ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗಭದ್ರೆಯಲ್ಲಿ ಪ್ರವಾಹ: ಸಂಪರ್ಕ ಕಡಿತ

Last Updated 4 ಸೆಪ್ಟೆಂಬರ್ 2011, 10:10 IST
ಅಕ್ಷರ ಗಾತ್ರ

ಹರಪನಹಳ್ಳಿ: ಮಲೆನಾಡಿನ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭದ್ರಾ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಬಿಟ್ಟಿರುವುದರಿಂದ ನದಿಯಲ್ಲಿ ಪ್ರವಾಹ ಉಂಟಾಗಿದ್ದು, ತಾಲ್ಲೂಕಿನ ನಾಲ್ಕು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿಬಿಟ್ಟಿರುವುದರಿಂದ ನದಿ ಉಕ್ಕಿ ಭೋರ್ಗರೆಯುತ್ತಿದೆ. ಶುಕ್ರವಾರ ಸಂಜೆಯಿಂದಲೇ ನದಿಪಾತ್ರದ ಕೆಲ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ನದಿಪಾತ್ರದ ಹಲುವಾಗಲು- ಗರ್ಭಗುಡಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆ ನದಿಯ ನೀರು ಹರಡಿಕೊಂಡಿದೆ.

ಜತೆಗೆ, ನಿಟ್ಟೂರು-ನಂದ್ಯಾಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಮಧ್ಯೆಯೂ ನದಿಯ ನೀರು ಚಾಚಿಕೊಂಡಿರುವುದರಿಂದ ನಾಲ್ಕು ಗ್ರಾಮಗಳ ಸಂಪರ್ಕ ಕಡಿತಗೊಂಡಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಗರ್ಭಗುಡಿ ಗ್ರಾಮದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಪರ್ಕ ಕಡಿತಗೊಂಡಿರುವ ಹಿನ್ನೆಲೆಯಲ್ಲಿ ಹತ್ತಾರು ಕಿ.ಮೀ. ಸುತ್ತಿ ಮನೆ ತಲುಪಿದ್ದಾರೆ.

ಶನಿವಾರವೂ ನೀರಿನ ಹರಿವಿನ ಪ್ರಮಾಣದಲ್ಲಿ ಹೆಚ್ಚಳ ಮುಂದುವರಿದರೆ, ನದಿಪಾತ್ರದ ಹಳ್ಳಿಗಳಾದ ಹಲುವಾಗಲು, ನಿಟ್ಟೂರು, ನಂದ್ಯಾಲ, ಕಡತಿ ಹಾಗೂ ವಟ್ಲಹಳ್ಳಿ ಸೇರಿದಂತೆ ಕೆಲ ಗ್ರಾಮಗಳ ಮನೆಗಳಿಗೆ ನೀರು ನುಗ್ಗುವ ಭೀತಿ ಎದುರಾಗಿದೆ.

ತಾವರಗುಂದಿ, ನಿಟ್ಟೂರು, ಕಡತಿ, ವಟ್ಲಹಳ್ಳಿ, ಹಲುವಾಗಲು, ಗರ್ಭಗುಡಿ ಸೇರಿದಂತೆ ನದಿಪಾತ್ರದ ಜಮೀನುಗಳಲ್ಲಿ ನಾಟಿ ಮಾಡಿದ್ದ ನೂರಾರು ಎಕರೆಯಲ್ಲಿನ ಬತ್ತ ಜಲಾವೃತಗೊಂಡಿದೆ.

ಪರಿಶೀಲನೆ

ಶನಿವಾರ ತಹಶೀಲ್ದಾರ್ ಡಾ.ವಿ. ವೆಂಕಟೇಶ್‌ಮೂರ್ತಿ ಹಾಗೂ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಆರ್. ತಿಪ್ಪೇಸ್ವಾಮಿ ಹಾಗೂ ಅಧಿಕಾರಿಗಳ ತಂಡ ಶನಿವಾರ ನದಿಪಾತ್ರದ ಹಳ್ಳಿಗಳಿಗೆ ಭೇಟಿ ನೀಡಿದ್ದು, ಪರಿಸ್ಥಿತಿ ಕುರಿತು ಪರಿಶೀಲನೆ ನಡೆಸಿದರು. 

ನಡೆಯದ ಪರಿಶೀಲನೆ
ಮಲೇಬೆನ್ನೂರು:
ಹೋಬಳಿ ವ್ಯಾಪ್ತಿಯಲ್ಲಿ ಹರಿಯುತ್ತಿರುವ ತುಂಗಭದ್ರಾ ನದಿ ಪ್ರವಾಹದಲ್ಲಿ ಶನಿವಾರ ಒಂದು ಅಡಿ ಇಳಿಮುಖ ಆಗಿದ್ದು, ಜಲಾವೃತವಾಗಿದ್ದ ಬತ್ತದ ಗದ್ದೆ ತೋಟಗಳಲ್ಲಿ ನೀರು ಇಳಿಯತೊಡಗಿದೆ.
ನದಿದಂಡೆಯ ಗೋವಿನಹಾಳು, ನಂದಿಗುಡಿ, ಕೆಲವು ಜಮೀನುಗಳಲ್ಲಿ ಕೆಸರು ತುಂಬಿದೆ.

ಉಕ್ಕಡಗಾತ್ರಿಯ ನದಿಪಾತ್ರದ ಸೊಪ್ಪಿನ ತೋಟಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಪಂಪ್‌ಮನೆ ಮುಳುಗಿವೆ. ಪಂಪ್‌ಸೆಟ್. ಕೇಬಲ್,ಪೈಪ್‌ಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಈವರೆಗೂ ನಷ್ಟದ ಅಂದಾಜು ಹಾಗೂ ಪರಿಶೀಲನೆ ಮಾಡಲು ಹಿರಿಯ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.

ತಹಶೀಲ್ದಾರ್ ಹೇಳಿಕೆ:  ಕಳೆದ ಬಾರಿಯಂತೆ ತಂಗಭದ್ರಾ ನದಿ ಪ್ರವಾಹದ ನೀರು ನುಗ್ಗಿದೆ ಎಂದು ತಿಳಿದು ಬಂದಿದೆ. ಬೆಳೆಹಾನಿ ಪರಿಶೀಲನೆ ನಡೆಸಲು ಭಾನುವಾರ ನದಿಪಾತ್ರದ ಗ್ರಾಮಗಳಿಗೆ ಭೇಟಿ ನೀಡುವುದಾಗಿ ತಹಶೀಲ್ದಾರ್ ನಜ್ಮಾ ತಿಳಿಸಿದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT