ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರಿನಲ್ಲಿ ಭಿಕ್ಷಾಟನೆ ಜಾಲ ಪತ್ತೆ

Last Updated 7 ಜನವರಿ 2012, 10:00 IST
ಅಕ್ಷರ ಗಾತ್ರ

ವಿಶೇಷ ವರದಿ
ತುಮಕೂರು:
`ನನ್ನ ಬಿಟ್ಬಿಡಿ ಸಾರ್, ಬಾಸ್‌ಗೆ ದಿನಕ್ಕೆ 100 ರೂಪಾಯಿ ಕೊಡಬೇಕು. ಇಲ್ಲದಿದ್ರೆ ತೊಂದ್ರೆ ಆಗುತ್ತೆ. ಬಿಟ್ಬಿಡಿ ಸಾರ್~....-ನಗರಸಭೆ ಮುಂಭಾಗ ಭಿಕ್ಷೆ ಬೇಡುತ್ತಿದ್ದ ಗಿರೀಶ (ಹೆಸರು ಬದಲಿಸಲಾಗಿದೆ) ಎಂಬಾತ ಸ್ವಯಂಸಂಸ್ಥೆ ಕಾರ್ಯಕರ್ತರ ಎದುರು ಕಣ್ಣೀರಿಡುತ್ತಾ ಗೋಳು ತೋಡಿಕೊಳ್ಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.

8 ವರ್ಷದ ಈ ಪುಟ್ಟ ಬಾಲಕ ದಿನಕ್ಕೆ ನೂರು ರೂಪಾಯಿ ಯಾರಿಗೆ ಸಂಪಾದಿಸಿ ಕೊಡಬೇಕು ಎಂಬ ಪ್ರಶ್ನೆಯ ಬೆನ್ನು ಹತ್ತಿದರೆ ಮಕ್ಕಳನ್ನು ಕದ್ದು, ಆನಂತರ ಭಿಕ್ಷಾಟನೆಗೆ ದೂಡುವ ವ್ಯವಸ್ಥಿತ ಮಾಫಿಯಾ ನಗರ ವ್ಯಾಪ್ತಿಯಲ್ಲಿ ಬೆಳಕಿಗೆ ಬಂತು.

ಕಾರ್ಯಾಚರಣೆ: ಭಿಕ್ಷೆ ಬೇಡುವ ಮಕ್ಕಳನ್ನು ಗುರುತಿಸಿ, ಸಂರಕ್ಷಿಸಿ, ಅವರ ಹಿನ್ನೆಲೆ ವಿಚಾರಿಸಿ ಪೋಷಕರ ಬಳಿಗೆ ಕಳುಹಿಸುವ ಕಾರ್ಯವನ್ನು ಪೊಲೀಸರ ನೆರವಿನೊಂದಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಶುಕ್ರವಾರದಿಂದ ನಗರದಲ್ಲಿ ಪ್ರಾರಂಭಿಸಿವೆ.

ಕಾರ್ಯಾಚರಣೆ ಮೊದಲ ದಿನವೇ 10 ಗಂಡು, 6 ಹೆಣ್ಣು ಮಕ್ಕಳನ್ನು ರಕ್ಷಿಸಲಾಗಿದೆ. ಪುಟಾಣಿ ಮಕ್ಕಳೊಂದಿಗೆ ಭಿಕ್ಷೆ ಬೇಡುತ್ತಿದ್ದ ಮೂವರು ತಾಯಂದಿರನ್ನು ಪೊಲೀಸರ ನೆರವಿನೊಂದಿಗೆ ವಿಚಾರಣೆಗೆ ಒಳಪಡಿಸಲಾಗಿದೆ. ಸಂರಕ್ಷಿಸಿದ ಮಕ್ಕಳ ಛಾಯಾಚಿತ್ರಗಳನ್ನು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಕಳುಹಿಸಿ ನಾಪತ್ತೆ ದೂರುಗಳನ್ನು ಪರಿಶೀಲಿಸಲಾಗುತ್ತದೆ. ಪೋಷಕರು ಪತ್ತೆಯಾಗದಿದ್ದರೆ ನಗರದ ಹೊರವಲಯದಲ್ಲಿ ಶಿಕ್ಷಣ ಇಲಾಖೆ ಸ್ಥಾಪಿಸಿರುವ `ಚಿಣ್ಣರ ತಂಗುಧಾಮ~ದಲ್ಲಿ ವಸತಿ, ಶಿಕ್ಷಣ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಮನೆ ಮುಂದೆ ಆಡುತ್ತಿರುವ, ಶಾಲೆಯಿಂದ ಹಿಂದಿರುಗುವ, ಸಂತೆ- ಜಾತ್ರೆ ಇತ್ಯಾದಿ ಜನಜಂಗುಳಿ ಇರುವ ಸ್ಥಳಗಳಲ್ಲಿ ಪೋಷಕರಿಂದ ಅಗಲಿದ ಒಂಟಿ ಮಕ್ಕಳಿಗೆ ಚಾಕಲೇಟ್ ಇತ್ಯಾದಿ ಆಮಿಷ ತೋರಿಸಿ ಅಪಹರಿಸುವ ವ್ಯವಸ್ಥಿತ ಜಾಲ ಇಡಿ ರಾಜ್ಯದಲ್ಲಿ ಸಕ್ರಿಯವಾಗಿದೆ ಎಂದು ಕಾರ್ಯಾಚಾರಣೆಯಲ್ಲಿ ಪಾಲ್ಗೊಂಡ ಸ್ವಯಂ ಸೇವಕರೊಬ್ಬರು ತಿಳಿಸಿದರು.

ಅಪಹರಿಸಿದ ಮಕ್ಕಳನ್ನು ಅವರ ವಯಸ್ಸಿಗೆ ಅನುಗುಣವಾಗಿ ವಿಂಗಡಿಸಿ ದೂರದ ಊರಿನ ಏಜೆಂಟರಿಗೆ ರೂ. 2ರಿಂದ 4 ಲಕ್ಷದವರೆಗೆ ಮಾರಲಾಗುತ್ತದೆ. ಹೀಗೆ ಮಾರಾಟವಾದ ಮಕ್ಕಳು ಭಿಕ್ಷಾಟನೆ, ಮನೆ ಕೆಲಸಕ್ಕೆ ನೂಕಲಾಗುತ್ತದೆ. ದೊಡ್ಡವರಾದ ನಂತರ ಗಂಡು ಮಕ್ಕಳು ಸಮಾಜಕ್ಕೆ ಕಂಟಕರಾದರೆ, ಹೆಣ್ಣು ಮಕ್ಕಳು ವೇಶ್ಯಾವಾಟಿಕೆಯಲ್ಲಿ ಬದುಕು ಕಳೆದುಕೊಳ್ಳುತ್ತಾರೆ ಎಂದು ಮಕ್ಕಳ ರಕ್ಷಣೆಯಲ್ಲಿ ನಿರತರಾಗಿರುವ ಸ್ವಯಂ ಸೇವಕರೊಬ್ಬರು ವಿವರಿಸಿದರು.

ನಗರದ ಬಟವಾಡಿ ಫ್ಲೈಓವರ್ ಸಮೀಪ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳೊಂದಿಗೆ ಮೂವರು ತಮಿಳುನಾಡಿನ ಯುವತಿಯರು ಈಚೆಗಷ್ಟೇ ಕಂಡು ಬಂದಿದ್ದರು. ಮಗುವನ್ನು ಕಂಕುಳಲ್ಲಿಟ್ಟುಕೊಂಡು ಭಿಕ್ಷೆ ಬೇಡುತ್ತಿದ್ದ ಈ ತಾಯಂದಿರು ಕೇವಲ ಎರಡೇ ದಿನದಲ್ಲಿ ನಾಪತ್ತೆಯಾಗಿದ್ದರು ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ತುಮಕೂರಿನಂಥ ಮಧ್ಯಮ ವರ್ಗ ಹೆಚ್ಚಾಗಿರುವ ನಗರದಲ್ಲಿ ಒಂದು ಮಗು ದಿನಕ್ಕೆ ರೂ. 250ರಿಂದ 300ರ ವರೆಗೆ ದುಡಿಯುತ್ತದೆ. ಇದರಲ್ಲಿ ಸಿಂಹಪಾಲನ್ನು ಏಜೆಂಟ್ ಪಡೆದುಕೊಂಡು ರೂ. 30ರಿಂದ 50ಅನ್ನು ಮಾತ್ರ ಮಗುವಿಗೆ ನೀಡಲಾಗುತ್ತದೆ. ಮಗುವಿಗೆ ಎರಡು ಹೊತ್ತು ಊಟ, ಅಗತ್ಯ ಬಟ್ಟೆ ಕೊಡಿಸಿ, ಮಗುವಿನ ಕಣ್ಣಲ್ಲಿ ಆಪ್ತರಕ್ಷಕರಂತೆ ಕಾಣುತ್ತಾರೆ ಎಂದು ಸ್ವಯಂ ಸೇವಕರು ವಿವರಿಸುತ್ತಾರೆ.

ತನಗೆ ಕನಿಷ್ಠ ಇಷ್ಟು ಹಣ ಸಂಪಾದಿಸಿ ಕೊಡಲೇಬೇಕು ಎಂದು ನಿಯಮ ಹೇರಿರುತ್ತಾನೆ. ಹಣ ಕೊಡದಿದ್ದರೆ ಕೊಲ್ಲುವ, ತಂದೆ- ತಾಯಿಗೆ ಕೆಡುಕು ಮಾಡುವ ಹೆದರಿಕೆ ಬಿತ್ತಿರುತ್ತಾನೆ. ಹೀಗಾಗಿ ಮಕ್ಕಳು ತಮಗೆ ಗೊತ್ತಿರುವ ಎಲ್ಲ ಚಾಕಚಕ್ಯತೆ ಉಪಯೋಗಿಸಿ ಭಿಕ್ಷೆ ಬೇಡುತ್ತಾರೆ. ಇದರ ಜೊತೆಗೆ ಅಪ್ಪ ಸತ್ತಿದ್ದಾನೆ. ಅಮ್ಮನಿಗೆ ಮಾರಕ ರೋಗ ಬಂದಿದೆ. ಅಕ್ಕನಿಗೆ ಮದುವೆ ಮಾಡಬೇಕು... ಇತ್ಯಾದಿ ಕತೆ ಹೇಳುವುದನ್ನು ಚೆನ್ನಾಗಿ ಕಲಿಸಿರುತ್ತಾರೆ. ಇದೇ ಕತೆಯನ್ನು ಬಂಡವಾಳವಾಗಿಸಿಕೊಂಡು ಈ ಮಕ್ಕಳು ನಗರದ ಸಿಗ್ನಲ್ ದೀಪ, ಜನನಿಬಿಡ ಪ್ರದೇಶದಲ್ಲಿ ಭಿಕ್ಷೆ ಬೇಡುತ್ತವೆ.

`ಮಕ್ಕಳಿಗೆ ನೀಡುವ ಭಿಕ್ಷೆಯಿಂದ ಒಳ್ಳೆಯದಾಗುವುದಿಲ್ಲ. ಮಕ್ಕಳಿಗೆ ನೆರವಾಗುವ ಉದ್ದೇಶವಿದ್ದರೆ, 1098ಗೆ ಡಯಲ್ ಮಾಡುವ ಮೂಲಕ ಮಕ್ಕಳ ಸಹಾಯವಾಣಿಗೆ ಮಾಹಿತಿ ನೀಡಿ~ ಎಂದು ಭಿಕ್ಷುಕ ಮಕ್ಕಳ ರಕ್ಷಣೆಯಲ್ಲಿ ತೊಡಗಿರುವ ಕಾರ್ಯಕರ್ತರೊಬ್ಬರು ವಿನಂತಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT