ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬುಜೀವನ ನಡೆಸಿದ ಹೋರಾಟಗಾರ

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಜೋಹಾನ್ಸ್‌ಬರ್ಗ್‌(ಪಿಟಿಐ): ದೀರ್ಘಕಾಲ ದಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನೆಲ್ಸನ್‌  ಮಂಡೇಲಾ ಅವರು ಇಲ್ಲಿನ ಉಪನಗರ ಹೂಟನ್‌ನ ತಮ್ಮ ನಿವಾಸದಲ್ಲಿ ನಿಧನರಾದರು. ಒಂದೊಮ್ಮೆ ಬಾಕ್ಸರ್‌ ಆಗಿದ್ದ, ಮಾಜಿ ವಕೀಲರೂ ಆದ ಈ ಮುತ್ಸದ್ದಿ ರಾಜಕೀಯ ಹೋರಾಟಗಾರ 95 ವರ್ಷಗಳ ತುಂಬುಜೀವನ ನಡೆಸಿದ್ದೂ ಒಂದು ಹಿರಿಮೆಯೇ.

1990ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಪುರಸ್ಕೃತರಾಗಿದ್ದ ಮಂಡೇಲಾ ಅವರಿಗೆ ಸೆಪ್ಟೆಂಬರ್‌ನಿಂದ ಈಚೆಗೆ ವೈದ್ಯರ ತಂಡವೊಂದು ಮನೆಯಲ್ಲೇ ಉಪಚಾರ ನೀಡುತ್ತಿತ್ತು. ಅದಕ್ಕೆ ಮುನ್ನ ಶ್ವಾಸಕೋಶ ತೊಂದರೆಯ ಚಿಕಿತ್ಸೆಗಾಗಿ ಮೂರು ತಿಂಗಳ ಕಾಲ ಪ್ರಿಟೋರಿಯಾದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ಅಗಲಿದ ಶಾಂತಿದೂತನ ಅಂತ್ಯಕ್ರಿಯೆ ಈಸ್ಟರ್ನ್‌ ಕೇಪ್‌ ಪ್ರಾಂತ್ಯದ ಕ್ವುನುವಿನಲ್ಲಿ ನಡೆಯಲಿದೆ. ಈಗಾಗಲೇ ಪಾರ್ಥಿವ ಶರೀರ ವನ್ನು ರಾಷ್ಟ್ರದ ರಾಜಧಾನಿ ಪ್ರಿಟೋರಿಯಾದ ಸೇನಾ ಆಸ್ಪತ್ರೆಗೆ ತರಲಾಗಿದ್ದು, 15ರವರೆಗೂ ಅಲ್ಲೇ ಇರಿಸಲಾಗುವುದು. ಅಂತ್ಯವಿಧಿ ಮುಗಿಯುವವರೆಗೆ ರಾಷ್ಟ್ರಧ್ವಜ ವನ್ನು ಅರ್ಧಮಟ್ಟದಲ್ಲಿ ಹಾರಿಸಲು ಆದೇಶಿಸ ಲಾಗಿದೆ. ಮಂಡೇಲಾ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ದಕ್ಷಿಣ ಆಫ್ರಿಕಾ ಜನತೆ ತಂಡೋಪತಂಡವಾಗಿ ಬಂದು ಅಗಲಿದ ನಾಯಕನಿಗೆ ಸಂತಾಪ ಸಲ್ಲಿಸುತ್ತಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ವರ್ಣ ತಾರತಮ್ಯ ಕಿತ್ತೆಸೆಯಲು ಹೋರಾಡಿದ 10 ಪ್ರಮುಖ ನಾಯಕರ ವಿರುದ್ಧ ನಡೆದ ‘ರಿವೋನಿಯಾ ವಿಚಾರಣೆ’ಯಲ್ಲಿ ಶಿಕ್ಷೆಗೆ ಗುರಿಯಾಗಿ 27 ವರ್ಷಗಳನ್ನು ಸೆರೆಮನೆಯಲ್ಲಿ ಕಳೆದಿದ್ದ ಮಂಡೇಲಾ ಸ್ವಾತಂತ್ರ್ಯ, ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಪ್ರೇರಕ ಶಕ್ತಿಯಾಗಿದ್ದರು. ಜೈಲಿನಿಂದ ಬಿಡುಗಡೆಯಾದ ನಂತರವೂ ರಾಜಕೀಯ ಹೋರಾಟ ಮುಂದುವರಿಸಿದ್ದ ಅವರು, ರಾಷ್ಟ್ರದಲ್ಲಿ 1994ರಲ್ಲಿ ಪ್ರಪ್ರಥಮ ಬಾರಿಗೆ ನಡೆದ ಸರ್ವ ಜನಾಂಗೀಯ ಪ್ರಜಾತಾಂತ್ರಿಕ ಚುನಾವಣೆಯಲ್ಲಿ ರಾಷ್ಟ್ರಾಧ್ಯಕ್ಷರಾಗಿ ಆಯ್ಕೆಯಾಗಿ 1999ರವರೆಗೆ ಅಧಿಕಾರದಲ್ಲಿದ್ದರು.

ತಮ್ಮ ಅಧ್ಯಕ್ಷ ಅವಧಿಯಲ್ಲಿ ಬುಡಕಟ್ಟು ರಾಜಕೀಯದಿಂದ ಧ್ರುವೀಕರಣಗೊಂಡಿದ್ದ ರಾಷ್ಟ್ರವನ್ನು ಒಗ್ಗೂಡಿಸಲು ಸಾಕಷ್ಟು ಶ್ರಮಿಸಿದರು. ಶ್ವೇತವರ್ಣೀಯರ ಬಗ್ಗೆ ಕಪ್ಪು ವರ್ಣೀಯರಿಗೆ ಇದ್ದ ಕಹಿಭಾವನೆ ಹೋಗಲಾಡಿಸಲು ಹಾಗೂ ಶ್ವೇತವರ್ಣೀಯರಿಗೆ, ಅವರ ವಿರುದ್ಧ  ಯಾವುದೇ ಸೇಡಿನ ಪ್ರತೀಕಾರಕ್ಕೆ ಆಸ್ಪದ ಮಾಡಿಕೊಡುವುದಿಲ್ಲ ಎಂಬುದನ್ನು ಮನದಟ್ಟು ಮಾಡಿಕೊಡಲು ತಮ್ಮ ಶಕ್ತಿ ಸಾಮರ್ಥ್ಯವನ್ನೆಲ್ಲಾ ವಿನಿಯೋಗಿಸಿದರು. ಇದು ಎಲ್ಲರನ್ನೂ ಒಟ್ಟಿಗೆ ಕೊಂಡೊ­ಯ್ಯುವ ಅವರ ನಾಯಕತ್ವ ಗುಣಕ್ಕೆ ಸಾಕ್ಷಿಯಾಗಿತ್ತು.

ತುಂಬು ವೃದ್ಧಾಪ್ಯದ ದಿನಗಳಲ್ಲಿ ಶ್ವಾಸಕೋಶ ಸಂಕುಚನ ಹಾಗೂ ಇನ್ನಿತರ ಆರೋಗ್ಯ ತೊಂದರೆಗಳಿಂದ ಬಳಲುತ್ತಿದ್ದ ಮಂಡೇಲಾ ಎರಡು ವರ್ಷಗಳಿಂದ ಈಚೆಗೆ ಪದೇಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದರು. ರಾಷ್ಟ್ರ ಮಾತ್ರವಲ್ಲದೆ ಇಡೀ ಜಗತ್ತಿನ ಅಂತಃಸಾಕ್ಷಿಯ ಪ್ರತೀಕವಾಗಿದ್ದ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಅಪರೂಪವಾಗಿತ್ತು. ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ದಕ್ಷಿಣ ಆಫ್ರಿಕಾ ಸರ್ಕಾರವು  http://www.mandela.gov.za www.mandela.gov.za. ಅಂತರ್ಜಾಲ ತಾಣ ರೂಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT