ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮರಿ: ದ್ವೀಪವಾಸಿಗಳ ಗೋಳು ಕೇಳೋರಿಲ್ಲ

Last Updated 10 ಅಕ್ಟೋಬರ್ 2011, 8:35 IST
ಅಕ್ಷರ ಗಾತ್ರ

ತುಮರಿ: ಮೂರು ದಿನಗಳಲ್ಲಿ ಸಮೀಪದ ಸಿಗಂದೂರು ದೇವಾಲಯಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಆಗಮಿಸಿರುವ ಮತ್ತು ಈ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯ ಹಿನ್ನೆಲೆಯಲ್ಲಿ ದ್ವೀಪವಾಸಿಗಳಲ್ಲಿ ಆತಂಕ ಮನೆ ಮಾಡಿದ್ದು, ಲಾಂಚ್ ನಿಲ್ದಾಣಗಳಲ್ಲಿ ಸ್ಥಳೀಯರ ಬವಣೆ ಕೇಳುವವರಿಲ್ಲವಾಗಿದೆ.

ಮೂರು ದಿನದಿಂದ ಕರೂರು ಬಾರಂಗಿ ಹೋಬಳಿಯ ಸಂಪೂರ್ಣ ಬಸ್‌ಸೌಕರ್ಯ ನಿಂತು ಹೋಗಿದ್ದು, ನಿತ್ಯ ಬೇಡಿಕೆಗಳಾದ ಹಾಲು, ದಿನಪತ್ರಿಕೆಗಳು, ಅಂಚೆ ಸರಬರಾಜು ಪ್ರಕ್ರಿಯೆ ಹೆಚ್ಚು ಕಮ್ಮಿ ಸ್ಥಗಿತಗೊಂಡಿದೆ.

ದಸರಾ ಮುಕ್ತಾಯದ ದಿನದಿಂದ ಸರ್ಕಾರಿ ರಜೆ ಮತ್ತು ವಿದ್ಯಾರ್ಥಿಗಳಿಗೆ ದಸರಾ ರಜೆ ದೊರೆತಿರುವುದರಿಂದ ಲಾಂಚ್ ಪ್ರಯಾಣಕ್ಕೆ ಪ್ರವಾಸಿಗರು ಮತ್ತು ಸಿಗಂದೂರು ಚೌಡೇಶ್ವರಿ ದೇವಾಲಯಕ್ಕೆ ಭಕ್ತರು ಹಿಂದೆಂದೂ ಕಾಣದ ರೀತಿಯಲ್ಲಿ ಭಾರೀ ಸಂಖ್ಯೆಯ ಜನ ಆಗಮಿಸಿರುವುದೇ ಇದಕ್ಕೆ ಕಾರಣವಾಗಿದೆ.

ಕರೂರು ಬಾರಂಗಿ ಹೋಬಳಿಯ ಸುಮಾರು 20 ಸಾವಿರ ಜನರು ತಮ್ಮ ನಿತ್ಯ ಜೀವನದ ಭಾಗವಾಗಿ ತಾಲ್ಲೂಕು ಕೇಂದ್ರವಾದ ಸಾಗರವನ್ನು ತಲುಪಲು ಲಾಂಚ್ ಏಕಮಾತ್ರ ಸಾಧನವಾಗಿದೆ. ಈ ಕಾರಣದಿಂದಲೇ ಲಾಂಚ್‌ನ್ನು ಒದಗಿಸಲಾಗಿದ್ದು, ಮುಳುಗಡೆ ದ್ವೀಪದ ಜನರಿಗೆ ನ್ಯಾಯ ಒದಗಿಸಲು ನೀಡಿದ ಲಾಂಚ್‌ನಲ್ಲಿ ಸ್ಥಳೀಯರಿಗೆ ಅವಕಾಶವೇ ಇಲ್ಲವಾಗಿದೆ.

ಮೂರು ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರಿಂದ ದ್ವೀಪದಿಂದ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೊರಟ ರೋಗಿಗಳು, ಹಿರಿಯ ನಾಗರಿಕರು ಮತ್ತು ಮಹಿಳೆಯರಿಗೆ ಬಸ್‌ಸೌಕರ್ಯವೇ ಇಲ್ಲದೇ ಪರದಾಡುವಂತಾಯಿತು. ನಿತ್ಯ ಸಂಚಾರಕ್ಕೆ ರಹದಾರಿ ಪಡೆದಿರುವ ಬಸ್‌ಗಳು ಸಹ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ, ಅಧಿಕ ಲಾಭದ ಆಸೆಯಿಂದ ದೇವಸ್ಥಾನ ಮತ್ತು ಲಾಂಚ್‌ನಿಲ್ದಾಣಕ್ಕೆ ಸೇವೆಯನ್ನು ಸೀಮಿತಗೊಳಿಸಿದ್ದೇ ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಎರಡು ಲಾಂಚ್‌ನಿಲ್ದಾಣದಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ನಿಯಂತ್ರಿಸುವುದೇ ಒಂದು ಸಾಹಸವಾಗಿದೆ. ಶನಿವಾರ ದ್ವೀಪದಲ್ಲಿ ಹಾವು ಕಡಿದ ರೈತನೊಬ್ಬನನ್ನು ತುರ್ತು ಚಿಕಿತ್ಸೆಗೆ ಸಾಗರ ಕೊಂಡೊಯ್ಯುವುದಕ್ಕೆ ಲಾಂಚ್‌ನಿಲ್ದಾಣದಲ್ಲಿ ಗಂಟೆಗಟ್ಟಲೇ ಕಾಯಬೇಕಾದ ಪ್ರಸಂಗ ಹೋಬಳಿಯ ನಾಗರಿಕರಲ್ಲಿ ಜಿಲ್ಲಾಡಳಿತದ ಬಗ್ಗೆ ಅಸಹನೆ ಮೂಡುವಂತೆ ಮಾಡಿತು.

ಈಗಾಗಲೇ, ದ್ವೀಪದಿಂದ ಕಾರ್ಗಲ್ ಮಾರ್ಗದ ಮೂಲಕ ಸಾಗರಕ್ಕೆ ಸಂಪರ್ಕ ಕಲ್ಪಿಸುವ ಕೋಗಾರ್ ಮಾರ್ಗ ಎಣ್ಣೆಹೊಳೆ ಸೇತುವೆ ಮುರಿದ ಕಾರಣ ಮುಚ್ಚಿರುವುದರಿಂದ ಸ್ಥಳೀಯ ಜನರಿಗೆ ಲಾಂಚ್‌ನ ಅನಿವಾರ್ಯತೆಯೂ ಹೆಚ್ಚಿದೆ. ನಮಗಾಗಿ ನೀಡಿರುವ ಲಾಂಚ್‌ನಲ್ಲಿ ನಮಗೇ ಅವಕಾಶವಿಲ್ಲ ಎಂಬುದು ಎಲ್ಲಿಯ ನ್ಯಾಯ..? ಪ್ರವಾಸಿಗರ ಅನುಕೂಲತೆಗೆ ಸರ್ಕಾರ ಹೆಚ್ಚುವರಿ ಲಾಂಚ್ ನೀಡಲಿ ಎನ್ನುವ ದ್ವೀಪವಾಸಿಗಳು ಮಂಗಳವಾರದ ನಂತರವೂ ಪರಿಸ್ಥಿತಿ ಹೀಗೆ ಮುಂದುವರಿದರೆ ಪಕ್ಷಾತೀತವಾಗಿ ಲಾಂಚ್‌ನ್ನು ಕಟ್ಟಿಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT