ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಗ್ಲಕ್ ದರ್ಬಾರ್!

Last Updated 30 ಜೂನ್ 2011, 19:30 IST
ಅಕ್ಷರ ಗಾತ್ರ

ಸಿಕ್ಕಾಪಟ್ಟೆ ಪ್ರಚಾರ ಮಾಡಿ, `ನಮ್ ಏರಿಯಾಲ್ ಒಂದಿನಾ~ ಎಂಬ ಸಿನಿಮಾ ನಿರ್ದೇಶಿಸಿದ್ದ ಅರವಿಂದ್ ಕೌಶಿಕ್ ಈ ಬಾರಿ ಸದ್ದೇ ಇಲ್ಲದೆ ಇನ್ನೊಂದು ಸಿನಿಮಾ ಮುಗಿಸಿದ್ದಾರೆ.

ಸೆನ್ಸಾರ್ ಸರ್ಟಿಫಿಕೇಟ್ ಪಡೆದ ನಂತರ ಅವರ ಚಿತ್ರತಂಡದ ಎಲ್ಲರೂ ಒಂದೇ ರೀತಿಯ ಬಿಳಿ ಟೀ-ಶರ್ಟ್ ಹಾಕಿಕೊಂಡು ಸುದ್ದಿಮಿತ್ರರಿಗೆ ಮುಖಾಮುಖಿಯಾದರು. ಚಿತ್ರದ ಹೆಸರು `ತುಗ್ಲಕ್~; `ತುಘಲಕ್~ನ ಅಪಭ್ರಂಶ ರೂಪ.

ಜನ ಹೇಗೆ ಮಾತಾಡುವರೋ ಶೀರ್ಷಿಕೆಯೂ ಹಾಗೇ ಇರಲಿ ಎಂದು ಈ ರೀತಿ ಹೆಸರನ್ನು ಅವರು ಇಟ್ಟಿದ್ದಾರೆ. ಮನುಷ್ಯನ ಮನಸ್ಸಿನ ಹೊಯ್ದಾಟ, ಗೊಂದಲದ ರೂಪಕ ಈ ಶೀರ್ಷಿಕೆ ಎನ್ನುತ್ತಿದೆ `ತುಗ್ಲಕ್~ ಟೀಮ್.
 
`ಟೀ ಕುಡಿಯುವುದೋ ಅಥವಾ ಕಾಫಿ ಕುಡಿಯುವುದೋ ಎಂಬುದರಿಂದ ಎಲ್ಲರ ಗೊಂದಲ ಶುರುವಾಗುತ್ತದೆ. ಬದುಕಿನ ಸಣ್ಣ ಸಂಗತಿಗಳ ಈ ಹೊಯ್ದಾಟವನ್ನೇ ನಾವು ಸಿನಿಮಾ ಮಾಡ್ದ್ದಿದೇವೆ~ ಎನ್ನುವ ಅರವಿಂದ್ ಕೌಶಿಕ್ ಈ ಸಲ ಕಡಿಮೆ ಪ್ರಚಾರದ ದಾರಿ ತುಳಿದಿದ್ದಾರೆ.

`ನಮ್ ಏರಿಯಾಲ್ ಒಂದಿನ ಸಿನಿಮಾಗೆ ಹೆಚ್ಚು ಪ್ರಚಾರ ಮಾಡಿದೆ. ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ಔಟ್‌ಡೇಟೆಡ್ ಎನಿಸಿಬಿಟ್ಟಿತು. ಈ ಬಾರಿ ಹಾಗೆ ಆಗದಂತೆ ನಿಗಾ ವಹಿಸಿದ್ದೇನೆ~ ಎಂದು ಕೌಶಿಕ್ ನಿರ್ಮಾಪಕರ ಕಡೆ ನೋಡಿದರು.

ನಿರ್ಮಾಪಕ ಅಮೃತ್ ಅವರಿಗೆ ಹೊಸ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದು ತರುವ ಶಕ್ತಿ ಈ ಚಿತ್ರಕ್ಕಿದೆ ಎಂಬ ಭರವಸೆ ಇದೆ. `ನಿಜಕ್ಕೂ ಇದು ಒಳ್ಳೆಯ ಸಿನಿಮಾ~ ಎಂದು ಅವರು ತಮ್ಮ ಬೆನ್ನನ್ನೂ ತಟ್ಟಿಕೊಂಡು, ನಿರ್ದೇಶಕರಿಗೂ ಶಹಬ್ಬಾಸ್‌ಗಿರಿ ಕೊಟ್ಟರು.

ಇಷ್ಟೆಲ್ಲಾ ಹೇಳಿಕೊಳ್ಳಲು ಚಿತ್ರದ ಆಡಿಯೋ ಬಿಡುಗಡೆ ನೆಪವಷ್ಟೇ ಆಯಿತು. ಅರ್ಜುನ್ ಜನ್ಯ ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಸಿದ್ಧವಿರುವ ಇಂಗ್ಲಿಷ್ ಟ್ರ್ಯಾಕ್‌ಗಳನ್ನೇ ಹಿನ್ನೆಲೆ ಸಂಗೀತಕ್ಕೆ ಮರುಬಳಸಿರುವುದಾಗಿ ಅವರು ಪ್ರಾಮಾಣಿಕತೆಯಿಂದ ಹೇಳಿಕೊಂಡರು.

ರಕ್ಷಿತ್ ಶೆಟ್ಟಿ, ಮೇಘನಾ ಗಾಂವ್ಕರ್, ಅನುಷಾ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದು, ಅನೀಶ್ ತೇಜೇಶ್ವರ್ ಒಂದು ಹಾಡಿಗಷ್ಟೇ ಹೆಜ್ಜೆ ಹಾಕಿದ್ದಾರೆ. ಎಲ್ಲರ ಮುಖದಲ್ಲೂ ಸಿನಿಮಾ ಸಿದ್ಧವಾದ ಖುಷಿ, ತೃಪ್ತಿ ಭರ್ತಿಯಾಗಿತ್ತು.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT