ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ಕಸ ಎಲ್ಲಿಗೆ ಸಾಗಿಸಲಾಗುತ್ತಿದೆ ?

ಕಸ ತೆಗೆಯಲು ವಾರ್ಷಿಕ ರೂ. 30 ಲಕ್ಷ ವೆಚ್ಚ
Last Updated 14 ಏಪ್ರಿಲ್ 2013, 9:06 IST
ಅಕ್ಷರ ಗಾತ್ರ

ತುಮಕೂರು: ನಗರದ ಕಸ ತೆಗೆಯಲು ವಾರ್ಷಿಕ 30 ಲಕ್ಷ ರೂಪಾಯಿ ವೆಚ್ಚ ಮಾಡಲಾಗುತ್ತಿದೆ. ಆದರೆ ಕಸ ಮಾತ್ರ ನಗರದ ಎಲ್ಲೆಂದರಲ್ಲಿ ಚೆಲ್ಲಾಡುತ್ತಿದ್ದು, ಕಸವನ್ನು ಎಲ್ಲಿಗೆ ಸಾಗಿಸಲಾಗುತ್ತಿದೆ ಎಂಬ ಬಗ್ಗೆ ನಗರಸಭೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ!

ಕಳೆದ 2012 ಜೂನ್‌ನಲ್ಲಿ ಟೆಂಡರ್ ನೀಡಲಾಗಿದೆ. ಗುತ್ತಿಗೆ ಅವಧಿ ಇದೇ ಮೇನಲ್ಲಿ ಮುಗಿಯುತ್ತದೆ. ಕಸ ತೆಗೆದು ನಗರದಿಂದ ಹೊರಗೆ ಸಾಗಿಸಿ, ವೈಜ್ಞಾನಿಕವಾಗಿ ವರ್ಗಿಕರಿಸಲು ರೂ. 30 ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಕಳೆದ 1 ವರ್ಷದಿಂದ ನಗರದ ಕಸ ತೆಗೆಯುವ ಕಾರ್ಯ ನಿರ್ವಹಿಸುವಲ್ಲಿ ಗುತ್ತಿಗೆದಾರರು ವಿಫಲರಾಗಿದ್ದರೂ ತೆರಿಗೆದಾರರ ಹಣ ಮಾತ್ರ ಗುತ್ತಿಗೆದಾರರ ಜೇಬು ಸೇರಿದೆ.

ನಗರದ ನಿವಾಸಿಗಳ ಮೇಲೆ ನಗರಸಭೆ ಕಸದ ಸೆಸ್ ಹಾಕುತ್ತಿದೆ. ಪ್ರತಿ ಮನೆ ಮತ್ತು ನಿವೇಶನದ ಕಂದಾಯದ ಜತೆ ಕಸದ ಸೆಸ್ ಸಹ ತೆರಬೇಕು. ಸೆಸ್ ಪಡೆಯುವ ನಗರಸಭೆ ಪ್ರತಿ ಮನೆಯಿಂದ ಕಸ ಸಂಗ್ರಹಿಸಬೇಕು. ಆದರೆ ಜನತೆ ಕಂಟೈನರ್‌ಗಳಲ್ಲಿ ಸುರಿಯುವ ಕಸವನ್ನು ಸಹ ಸಮರ್ಪಕವಾಗಿ ಸಾಗಿಸುತ್ತಿಲ್ಲ. ನಗರದ ಎಲ್ಲೆಂದರಲ್ಲಿ ಕಸದ ಕಂಟೈನರ್‌ಗಳು ತುಂಬಿ ತುಳುಕುತ್ತಿವೆ. ಕಸ ನಿರ್ವಹಣೆಗೆ ಗುತ್ತಿಗೆ ನೀಡಿ ಕೈತೊಳೆದುಕೊಂಡಿದ್ದು ಹೊರತುಪಡಿಸಿ, ಬೇರೆ ಯಾವುದೇ ಕ್ರಮಕೈಗೊಂಡಿಲ್ಲ. ಜನತೆಗೆ ಸೇವೆ ದೊರೆಯದೆ ಹೋದರೂ ಸೆಸ್ ಪಾವತಿಸಬೇಕಾಗಿದೆ.

ಪ್ರತಿ ವಾರ್ಡ್‌ಗೆ ಗುತ್ತಿಗೆದಾರರು ಪೌರಕಾರ್ಮಿಕರನ್ನು ನೇಮಕ ಮಾಡಿ ನಗರ ಸ್ವಚ್ಛತೆ ಕಾಪಾಡಬೇಕು. ಇಲ್ಲದಿದ್ದರೆ ಕಸ ಗುಡಿಸುವ ಯಂತ್ರಗಳನ್ನು ಬಳಸಬಹುದು. ಗುತ್ತಿಗೆ ಪಡೆದ ಆರಂಭದಲ್ಲಿ ಒಂದೆರಡು ದಿನ ಯಂತ್ರ ಬಳಸಿ ನಗರದ ಮುಖ್ಯ ರಸ್ತೆಗಳನ್ನು ಸ್ವಚ್ಛಗೊಳಿಸಲಾಯಿತು. ಆದರೆ ಯಂತ್ರ ಬಳಕೆಯಿಂದ ರಸ್ತೆಗಳು ಹಾಳಾಗುತ್ತವೆ ಎಂಬ ಕಾರಣ ನೀಡಿ ಯಂತ್ರಗಳ ಬಳಕೆ ನಿಲ್ಲಿಸಲಾಯಿತು. ಆದರೂ ಈ ಕೆಲಸಕ್ಕೆ ಹೆಚ್ಚುವರಿ ಪೌರಕಾರ್ಮಿಕರನ್ನು ಗುತ್ತಿಗೆದಾರರು ನೇಮಕ ಮಾಡಿಕೊಳ್ಳಲಿಲ್ಲ. ಕೇವಲ ಬೆರಳೆಣಿಕೆಯ ಪೌರಕಾರ್ಮಿಕರನ್ನು ಬಳಸಿಕೊಂಡು `ಶಾಸ್ತ್ರ ಮಾಡಿದಂತೆ' ಕಸ ತೆಗೆಯುವ ಕೆಲಸ ನಡೆಯುತ್ತಿದೆ.

ನಗರದ ಕಸವನ್ನು ನಿರ್ಲಕ್ಷ್ಯಿಸುತ್ತಿರುವ ಗುತ್ತಿಗೆದಾರರು ಹೋಟೆಲ್ ಮತ್ತು ಕಲ್ಯಾಣ ಮಂಟಪಗಳ ಕಸವನ್ನು ಮಾತ್ರ ಪ್ರತಿನಿತ್ಯ ಪ್ರಾಮಾಣಿಕವಾಗಿ ಸಾಗಿಸುತ್ತಿದ್ದಾರೆ! ವಾಣಿಜ್ಯ ಉದ್ದೇಶದ ಕಸ ಸಾಗಿಸುವುದರಿಂದ ಗುತ್ತಿಗೆದಾರರಿಗೆ ಮೂರು ರೀತಿಯಲ್ಲಿ ಲಾಭವಾಗುತ್ತಿದೆ. ನಗರಸಭೆಯಿಂದ ಮಾತ್ರವಲ್ಲದೆ ಸಮಯಕ್ಕೆ ಸರಿಯಾಗಿ ಸಾಗಿಸುವ ಸಲುವಾಗಿ ಹೋಟೆಲ್ ಮತ್ತು ಕಲ್ಯಾಣ ಮಂಟಪದ ಮಾಲೀಕರು ಸಹ ಪ್ರತ್ಯೇಕವಾಗಿ ಹಣ ನೀಡುತ್ತಾರೆ.

ಅಲ್ಲದೆ ಇದರಲ್ಲಿ ಆಹಾರ ಪದಾರ್ಥಗಳು ಮತ್ತು ಹಣ್ಣು, ತರಕಾರಿ ಮುಂತಾದ ಕೊಳೆಯುವ ಪದಾರ್ಥಗಳು ದೊರೆಯುತ್ತವೆ. ಇದನ್ನು ತೋಟಗಳಿಗೆ ಸಾಗಿಸಿ ಗೊಬ್ಬರ ಮಾಡಲಾಗುತ್ತದೆ. ನಂತರ ಇದನ್ನು ಸಾವಯವ ಗೊಬ್ಬರದ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಈ ಗೊಬ್ಬರಕ್ಕೆ ತುಂಬಾ ಬೇಡಿಕೆ ಇದೆ ಎನ್ನಲಾಗಿದೆ. ಆದರೆ ಕೊಳೆಯದ ಮತ್ತು ಗೊಬ್ಬರವಾಗದ ಕಸವನ್ನು ಮಾತ್ರ ನಗರದ ಅಕ್ಕತಂಗಿ ಕೆರೆ, ಸರ್ಕಾರಿ ಜಾಗ ಸೇರಿದಂತೆ ಎಲ್ಲೆಂದರಲ್ಲಿ ಸುರಿದು ಬರಲಾಗುತ್ತಿದೆ. ಈ ಬಗ್ಗೆ ನಗರಸಭೆ ಅಧಿಕಾರಿಗಳು ಸಹ ಚಕಾರ ಎತ್ತುತ್ತಿಲ್ಲ.

`ನಗರದ ಕಸ ತೆಗೆಯುವ ಟೆಂಡರ್ ಪಡೆಯುವುದು ಕಳೆದ ಹಲ ವರ್ಷಗಳಿಂದ ದಂಧೆಯಾಗಿದ್ದು, ಕಸ ತೆಗೆದು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕು ಎಂದು ಗುತ್ತಿಗೆ ಕರಾರಿನಲ್ಲಿ ನಮೂದಿಸಿದ್ದರೂ ಅಧಿಕಾರಿಗಳೊಂದಿಗೆ ಗುತ್ತಿಗೆದಾರರು ಒಳಒಪ್ಪಂದ ಮಾಡಿಕೊಂಡು ಎಲ್ಲೆಂದರಲ್ಲಿ ಕಸ ಸುರಿಯುತ್ತಾರೆ' ಎಂದು ಹೆಸರು ಹೇಳಲಿಚ್ಚಿಸದ ನಗರಸಭೆ ಮಾಜಿ ಸದಸ್ಯರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT