೃಷಿ ಇಲಾಖೆ ಆಯಾ ಪ್ರದೇಶಕ್ಕೆ ಸರಿಹೊಂದುವ  ಬೀಜದ ಬತ್ತವನ್ನು ಶಿಫಾರಸು ಮಾಡಿದೆ. ರೈತರಿಗೆ ಮುಂಚಿತವಾಗಿ ಬೀಜದ ಬತ್ತ ತಲುಪಿಸಲು ರೈತ ಸಂಪರ್ಕ ಕೇಂದ್ರ, ಸಹಕಾರಿ ವ್ಯವಸ್ಥೆಯ ಮೂಲಕ ವಿತರಣೆ ಮಾಡಿದೆ.
 
ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ  ಬೀಜೋಪಚಾರ ಆಂದೋಲನ ಕೈಗೊಂಡಿದೆ. ಆದರೆ, ಮಳೆ ಕೈಕೊಟ್ಟ ಕಾರಣ ರೈತ ಕೈಕಟ್ಟಿ ಕುಳಿತಿರುವಂತೆ ಮಾಡಿದೆ.

ತಾಲ್ಲೂಕಿನಲ್ಲಿ 14 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯಲಾಗುತ್ತಿದೆ. ಆಗುಂಬೆ ಹೋಬಳಿಯನ್ನು ಹೊರತು ಪಡಿಸಿದರೆ ಉಳಿದ ಹೋಬಳಿಗಳಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆ ಇದೆ. ಕಸಬ, ಮುತ್ತೂರು, ಅಗ್ರಹಾರ ಹೋಬಳಿ ಸೇರಿದಂತೆ ಮಂಡಗದ್ದೆ ಹೋಬಳಿಯಲ್ಲಿ ಮಳೆ ಬಹುತೇಕ ಕಡಿಮೆ ಸುರಿಯುತ್ತದೆ.

ಈ ಹೋಬಳಿಯ ಹಣಗೆರೆ, ಕಲ್ಲುಕೊಪ್ಪ. ಕನ್ನಂಗಿ ಭಾಗ ಅರೆಮಲೆನಾಡಿನಂತಿದೆ. ಈ ಪ್ರದೇಶದ ಮಳೆಯಾಶ್ರಿತ ಬತ್ತದ ಗದ್ದೆಗಳಿಗೆ ಮೂರು ತಿಂಗಳಿನ ಅವಧಿಯಲ್ಲಿ ಬೆಳೆಯಬಹುದಾದ ಬತ್ತದ ತಳಿಗಳನ್ನು ಕೃಷಿ ಇಲಾಖೆ ಪರಿಚಯಿಸಿದೆ. ಅಗ್ರಹಾರ ಹೋಬಳಿಯ ಕೋಣಂದೂರು, ಮಳಲೀಮಕ್ಕಿ, ದೇಮ್ಲಾಪುರ ಭಾಗದ ಪ್ರದೇಶವೂ ಕೂಡ ಕಡಿಮೆ ಮಳೆ ಪಡೆಯುವ ಪ್ರದೇಶವಾಗಿದೆ.

ಹೆಚ್ಚು ಮಳೆ ಬೀಳುವ ಆಗುಂಬೆ ಭಾಗದ ಪ್ರದೇಶಕ್ಕೆ ದೀರ್ಘಾವಧಿ, ಸಮ ಪ್ರಮಾಣದಲ್ಲಿ ಮಳೆಯಾಗುವ ಪ್ರದೇಶಗಳಿಗೆ ಮದ್ಯಮಾವಧಿ ಹಾಗೂ ಮಳೆ ಕಡಿಮೆ ಬೀಳುವ ಪ್ರದೇಶಗಳಿಗೆ ಅಲ್ಪಾವಧಿ ತಳಿಗಳ ಬಿತ್ತನೆ ಬೀಜವನ್ನು ಹಂಚಲಾಗಿದೆ. ಈಗಾಗಲೇ, ಮಳೆ ಬೀಳದ ಕಾರಣ ಮುಂಗಾರಿನ ಕೃಷಿ ಚಟುವಟಿಕೆಗಳಿಗೆ ತೊಡಕಾಗಿದೆ. ಜುಲೈ ತಿಂಗಳಿನಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ತೀರ್ಥಹಳ್ಳಿ ಕೃಷಿ ಇಲಾಖೆ ಅಧಿಕಾರಿ ಪಾಂಡು ಹೇಳುತ್ತಾರೆ.

ಜೂನ್ ತಿಂಗಳಿನ ವಾಡಿಕೆ ಮಳೆ 582.7 ಮಿ.ಮೀ. ಇದ್ದು ಇದು ಈ ಬಾರಿ ಜೂನ್ 25ರ ಹೊತ್ತಿಗೆ 419.6 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಜೂನ್ ತಿಂಗಳಿನಲ್ಲಿ 803.1 ಮಿ.ಮೀ. ಮಳೆಯಾಗಿತ್ತು. ಈ ಬಾರಿ ಈ ಹೊತ್ತಿಗೆ ವಾಡಿಕೆ ಮಳೆಗಿಂತ ಶೇ.28ರಷ್ಟು ಕೊರತೆ ಎದುರಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಮಕ್ಕಿಗದ್ದೆ (ಪೂರ್ಣ ಪ್ರಮಾಣದ ಮಳೆಯಾಶ್ರಿತ)ರೈತರು ಮಳೆ ಬೀಳದ ಕಾರಣ ಇನ್ನೂ ನೇಗಿಲು ನೊಗವನ್ನು ಬತ್ತದ ಗದ್ದೆಗಳಿಗೆ ಇಳಿಸಿಲ್ಲ. ಉಳುಮೆ ಮಾಡಲು ಕೂಡ ಈಗ ಬಿದ್ದ ಮಳೆ ಸಾಕಾಗುತ್ತಿಲ್ಲ. ಬತ್ತದ ಗದ್ದೆಗಳನ್ನು ನಂಬಿಕೊಂಡ ಮಕ್ಕಿಗದ್ದೆ ರೈತರನ್ನು ಆ ದೇವರೇ ಕಾಪಾಡಬೇಕು ಎನ್ನುತ್ತಾರೆ ರೈತರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT