ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀವ್ರಗೊಂಡ ಕಾಲುಬಾಯಿ ಜ್ವರ: ಹಸುಗಳ ಸಾವು

ಪಶುಪಾಲನಾ ಇಲಾಖೆ ಹೆಚು್ಚವರಿ ನಿರ್ದೇಶಕರ ಭೇಟಿ, ಪರಿಶೀಲನೆ
Last Updated 11 ಸೆಪ್ಟೆಂಬರ್ 2013, 9:53 IST
ಅಕ್ಷರ ಗಾತ್ರ

ಕೋಲಾರ: ಜಿಲ್ಲೆಯ ಹಲವೆಡೆ ಕಾಲು­ಬಾಯಿ ಜ್ವರದಿಂದ ಹಸುಗಳು ಸಾವಿ­ಗೀಡಾ­ಗುತ್ತಿರುವ ಹಿನ್ನೆಲೆಯಲ್ಲಿ ಪಶು­ಪಾಲನಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ನಾಗರಾಜಶೆಟ್ಟಿ ಮತ್ತು ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ತಜ್ಞರಾದ ದೇವರಾಜ್‍ ಮತ್ತು ಡಾ.ರಶ್ಮಿ ಮಂಗಳವಾರ ಭೇಟಿ ನೀಡಿ ತಾಲ್ಲೂಕಿನ ವಾನರಾಸಿ ಗ್ರಾಮಸ್ಥರಿಂದ ಮತ್ತು ನಗರದ ಪಶುಪಾಲಕರಿಂದ ಮಾಹಿತಿ ಪಡೆದರು.

ಪಶುಪಾಲನಾ ಇಲಾಖೆಯ ಸಿಬ್ಬಂದಿ­ಯೊಡನೆ ಅಧಿಕಾರಿಗಳು ತಾಲ್ಲೂಕಿನ ವಾನರಾಶಿ ಗ್ರಾಮಕ್ಕೆ ಮಧ್ಯಾಹ್ನ ಭೇಟಿ ನೀಡಿದ ಸಂದರ್ಭದಲ್ಲಿ, ಹಲವು ಹಸು, ಕರು ಮತ್ತು ಕುರಿಗಳು ಕಾಲುಬಾಯಿ ಜ್ವರದಿಂದ ಬಳಲುತ್ತಿದ್ದುದು ಕಂಡು ಬಂತು. ಸೋಮವಾರ ಇದೇ ಗ್ರಾಮ­ದಲ್ಲಿ ನಾರಾಯಣಸ್ವಾಮಿ ಎಂಬುವವರ ಹಸು ಸಾವಿಗೀಡಾಗಿತ್ತು. ಗ್ರಾಮದಲ್ಲಿ ಇತ್ತೀಚಿನ ದಿನಗಳಲ್ಲಿ 7 ಹಸುಗಳು ಸಾವಿಗೀಡಾಗಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದರು.

ಕಾಲುಬಾಯಿ ಜ್ವರದಿಂದ ಬಳಲು­ತ್ತಿರುವ ಮತ್ತು ಸಾವಿಗೀಡಾಗಿರುವ ಹಸುಗಳ ಮಾಲೀಕರಲ್ಲಿ ಬಹುತೇಕರು ಜ್ವರ ನಿಯಂತ್ರಕ ಲಸಿಕೆಗಳನ್ನು ವರ್ಷಕ್ಕೂ ಹೆಚ್ಚು ಅವಧಿಯಿಂದ ಹಸುಗಳಿಗೆ ಹಾಕಿ­ಸಿಲ್ಲ ಎಂದೂ ಈ ಸಂದರ್ಭದಲ್ಲಿ ಅಧಿಕಾರಿಗಳಿಗೆ ತಿಳಿಸಿದರು.

ಲಸಿಕೆ ಹಾಕಿಸದಿದ್ದ ಕಾರಣದಿಂದಲೇ ಇಂಥ ಘಟನೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಕೆಲವು ಕರುಗಳಿಗೂ ಜ್ವರದ ಸೋಂಕು ತಗುಲಿ­ರುವುದು ಕಂಡು ಬಂತು. ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ತಜ್ಞರು ಹಸು, ಕರು ಮತು್ತ ಕೆಲವು ಕುರಿ­ಗ­ಳಿಂದ ರಕ್ತ ಮಾದರಿ ಪರೀಕಾ್ಷ­ರ್ಥ­ವಾಗಿ ಸಂಗ್ರಹಿಸಿದರು.

ಕುರುಬರ ಪೇಟೆ: ನಗರದ ಕುರುಬರ­ಪೇಟೆ ಮತ್ತು ಕೋಲಾರಮ್ಮ ಬಡಾ­ವಣೆಗೂ ಸಂಜೆ ಭೇಟಿ ನೀಡಿದ ಈ ಅಧಿ­ಕಾರಿಗಳ ತಂಡವು ಹತ್ತಾರು ಪಶು­ಪಾಲಕರಿಂದ ಮಾಹಿತಿ ಪಡೆಯಿತು.

ಜ್ವರ ಹಬ್ಬಿರುವ ಹಿನ್ನೆಲೆಯಲ್ಲಿ ಪ್ರತಿ ದಿನವೂ ಪ್ರತಿ ಹಸುವಿಗೆ ಸಾವಿರಾರು ರೂಪಾಯಿ ಖರ್ಚು ಮಾಡುತ್ತಿದ್ದೇವೆ. ಉಚಿತವಾಗಿ ಔಷಧಿಗಳನ್ನು ಸರಬರಾಜು ಮಾಡಿದರೆ ಅನುಕೂಲವಾಗುತ್ತದೆ ಎಂದು  ಪಶುಪಾಲಕರು ಅಧಿ­ಕಾರಿ­­ಗಳನ್ನು ಕೋರಿದರು.

ಲಸಿಕೆ ಹಾಕಿಸುವ ಬಗ್ಗೆ ಸ್ಪಷ್ಟ ರೀತಿಯಲ್ಲಿ ಅರಿವು ಮೂಡಿಸುವ ಕೆಲಸ ಪಶುಪಾಲನಾ ಇಲಾಖೆಯಿಂದ ಸರಿ­ಯಾಗಿ ನಡೆದಿಲ್ಲ. ಲಸಿಕೆ ಹಾಕಿಸಿ­ಕೊಳ್ಳದಿದ್ದರೆ ಆಗುವ ಅಪಾಯಗಳ ಬಗ್ಗೆ ಇಲಾಖೆ ಸಿಬ್ಬಂದಿ ಗಂಭೀರವಾಗಿ ಪರಿ­ಗಣಿಸಿಲ್ಲ ಎಂದು ಇದೇ ಸಂದರ್ಭದಲ್ಲಿ ರೈತರೊಬ್ಬರು ಆಪಾದಿಸಿದರು.

ಎಚ್ಚರಿಕೆ ಅಗತ್ಯ: ಸುದ್ದಿಗಾರರೊಡನೆ ಮಾತನಾಡಿದ ಡಾ.ನಾಗರಾಜಶೆಟ್ಟಿ, ಲಸಿಕೆ ಹಾಕಿಸುವಲ್ಲಿ ರೈತರ ಮೂಢ­ನಂಬಿಕೆ, ಭೀತಿ ಹಾಗೂ ಆ ಮೂಲದ ಹಿಂಜರಿಕೆಯೇ ಇಂದಿನ ಸನ್ನಿವೇಶಕ್ಕೆ ಕಾರಣ. ವರ್ಷಕ್ಕೆ ಎರಡು ಬಾರಿ ಉಚಿತ ಲಸಿಕೆ ಹಾಕಿಸಿದರೆ ಮಾತ್ರ ರಾಸುಗಳು ಕಾಲು ಬಾಯಿ ಜ್ವರದಿಂದ ಮುಕ್ತವಾಗು­ತ್ತವೆ. ರೋಗಪೀಡಿತ­ವಾಗಿರುವ ಮತ್ತು ಸಾವಿಗೀಡಾಗಿರುವ ಬಹುತೇಕ ಹಸು­ಗಳಿಗೆ ರೈತರು ಲಸಿಕೆ ಹಾಕಿಸಿಲ್ಲ ಎಂದು ಸ್ಪಷ್ಟಪಡಿಸಿದರು. ಲಸಿಕೆ ಹಾಕಿಸಲು ರೈತರನ್ನು ಇನ್ನಷ್ಟು ಪ್ರೇರೇಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಬೆಂಗಳೂರಿನಿಂದ ಬಂದಿದ್ದ ತಂಡದಲ್ಲಿ ಇಲಾಖೆಯ ರೋಗ ಕಣಾ್ಗವಲು ವಿಭಾ­ಗದ ಡಾ.ಏಜಾಜ್‍ ಅಹ್ಮದ್‍, ರೋಗ ನಿರ್ವಹಣಾ ಘಟಕದ ಶ್ರೀರಾಮರೆಡ್ಡಿ ಇದ್ದರು.

ಡಿ.ಸಿ. ಸಭೆ: ಹಸುಗಳ ಸಾವಿನ ಹಿನ್ನೆಲೆ­ಯಲ್ಲಿ ಸಂಜೆ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಡಿ.ಕೆ.ರವಿ, ರೈತರು ಲಸಿಕೆ ಹಾಕಿಸಲು ಮುಂದೆ ಬರುತ್ತಿಲ್ಲವೆಂಬ ಸಬೂ­ಬನ್ನು ಹೇಳಿ ಪಶುಪಾಲನಾ ಇಲಾ­ಖೆಯ ಸಿಬ್ಬಂದಿ ಸುಮ್ಮನೆ ಇರುವಂತಿಲ್ಲ. ಲಸಿಕೆ ಹಾಕಿಸಲು ಪರ್ಯಾಯ ಮಾರ್ಗ­ಗಳನ್ನು ಹುಡುಕಲೇಬೇಕು ಎಂದು ಸ್ಪಷ್ಟವಾಗಿ ಸೂಚಿಸಿದರು.

ಪಶುಪಾಲನಾ ಇಲಾಖೆಯ ಉಪ­ನಿರ್ದೇಶಕ ಡಾ.ಬಿ.ಎನ್‍.ಶಿವರಾಂ, ಕಾಲು­ಬಾಯಿ ಜ್ವರ ನಿಯಂತ್ರಣ ನೋಡಲ್‍ ಅಧಿಕಾರಿ ಡಾ.ರಘು­ರಾಮೇ­ಗೌಡ, ಪಶುವೈದ್ಯರಾದ ಡಾ.ಅಫ್ಜಲ್‍ ಪಾಷಾ  ಪಾಲ್‍ಗೊಂಡಿದ್ದರು.

ನಗರದಲ್ಲೇ ಹೆಚ್ಚು ಸಾವು
ಜಿಲ್ಲೆಯಲ್ಲಿ ಕಾಲು ಬಾಯಿ ಜ್ವರದ ಸೋಂಕು ತಗುಲಿರುವ ಮತ್ತು ಅದರಿಂದ ಸಾವಿಗೀಡಾಗಿರುವ ಹಸುಗಳ -ಅಂಕಿ ಅಂಶದ ಬಗ್ಗೆ ಪಶುಪಾಲನಾ ಇಲಾಖೆಯಲ್ಲಿ ಸ್ಪಷ್ಟ ಮಾಹಿತಿಯೇ ಇಲ್ಲದಿರುವುದು ಅಧಿಕಾರಿಗಳ ಭೇಟಿಯ ಸಂದರ್ಭದಲ್ಲಿ ಬೆಳಕಿಗೆ ಬಂತು. ಆದರೆ ಹಸುಗಳ ಸಾವು ನಗರದಲ್ಲೇ ಹೆಚ್ಚು ನಡೆದಿರುವುದು ಗಮನಾರ್ಹ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಜಿಲ್ಲೆಗೆ ಭೇಟಿ ನೀಡಿದ್ದ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ.ನಾಗರಾಜಶೆಟ್ಟಿ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರ ನೀಡಲು ಸಾಧ್ಯವಾಗದೇ, ಉಪನಿರ್ದೇಶಕರನ್ನು ಕೇಳಿ ಎಂದರು. ಅವರ ಬಳಿಯೂ ಮಾಹಿತಿ ಲಭ್ಯವಿರಲಿಲ್ಲ.

ನಂತರ, ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ಕಳೆದ ತಿಂಗಳು 19 ಹಸುಗಳು, ಕೋಲಾರ  ತಾಲ್ಲೂಕಿನ ಬೀಚಗೊಂಡನಹಳ್ಳಿಯಲ್ಲಿ 5, ವಾನರಾಶಿಯಲ್ಲಿ 7, ಗದ್ದೆಕಣ್ಣೂರಿನಲ್ಲಿ 8, ಕೋಲಾರ ನಗರದಲ್ಲಿ 29 ಹಸುಗಳು ಸೇರಿ 68 ಹಸುಗಳು ಸಾವಿಗೀಡಾಗಿವೆ ಎಂದು ನೆನಪಿನ ಆಧಾರದಲ್ಲಿ ಮಾಹಿತಿ ನೀಡಿದರು.

ನಗರದ ಕುರುಬರ ಪೇಟೆಯ ನಿವಾಸಿಗಳಾದ ಶ್ರೀನಿವಾಸ್‍ ಎಂಬುವವರ 3, ಕೃಷ್ಣಪ್ಪನವರ 5, ವೆಂಕಟೇಶಪ್ಪ, ಚಲಪತಿ ಎಂಬುವವರ ತಲಾ 1, ಸುವರ್ಣಮ್ಮ  ಎಂಬುವವರ 2, ಮುನಿಯಪ್ಪ  ಎಂಬುವವರ 4 ಹಸುಗಳು ಸಾವಿಗೀಡಾಗಿವೆ ಎಂದು ಮಾಹಿತಿ ನೀಡಿದರು.

ಲಸಿಕೆ ಹಾಕಿಸಲು ನಿರ್ಲಕ್ಷ್ಯ: ಭಿನ್ನಾಭಿಪ್ರಾಯ
ರಾಸುಗಳನ್ನು ಸಾಕುವವರು ವರ್ಷಕ್ಕೆ ಎರಡು ಬಾರಿ ಇಲಾಖೆಯ ವತಿಯಿಂದ ನೀಡಲಾಗುವ ಲಸಿಕೆಗಳನ್ನು ಹಾಕಿಸಲು ಹಿಂಜರಿಯುತ್ತಿರುವುದ ಸಾವಿನ ಸಂಖೆ್ಯ ಹೆಚ್ಚಾಗುತ್ತಿರಲು ಕಾರಣ ಎಂದು ಇಲಾಖೆಯ ಉಪನಿರ್ದೇಶಕರು, ಜ್ವರ ನಿಯಂತ್ರಣ ನೋಡಲ್‍ ಅಧಿಕಾರಿಗಳು ಹೇಳುತ್ತಾರೆ.

ಆದರೆ, ಲಸಿಕೆ ಹಾಕಿಸುವಲ್ಲಿ ಅಧಿಕಾರಿ ಮತ್ತು ಸಿಬ್ಬಂದಿ ಜವಾಬ್ದಾರಿಯಿಂದ ಗಂಭೀರ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲವೆಂದು ಇದೇ ಇಲಾಖೆಯ ಕೆಲವು ವೈದ್ಯರು, ಅಧಿಕಾರಿಗಳು ಆರೋಪಿಸುತ್ತಾರೆ.

ಮಾಲೂರು ತಾಲ್ಲೂಕಿನ ರಾಜೇನಹಳ್ಳಿಯಲ್ಲಿ ಕಳೆದ ಆಗಸ್ಟ್ ನಲ್ಲಿ 19 ಹಸುಗಳು ಸಾವಿಗೀಡಾದಾಗಲೇ ಅಧಿಕಾರಿಗಳೂ ಗಂಭೀರ ಕ್ರಮ ಕೈಗೊಂಡಿದ್ದರೆ ಈ ವೇಳೆ ಇಂಥ ಸನ್ನಿವೇಶ ಇರುತ್ತಿರಲಿಲ್ಲ. ಆದರೆ ಈಗ ಹಸುಗಳು ಹುಳುಗಳಂತೆ ಸಾಯುತ್ತಿವೆ ಎನ್ನುತ್ತಾರೆ ಪಶುವೈದ್ಯರೊಬ್ಬರು.

ಕೆರೆಗಳಲ್ಲಿ ಕೊಳೆತ ಹಸುಗಳು
ಸಾವಿಗೀಡಾದ ಹಸುಗಳನ್ನು ಪಾಲಕರು ನಗರದ ಕೋಲಾರಮ್ಮ ಕೆರೆ ಮತ್ತು ಕೋಡಿಕಣ್ಣೂರು ಕೆರೆಯಲ್ಲಿ ಹಾಕುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇದೆ. ಹೀಗಾಗಿ ಅವುಗಳನ್ನು ಮಣ್ಣಿನಲ್ಲಿ ಹೂಳಲು ವ್ಯವಸ್ಥೆ ಮಾಡಬೇಕು ಎಂದು ಕೋರಿ ಇಲಾಖೆಯು ಸೆ. 6ರಂದು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿದೆ. ಎರಡೂ ಕೆರೆಗಳಲ್ಲಿ ಹಲವು ಹಸುಗಳ ಶವಗಳನ್ನು ಒಂದೇ ಕಡೆ ಹಾಕುತ್ತಿರುವುದರಿಂದ ಸುತ್ತಮುತ್ತ ಪರಿಸರ ಮಲಿನಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT