ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಪು ಅನುಷ್ಠಾನದಿಂದ ಹೆಚ್ಚಿನ ಧಕ್ಕೆಯಿಲ್ಲ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ರಾಷ್ಟ್ರದಲ್ಲಿನ ಶೇ 95ರಷ್ಟು ಮೊಬೈಲ್ ಗ್ರಾಹಕರು 2008ರ ಜನವರಿಗೆ ಮುಂಚೆ ಪರವಾನಗಿ ಪಡೆದಿದ್ದ ಕಂಪೆನಿಗಳಡಿಯೇ ಇದ್ದಾರೆ. ಹೀಗಾಗಿ 2 ಜಿ ಪರವಾನಗಿ ರದ್ದುಗೊಳಿಸಿದ ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ಹೆಚ್ಚಿನ ತೊಂದರೆ ಆಗುವುದಿಲ್ಲ ಎಂದು ದೂರಸಂಪರ್ಕ ನಿಯಂತ್ರಣಾ ಪ್ರಾಧಿಕಾರ (ಟ್ರಾಯ್) ಹೇಳಿದೆ.

ಕೋರ್ಟ್ ತೀರ್ಪನ್ನು ಅನುಷ್ಠಾನಗೊಳಿಸಲಾಗುವುದು ಎಂದು ಇದೇ ವೇಳೆ ಟ್ರಾಯ್ ಚೇರ್‌ಮನ್ ಜೆ.ಎಸ್.ಶರ್ಮ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗ್ರಾಹಕರು ಮೊಬೈಲ್ ಸ್ಥಿರ ಸಂಖ್ಯೆ (ಮೊಬೈಲ್ ನಂಬರ್ ಪೋರ್ಟಬಿಲಿಟಿ- ಎಂಎನ್‌ಪಿ) ಸೌಲಭ್ಯ ಬಳಸಿಕೊಂಡು ಬೇರೆ ಕಂಪೆನಿಗಳಿಗೆ ವರ್ಗಾವಣೆ ಪಡೆದುಕೊಳ್ಳಬಹುದು. ಈ ಸಂಬಂಧ ಜಾಹೀರಾತುಗಳನ್ನು ನೀಡಿ ಗ್ರಾಹಕರಿಗೆ ಅನುಕೂಲವಾಗುವಂತೆ ಪ್ರಚಾರ ಮಾಡುವಂತೆ ಕಂಪೆನಿಗಳಿಗೆ ನಿರ್ದೇಶನ ನೀಡಲಾಗುವುದು ಎಂದಿದ್ದಾರೆ.

ಈ ಬೆಳವಣಿಗೆಯಿಂದ ಕರೆ ದರ ಹೆಚ್ಚಳವಾಗುವ ಸಾಧ್ಯತೆ ಕುರಿತು ಕೇಳಿದಾಗ, ಟ್ರಾಯ್ ಈ ಬಗ್ಗೆ ಸೂಕ್ತ ನಿಗಾ ವಹಿಸಲಿದೆ; ಈಗ ಪರವಾನಗಿಗಳನ್ನು ರದ್ದು ಮಾಡಿರುವುದರಿಂದ 500 ಮೆಗಾಹರ್ಟ್ಸ್‌ಗಳಿಗಿಂತ ಹೆಚ್ಚು ತರಂಗಾಂತರಗಳು ಹರಾಜು ಮೂಲಕ ಲಭ್ಯವಾಗಲಿವೆ ಎಂದು ತಿಳಿಸಿದ್ದಾರೆ.

ಇನ್ನು ಮುಂದೆ ಎಲ್ಲಾ ಪರವಾನಗಿಗಳು ಏಕೀಕೃತ ಪರವಾನಗಿಗಳಾಗಿರುತ್ತವೆ. ಇದರಿಂದ ಸೇವಾ ಸ್ಪರ್ಧಾತ್ಮಕತೆ ಹೆಚ್ಚಿ ಅಕ್ರಮಕ್ಕೆ ಕಡಿವಾಣ ಬೀಳುತ್ತದೆ. ದೂರಸಂಪರ್ಕ ಆಯೋಗವು ಈ ಕುರಿತು ಸರ್ಕಾರದೊಂದಿಗೆ ಮಾತುಕತೆಯಲ್ಲಿ ನಿರತವಾಗಿದೆ. ಪ್ರಸ್ತುತ ಇರುವ ಲೈಸೆನ್ಸ್‌ಗಳನ್ನು ಏಕೀಕೃತ ಪರವಾನಗಿ ನೀತಿಯಡಿ ತರುವ ಚಿಂತನೆಯೂ ನಡೆದಿದೆ ಎಂದು ಶರ್ಮ ವಿವರಿಸಿದ್ದಾರೆ.

ಹೊಸ ಕಂಪೆನಿಗಳಿಗೆ ಹರಾಜಿನಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದೇ ಎಂದು ಕೇಳಿದಾಗ, ಈ ಕುರಿತು ಟ್ರಾಯ್ ಪರಿಶೀಲಿಸುತ್ತಿದ್ದು, ಎಲ್ಲರಿಗೂ ಮುಕ್ತ ಅವಕಾಶವಿರುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.

ತೀರ್ಪನ್ನು ಅಧ್ಯಯನ ಮಾಡದೆ ಪ್ರತಿಕ್ರಿಯಿಸುವುದಿಲ್ಲ. ಆದರೆ ಈಗ ತಿಳಿದು ಬಂದಿರುವಂತೆ, ಸುಪ್ರೀಂಕೋರ್ಟ್ ನಾಲ್ಕು ತಿಂಗಳ ಗಡುವು ನಿಗದಿಗೊಳಿಸಿದ್ದರೆ, ಅಷ್ಟರೊಳಗೆ ನಿಗದಿ ಕಾರ್ಯ ಮುಗಿಸಲು ಟ್ರಾಯ್ ಯತ್ನಿಸಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT