ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: 4 ಸಾವಿರ ಅಕ್ರಮ ನಲ್ಲಿ ಸಂಪರ್ಕ !

ನಗರ ಸಂಚಾರ
Last Updated 23 ಡಿಸೆಂಬರ್ 2013, 6:11 IST
ಅಕ್ಷರ ಗಾತ್ರ

ತುಮಕೂರು: ನಗರದಲ್ಲಿ 4 ಸಾವಿರ ಗೃಹ ಬಳಕೆಯ ಅಕ್ರಮ ನಲ್ಲಿ ಸಂಪರ್ಕಗಳಿದ್ದು, ಮಹಾನಗರ ಪಾಲಿಕೆಗೆ ಇವುಗಳ ಸಕ್ರಮ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಎರಡು ತಿಂಗಳಿಂದ ನಡೆಯುತ್ತಿರುವ ಅಕ್ರಮ–ಸಕ್ರಮಗೊಳಿಸುವ ಪಾಲಿಕೆಯ ಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ಸಿಕ್ಕಿಲ್ಲ. ಎಲ್ಲಕ್ಕೂ ಮಿಗಿಲಾಗಿ ಕೆಲ ಭಾಗಗಳಲ್ಲಿ ಪಾಲಿಕೆ ಸದಸ್ಯರೇ ಸಕ್ರಮಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ನಲ್ಲಿ ಸಂಪರ್ಕ ಕಡಿತಗೊಳಿಸಲು ಸದಸ್ಯರು ಬಿಡುತ್ತಿಲ್ಲ; ಸಂಪರ್ಕ ಕಡಿತಗೊಳಿಸದಂತೆ ಸಿಬ್ಬಂದಿ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಛಿ­ಸದ ಪಾಲಿಕೆ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಡವರು, ಮಧ್ಯಮ ವರ್ಗದವರಲ್ಲಿ ಅಕ್ರಮ ಕಡಿಮೆ. ಆದರೆ ಶ್ರೀಮಂತರು, ರಾಜಕೀಯ, ಅಧಿಕಾರಿಶಾಹಿಯ ಹಿನ್ನೆಲೆಯುಳ್ಳವರ ಮನೆಗಳಲ್ಲಿ ಅಕ್ರಮ ಸಂಪರ್ಕ ಹೆಚ್ಚಿದ್ದು, ಇಂಥವರನ್ನು ಪ್ರಶ್ನಿಸಲು ಕೂಡ ಸಾಧ್ಯವಾಗುತ್ತಿಲ್ಲ. ಸಿಬ್ಬಂದಿ ಮನೆ ಬಾಗಿಲಿಗೆ ತೆರಳುತ್ತಿದ್ದಂತೆ ರಾಜಕಾರಣಿಗಳು, ಉನ್ನತ ಅಧಿಕಾರಿಗಳ ಕಡೆಯಿಂದ ಮೊಬೈಲ್‌ ಕರೆ ಬರುತ್ತದೆ. ಹೀಗಾಗಿ ಏನು ಮಾಡದ ಅಸಹಾಯಕ ಸ್ಥಿತಿ ನಮ್ಮದಾಗಿದೆ ಎಂದೂ ಅವರು ಹೇಳಿದರು.

ಕೊಳವೆಬಾವಿ ನೀರು ಪೂರೈಕೆಯಾಗುತ್ತಿರುವ ಬಡಾವಣೆಗಳಿಗಿಂತಲೂ ಹೇಮಾವತಿ ನೀರು  ಪೂರೈಕೆಯಾಗುವ ಬಡಾವಣೆಗಳಲ್ಲೇ ಅತಿ ಹೆಚ್ಚು  ಅಕ್ರಮ ಇರುವುದು ಪಾಲಿಕೆ ಸಮೀಕ್ಷೆ ಬಹಿರಂಗಪಡಿಸಿದೆ.

ಈ ವಿಷಯದಲ್ಲಿ ಮರಳೂರು ದಿಣ್ಣೆ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನ  ಸಿದ್ದರಾಮೇಶ್ವರ ಬಡಾವಣೆ, ಗೋಕುಲ, ಜಯನಗರ ಪೂರ್ವ, ಪೂರ್‌ಹೌಸ್ ಕಾಲೊನಿ, ಗುಬ್ಬಿಗೇಟ್‌, ಮಂಡಿಪೇಟೆ, ಮಾರಿಯಮ್ಮ ನಗರ, ಶಿರಾಗೇಟ್‌ ಪಡೆದುಕೊಂಡಿವೆ.

ಪ್ರತಿ ಮನೆಗೆ ಒಂದೇ ಸಂಪರ್ಕ ಕೊಡಬೇಕು. ಆದರೆ ಎಸ್‌.ಎಸ್‌.ಪುರಂ, ಎಸ್‌ಐಟಿಯಂಥ ಪ್ರತಿಷ್ಠಿತ ಬಡಾವಣೆಗಳಲ್ಲಿ ಕೆಲ ಮನೆಗಳಿಗೆ ಮೂರು–ನಾಲ್ಕು ನಲ್ಲಿಗಳಿವೆ. ಈ ಭಾಗದಲ್ಲಿ ಅತಿ ಹೆಚ್ಚು ಪಿ.ಜಿ. ಕೇಂದ್ರಗಳಿರುವುದು ಕೂಡ ಈ ಹೆಚ್ಚಿನ ಸಂಪರ್ಕಕ್ಕೆ ಕಾರಣವಾಗಿದೆ. ಶ್ರೀಮಂತರ ಬಡಾವಣೆಗಳಲ್ಲಿ ನೀರಿನ ಸಂಪು ತುಂಬಿ ಆಚೆ ಹರಿಯುತ್ತಿದ್ದರೂ ನೀರು ನಿಲ್ಲಿಸುವುದಿಲ್ಲ. ಇದರಿಂದಾಗಿಯೂ ನೀರು ಪೋಲಾಗುತ್ತಿದೆ ಎಂದು ಹೇಳಲಾಗಿದೆ.

ಕೆಲ ಕಡೆಗಳಲ್ಲಿ ವಾಣಿಜ್ಯ ಉದ್ದೇಶಕ್ಕೂ ಗೃಹ ಬಳಕೆ ಸಂಪರ್ಕವನ್ನು ಪಾಲಿಕೆ ಎಂಜಿನಿಯರ್‌­ಗಳೇ ನೀಡಿರುವ ಪ್ರಕರಣಗಳು ಕೂಡ ಬೆಳಕಿಗೆ ಬರುತ್ತಿವೆ ಎಂದು ಮೂಲಗಳು ತಿಳಿಸಿವೆ.

ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ನೀಡುವ ಕನ್ನಡ ಗಂಗಾ ಯೋಜನೆಗೆ ಪಾಲಿಕೆ ಆಯ್ಕೆಯಾಗಿದ್ದು, ಯೋಜನೆ ಜಾರಿಯಾಗುವ  ಮುನ್ನವೇ ಮೀಟರ್‌ ಅಳವಡಿಸುವುದು ಕಡ್ಡಾಯವಾಗಿದೆ.

ಮೀಟರ್‌ ಅಳವಡಿಸುವತ್ತ ಪಾಲಿಕೆ ಮೊದಲ ಹೆಜ್ಜೆ ಇಟ್ಟಿದ್ದು, ವಾಣಿಜ್ಯ ಉದ್ದೇಶದ ಬಳಕೆಯ 10ಕ್ಕೂ ಹೆಚ್ಚು ಸಂಪರ್ಕಗಳಿಗೆ ಮೀಟರ್‌ ಅಳವಡಿಸಲಾಗಿದೆ.

ಮೀಟರ್‌ ಅಳವಡಿಸಿದ ನಂತರ ಗೃಹ ಬಳಕೆದಾರರಿಗೆ ಕನಿಷ್ಠ ಮಾಸಿಕ ದರ ರೂ. 56 ನಿರ್ಧರಿಸಲಾಗಿದೆ. ನಂತರದ 8 ಸಾವಿರ ಲೀಟರ್‌ ನೀರಿಗೆ ರೂ.7 ಹಾಗೂ 8 ಸಾವಿರದಿಂದ 15ಸಾವಿರ ಲೀಟರ್‌ ಬಳಕೆಗೆ ರೂ.9 ದರ ವಿಧಿಸಲಾಗುವುದು.

ವಾಣಿಜ್ಯ ಬಳಕೆದಾರರಿಗೆ ಕನಿಷ್ಠ ಮಾಸಿಕ ದರ ರೂ.112 ಆಗಿದ್ದು ನಂತರದ ಹೆಚ್ಚುವರಿ 8 ಸಾವಿರ ಲೀಟರ್‌ಗೆ ರೂ.14, 8 ಸಾವಿರದಿಂದ 15 ಸಾವಿರ ಲೀಟರ್ ವರೆಗೆ ರೂ.18 ತೆರಬೇಕಾಗಲಿದೆ. ಪಾಲಿಕೆಗೆ ಬಂದಿರುವ ರೂ.100 ಕೋಟಿ ವಿಶೇಷ ಅನುದಾನದಲ್ಲಿ ರೂ.15 ಕೋಟಿ ಕುಡಿಯುವ ನೀರಿನ ಸುಧಾರಣೆಗಾಗಿ ಮೀಸಲಿಡಲಾಗಿದೆ.

ವಿ.ವಿ.ಗೆ ಪಾಲಿಕೆ ಪತ್ರ
ಮೀಟರ್‌ ಅಳವಡಿಸಿಕೊಳ್ಳುವಂತೆ ತುಮಕೂರು ವಿಶ್ವವಿದ್ಯಾಲಯಕ್ಕೆ ಪಾಲಿಕೆ ಪತ್ರ ಬರೆದಿದೆ. ವಾಣಿಜ್ಯ ಬಳಕೆ ಕಾರಣ ವಿಶ್ವವಿದ್ಯಾಲಯದ ಹಣದಲ್ಲೇ ಮೀಟರ್‌ ಅಳವಡಿಸಿಕೊಳ್ಳುವಂತೆ ಪತ್ರದಲ್ಲಿ ಸೂಚಿಸಲಾಗಿದೆ.

ಈ ಹಿಂದೆ ವಿಶ್ವವಿದ್ಯಾಲಯ ಖಾಸಗಿ ವ್ಯಕ್ತಿಗಳಿಂದ ನೀರು ಖರೀದಿಸುತ್ತಿತ್ತು. ಕುಲಪತಿ ಡಾ. ರಾಜಾಸಾಬ್‌ ಬಂದ ನಂತರ ಖಾಸಗಿಯಾಗಿ ನೀರು ಖರೀದಿಗೆ ಇತಿಶ್ರೀ ಹೇಳಿದ್ದು,  ಪಾಲಿಕೆಯಿಂದ ಹೇಮಾವತಿ ನೀರು ಪಡೆಯಲಾಗುತ್ತಿದೆ ಎಂಬುದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT