ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿಗೆ ನಗರಪಾಲಿಕೆ ಪಟ್ಟ

Last Updated 13 ಜುಲೈ 2013, 10:32 IST
ಅಕ್ಷರ ಗಾತ್ರ

ತುಮಕೂರು: ತುಮಕೂರು ನಗರಸಭೆಯನ್ನು ಮಹಾನಗರ ಪಾಲಿಕೆಯಾಗಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ನಗರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ರೂ. 100 ಕೋಟಿ ತೆಗೆದಿರಿಸಲಾಗಿದೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರಸಭೆಯನ್ನು ಮಹಾನಗರ ಪಾಲಿಕೆಯನ್ನಾಗಿ ಘೋಷಣೆ ಮಾಡಲಾಗಿತ್ತು. ಆದರೆ ಪಾಲಿಕೆ ಸ್ಥಾನ ಪಡೆಯಲು ಅಗತ್ಯದಷ್ಟು ಜನಸಂಖ್ಯೆ ಇಲ್ಲ ಎಂಬ ವಿವಾದ ಹೈಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯ ಆದೇಶದಂತೆ ಮತ್ತೆ ನಗರಸಭೆಯಾಗಿ ಮುಂದುವರಿದಿತ್ತು. 2011ರ ಜನಗಣತಿ ಆಧಾರದ ಮೇಲೆ ಈಗ ಮಹಾನಗರ ಪಾಲಿಕೆ ಮಾಡಲು ಸರ್ಕಾರ ನಿರ್ಧರಿಸಿದೆ.

ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿಸಿರುವುದು ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ನೀರಾವರಿಗೆ ಹಣ
ತುಮಕೂರು ಸೇರಿದಂತೆ ಬಯಲು ಸೀಮೆಯ ಜಿಲ್ಲೆಗಳ ನೀರಾವರಿ ಯೋಜನೆಯಾದ ಎತ್ತಿನಹೊಳೆಗೆ 1000 ಕೋಟಿ ರೂಪಾಯಿ ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ.

ಅವೈಜ್ಞಾನಿಕ: ಜಿಎಸ್‌ಬಿ
ಇದು ನಿರೀಕ್ಷಿತ ಬಜೆಟ್. ಎತ್ತಿನಹೊಳೆ ಯೋಜನೆ ಅನುಷ್ಠಾನಕ್ಕೆ 1000 ಕೋಟಿ ರೂಪಾಯಿ ನೀಡಿರುವುದು ಸ್ವಾಗತಾರ್ಹ. ಆದರೆ ಪರಮಶಿವಯ್ಯ ವರದಿ ಜಾರಿಗೆ ಯೋಜನೆಯಲ್ಲಿ ಯಾವುದೇ ಲೇನ್ ಎಸ್ಟಿಮೇಟ್ ಮಾಡದೆ ಟೆಂಡರ್ ಕರೆದು ಯೋಜನಾ ವರದಿ ಸಿದ್ಧಪಡಿಸಿರುವುದು ಸರಿಯಲ್ಲ. ಇದರಲ್ಲಿ ಅಧಿಕಾರಿಗಳ ಷಡ್ಯಂತ್ರ ಅಡಗಿದ್ದು, ಅವೈಜ್ಞಾನಿಕ ಎಂದು ಸಂಸದ ಜಿ.ಎಸ್.ಬಸವರಾಜು ಆರೋಪಿಸಿದರು.

123 ಟಿಎಂಸಿ ಅಡಿ ನೀರು ಒದಗಿಸುವ ಪರಮಶಿವಯ್ಯ ವರದಿ ಆಧರಿತ ಯೋಜನೆಯನ್ನು ಬಿಟ್ಟು, 5ರಿಂದ 6 ಟಿಎಂಸಿ ನೀರು ಒದಗಿಸುವ ಯೋಜನಾ ವರದಿ ಅನುಷ್ಠಾನಕ್ಕೆ ಮುಂದಾಗಿರುವುದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದೆ ಎಂದು ಟೀಕಿಸಿದರು.

ಪ್ರತ್ಯೇಕತೆಗೆ ವಿರೋಧ
ಎತ್ತಿನಹೊಳೆ ಯೋಜನೆ ಹಾಗೂ ಪರಮಶಿವಯ್ಯ ವರದಿಯ ಡಿಪಿಆರ್ (ಯೋಜನಾ ವರದಿ) ಸಿದ್ಧಪಡಿಸಲು ರೂ. 50 ಕೋಟಿ ಮೀಸಲಿರಿಸಿ, ಯೋಜನೆಗಳನ್ನು ಪ್ರತ್ಯೇಕಿಸಿರುವುದು ಸರಿಯಲ್ಲ ಎಂದು ಅಭಿವೃದ್ಧಿ ರೆವಲ್ಯೂಷನ್ ಫೋರಂ ಅಧ್ಯಕ್ಷ ಕುಂದರನಹಳ್ಳಿ ರಮೇಶ್ ತಿಳಿಸಿದರು.

ಎತ್ತಿನಹೊಳೆ ಹಾಗೂ ಪರಮಶಿವಯ್ಯ ವರದಿ ಯೋಜನೆಯನ್ನು ಕರ್ನಾಟಕ ವಾಡರ್‌ಗ್ರಿಡ್ ಕೆನಾಲ್‌ನಡಿ ಅನುಷ್ಠಾನಕ್ಕೆ ತರಲು ಹಿಂದಿನ ಸರ್ಕಾರ ತೀರ್ಮಾನಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಎರಡೂ ಯೋಜನೆಗಳನ್ನು ಪ್ರತ್ಯೇಕಿಸಿದ್ದು, ಇದರಿಂದ ದುಂದುವೆಚ್ಚ ಆಗಲಿದೆ. ತಕ್ಷಣ ಸರ್ಕಾರ ಎರಡೂ ಯೋಜನೆಗಳನ್ನು ಒಂದೇ ಕೆನಾಲ್‌ನಲ್ಲಿ ರೂಪಿಸಲು ಮುಂದಾಗಬೇಕು. ಯೋಜನೆ ವ್ಯಾಪ್ತಿಯ 9 ಜಿಲ್ಲೆಗಳ ಮುಖಂಡರ ಜತೆ ಚರ್ಚಿಸುವುದಾಗಿ ಹೇಳಿದರು.

ಪರಮಶಿವಯ್ಯ ವರದಿ ಜಾರಿಗೆ ಆದ್ಯತೆ ನೀಡದಿರುವುದು ಖಂಡನೀಯ. ಕಡಿಮೆ ವೆಚ್ಚದಲ್ಲಿ ಹೆಚ್ಚು ನೀರಾವರಿ ಸೌಲಭ್ಯ ಒದಗಿಸುವ ಪರಮಶಿವಯ್ಯ ವರದಿ ಯೋಜನೆ ಜಾರಿಗೆ ಸರ್ಕಾರ ಕೂಡಲೇ ಮುಂದಾಗಬೇಕು. ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಬೇಕು ಎಂದು ರೈತ ಸಂಘದ ಮುಖಂಡ ಗೋವಿಂದರಾಜು ಆಗ್ರಹಿಸಿದರು.

ಬಜೆಟ್‌ನಲ್ಲಿ ಪರಮಶಿವಯ್ಯ ವರದಿ ಜಾರಿಗೆ ಹಿಂದೇಟು ಹಾಕಿರುವುದನ್ನು ಶನಿವಾರ ತುಮಕೂರು ಟೌನ್‌ಹಾಲ್‌ನಲ್ಲಿ ಹಮ್ಮಿಕೊಂಡಿರುವ ಪ್ರತಿಭಟನೆಯಲ್ಲಿ ಖಂಡಿಸಲಾಗುವುದು ಎಂದು ತಿಳಿಸಿದರು.

ಶಿರಾದಲ್ಲಿ ಅಬಕಾರಿ ಘಟಕ
ಶಿರಾ ತಾಲ್ಲೂಕಿನಲ್ಲಿ ಆಧುನಿಕ ಅಬಕಾರಿ ಘಟಕ ಸ್ಥಾಪನೆ ಘೋಷಿಸಲಾಗಿದೆ. ಅಬಕಾರಿ ನಿಯಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಘಟಕ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

ಇದಲ್ಲದೆ ಕಳ್ಳಬಟ್ಟಿ ತಯಾರಿಕೆ ಕುಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಡಾ.ದೇವರಾಜ್ ಅರಸ್ ಹಿಂದುಳಿದ ವರ್ಗಗಳ ನಿಗಮ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಸಾಲಸೌಲಭ್ಯ ನೀಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ತಿಳಿಸಿದೆ.

ಮಧುಗಿರಿಯಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆ, ತುಮಕೂರು ನಗರದಲ್ಲಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಸ್ಥಾಪಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.

ನೀರಾಗೆ ಅನುಮತಿ
ನೀರಾ ಬಳಕೆಗೆ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ. ರಾಜ್ಯದ ಬಹುತೇಕ ಕಡೆಗಳಲ್ಲಿ ತೆಂಗು ಬೆಳೆಗೆ ನುಸಿರೋಗ ತಗುಲಿದ್ದು, ಮರಗಳು ಒಣಗುತ್ತಿವೆ. ನೀರಾ ಬಳಕೆಗೆ ಅನುಮತಿ ನೀಡಿರುವುದರಿಂದ ತೆಂಗಿನ ಮರಗಳಲ್ಲಿ ನೀರಾ ಉತ್ಪಾದಿಸಬಹುದು. ಇದರಿಂದ ತೆಂಗು ಬೆಳೆ ರೈತರಿಗೆ ಅನುಕೂಲವಾಗಲಿದೆ ಎಂದು ತಿಪಟೂರು ತಾಲ್ಲೂಕು ತೆಂಗು ಬೆಳೆಗಾರರ ಸಂಘ ಅಧ್ಯಕ್ಷ ಸಂಗಮೇಶ್ ಪ್ರತಿಕ್ರಿಯಿಸಿದ್ದಾರೆ.

ಇಂಗ್ಲಿಷ್‌ಗೆ ವಿರೋಧ
ಸಿದ್ದರಾಮಯ್ಯ ಮಂಡಿಸಿದ ಚೊಚ್ಚಲ ಬಜೆಟ್ ಒಟ್ಟಾರೆ ಸ್ವಾಗತಾರ್ಹ. ಆದರೆ 1ನೇ ತರಗತಿಯಿಂದ ಇಂಗ್ಲಿಷ್ ಕಲಿಕೆಗೆ ಅವಕಾಶ ನೀಡಿರುವುದು ಕನ್ನಡ ಭಾಷೆಯ ಉಳಿವು-ಬೆಳವಣಿಗೆ ಹಿನ್ನೆಲೆಯಲ್ಲಿ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಚಿಂತನ ಬಳಗದ ಕೆ.ಪಿ.ಲಕ್ಷ್ಮೀಕಾಂತರಾಜೇ ಅರಸ್ ತಿಳಿಸಿದ್ದಾರೆ.

ಕೈಗಾರಿಕೆಗೆ ಸಿಗದ ಒತ್ತು
ಉತ್ತಮ ಬಜೆಟ್. ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್ ಅಳವಡಿಕೆ ಹಾಗೂ ಐಟಿಐನಲ್ಲಿ ಕೃಷಿಯನ್ನು ಅಧ್ಯಯನ ವಸ್ತುವಾಗಿ ಪರಿಚಯಿಸುವ ನಿರ್ಧಾರ ಸ್ವಾಗತಾರ್ಹ. ಆದರೆ ಕೈಗಾರಿಕಾ ಅಭಿವೃದ್ಧಿಗೆ ಬಜೆಟ್‌ನಲ್ಲಿ ಒತ್ತು ನೀಡದಿರುವುದು ವಿಷಾದಕರ ಎಂದು ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಸಾಗರನಹಳ್ಳಿ ಪ್ರಭು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT