ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳು ಭಾಷೆ: ಸರ್ಕಾರದ ತಾರತಮ್ಯ ನಿಲ್ಲಲಿ

Last Updated 7 ಫೆಬ್ರುವರಿ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು:  ಪಂಚದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯ ವಿಚಾರದಲ್ಲಿ ಆಡಳಿತ ನಡೆಸುವವರಲ್ಲಿ ತಾರತಮ್ಯ ಭಾವನೆ ಇದೆ. ಕೇಳದೆ, ಪ್ರತಿಭಟನೆ ನಡೆಸದೆ ಯಾವುದನ್ನೂ ನೀಡುವ ಪರಿಪಾಠ ಇಲ್ಲಿ ಇಲ್ಲ. ಕನ್ನಡದ ನೆಲದಲ್ಲಿ ತುಳು ಮುಂದೆಯೂ ಸಾಮರಸ್ಯದಿಂದ ಉಳಿಯಬೇಕಾದರೆ ತುಳು ಭಾಷೆಯ ಪ್ರಗತಿಗೆ ಕನ್ನಡವು ಸಂಪೂರ್ಣ ಪ್ರೋತ್ಸಾಹ ನೀಡಬೇಕು ಎಂದು ಸಾಹಿತಿ ಡಿ.ಕೆ.ಚೌಟ ಆಗ್ರಹಿಸಿದರು.

ರಾಜಾಜಿನಗರದ ರಾಜ್‌ಕುಮಾರ್ ಕಲಾಕ್ಷೇತ್ರದಲ್ಲಿ ಕರ್ನಾಟಕ ತುಳು ಅಕಾಡೆಮಿ ಮತ್ತು ತುಳುಕೂಟ ಬೆಂಗಳೂರು ವತಿಯಿಂದ ಭಾನುವಾರ ನಡೆದ ತುಳು ಸಮ್ಮೇಳನದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಸಂವಿಧಾನದ 8ನೇ ಪರಿಚ್ಛೇದದಲ್ಲಿ ತುಳು ಭಾಷೆಯನ್ನೂ ಸೇರಿಸಬೇಕು. ಮಂಗಳೂರು, ಬೆಂಗಳೂರಿನಲ್ಲಿ ತುಳು ಭವನ ನಿರ್ಮಿಸಬೇಕು ಎಂಬಂತಹ ಬೇಡಿಕೆಗಳಿಗೇ ಆಡಳಿತ ನಡೆಸುವವರು ಸ್ಪಂದಿಸದಿದ್ದರೆ ಅದರ ದುಷ್ಪರಿಣಾಮ ಗಂಭೀರವಾಗುವ ಸಾಧ್ಯತೆ ಇದೆ.

ಪ್ರತ್ಯೇಕ ತುಳು ರಾಜ್ಯದ ಬೇಡಿಕೆಗೆ ಬಲ ಬರುವುದು ಸಹ ಇಂತಹ ತಾರತಮ್ಯ ಧೋರಣೆಯಿಂದಲೇ. ಹೀಗಾಗಿ ತುಳು ಜನರ ಭಾವನೆಗೆ ಸ್ಪಂದಿಸಿ ಅದಕ್ಕೆ ಬೆಂಬಲ ನೀಡಬೇಕಾದ ಹೊಣೆಗಾರಿಕೆ ಕನ್ನಡಿಗರ ಮೇಲಿದೆ. ಕೇಂದ್ರ, ರಾಜ್ಯ ಸರ್ಕಾರಗಳಿಂದ ತುಳು ಭಾಷೆಯ ಅಭಿವೃದ್ಧಿಗೆ ಬೇಕಾದ ಕೆಲಸಕ್ಕೆಲ್ಲ ಸಮಸ್ತ ಕನ್ನಡಿಗರೂ ಬೆಂಬಲಕ್ಕೆ ನಿಲ್ಲಬೇಕು ಎಂದು ಅವರು ಒತ್ತಾಯಿಸಿದರು.

ಮುಖ್ಯ ಅತಿಥಿಯಾಗಿ ದೆಹಲಿಯಲ್ಲಿನ ರಾಜ್ಯ ಸರ್ಕಾರದ ಪ್ರತಿನಿಧಿ ವಿ.ಧನಂಜಯ ಕುಮಾರ್ ಮಾತನಾಡಿ, ತುಳುವನ್ನು ಸಂಧಾನದ 8ನೇ ಪರಿಚ್ಛೇದದಲ್ಲಿ ಸೇರಿಸುವುದಕ್ಕೆ ಸರ್ಕಾರ ಪ್ರಯತ್ನಿಸಲಿದೆ, ಸೂಕ್ತ ಯೋಜನೆಗಳನ್ನು ರೂಪಿಸಿದರೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲೇ ತುಳು ಭಾಷೆಯ ಅಭಿವೃದ್ಧಿಗೆ ಸರ್ಕಾರ ಹಣ ತೆಗೆದಿರಿಸಲಿದೆ ಎಂದರು.

ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ ಸಮ್ಮೇಳನ ಉದ್ಘಾಟಿಸಿದರು. ಮಂಗಳೂರು ಮತ್ತು ಬೆಂಗಳೂರಿನಲ್ಲಿ ತುಳು ಭವನ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡಲಿದೆ ಎಂದರು. ‘ಮರೆಪ್ಪೆರಾವಂದಿನ ತುಳುವೆರ್’ (ಮರೆಯಲಾಗದ ತುಳುವರು) ಕೃತಿ ಬಿಡುಗಡೆ ಮಾಡಿದರು. ‘ಕಡಲ್ದ ಉಡಲ್’ ತುಳು ಸಂಗೀತ ಧ್ವನಿಸುರುಳಿಯನ್ನು ಸಂಗೀತ ನಿರ್ದೇಶಕ ವಿ.ಮನೋಹರ್ ಬಿಡುಗಡೆ ಮಾಡಿದರು.

ತುಳು ಪಾಡ್ದನಗಳಿಗೆ ಲಯಬದ್ಧ ತಾಳ, ಸಂಗೀತ ನೀಡಿ ಹೊರಜಗತ್ತಿಗೆ ಪರಿಚಯಿಸುವ ಅಗತ್ಯ ಇದೆ ಎಂದರು. ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದಯ ಧರ್ಮಸ್ಥಳ, ಸಾಹಿತಿ ಗೋಪಾಲಕೃಷ್ಣ ನೆಕ್ಕಿದಪುಣಿ, ಅಕಾಡೆಮಿ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ತುಳುಕೂಟದ ಅಧ್ಯಕ್ಷ ರಮೇಶ್ ಹೆಗ್ಡೆ, ಕಾರ್ಯದರ್ಶಿ ಜಗತ್ಪಾಲ ಶೆಟ್ಟಿ ಚಂದಾಡಿ ಅವರು ಉಪಸ್ಥಿತರಿದ್ದರು.
ಮುಂಬರುವ ಜನಗಣತಿಯಲ್ಲಿ ತುಳುವರು ತಮ್ಮ ಮಾತೃಭಾಷೆಯನ್ನು ತುಳು ಎಂದೇ ನಮೂದಿಸಲು ಅಕಾಡೆಮಿ ಕರೆ ನೀಡಿತು.

ನಂತರ, ತುಳುನಾಡಿನ ವೀರಪುರುಷರ ಬಗ್ಗೆ ವಿಚಾರ ಗೋಷ್ಠಿ ನಡೆಯಿತು. ಬಾಲಕೃಷ್ಣ ಪುತ್ತಿಗೆ (ಕೋಟಿ ಚೆನ್ನಯ), ಮುದ್ದು ಮೂಡುಬೆಳ್ಳೆ (ಕಾಂತಬಾರೆ-ಬುದಬಾರೆ), ಡಾ. ಕೊಯಿರಾ ಬಾಳೆಪುಣಿ (ಮುಗೇರ್ಲು), ಎಂ.ಕೆ. ಸೀತಾರಾಮ ಕುಲಾಲ್ (ಉಳ್ಳಾಲದ ರಾಣಿ ಅಬ್ಬಕ್ಕ), ಭಾಸ್ಕರ ರೈ ಕುಕ್ಕುವಳ್ಳಿ (ದೇವು ಪೂಂಜ), ಎಸ್.ಆರ್.ಹೆಗ್ಡೆ (ಅಗೋಳಿ ಮಂಜಣ), ಡಾ. ಕಬ್ಬಿನಾಲೆ ವಸಂತಕುಮಾರ್ (ಮಧ್ವಾಚಾರ್ಯರು), ಬಿ. ಪ್ರಭಾಕರ ಶೆಟ್ಟಿ (ತುಳುನಾಡ ಸಿರಿ) ಪ್ರಬಂಧಗಳನ್ನು ಮಂಡಿಸಿದರು. ಎನ್. ಗೋಪಾಲಕೃಷ್ಣ ಸಮನ್ವಯಕಾರರಾಗಿ ಕಾರ್ಯನಿರ್ವಹಿಸಿದರು. ಸಮಾರೋಪದಲ್ಲಿ  ಧರ್ಮಸ್ಥಳ ಸುರೇಂದ್ರಕುಮಾರ್, ಶಾಸಕ ನೆ.ಲ.ನರೇಂದ್ರಬಾಬು ಭಾಗವಹಿಸಿದ್ದರು.

 ತುಳುವಿನಲ್ಲಿ ಒಗಟು ಬಿಡಿಸುವ ಸ್ಫರ್ಧೆ, ತೆಂಗಿನಕಾಯಿ ಕುಟ್ಟುವ ಸ್ಪರ್ಧೆ, ಭಾವಗೀತೆ, ಕೂಟದ ಕಂಗೀಲು, ಪಿಲಿಪಂಜಿ, ಆಟಿ ಕಲೆಂಜ, ನಲಿಕೆ ಮತ್ತಿತರ ನೃತ್ಯ ಪ್ರದರ್ಶನ, ಮಹಿಳಾ ತಂಡದವರ ‘ಕೋಟಿ-ಚೆನ್ನಯ’ ಯಕ್ಷಗಾನ ಗಮನ ಸೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT