ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಚರಂಡಿ: ರಸ್ತೆಯಲ್ಲಿ ಕಸ

Last Updated 19 ಜೂನ್ 2011, 10:15 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಿಯಮಿತವಾಗಿ ಸ್ವಚ್ಛತಾ ಕಾರ್ಯ ನಡೆಯದೆ ಇಲ್ಲಿನ ಚರಂಡಿಗಳು ನೀರಿನಿಂದ ತುಂಬಿಕೊಂಡಿದ್ದು ರಸ್ತೆಗಳಲ್ಲೆಲ್ಲ ಕಸ ಹರಡಿದೆ. ಈ ಬಗ್ಗೆ ನಾಗರಿಕರು ಸಂಬಂಧಿತರಿಗೆ ಅನೇಕ ಸಲ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಮುಖ್ಯರಸ್ತೆಯಲ್ಲಿನ ಹಾಗೂ ಹೌಸಿಂಗ್‌ಬೋರ್ಡ್ ಕಾಲೊನಿ, ಜೈಶಂಕರ ಕಾಲೊನಿ, ಕಾಳಿಗಲ್ಲಿಯಲ್ಲಿನ ಚರಂಡಿಗಳಲ್ಲಿ ಕಸಕಡ್ಡಿ ಬಿದ್ದು ನೀರು ನಿಂತಲ್ಲಿಯೇ ನಿಂತಿದೆ. ಕೆಲವೆಡೆ ರಸ್ತೆ ಕಾಮಗಾರಿ ನಡೆದಿದ್ದರಿಂದ ನೀರು ಹರಿಯುವ ಸ್ಥಳದಲ್ಲಿ ಮಣ್ಣು ಬಿದ್ದಿದ್ದರೂ ಅದನ್ನು ತೆಗೆದಿಲ್ಲ. ಹೀಗಾಗಿ ಮಲೀನ ನೀರು ರಸ್ತೆಗಳಲ್ಲಿ ಹರಿಯುತ್ತಿದೆ. ಕೆಲ ದಿನಗಳಿಂದ ಕಸದ ತೊಟ್ಟಿಗಳನ್ನು ಖಾಲಿ ಮಾಡದ ಕಾರಣ ರಸ್ತೆಗಳಲ್ಲಿ ಕಸ ಬಿದ್ದಿದೆ.

ಜೈಶಂಕರ ಕಾಲೊನಿ ಮತ್ತು ಹೌಸಿಂಗ್‌ಬೋರ್ಡ್ ಕಾಲೊನಿಯ ನಿವಾಸಿಗಳಾದ ಶಾಮರಾವ ಸಿಂಗ್, ರೇವಣಸಿದ್ಧ ಏಕಲೂರ, ನಾಮದೇವರೆಡ್ಡಿ, ಶಂಕರರೆಡ್ಡಿ, ಬಾಲಾಜಿ ಮುಳೆ, ಅರುಣಕುಮಾರ ಜಮಾದಾರ ಅವರು ಚರಂಡಿ ಸ್ವಚ್ಛತೆಗೆ ಆಗ್ರಹಿಸಿ ನಗರಸಭೆಯವರಿಗೆ ಎರಡು ತಿಂಗಳಲ್ಲಿ ಮೂರು ಸಲ ಮನವಿಪತ್ರ ಸಲ್ಲಿಸಿದ್ದಾರೆ.

ಮುಖ್ಯ ರಸ್ತೆಯಲ್ಲಿನ ಹಾಗೂ ವಿಜಯನಗರ ಕಾಲೊನಿಯಲ್ಲಿನ ಚರಂಡಿ ತುಂಬಿಕೊಂಡು ದುರ್ನಾತ ಸೂಸುತ್ತಿದೆ ಮತ್ತು ಜನರು ಕಾಲುಜಾರಿ ಒಳಗೆ ಬೀಳುತ್ತಿದ್ದಾರೆ. ಆದ್ದರಿಂದ ಸ್ವಚ್ಛತಾ ಕಾರ್ಯ ಕೈಗೊಂಡು ಚರಂಡಿಗಳ ಮೇಲೆ ಹಾಸುಗಲ್ಲು ಹಾಕಬೇಕು ಎಂದು ರವಿ ಕೊಳಕೂರ, ಮಹಮ್ಮದ ಬಸೀರ್ ಹಾಗೂ ಇತರೆ ವ್ಯಾಪಾರಸ್ಥರು ಎರಡು ಸಲ ಮನವಿ ಕೊಟ್ಟಿದ್ದಾರೆ. ಆದರೂ ಇವರ ಗೋಳು ಯಾರೂ ಕೇಳಿಲ್ಲ.

ಮಳೆ ಬಂದಾಗ ಎಲ್ಲವೂ ತೊಳೆದುಕೊಂಡು ಹೋಗುತ್ತದೆ ಆದ್ದರಿಂದ ಚಿಂತಿಸಬೇಡಿ ಎಂದು ನಗರಸಭೆಯ ಅಧಿಕಾರಿಗಳು ಬೇಜವಾಬ್ದಾರಿತನದ ಮಾತುಗಳನ್ನಾಡುತ್ತಿದ್ದಾರೆ. ಹೆಚ್ಚಿನ ಮಳೆಯಾದರೆ ನೀರು ಸರಾಗವಾಗಿ ಸಾಗಲು ವ್ಯವಸ್ಥೆ ಇಲ್ಲದ್ದರಿಂದ ಅಲ್ಲಲ್ಲಿ ಹೊಂಡಗಳು ನಿರ್ಮಾಣವಾಗುತ್ತವೆ. ಆದ್ದರಿಂದ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಳಿಕೊಂಡರೆ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲವೂ ಒಮ್ಮೇಲೆ ಮಾಡಲಾಗುವುದಿಲ್ಲ ಎನ್ನುತ್ತಿದ್ದಾರೆ ಎಂದು ಹೌಸಿಂಗ್‌ಬೋರ್ಡ್ ಕಾಲೊನಿಯ ನಿವಾಸಿಗಳು ರೋಷ ವ್ಯಕ್ತಪಡಿಸಿದ್ದಾರೆ.

ನಾರಾಯಣಪುರ ಕ್ರಾಸ್‌ದಿಂದ ಬನಶಂಕರಿ ಓಣಿಗೆ ಹೋಗುವ ರಸ್ತೆ, ಕಾಳಿಗಲ್ಲಿಯಿಂದ ಬಸವೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆ, ಗಾಡಿವಾನಗಲ್ಲಿಯ ಅಂಗನವಾಡಿ ಕೇಂದ್ರದ ಎದುರು, ಚಮನ್ ಗಾರ್ಡನ್ ಮಳಿಗೆಗಳ ಹತ್ತಿರ, ಹೊಸಪೇಟ್ ಗಲ್ಲಿ, ಹಿರೇಮಠ ಕಾಲೊನಿ, ಈಶ್ವರನಗರ, ಗೋಸ್ವಾಮಿ ಗಲ್ಲಿ, ದೇಗಲೂರೆ ಗಲ್ಲಿಗಳಲ್ಲಿನ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿಯುತ್ತಿದೆ.

ರೇಣಾಗಲ್ಲಿ, ಕುಂಬಾರಪಾಳಿ ಗಲ್ಲಿ, ಬಸವೇಶ್ವರ ದೇವಸ್ಥಾನ ಸುತ್ತಲಿನ ಓಣಿಗಳಲ್ಲಿ, ರಾಜಕಮಲ್ ಹೋಟಲ್ ಕ್ರಾಸ್, ತಾಜ್ ಕಾಲೊನಿ, ಧರ್ಮಪ್ರಕಾಶ ಓಣಿಗಳಲ್ಲಿ ಕಸಕಡ್ಡಿ ಎಲ್ಲೆಡೆ ಹರಡಿದೆ. ಈ ಕಾರಣ ಎಲ್ಲೆಡೆ ದುರ್ಗಂಧ ಸೂಸುತ್ತಿದ್ದು ಸೊಳ್ಳೆಗಳ ಕಾಟ ಹೆಚ್ಚಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT