ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುದಿಗಾಲಲ್ಲಿ ನಿಂತ ಆಕಾಂಕ್ಷಿಗಳು !

Last Updated 3 ಫೆಬ್ರುವರಿ 2011, 6:00 IST
ಅಕ್ಷರ ಗಾತ್ರ

ಬಂಗಾರಪೇಟೆ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪದವಿಯು ಸಾಮಾನ್ಯ ಮಹಿಳೆಗೆ ಮೀಸಲಾದ ಕ್ಷಣದಿಂದಲೇ ತಾಲ್ಲೂಕಿನಾದ್ಯಂತ ಚುನಾಯಿತರಾಗಿರುವ ಪ್ರತಿಯೊಬ್ಬ ಮಹಿಳಾ ಅಭ್ಯರ್ಥಿ ಗಮನ ಅತ್ತ ಕಡೆ ಇದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ 13 ಸಾನ್ನ ತನ್ನ ಪಾಲಿಗೆ ತೆಗೆದುಕೊಂಡಿರುವುದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳಿಗೆ ಅಧ್ಯಕ್ಷ ಪದವಿ ಆಸೆಗೆ ಅವಕಾಶವಿಲ್ಲದಾಗಿದೆ.ಹೀಗಾಗಿ ಬಿಜೆಪಿ ಮಹಿಳಾ ಅಭ್ಯರ್ಥಿ ಅವಕಾಶಕ್ಕಾಗಿ ಈಗಾಗಲೇ ಮನಸ್ಸಿನಲ್ಲಿಯೇ ಸಂಡಿಗೆ ತಿನ್ನಲು ಶುರುಮಾಡಿದ್ದಾರೆ.

ಬಿಜೆಪಿಯಲ್ಲಿ ಐವರು ಅರ್ಹ ಸದಸ್ಯರಿದ್ದಾರೆ. ತಾಲ್ಲೂಕಿನ ಕೇತಗಾನಹಳ್ಳಿ ಕ್ಷೇತ್ರದ ವಿಜಯ ಲಕ್ಷ್ಮಿಬಾಲರೆಡ್ಡಿ, ರಾಮಸಾಗರದ ತೇಜ, ಬೂದಿಕೋಟೆಯ ಲಕ್ಷ್ಮಿಚಕ್ರವರ್ತಿ, ಕಾಮಸಮುದ್ರದ ಸಿ.ರೇಣುಕಾ, ಬಲಮಂದೆಯ ಅಂಬುಬಾಯಿ.ಕಾಂಗ್ರೆಸ್‌ನಲ್ಲಿ ಗುಲ್ಲಹಳ್ಳಿಯ ಲಕ್ಷ್ಮಿದೇವಮ್ಮ ಮತ್ತು ಸುಂದರ ಪಾಳ್ಯ ಸುಮಿತ್ರ ಇದ್ದಾರೆ. ಜೆಡಿಎಸ್‌ನಲ್ಲಿ ಟಿ.ಗೊಲ್ಲಹಳ್ಳಿಯ ಲಕ್ಷ್ಮಮ್ಮ. ಇವರ ಜತೆ ಮೂವರು ಪಕ್ಷೇತರ ಸದಸ್ಯರಾದ ಚಿಕ್ಕ ಅಂಕಂಡಹಳ್ಳಿಯ ಅಭ್ಯರ್ಥಿ ವೆಂಕಟರತ್ನಮ್ಮ, ಎನ್.ಜಿ.ಹುಲ್ಕೂರಿನ ಶಾಂತಕುಮಾರಿ ಮತ್ತು ಘಟ್ಟಕಾಮಧೇನಹಳ್ಳಿಯ ವರಲಕ್ಷ್ಮಿ ಇದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳಿಗೆ ಅಧ್ಯಕ್ಷ ಪದವಿಯತ್ತ ಆಸಕ್ತಿಯಿದ್ದರೂ ಬಹುಮತವಿಲ್ಲದ ಕಾರಣ ಏನಾಗಬಹುದು ಎಂದು ಕಾದು ನೋಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರಾದ ಕೆ.ಎಂ.ನಾರಾಯಣಸ್ವಾಮಿ, ಜಿ.ಪಂ. ಸದಸ್ಯ ರಾಮಚಂದ್ರ, ಪುರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ತಟಸ್ಥರಾಗಿದ್ದಾರೆ. ಬಹುಮತ ಬಿಜೆಪಿಗಿರುವುದೂ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ವಿಧಾನಸಭೆಯ ಮಧ್ಯಂತರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಈಗನಿಂದಲೇ ತಯಾರಿ ನಡೆಸುವುದಷ್ಟೇ ನಮ್ಮ ಗುರಿ ಎಂದು ಕೆ.ಎಂ.ನಾರಾಯಣಸ್ವಾಮಿ ತಿಳಿಸಿದ್ದಾರೆ.ಜೆಡಿಎಸ್ ಅಭ್ಯರ್ಥಿಯು ಸದ್ಯ ಮೌನಕ್ಕೆ ಶರಣಾಗಿದ್ದಾರೆ. ಅಭ್ಯರ್ಥಿಯಾಗಲಿ, ಜೆಡಿಎಸ್ ಮುಖಂಡರಾದ ಅನಿಲ್ ಸೇಗು, ಮುರುಳಿ, ಮುನಿಮಾರಪ್ಪ, ಎಂ.ಎಸ್.ಆನಂದ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಅಧ್ಯಕ್ಷ ಪದವಿಗೆ ಅರ್ಹರಿದ್ದರೂ ಸಹಾ ಪರಿಸ್ಥಿತಿ ಪ್ರತಿಕೂಲವಾಗಿರುವುದರಿಂದ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.

ಬಿಜೆಪಿಯಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಆಗಮನದ ನಂತರ ಸೃಷ್ಟಿಯಾಗಿರುವ ಕಾರ್ಯಕರ್ತರ ಧೃವೀಕರಣವು ಎದ್ದುಕಾಣುತ್ತಿದೆ. ಈಚೆಗೆ ಪಕ್ಷದ ಕೋರ್ ಸಮಿತಿಯು ಈ ಬಾರಿಯ ವಿಧಾನಸಭೆ ಮಧ್ಯಂತರ ಉಪಚುನಾವಣೆಗೆ ಎಂ.ನಾರಾಯಣಸ್ವಾಮಿ ಹೆಸರನ್ನು ಸೂಚಿಸಿದ ನಂತರ ಇನ್ನೊಬ್ಬ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮೌನ ವಹಿಸಿದ್ದಾರೆ. ಹೀಗಾಗಿ ಅವರನ್ನು ಓಲೈಸುವ ಸಲುವಾಗಿ ಪಂಚಾಯಿತಿ ಅಧ್ಯಕ್ಷ ಪದವಿ ಆಯ್ಕೆಯನ್ನು ಅವರಿಗೆ ಬಿಡುವ ಮಾತೂ ಕೇಳಿಬರುತ್ತಿದೆ.ಆದರೂ ಕಾಮಸಮುದ್ರ ಪ್ರತಿನಿಧಿ ರೇಣುಕಾ ಅವರನ್ನು ಅಧ್ಯಕ್ಷ ಗಾದಿಗೆ ತರುವ ಪ್ರಯತ್ನ ಎಂ.ನಾರಾಯಣಸ್ವಾಮಿ ನಡೆಸಿದ್ದಾರೆನ್ನಲಾಗಿದೆ. 

ಬಿ.ಪಿ.ವೆಂಕಟಮುನಿಯಪ್ಪ ಅವರ ಬೆಂಬಲಿಗರಾದ ಬೂದಿಕೋಟೆ ಲಕ್ಷ್ಮೀ ಅವರೂ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ವಿಜಯಲಕ್ಷ್ಮಿ, ಅಂಬೂಬಾಯಿ, ತೇಜಾ ಅವರ ಹೆಸರು ಕೇಳಿ ಬರುತ್ತಿವೆ. ಅವರೊಂದಿಗೆ ಪಕ್ಷೇತರರಾಗಿ ಗೆದ್ದು ಬಿಜೆಪಿಗೆ ಪಕ್ಷಕ್ಕೆ ಬಂದಿರುವುದರಿಂದ ವೆಂಕಟರತ್ನಮ್ಮ ಅವರಿಗೂ ಮನ್ನಣೆ ಸಿಗುವ ಸಾಧ್ಯತೆಯೂ ಇದೆ.

ಪರಿಶಿಷ್ಟ ಜಾತಿಗೆ ಮೀಸಲಾದ ಉಪಾಧ್ಯಕ್ಷ ಪದವಿಗೆ ಮೂವರು ಅರ್ಹರಿದ್ದಾರೆ. ಬಿಜೆಪಿಯಿಂದ ಸೂಲಿಕುಂಟೆಯ ಪಿ.ಅಮರೇಶ, ಕಂಗಾಡ್ಲಹಳ್ಳಿ ಜಿ.ಬಾಬು ಆಕಾಂಕ್ಷಿಗಳು. ಅಮರೇಶ ಅವರಿಗೆ ಬಿ.ಪಿ.ವೆಂಕಟಮುನಿಯಪ್ಪ ಕೃಪಾಕಟಾಕ್ಷವಿದ್ದರೆ, ಜಿ.ಬಾಬು ಅವರಿಗೆ ಎಂ.ನಾರಾಯಣಸ್ವಾಮಿ ಬೆಂಬಲವಿದೆ. ಮಾರಿಕುಪ್ಪಂನಿಂದ ಚುನಾಯಿತರಾಗಿರುವ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಅವರಿಗೆ ಬಹುಮತದ ಬೆಂಬಲವಿಲ್ಲ. ಸದ್ಯಕ್ಕೆ ಕಾಂಗ್ರೆಸ್ ಮುಖಂಡರೂ ಸ್ಪರ್ಧೆಗೆ ನಿರಾಸಕ್ತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT