ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿ ಹರಿಯುತ್ತಿರುವ ಮಲಪ್ರಭೆ

Last Updated 3 ಜೂನ್ 2013, 13:27 IST
ಅಕ್ಷರ ಗಾತ್ರ

ಕೂಡಲಸಂಗಮ: ಎರಡು ದಿನಗಳಿಂದ ಬೀಳುತ್ತಿರುವ ಮಳೆ ಹಾಗೂ ಧಾರವಾಡ ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ಮಲಪ್ರಭಾ ನದಿ ತುಂಬಿ ಹರಿಯುತ್ತಿದೆ.

ಮೂರು ತಿಂಗಳುಗಳಿಂದ ಬರಿದಾದ ಮಲಪ್ರಭೆ ಇಂದು ತುಂಬಿ ಹರಿಯುತ್ತಿರುವುದರಿಂದ ನದಿಯ ದಡದ ರೈತರು ಸಂತಸದಲ್ಲಿ ಇರುವರು. ಜೊತೆಗೆ ಕೂಡಲಸಂಗಮ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶುಕ್ರವಾರ ಹಾಗೂ ಶನಿವಾರ ರಾತ್ರಿ ಬಿದ್ದ ಮಳೆಯಿಂದ ಕೂಡಲಸಂಗಮ, ಬಸನಾಳಕೊಪ್ಪ, ಇದ್ದಲಗಿ, ಅಡವಿಹಾಳ, ಬೆಳಗಲ್ಲ, ಗಂಜಿಹಾಳ, ಪಾಪಥನಾಳ ಮುಂತಾದ ಗ್ರಾಮದ ರೈತರು ಭರದಿಂದ ಬಿತ್ತನೆಯ ಕಾರ್ಯ ಪ್ರಾರಂಭ ಮಾಡಿದ್ದಾರೆ.

ಗಾಳಿಗೆ ಹಾರಿದ ಪತ್ರಾಸಗಳು
ಎರಡು ದಿನಗಳಿಂದ ಸುರಿದ ಮಳೆಗೆ ಹಾಗೂ ಬಿರುಗಾಳಿಗೆ ಮಲಪ್ರಭಾ ಹಾಗೂ ಕೃಷ್ಣಾ ನದಿ ದಡದ ನಿರಾಶ್ರಿತರ ಶೆಡ್ಡಿನಲ್ಲಿ ವಾಸವಾಗಿರುವ ಸಂತ್ರಸ್ತರು ಹಲವಾರು ಸಮಸ್ಯೆಗಳ ಮಧ್ಯೆ ಅತಂತ್ರ ಜೀವನ ಸಾಗಿಸುತ್ತಿರುವರು.

ಮಲಪ್ರಭಾ ನದಿ ದಡದ ಬಿಸನಾಳಕೊಪ್ಪದಲ್ಲಿ ಸುರಿದ ಬಾರಿ ಮಳೆಗೆ ಸಂತ್ರಸ್ತರು ವಾಸವಾಗಿದ್ದ ಎಲ್ಲ ಶೆಡ್ಡುಗಳು ಸೋರಿ ಜನರು ಮಳೆ ನೀರಿನಲ್ಲಿಯೇ ರಾತ್ರಿ ಇಡೀ ಕಳೆದ ಘಟನೆ ಶನಿವಾರ ರಾತ್ರಿ ನಡೆದಿದೆ. ಮಳೆಯ ಜೊತೆಗೆ ಅಧಿಕ ಪ್ರಮಾಣದ ಬಿರುಗಾಳಿ ಬಿಟ್ಟಿದ್ದರಿಂದ ಬಿಸನಾಳಕೊಪ್ಪದ ಪ್ರಾಥಮಿಕ ಶಾಲೆಯ, ಸಂತ್ರಸ್ತರು ವಾಸವಾಗಿದ್ದ ತಗಡಿನ ಶೆಡ್ಡಿನ ಪತ್ರಾಸಗಳು ಕಿತ್ತು ಹೋಗಿವೆ. ಆದರೆ ಇವುಗಳ ದುರಸ್ತಿ ಮಾಡಿಕೊಡಲು ಇಲಾಖೆಯ ಯಾವ ಅಧಿಕಾರಿಗಳೂ ಬರುತ್ತಿಲ್ಲ ಎಂದು ಗ್ರಾಮದ ರಾಚಪ್ಪ ಬಾವಿಕಟ್ಟಿ ಹೇಳುತ್ತಾರೆ.

ಕೃಷ್ಣಾ ನದಿ ದಡದ ತುರಡಗಿ ಹಾಗೂ ಕಟಗೂರ ಗ್ರಾಮದ ನಿರಾಶ್ರಿತ ಶೆಡ್ಡಿನಲ್ಲಿ ಹಾಗೂ ಕಜಗಲ್ಲ, ಕೆಂಗಲ್ಲ, ವರಗೋಡದಿನ್ನಿ, ಹೂವನೂರ ನಿರಾಶ್ರಿತ ಶೆಡ್ಡಿನಲ್ಲಿಯೂ ಇದೇ ರೀತಿಯ ಸಮಸ್ಯೆಗಳಿವೆ. ಈ ಸಂತ್ರಸ್ತರು 8 ವರ್ಷದಿಂದ ಈ ಶೆಡ್ಡಿನಲ್ಲಿಯೇ ಜೀವನ ಸಾಗಿಸುತ್ತಿರುವರು.

`ಸರಕಾರ ಬಿಸನಾಳ ಕೊಪ್ಪದಲ್ಲಿ 2007 ರಲ್ಲಿ ಶೆಡ್ಡುಗಳನ್ನು ನಿರ್ಮಿಸಿದೆ, ತುರಡಗಿ, ಕಟಗೂರದಲ್ಲಿ 2005ರಲ್ಲಿ ಶೆಡ್ಡನ್ನು ನಿರ್ಮಿಸಿಕೊಟ್ಟಿದೆ. ಆದರೆ ತಾಲ್ಲೂಕು ಆಡಳಿತ, ಜಿಲ್ಲಾ ಆಡಳಿತ ಅವುಗಳ ನಿರ್ವಹಣೆ ಸಮರ್ಪಕವಾದ ರೀತಿಯಲ್ಲಿ ಮಾಡದೆ ಇರುವುದರಿಂದ ಎಲ್ಲ ಶೆಡ್ಡಿನ ಕಂಬಗಳು ಗೆದ್ದಲು ಹಿಡಿದಿವೆ. ಇದರಿಂದ ಸ್ವಲ್ಪ ಗಾಳಿ ಬಿಟ್ಟರೂ ಕಿತ್ತು ಹೋಗುತ್ತಿವೆ. ಆದ್ದರಿಂದ ಕೂಡಲೇ ಜಿಲ್ಲಾ ಆಡಳಿತ , ತಾಲ್ಲೂಕು ಆಡಳಿತ ತಗಡಿನ ಶೆಡ್ಡುಗಳನ್ನು ದುರಸ್ತಿ ಮಾಡಿಸುವ ಮೂಲಕ ತಾತ್ಕಾಲಿಕ ಪರಿಹಾರ ನೀಡಬೇಕು.

ಬಿಸನಾಳ ಕೊಪ್ಪದಲ್ಲಿ ಶಾಲೆಗೆ ಇರುವ ಎರಡು ಶೆಡ್ಡಿನ ರೂಮ್‌ಗಳ ಪತ್ರಾಸಗಳು ಕಿತ್ತಿರುವುದರಿಂದ  ಮಕ್ಕಳು ಶಾಲೆಗೆ ಹೋಗಲು ಭಯ ಪಡುತ್ತಿವೆ. ನಾಳೆಯಿಂದ ಮಕ್ಕಳನ್ನು ಶಾಲೆಗೆ ಎಲ್ಲಿಗೆ ಕಳುಹಿಸಬೇಕು?' ಎಂದು ಬಿಸನಾಳ ಕೊಪ್ಪದ ಗುಂಡಪ್ಪ ಕಜಗಲ್ಲ ನೋವು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT