ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು ನಗರಸಭೆ ಇ-ಟೆಂಡರ್‌ಗೆ ಕನ್ನ ಪ್ರಕರಣ:ಎಂಜಿನಿಯರ್ ತಲೆದಂಡ

Last Updated 19 ಅಕ್ಟೋಬರ್ 2012, 7:55 IST
ಅಕ್ಷರ ಗಾತ್ರ

ತುಮಕೂರು: ಬೀದಿ ದೀಪ ನಿರ್ವಹಣೆ ಮತ್ತು ದುರಸ್ತಿ ಕಾಮಗಾರಿಯ ಇ-ಟೆಂಡರ್ ಪ್ರಕ್ರಿಯೆಗೆ ಕನ್ನ ಹಾಕಿ ಗೌಪ್ಯ ಮಾಹಿತಿಯನ್ನು ಗುತ್ತಿಗೆದಾರರೊಬ್ಬರಿಗೆ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಉಪಾಧ್ಯಕ್ಷರನ್ನು ಪಾರು ಮಾಡಲಾಗಿದೆ. ಆದರೆ ಇದೇ ಪ್ರಕರಣದಲ್ಲಿ ನಗರಸಭೆ ಕಿರಿಯ ಎಂಜಿನಿಯರ್ ತಲೆತಂಡ ಪಡೆಯಲಾಗಿದೆ.

ಯೂಸರ್‌ನೇಮ್, ಪಾಸ್‌ವರ್ಡ್ ದುರುಪಯೋಗಪಡಿಸಿಕೊಂಡು ಟೆಂಡೆರ್ ಪ್ರಕ್ರಿಯೆಯಲ್ಲಿನ ಮಾಹಿತಿ ನೀಡಿದ ಕಾರಣಕ್ಕಾಗಿ ನಗರಸಭೆ ಪ್ರೊಬೆಷನರಿ ಕಿರಿಯ ಎಂಜಿನಿಯರ್ ಮಾರ್ಟಿನಾ ಅವರನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆದರೆ ಬಲವಂತದಿಂದ ಮಾಹಿತಿ ಪಡೆದ ಉಪಾಧ್ಯಕ್ಷರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ.

`ದೀಪ ನಿರ್ವಹಣೆ ಗುತ್ತಿಗೆ; ನಗರಸಭೆ ಇ-ಟೆಂಡರ್‌ಗೆ ಕನ್ನ~ ಶೀರ್ಷಿಕೆಯಡಿ ಆ. 30ರಂದು `ಪ್ರಜಾವಾಣಿ~ ಸುದ್ದಿ ಪ್ರಕಟಿಸಿತು. ಪಾರದರ್ಶಕ, ಗೌಪ್ಯ ಟೆಂಡರ್ ಪ್ರಕ್ರಿಯೆ ಎಂದೇ ಬಿಂಬಿತವಾದ ಇ-ಪ್ರೊಕ್ಯೂಟರ್‌ಮೆಂಟ್ ಪ್ರಕ್ರಿಯೆ ಕೂಡ ನಗರಸಭೆಯಲ್ಲಿ ಸುರಕ್ಷಿತವಾಗಿಲ್ಲ. ಯೂಸರ್‌ನೇಮ್, ಪಾಸ್‌ವರ್ಡ್ ಬಳಸಿ ಗುತ್ತಿಗೆದಾರರು ನಮೂದು ಮಾಡುವ ಬಿಡ್ ಮಾಹಿತಿ ಕದ್ದು ಪಡೆಯುತ್ತಿರುವ ಕುರಿತು ವರದಿ ಬೆಳಕು ಚೆಲ್ಲಿತ್ತು.

ಪತ್ರಿಕೆಯ ವರದಿ ಆಧರಿಸಿ ಬಿಡ್‌ನಲ್ಲಿ ಪಾಲ್ಗೊಂಡಿದ್ದ ಯೂನಿವರ್ಸಲ್ ಟ್ರಾನ್ಸ್‌ಮಿಷನ್ ಲೈನ್ ಪ್ರಾಡಕ್ಟ್ ಕಂಪೆನಿಯು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿತ್ತು. ದೂರಿನ ಹಿನ್ನೆಲೆಯಲ್ಲಿ ಟೆಂಡರ್ ಪ್ರಕ್ರಿಯೆ ರದ್ದುಪಡಿಸಿದ್ದ ಜಿಲ್ಲಾಧಿಕಾರಿ ತನಿಖೆಗೆ ಆದೇಶಿಸಿದ್ದರು.

ಟೆಂಡರ್ ಮಾಹಿತಿ ಸೋರಿಕೆ ಸಂಬಂಧ ಜಿಲ್ಲಾಧಿಕಾರಿ ಪತ್ರಕ್ಕೆ ಉತ್ತರ ನೀಡಿರುವ ನಗರಸಭೆ ಆಯುಕ್ತೆ ರೋಹಿಣಿ ಸಿಂಧೂರಿ, ಇ-ಟೆಂಡರ್‌ನಲ್ಲಿ ಅವ್ಯವಹಾರವಾಗಿಲ್ಲ ಎಂದು ಸಮರ್ಥಿಸಿಕೊಳ್ಳುವ ಭರದಲ್ಲಿ ಅವ್ಯವಹಾರ ಆಗಿರುವುದನ್ನು ಒಪ್ಪಿಕೊಳ್ಳುವ ಮೂಲಕ ಇದೀಗ ಇಕ್ಕಟ್ಟಿಗೆ ಸಿಲುಕಿದ್ದಾರೆ ಎನ್ನಲಾಗಿದೆ.

ಟೆಂಡರ್ ಪ್ರಕ್ರಿಯೆ ಸೋರಿಕೆಯಾದ ಸುದ್ದಿ ತಿಳಿದ ದಿನವೇ ಎಂಜಿನಿಯರ್ ಮಾರ್ಟಿನಾ ಹಾಗೂ ಉಪಾಧ್ಯಕ್ಷರಿಗೆ ಆಯುಕ್ತರು ನೋಟಿಸ್ ನೀಡಲು ಮುಂದಾಗಿದ್ದರು. ಉಪಾಧ್ಯಕ್ಷರಿಗೆ ನೀಡಬೇಕಾದ ನೋಟಿಸ್ ಕೂಡ ಸಿದ್ಧಪಡಿಸಲಾಗಿತ್ತು. ಆದರೆ ಕಡೇ ಗಳಿಗೆಯಲ್ಲಿ ಉಪಾಧ್ಯಕ್ಷರಿಗೆ ನೋಟಿಸ್ ನೀಡದೆ ಎಂಜಿನಿಯರ್ ಮಾರ್ಟಿನಾ ಅವರಿಗಷ್ಟೇ ನೋಟಿಸ್ ನೀಡಿ ಕಾರಣ ಕೇಳಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಟೆಂಡರ್ ಮಾಹಿತಿ ಸೋರಿಕೆಯಿಂದಾಗಿ ಜಿಲ್ಲಾಧಿಕಾರಿ ಕಚೇರಿಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನಗರಸಭೆ ಆಯುಕ್ತರಿಗೆ ಈಚೆಗಷ್ಟೇ ಪತ್ರ ಬರೆದು ಬೀದಿ ದೀಪ ನಿರ್ವಹಣೆಯ ಹೊಸ ಟೆಂಡರ್ ಕರೆಯುವಂತೆ ಸೂಚಿಸಿದ್ದಾರೆ. `ಇ- ಟೆಂಡರ್‌ಗೆ ಕನ್ನ~ ಸಂಬಂಧ ಆಯುಕ್ತರ ಸ್ಪಷ್ಟನೆಗೂ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ.

ಟೆಂಡರ್ ಪ್ರಕ್ರಿಯೆ ಸೋರಿಕೆ ಸಂಬಂಧ ಉಪಾಧ್ಯಕ್ಷರು ತಮ್ಮ ಮೇಲೆ ಒತ್ತಡ ಹಾಕಿ ಮಾಹಿತಿ ಪಡೆದುಕೊಂಡರು ಎಂದು ಕಿರಿಯ ಎಂಜಿನಿಯರ್ ಮಾರ್ಟಿನಾ ನೋಟಿಸ್‌ಗೆ ಪ್ರತಿಯಾಗಿ ನೀಡಿರುವ ಒಂದು ಪುಟದ ಉತ್ತರದಲ್ಲಿ ತಿಳಿಸಿರುವ ಕಡೆಗೂ ಯೋಜನಾ ನಿರ್ದೇಶಕರು ಗಮನ ಸೆಳೆದಿದ್ದಾರೆ.

ನಗರಸಭೆ ಆಯುಕ್ತರು ನೀಡಿರುವ ಸ್ಪಷ್ಟೀಕರಣ ಮಾತ್ರವಲ್ಲದೆ ಎಂಜಿನಿಯರ್ ಮಾರ್ಟಿನಾ ಅವರು ನಗರಾಭಿವೃದ್ಧಿ ಶಾಖೆ ಕಾರ್ಯಪಾಲಕ ಎಂಜಿನಿಯರ್ ಮತ್ತು ಯೋಜನಾ ನಿರ್ದೇಶಕರ ಉಪಸ್ಥಿತಿಯಲ್ಲಿ ನಡೆದ ವಿಚಾರಣೆಯಲ್ಲೂ ಟೆಂಡರ್ ಮಾಹಿತಿ ಅನಧಿಕೃತವಾಗಿ ಉಪಾಧ್ಯಕ್ಷರಿಗೆ ನೀಡಿರುವುದಾಗಿ ಒಪ್ಪಿಕೊಂಡಿರುವುದನ್ನು ನಗರಸಭೆಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.

ಟೆಂಡರ್ ಮಾಹಿತಿ ಪಡೆಯಲು ಉಪಾಧ್ಯಕ್ಷರು ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಸಾಧ್ಯತೆ ಇದೆ. ಹೀಗಾಗಿ ಬೀದಿ ದೀಪ ನಿರ್ವಹಣೆಗೆ ನಗರಸಭೆ ಅಂಗೀಕರಿಸಿರುವ ಗುತ್ತಿಗೆದಾರರಿಗೆ ಟೆಂಡರ್ ನೀಡಲು ಸಾಧ್ಯವಿಲ್ಲ ಎಂದು ಯೋಜನಾ ನಿರ್ದೇಶಕರು ಸ್ಪಷ್ಟಪಡಿಸಿದರುವ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಟೆಂಡರ್ ಕರೆಯಲಾಗಿದೆ.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನಗರಸಭೆಗೆ ಬರೆದಿರುವ ಪತ್ರದಲ್ಲೇ ಉಪಾಧ್ಯಕ್ಷರು ಅಧಿಕಾರ ದುರುಪಯೋಗದ ಕುರಿತು ಹೇಳಿದ್ದರೂ ಉಪಾಧ್ಯಕ್ಷರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಧಿಕಾರಿ, ಆಯುಕ್ತರು ಹಿಂದೇಟು ಹಾಕಿರುವುದು ಚರ್ಚೆಗೆ ಕಾರಣವಾಗಿದೆ.

ಸದಸ್ಯರು ನೌಕರರೇ...
ಕರ್ನಾಟಕ ಮುನ್ಸಿಪಲ್ ಕಾಯ್ದೆ ಪ್ರಕಾರ ನಗರಸಭೆ ಸದಸ್ಯರನ್ನು ಕೂಡ ನೌಕರರೆಂದು ಪರಿಗಣಿಸಲಾಗುತ್ತದೆ. ಅಧ್ಯಕ್ಷರು, ಉಪಾಧ್ಯಕ್ಷರು ಸೇರಿದಂತೆ ಯಾವುದೇ ಸದಸ್ಯ ಅಧಿಕಾರ ದುರುಪಯೋಗಪಡಿಸಿಕೊಂಡರೆ ಅಂತಹವರಿಗೆ ಶಿಕ್ಷೆ ನೀಡಲು ಕಾಯ್ದೆ ಅವಕಾಶ ಮಾಡಿಕೊಟ್ಟಿದೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ-1947 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್- 21ರ ಪ್ರಕಾರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರನ್ನು ಸರ್ಕಾರಿ ಸೇವಕ ಎಂದು ಪರಿಗಣಿಸಲಾಗಿದೆ. ಅಧಿಕಾರ ದುರುಪಯೋಗ ಮಾಡಿದ್ದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬಹುದಾಗಿದೆ.

ಮತ್ತೊಮ್ಮೆ ಟೆಂಡರ್
ಆರಂಭದಿಂದಲೂ ಬೀದಿ ದೀಪ ನಿರ್ವಹಣೆ ಮತ್ತು ದುರಸ್ತಿ ಕೆಲಸದ ಟೆಂಡರ್‌ಗೆ ವಿಘ್ನ ಎದುರಾಗಿವೆ. ಮೊದಲ ಸಲ ಟೆಂಡರ್‌ನಲ್ಲಿ ಒಬ್ಬರು ಭಾಗಿಯಾದ ಕಾರಣ ಟೆಂಡರ್ ರದ್ದುಪಡಿಸಲಾಯಿತು. 2ನೇ ಅವಧಿಯಲ್ಲಿ ಮೂವರು ಗುತ್ತಿಗೆದಾರರು ಟೆಂಡರ್‌ನಲ್ಲಿ ಪಾಲ್ಗೊಂಡರೂ ಟೆಂಡರ್ ಪ್ರಕ್ರಿಯೆ ಸೋರಿಕೆಯಿಂದಾಗಿ ಅದನ್ನೂ ರದ್ದುಗೊಳಿಸಲಾಗಿದೆ. ಈಗ ಮೂರನೇ ಸಲ ಟೆಂಡರ್ ಕರೆದಿದ್ದು, ಅ. 30ರವರೆಗೂ ಅರ್ಜಿ ಸಲ್ಲಿಸಲು ಕಾಲಾವಕಾಶವಿದೆ.

ಅರ್ಧ ನಗರ ಕತ್ತಲಲ್ಲಿ
ಬೀದಿ ದೀಪ ನಿರ್ವಹಣೆ ಮತ್ತು ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ ನಗರದ ಅರ್ಧ ಭಾಗ ಕತ್ತಲಲ್ಲಿ ಮುಳುಗಿದೆ. ಪ್ರತಿ ವಾರ್ಡ್‌ನಲ್ಲೂ ನೂರಕ್ಕೂ ಅಧಿಕ ಬೀದಿ ದೀಪಗಳು ಕೆಟ್ಟಿವೆ. ಅವುಗಳನ್ನು ತಿಂಗಳಿಂದಲೂ ದುರಸ್ತಿಗೊಳಿಸಿಲ್ಲ.

ಅಲ್ಲದೆ ಸಮಯಕ್ಕೆ ಸರಿಯಾಗಿ ದೀಪ ಆರಿಸದ ಕಾರಣ ನಗರಸಭೆಗೆ ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ ಹೊರೆಯಾಗುತ್ತಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT