ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂತುರು ಮಳೆಯಲಿ ಹೂಗಳ ಜೊತೆಯಲಿ...

Last Updated 20 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಶನಿವಾರ ದಿನವಿಡೀ ಸುರಿದ ತುಂತುರು ಮಳೆಯ ನಡುವೆಯೇ ಸಾರ್ವಜನಿಕರು ಹಾಗೂ ಪ್ರವಾಸಿಗರು ಫಲಪುಷ್ಪ ಪ್ರದರ್ಶನ  ಮತ್ತು ಆಹಾರ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಅರಮನೆ ಪಕ್ಕದ ಕರ್ಜನ್ ಉದ್ಯಾನದಲ್ಲಿ ಏರ್ಪಡಿಸಿರುವ ಫಲಪುಷ್ಪ ಪ್ರದರ್ಶನ ನೋಡಲು ಮಹಿಳೆಯರು, ಮಕ್ಕಳು ಗುಂಪು ಗುಂಪಾಗಿ ಹರಿದು ಬಂದರು. ಮಳೆಯಿಂದಾಗಿ ಪುಷ್ಪಗಳು ಅರಳಿ ನಿಂತು ಎಲ್ಲರನ್ನೂ ಸ್ವಾಗತಿಸಿದವು. ಹೂಗಳ ಮೇಲಿನ ನೀರಹನಿಯ ಚಿತ್ರವನ್ನು ಪ್ರವಾಸಿಗರು ಕ್ಯಾಮೆರಾದಲ್ಲಿ ಸೆರೆ ಹಿಡಿದು ಖುಷಿ ಪಟ್ಟರು. ಮಕ್ಕಳು, ಮಹಿಳೆಯರು ಕೊಡೆ ಹಿಡಿದು, ಛಾಯಾಚಿತ್ರಕ್ಕೆ ಫೋಸು ನೀಡಿ ಸಂಭ್ರಮಿಸಿದರು.

ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿಯ ಪ್ರಮುಖ ಆಕರ್ಷಣೆ ಆನೆಗಾಡಿ. ಒಂದು ಲಕ್ಷ ಗುಲಾಬಿ ಹೂವಿನಲ್ಲಿ ತಯಾರಿಸಿರುವ ಆನೆಗಾಡಿ ಮುಂದೆಯೂ ಜನರ ಸಂಖ್ಯೆ ಹೆಚ್ಚಾಗಿತ್ತು. ಕಲ್ಲಂಗಡಿ ಹಣ್ಣಿನಲ್ಲಿ ಕೆತ್ತಿರುವ ಸ್ವಾಮಿ ವಿವೇಕಾನಂದ, ಕುವೆಂಪು, ಮಹಾತ್ಮ ಗಾಂಧಿ, ನವಿಲು, ಆನೆಯ ಕಲಾಕೃತಿಗಳನ್ನು ಕಣ್ತುಂಬಿಕೊಂಡರು.

ಕಾಡಾ ಕಚೇರಿ ಆವರಣದಲ್ಲಿರುವ ಆಹಾರ ಮೇಳದಲ್ಲೂ ಜನ ಜಂಗುಳಿ ಹೆಚ್ಚಾಗಿತ್ತು. ಬಗೆ ಬಗೆಯ ದೋಸೆ, ರೊಟ್ಟಿ, ಎಣಗಾಯಿ ಪಲ್ಯ, ಚಿಕನ್, ಮಟನ್ ರುಚಿ ಸವಿಯಲು ಪ್ರವಾಸಿಗರು ಮಳೆಯನ್ನೂ ಲೆಕ್ಕಿಸದೇ ಆಗಮಿಸಿದ್ದರು. ಅರಮನೆ ಸುತ್ತಮುತ್ತ, ದಸರಾ ವಸ್ತು ಪ್ರದರ್ಶನ ಆವರಣದಲ್ಲೂ ಜನದಟ್ಟಣೆ ಕಂಡು ಬಂದಿತು. ಪ್ರವಾಸಿಗರು ಕುದುರೆಗಾಡಿ, ಸಾರೋಟಿನಲ್ಲಿ ಕುಳಿತು ದಸರೆಯ ಅಂದವನ್ನು ಸವಿದರು.

ಮಧ್ಯಾಹ್ನ 2 ಗಂಟೆಗೆ ಮಳೆ ಸ್ವಲ್ಪ ಜೋರಾಗಿಯೇ ಸುರಿಯಿತು. ಇದರಿಂದಾಗಿ ಕೆಲಹೊತ್ತು ಸಂಚಾರ ದಟ್ಟಣೆ ಕಡಿಮೆ ಆಗಿತ್ತು. ಸಂಜೆ ಆಗುತ್ತಿದ್ದಂತೆಯೇ ಮಳೆ ವಿರಾಮ ನೀಡಿತು. ಹೀಗಾಗಿ, ಸಂಜೆವರೆಗೂ ಮನೆಯಲ್ಲೇ ಇದ್ದ ಸ್ಥಳೀಯರು ಮಕ್ಕಳು, ಕುಟುಂಬದ ಸದಸ್ಯರೊಂದಿಗೆ ಆಹಾರ ಮೇಳದತ್ತ ಹೆಜ್ಜೆ ಹಾಕಿದರು. ನಗರದ ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ವಿದ್ಯುತ್ ದೀಪಾಲಂಕಾರ ನೋಡಿ ಖುಷಿ ಅನುಭವಿಸಿದರು.

ನಗರದ ವಿವಿಧೆಡೆ ಪ್ರವಾಸೋದ್ಯಮ ಇಲಾಖೆ ಆರಂಭಿಸಿರುವ ಪ್ರವಾಸಿ ಮಾಹಿತಿ ಕೇಂದ್ರಗಳಲ್ಲಿ ಪ್ರವಾಸಿಗರು ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT