ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ ಅವ್ಯಾಹತ ಅಕ್ರಮ ಗಣಿಗಾರಿಕೆ: ಹಿರೇಮಠ್

Last Updated 10 ಸೆಪ್ಟೆಂಬರ್ 2011, 10:55 IST
ಅಕ್ಷರ ಗಾತ್ರ

ತುಮಕೂರು: ರಾಜ್ಯದ ಮೂರು ಜಿಲ್ಲೆಗಳಲ್ಲಿ ನಡೆದ ಅಕ್ರಮ ಗಣಿಗಾರಿಕೆಯಿಂದಾಗಿ ಪರಿಸರ ನಾಶವಾಗಿದೆ. ಇದಕ್ಕೆ ಕಾರಣರಾದವರನ್ನೇ ಹೊಣೆಗಾರರನ್ನಾಗಿ ಮಾಡಿ, ಅಂತಹವರಿಂದಲೇ ಪರಿಸರವನ್ನು ಮತ್ತೆ ಸುಸ್ಥಿತಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸಿರುವ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಅಧ್ಯಕ್ಷ ಎಸ್.ಆರ್.ಹಿರೇಮಠ್ ಒತ್ತಾಯಿಸಿದರು.

ನಗರದಲ್ಲಿ ಶುಕ್ರವಾರ ನೈಸರ್ಗಿಕ ಸಂಪನ್ಮೂಲ ಸಂರಕ್ಷಣಾ ಕ್ರಿಯಾ ಸಮಿತಿ, ಸಮಾಜ ಪರಿವರ್ತನಾ ಸಮುದಾಯದ ವತಿಯಿಂದ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.

ತುಮಕೂರು, ಚಿತ್ರದುರ್ಗ, ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಬೇಕಾದರೆ ಜಿಲ್ಲಾಮಟ್ಟದಲ್ಲಿ ಪಾರದರ್ಶಕ ಸಮಿತಿ ರಚನೆ ಆಗಬೇಕು. ಸುಪ್ರಿಂಕೋರ್ಟ್ ಈಗಾಗಲೇ ಉನ್ನತ ಸಮಿತಿಗೆ ಅಧ್ಯಯನ ಕೈಗೊಳ್ಳುವಂತೆ ಸೂಚಿಸಿದೆ. ಮೂರು ತಿಂಗಳ ನಂತರ ಗಣಿಗಾರಿಕೆ ನಿಷೇಧದ ಬಗ್ಗೆ ತೀರ್ಮಾನ ಹೊರಬಿಳಲಿದೆ ಎಂದು ಮಾಹಿತಿ ನೀಡಿದರು.

`ನಾವು ಸಲ್ಲಿಸಿದ್ದ ಅರ್ಜಿಯಿಂದ ಈಗಾಗಲೇ ಸಾಕಷ್ಟು ಕೆಲಸವಾಗಿದೆ. ಆದರೆ ಕೊನೆ ಹಂತದಲ್ಲಿ ಉಳಿದಿರುವುದು ಜನರಲ್ಲಿ ಜಾಗೃತಿ. ಅದಕ್ಕಾಗಿ ಚಿಂತಕರು, ಮಾಧ್ಯಮ, ಜನಸಾಮಾನ್ಯರು ಒಟ್ಟಾಗಬೇಕು ಎಂದು ಹೇಳಿದರು.

ಚಿಕ್ಕನಾಯಕನಹಳ್ಳಿ, ತಿಪಟೂರು, ಗುಬ್ಬಿಯಲ್ಲಿ ಅವ್ಯಾಹತವಾಗಿ ಅಕ್ರಮ ಗಣಿಗಾರಿಕೆ ನಡೆದಿದೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಮಟ್ಟದಲ್ಲಿ ಪಾರದರ್ಶಕ ಸಮಿತಿ ರಚಿಸಬೇಕು. ಇದರ ಜತೆಯಲ್ಲಿ ಜನಸಂಗ್ರಾಮ ರೂಪ ಪಡೆದುಕೊಳ್ಳಬೇಕಾದ ಅಗತ್ಯವಿದೆ ಎಂದು ಸಲಹೆ ಮಾಡಿದರು.

ಬರುವ ದಿನಗಳಲ್ಲಿ ಗಣಿಗಾರಿಕೆ ಕುರಿತು ತುಮಕೂರಿಗೆ ಉನ್ನತ ಅಧ್ಯಯನ ಸಮಿತಿ ಬರಲಿದೆ. ಆಗ ಸ್ಥಳೀಯ ಹೋರಾಟಗಾರರು ಸಮಿತಿಗೆ ಸೂಕ್ತ ಮಾಹಿತಿ ದೊರೆಯುವಂತೆ ಸಹಕರಿಸಬೇಕು ಎಂದು ಹಿರೇಮಠ್ ಕೋರಿದರು.

ಈಗಾಗಲೇ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ಮೇಲೆ ನಿಷೇಧ ಹೇರಿರುವುದರಿಂದ ಅಗಾಧ ಬದಲಾವಣೆಯಾಗಿದೆ. ಅದೇ ರೀತಿ ಮುಂದುವರೆಯಬೇಕು. ಆಂಧ್ರಪ್ರದೇಶದಲ್ಲಿ ನಡೆಸಿದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಗಣಿಧಣಿಗಳನ್ನು ಬಂಧಿಸಲಾಗಿದೆ. ಆದರೆ ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ದುರಂತ ಎಂದು ವಿಷಾದಿಸಿದರು.

ಲೋಕಾಯುಕ್ತ ವರದಿಯಲ್ಲಿ ಕೇಳಿಬಂದಿರುವ 700 ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ತನಿಖೆ ಕೈಗೊಂಡು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಿರಸ್ಕರಿಸುವ ಅಧಿಕಾರ: ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಉತ್ತಮ ಎನ್ನಿಸದಿದ್ದರೆ ಅವರನ್ನು ತಿರಸ್ಕರಿಸುವ ಅಧಿಕಾರ ಜನರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಮಿತಿ ಸದಸ್ಯರಾದ ಎಂ.ಇಂದ್ರಮ್ಮ ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಪರಿಸರ ಸಂಪೂರ್ಣವಾಗಿ ವಿನಾಶದಂಚಿಗೆ ತಲುಪಿದೆ. ಈ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು ಎಂದರು.

ಹೋರಾಟಗಾರ ಚಂದ್ರಶೇಖರ್ ಮಾತನಾಡಿ, ಭೂ ಸ್ವಾಧೀನದ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ತುಮಕೂರಿನಲ್ಲಿ ನಡೆಯುವ ಕೃಷಿ ಚಿಂತನಾ ಸಮಾವೇಶದಲ್ಲಿ ಚರ್ಚಿಸಲಾಗುವುದು. ಸಮಾವೇಶಕ್ಕೆ ಪ್ರಶಾಂತ್ ಭೂಷಣ್, ಸಂತೋಷ್ ಹೆಗ್ಡೆ ಅವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಪ್ರಾಂಶುಪಾಲ ಸಿ.ಯತಿರಾಜು ಮಾತನಾಡಿ, ಸಾರ್ವಜನಿಕ ಹಿತಾಸಕ್ತಿ ಹೆಸರಿನಲ್ಲಿ ರೈತರ ಭೂಮಿ ಕಿತ್ತುಕೊಳ್ಳುತ್ತಿದ್ದಾರೆ. ಕೇವಲ ಕಾನೂನು ತಜ್ಞರು ರಚಿಸುವ ಕೃಷಿ ನೀತಿ ಅಗತ್ಯವಿಲ್ಲ. ರೈತರ ಸಲಹೆ ಸೂಚನೆಯಿಂದ ನೀತಿ ರಚಿಸಬೇಕು ಎಂದರು.

ತುಮಕೂರು, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ, ಹಾವೇರಿ, ಹುಬ್ಬಳ್ಳಿ, ಬಳ್ಳಾರಿ ಮುಂತಾದೆಡೆಯಿಂದ ಬಂದಿದ್ದ ವಿವಿಧ ಸಂಘಟನೆ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT