ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಕ್ಕು ಹಿಡಿದ ಜಲಶುದ್ಧೀಕರಣ ಘಟಕ

Last Updated 5 ಅಕ್ಟೋಬರ್ 2012, 4:25 IST
ಅಕ್ಷರ ಗಾತ್ರ

ಬಂಗಾರಪೇಟೆ: ಗ್ರಾಮಗಳಲ್ಲಿ ಫ್ಲೋರೈಡ್‌ಮುಕ್ತ ಕುಡಿಯುವ ನೀರು ಒದಗಿಸಲು ಕೇಂದ್ರ ಸರ್ಕಾರದ ಅನುದಾನದಲ್ಲಿ ಅಳವಡಿಸಿದ್ದ ನೀರು ಶುದ್ಧೀಕರಣ ಯಂತ್ರಗಳು ಸೂಕ್ತ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ಹಾಳಾಗಿರುವುದು ತಾಲ್ಲೂಕಿನ ಗಡಿ ಭಾಗದ ದೋಣಿಮಡುಗು ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಕಂಡು ಬಂದಿದೆ.

ತಾಲ್ಲೂಕಿನಲ್ಲಿ ಸಾವಿರ ಅಡಿಗಳಿಗೂ ಹೆಚ್ಚು ಆಳದ ಕೊಳವೆ ಬಾವಿ ಕೊರೆಸಿ ನೀರು ಸರಬರಾಜು ಮಾಡಲಾಗುತ್ತಿದೆ. ಈ ನೀರಿನಿಂದ ಮೂಳೆ ಸವೆತ, ಹಲ್ಲು ಸವೆತ ಸೇರಿದಂತೆ ಫ್ಲೋರೈಡ್‌ನಿಂದ ಉಂಟಾಗುವ ಕಾಯಿಲೆಗಳಿಗೆ ಜನ ದಿನನಿತ್ಯ ಬಲಿಯಾಗುತ್ತಲೇ ಇದ್ದಾರೆ.

ತಾಲೂಕಿನ ಗಡಿಭಾಗದ ಹಳ್ಳಿಗಳಲ್ಲಿ ಕೊರೆಯಲಾದ ಕೊಳವೆ ಬಾವಿಯ ನೀರಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಫ್ಲೋರೈಡ್ ಅಂಶ ಇರುವುದನ್ನು ಪತ್ತೆ ಹಚ್ಚಲಾಗಿದ್ದು, ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ದೋಣಿಮಡುಗು ಪಂಚಾಯಿತಿ ಕೇಂದ್ರದಲ್ಲಿ ನೀರು ಶುದ್ಧೀಕರಣ ಘಟಕ ಅಳವಡಿಸಲಾಗಿದೆ.

ಈ ಘಟಕ ಅಳವಡಿಸಿ 8 ವರ್ಷಗಳಿಗಿಂತ ಹೆಚ್ಚು ಸಮಯವಾಗಿದೆ. 2-3 ವರ್ಷಗಳ ಕಾಲ ಇದು ಸುವ್ಯವಸ್ಥೆಯಲ್ಲಿತ್ತು. ಆದರೆ ಕಳೆದ ಐದು ವರ್ಷಗಳಿಂದ ಮಳೆ ಬಿಸಿಲಿಗೆ ಸಿಲುಕಿ ಅವಸಾನದ ಅಂಚಿಗೆ ತಲುಪಿದೆ. ಘಟಕ ಇದ್ದರೂ ಶುದ್ದೀಕರಿಸಿದ ನೀರನ್ನು ಕುಡಿಯುವ ಭಾಗ್ಯ ಈ ಗ್ರಾಮದ ಜನರಿಗೆ ಸಿಗುತ್ತಿಲ್ಲ.

ವಿಧಿ ಇಲ್ಲದೆ ಫ್ಲೋರೈಡ್ ಇರುವ ನೀರನ್ನೇ ಕುಡಿಯುವ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಈ ಯಂತ್ರವನ್ನು ದುರಸ್ತಿಗೊಳಿಸುವಂತೆ ಜನಪ್ರತಿನಿಧಿಗಳಿಗೆ, ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಈ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥ ರಾಜಪ್ಪ. 

ದೋಣಿಮೊಡಗು ಪಕ್ಕದ ಮೂರು ಕಿಲೋ ಮೀಟರ್ ದೂರದಲ್ಲಿ ಮುಷ್ಟ್ರಹಳ್ಳಿ ಜಲಾಶಯವಿದೆ. ಅದರಿಂದ ಯಥೇಚ್ಛವಾಗಿ ನೀರು ಪಡೆಯುವ ಅವಕಾಶವೂ ಇದೆ. ಆದರೆ ದೋಣಿಮಡುಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹತ್ತಾರು ಹಳ್ಳಿಗಳಲ್ಲಿ ಈಗಲೂ ಕುಡಿಯುವ ಹನಿ ನೀರಿಗಾಗಿ ಸಾವಿರ ಅಡಿ ಆಳದ ಕೊಳವೆ ಬಾವಿಯೇ ಗತಿಯಾಗಿದೆ.

ನಿರ್ವಹಣೆ ಇಲ್ಲ: ಘಟಕದ ನಿರ್ವಹಣೆ ಸಲುವಾಗಿಯೇ ಕೇಂದ್ರ ಸರ್ಕಾರ ಆರಂಭದಲ್ಲಿ ಸಿಬ್ಬಂದಿಯನ್ನು ನೇಮಿಸಿತ್ತು. ಆಗ ಘಟಕವನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದರು. ಕಾಲಕ್ರಮೇಣ ಅದರ ಉಸ್ತುವಾರಿಯನ್ನು ಗ್ರಾಮ ಪಂಚಾಯಿತಿಗಳಿಗೆ ವಹಿಸಿದಾಗಿನಿಂದ ಯಂತ್ರಗಳು ಕೆಟ್ಟಿವೆ ಎನ್ನುತ್ತಾರೆ ದೋಣಿಮಡಗು ಗ್ರಾಮಸ್ಥರು.
ಘಟಕದ ಪರಿಕರಗಳು ಹಲವಾರು ವರ್ಷಗಳಿಂದ ತುಕ್ಕು ಹಿಡಿಯುತ್ತಿವೆ. ಅದರ ನಿರ್ವಹಣೆಯನ್ನು ತಮ್ಮ ಉಸ್ತುವಾರಿಗೆ ನೀಡಿಲ್ಲ. ತಾವೂ  ಆ ಬಗ್ಗೆ ಯಾವ ಅಧಿಕಾರಿ ಗಮನಕ್ಕೂ ತಂದಿಲ್ಲ ಎಂಬುದು ದೋಣಿಮಡಗು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್ ಅವರ ಸ್ಪಷ್ಟನೆ. ಘಟಕಕ್ಕೆ ಬಳಸಲಾಗುತ್ತಿದ್ದ ವಿದ್ಯುತ್ ಜನಕ ಸುಸ್ಥಿತಿಯಲ್ಲಿದ್ದು, ಇಲ್ಲಿನ ಬಯೋಮೆಟ್ರಿಕ್ ಕೇಂದ್ರದಲ್ಲಿ ಉಪಯೋಗಿಸಲಾಗುತ್ತಿದೆ ಎನ್ನುತ್ತಾರೆ ಅವರು.

ವಿಷಪೂರಿತ ನೀರು: ತಾಲೂಕಿನ ಗಡಿಭಾಗಗಳಾದ ಕಾಮಸಮುದ್ರ, ಬೂದಿಕೋಟೆ ಮತ್ತು ಕ್ಯಾಸಂಬಳ್ಳಿ ಹೋಬಳಿ ವ್ಯಾಪ್ತಿಯ ನೂರಾರು ಹಳ್ಳಿಗಳಲ್ಲಿ ಬಹುತೇಕ ಫ್ಲೋರೈಡ್ ಮಿಶ್ರಿತ ನೀರನ್ನೇ ಕುಡಿಯುವ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಕಾಮಸಮುದ್ರ ಹೋಬಳಿ ವ್ಯಾಪ್ತಿಯ ತೊಪ್ಪನಹಳ್ಳಿ, ಬಲಮಂದೆ, ದೋಣಿಮಡುಗು ಗ್ರಾಮ ಪಂಚಾಯಿತಿಗಳ 40 ಕ್ಕೂ ಹೆಚ್ಚು ಗ್ರಾಮಗಳು ಅತಿ ಹೆಚ್ಚು ಫ್ಲೋರೈಡ್ ಸಮಸ್ಯೆಯನ್ನು ಎದುರಿಸುತ್ತಿವೆ.

ಒಂದು ಕಡೆ ನೀರಿಲ್ಲದೆ ಗ್ರಾಮಗಳಿಂದ ಪಟ್ಟಣಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ತಾಲೂಕಿನ ಗಡಿಭಾಗದ ಗ್ರಾಮಗಳಲ್ಲಿ ತಲೆದೋರಿದ್ದರೆ, ಮತ್ತೊಂದು ಕಡೆ ನೀರಿದ್ದರೂ ಅದು ಕುಡಿಯಲು ಯೋಗ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT