ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥೋದ್ಭವಕ್ಕೂ ತಟ್ಟಿದ ಕಾವೇರಿ ಹೋರಾಟದ ಬಿಸಿ

Last Updated 17 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತಲಕಾವೇರಿ (ಮಡಿಕೇರಿ): ಕಾವೇರಿ ನೀರಿಗಾಗಿ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ನಡೆಯುತ್ತಿರುವ ಸಂಘರ್ಷದ ಬಿಸಿಯು ತಲಕಾವೇರಿಯಲ್ಲಿ ಬುಧವಾರ ನಡೆದ ಕಾವೇರಿ ತೀರ್ಥೋದ್ಭವ ಸಂಭ್ರಮಕ್ಕೂ ತಟ್ಟಿತು.

ಪ್ರತಿ ವರ್ಷ ತುಲಾಸಂಕ್ರಮಣದಂದು ನಡೆಯುವ ತೀರ್ಥೋದ್ಭವಕ್ಕೆ ಜಿಲ್ಲೆಯ ಭಕ್ತಾದಿಗಳಿಗಿಂತ ಪಕ್ಕದ ತಮಿಳುನಾಡಿನ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಆದರೆ, ಈ ಬಾರಿ ಕಾವೇರಿ ನೀರಿನ ಗಲಾಟೆಯಿಂದಾಗಿ ಬಹಳಷ್ಟು ಜನ ತಮಿಳರು ಇತ್ತ ಸುಳಿಯಲಿಲ್ಲ.

ಕಾವೇರಿ ನೀರನ್ನು ಬಿಡುವಂತೆ ತಮಿಳರು ಒತ್ತಾಯಿಸುತ್ತಿದ್ದರೆ, ರಾಜ್ಯದಲ್ಲಿ ಬರ ಪರಿಸ್ಥಿತಿ ಇರುವುದರಿಂದ ನೀರನ್ನು ಬಿಡಬಾರದೆಂದು ಮಂಡ್ಯ, ಮೈಸೂರು, ಬೆಂಗಳೂರಿನಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಪ್ರತಿಭಟನೆಯ ಕಾವು ಜೋರಾಗಿದ್ದ ಮಂಡ್ಯ, ಮೈಸೂರಿನಿಂದಲೂ ಹೆಚ್ಚಿನ ಜನರು ತಲಕಾವೇರಿಗೆ ಆಗಮಿಸಿರಲಿಲ್ಲ. ಹೀಗಾಗಿ ಈ ಬಾರಿಯ ತೀರ್ಥೋದ್ಭವ ಸಂಭ್ರಮವು ಕೊಂಚ ಮಂಕಾಗಿತ್ತು.

ಅನ್ನದಾನವೂ ಕಾರಣ: ಭಕ್ತಾದಿಗಳ ಸಂಖ್ಯೆ ಕಡಿಮೆಯಾಗಲು ಕಾವೇರಿ ಹೋರಾಟದ ಜೊತೆ ಅನ್ನದಾನ ಮಾಡದಂತೆ ವಿವಿಧ ಸಂಘ-ಸಂಸ್ಥೆಗಳ ಮೇಲೆ ನಿಷೇಧ ಹೇರಿರುವುದು ಕೂಡ ಮತ್ತೊಂದು ಪ್ರಮುಖ ಕಾರಣವಾಗಿದೆ.
 
ತೀರ್ಥೋದ್ಭವದ ಸಂದರ್ಭದಲ್ಲಿ ಹಲವಾರು ವರ್ಷಗಳಿಂದ ಭಕ್ತರಿಗೆ ಅನ್ನದಾನ ಮಾಡುತ್ತಿದ್ದ ತಮಿಳುನಾಡಿನ ಚೆಟ್ಟಿಯಾರ್ ಕುಟುಂಬದವರು, ಮಂಡ್ಯದ ಅನ್ನಸಂತರ್ಪಣಾ ಸಮಿತಿ ಹಾಗೂ ಕೊಡಗು ಏಕೀಕರಣ ರಂಗದವರಿಗೆ ತಲಕಾವೇರಿಯಲ್ಲಿ ಅನ್ನದಾನ ಮಾಡದಂತೆ ದೇವಸ್ಥಾನದ ಸಮಿತಿಯು ನಿರ್ಬಂಧ ಹೇರಿತ್ತು.

ಹೀಗಾಗಿ ಈ ಸಂಘ-ಸಂಸ್ಥೆಗಳ ಮೂಲಕ ಆಗಮಿಸುತ್ತಿದ್ದ ಭಕ್ತಾದಿಗಳ ತಂಡವೂ ಕಾಣದಾಯಿತು.
ಮಂಡ್ಯದ ಅನ್ನಸಂತರ್ಪಣಾ ಸಮಿತಿ ಮೂಲಕ ಆಗಮಿಸುತ್ತಿದ್ದ ಭಕ್ತಾದಿಗಳು ಈ ಬಾರಿ ಕಾಣಲಿಲ್ಲ. ಅನ್ನದಾನ ನಿಷೇಧದ ಕುರಿತು ದೇವಸ್ಥಾನ ಸಮಿತಿ ಹಾಗೂ ಕೊಡಗು ಏಕೀಕರಣ ರಂಗದ ನಡುವೆ ನಡೆದ ಮುಸುಕಿನ ಗುದ್ದಾಟದ ಫಲವಾಗಿ ಜಿಲ್ಲೆಯ ಜನರು ಈ ಕಡೆ ತಲೆಹಾಕಲಿಲ್ಲ.

ಚೆಟ್ಟಿಯಾರ್‌ರಿಂದ ಅನ್ನದಾನ: ದೇವಸ್ಥಾನ ಸಮಿತಿಯ ಸೂಚನೆಯಂತೆ ತಮಿಳುನಾಡಿನ ಚೆಟ್ಟಿಯಾರ್ ಕುಟುಂಬದವರು ಮುಖ್ಯಬೀದಿಯಲ್ಲಿ ಅನ್ನದಾನ ನೀಡುವುದನ್ನು ನಿಲ್ಲಿಸಿದ್ದರೂ, ತಮ್ಮದೇ ಛತ್ರದ ಮುಂದೆ ಅಲ್ಪ ಪ್ರಮಾಣದಲ್ಲಿ ಅನ್ನದಾನ ಮಾಡುತ್ತಿದ್ದುದು ಕಂಡುಬಂದಿತು.

`ತಮಿಳುನಾಡಿನ ನಮ್ಮ ಜಮೀನುಗಳಿಗೆ ನೀರುಣಿಸುವ ಕಾವೇರಿಗೆ ಪ್ರತಿಯಾಗಿ ಭಕ್ತಿರೂಪದಲ್ಲಿ ಅನ್ನದಾನ ಮಾಡುತ್ತಿದ್ದೇವೆ. ಹಲವು ದಶಕಗಳಿಂದಲೂ ನಮ್ಮ ಕುಟುಂಬಸ್ಥರು ನಡೆಸಿಕೊಂಡು ಬಂದ್ದ್ದಿದರಿಂದ ಇದನ್ನು ತಕ್ಷಣಕ್ಕೆ ನಿಲ್ಲಿಸಲಾಗದು. ಅಲ್ಪಪ್ರಮಾಣದಲ್ಲಿಯಾದರೂ ಇದನ್ನು ಮಾಡಬೇಕೆಂದು ನಮ್ಮ ಛತ್ರದ ಮುಂದೆ ಮಾಡುತ್ತಿದ್ದೇವೆ~ ಎಂದು ಹೆಸರು ಹೇಳಲು ಇಚ್ಛಿಸದ ಚೆಟ್ಟಿಯಾರ್ ಕುಟುಂಬದ ಹಿರಿಯರೊಬ್ಬರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT