ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುಕುತ್ತಿದೆ ಕೃಷ್ಣೆ; ಬಾಡುತ್ತಿದೆ ಬೆಳೆ

ಬರ ಬದುಕು ಭಾರ -4
Last Updated 5 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆ: ತುಂಬಿತುಳುಕುತ್ತಿರುವ ಆಲಮಟ್ಟಿ ಜಲಾಶಯ, ಆಂಧ್ರದತ್ತ ಹರಿದು ಹೋಗುತ್ತಿರುವ ಕೃಷ್ಣೆ, ಕೃಷ್ಣೆಯ ಮಡಿಲಲ್ಲೇ ಇರುವ ಹೊಲಗಳಲ್ಲಿ ಒಣಗುತ್ತಿರುವ ಬೆಳೆ, ಬೇಸಿಗೆ ನೆನಪಿಸುವ ಉರಿ ಬಿಸಿಲು, ಹನಿಯಾಗದೇ ಆಗಸದಲ್ಲಿ ಓಡುತ್ತಿರುವ ಮೋಡಗಳು, ಮತ್ತೆ ಹಿಂಗಾರಿಗೆ ಹಸನಾಗುತ್ತಿರುವ ನೆಲ, ಹಿಂಗಾರು ಮುನಿಸಿಕೊಂಡರೆ ಗುಳೇ ಹೊರಡಲು ಅಣಿಯಾಗುತ್ತಿರುವ ಕೃಷಿಕ.

ಜಿಲ್ಲೆಯ ಮಳೆಯಾಶ್ರಿತ ಬಾಗಲಕೋಟೆ, ಹುನಗುಂದ ಮತ್ತು ಬಾದಾಮಿ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸುತ್ತಾಡಿದಾಗ ಕಂಡುಬಂದ `ಬರ'ದ ದೃಶ್ಯಗಳು.

ಕಳೆದ ವರ್ಷಕ್ಕಿಂತ ಪ್ರಸಕ್ತ ವರ್ಷ ಸ್ವಲ್ಪ ಉತ್ತಮ ಮಳೆಯಾದ ಕಾರಣ ಜಿಲ್ಲೆಯ ಮಳೆಯಾಶ್ರಿತ ಖುಷ್ಕಿ ಜಮೀನಿನಲ್ಲಿ ಶೇ 81.96ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಾಗ ಸುರಿದ ಜಿಟಿಜಿಟಿ ಮಳೆಯಿಂದಾಗಿ ಬೆಳೆ ಮೇಲೆದ್ದಿತು. ಆದರೆ, ಆಗಸ್ಟ್‌ನಲ್ಲಿ ಸ್ವಲ್ಪವೂ ಮಳೆಯೇ ಆಗದಿರುವುದರಿಂದ ಬೆಳೆ ಬಾಡತೊಡಗಿದೆ. ಇದೀಗ ಬೆಳೆ ಕಾಳುಗಟ್ಟುವ ಹಂತದಲ್ಲಿರುವಾಗ ಮಳೆ ಬದಲು ಸುಡುಬಿಸಿಲಿನ ಝಳ ಹೆಚ್ಚಾಗಿರುವುದರಿಂದ ಬೆಳೆ ಸಂಪೂರ್ಣ ನಾಶವಾಗುವ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಇತ್ತೀಚೆಗೆ ನಾಟಿಯಾಗಿರುವ ಈರುಳ್ಳಿ ಬೆಳೆಗೂ ಮಳೆ ಕೊರತೆಯಿಂದ ತೀವ್ರ ತೊಂದರೆಯಾಗಿದೆ. ಕೊಳವೆಬಾವಿ ಸೌಲಭ್ಯ ಇರುವವರು ಮಾತ್ರ ಈರುಳ್ಳಿ ನಾಟಿ ಮಾಡತೊಡಗಿದ್ದಾರೆ. ಮಳೆಕೊರತೆಯಿಂದಾಗಿ ಜಿಲ್ಲೆಯ 13ಕ್ಕೂ ಅಧಿಕ ಹೋಬಳಿ ವ್ಯಾಪ್ತಿಯಲ್ಲಿ ಬರ ತೀವ್ರತೆ ಪಡೆದುಕೊಳ್ಳತೊಡಗಿದೆ.

ಹುನಗುಂದ, ಬಾದಾಮಿ, ಬಾಗಲಕೋಟೆ ತಾಲ್ಲೂಕು ವ್ಯಾಪ್ತಿಯ 30,113 ಹೆಕ್ಟೆರ್‌ನಲ್ಲಿ ಹಿಂಗಾರು ಹಂಗಾಮಿನಲ್ಲಿ ಬಿತ್ತನೆಯಾಗಿದ್ದ ಹೆಸರು ಮೊಳಕೆಯಾಗದೇ ಹೊಲ ಪಾಳುಬಿದ್ದಿದೆ. ಸಜ್ಜೆ ಮತ್ತು ಗೋವಿನ ಜೋಳ, ತೊಗರಿ, ಸೂರ್ಯಕಾಂತಿ,  ಸೋಯಾಬೀನ್ ಕಾಳುಗಟ್ಟುವ ಹಂತದಲ್ಲಿದ್ದು, ಮಳೆ ಕೊರತೆಯಿಂದ ಕಾಳು ಜೊಳ್ಳಾಗಿ ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ಬೀಳಗಿ, ಮುಧೋಳ ಮತ್ತು ಜಮಖಂಡಿ ತಾಲ್ಲೂಕುಗಳಲ್ಲೂ ಈ ವರ್ಷ ಮಳೆ ಕೊರತೆಯಾಗಿದ್ದರೂ ಆಲಮಟ್ಟಿ ಜಲಾಶಯದ ಹಿನ್ನೀರು ಮತ್ತು ಅತ್ಯಧಿಕ ಪ್ರಮಾಣದಲ್ಲಿ ಕೊಳವೆಬಾವಿ ಸೌಲಭ್ಯ ಇರುವುದರಿಂದ ಕಬ್ಬು ಸಮೃದ್ಧವಾಗಿ ಬೆಳೆದು ನಳನಳಿಸುತ್ತಿದೆ.

ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಜಿಲ್ಲೆಯಲ್ಲಿ ಹರಿದರೂ ಬರದಿಂದ ಜಿಲ್ಲೆ ಮುಕ್ತವಾಗುತ್ತಿಲ್ಲ,
ಸತತ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿರುವುದರಿಂದ ಬಸವಳಿದಿರುವ ರೈತ ಸಮುದಾಯ ಇದೀಗ ಆರಂಭವಾಗಿರುವ ಹಿಂಗಾರು ಹಂಗಾಮಿನಲ್ಲಾದರೂ ಉತ್ತಮ ಮಳೆಯಾದರೆ ಒಂದು ಬೆಳೆಯನ್ನಾದರೂ ತೆಗೆಯೋಣ ಎಂಬ ನಿರೀಕ್ಷೆಯೊಂದಿಗೆ ಮತ್ತೆ ಹೊಲವನ್ನು ಹದಗೊಳಿಸಲು ಶುರು ಮಾಡಿದ್ದಾರೆ.

`ಸಾಲಗಾರನನ್ನಾಗಿಸಿದ ಮುಂಗಾರು'

`ಮುಂಗಾರು ಮಳೆಯಾಗಬಹುದೆಂದು ನಾಲ್ಕು ಎಕರೆ ಹೊಲದಲ್ಲಿ 20 ಸೇರು ಹೆಸರು ಬಿತ್ತನೆ ಮಾಡಿದ್ದೆ. ಮಳೆಯಪ್ಪ ಸರಿಯಾಗಿ ಆಗಲಿಲ್ಲ, ಜಿಟಿಜಿಟಿ ಮಳೆಯಿಂದ ಹೊಲದಲ್ಲಿ ಕಳೆಯೇ ಹೆಚ್ಚಾಗಿ ಬೆಳೆಯಿತು. ಹೆಸರು ಒಣಗಿ ಹೋಯ್ತು, ಬೀಜ, ಗೊಬ್ಬರ, ಗಳೇವಿಗೆ ಅಂತ ಖರ್ಚು ಮಾಡಿದ 10 ಸಾವಿರ ರೂಪಾಯಿಗೆ ಒಂದು ಸೇರು ಹೆಸರು ಸಹ ಸಿಗಲಿಲ್ಲ'

ಮುಂಗಾರು ಸಾಲಗಾರನನ್ನಾಗಿ ಮಾಡಿತು, ಮೂರು ವರ್ಷದಿಂದ ಬೆಳೆ ವಿಮೆ ಮಾಡಿಸಿದೆ. ಆದರೆ, ವಿಮಾ ಕಂಪೆನಿ ಒಂದು ಪೈಸೆಯೂ ಕೊಡಲಿಲ್ಲ. ಅದಕ್ಕಾಗಿ ಈ ಬಾರಿ ಬೆಳೆ ವಿಮೆ ಮಾಡಿಸುವ ಗೋಜಿಗೆ ಹೋಗಿಲ್ಲ, ಹಿಂಗಾರಿ ಮಳೆಯಾದರೂ ಆಗಬಹುದು ಎಂಬ ನಿರೀಕ್ಷೆಯೊಂದಿಗೆ ಹೊಲವನ್ನು ಮತ್ತೆ ಹರಗಿದ್ದೇನೆ. ಬಿಳಿ ಜೋಳ ಬಿತ್ತಿ ಒಂದು ಪೀಕಾದರೂ ತೆಗೆಯಬೇಕು ಎಂದುಕೊಂಡಿದ್ದೇನೆ'
 -ಗೌಡಪ್ಪ ಕೊರ್ತಿ, ಶಿರೂರ ಗ್ರಾಮದ ರೈತ,ಬಾಗಲಕೋಟೆ.

`ಕೆರೆಗಳಿಗೆನೀರು ತುಂಬಿಸಿ'

`ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟಿರು ವುದರಿಂದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಒಳಗಾಗಿದೆ. ಸರ್ಕಾರ ಜಿಲ್ಲೆಯನ್ನು ಸಂಪೂರ್ಣ ಬರಪೀಡಿತ ಎಂದು ಘೋಷಿಸಬೇಕು, ನಷ್ಠಕ್ಕೊಳಗಾಗಿ ರುವ ಬೆಳೆಗೆ ಸೂಕ್ತ ಪರಿಹಾರ ನೀಡಬೇಕು, ರೈತರ ಸಾಲ ಮನ್ನಾ ಮಾಡಬೇಕು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಕಲ್ಪಿಸಬೇಕು, ಆಲಮಟ್ಟಿ ಮತ್ತು ಹಿಡಕಲ್ ಜಲಾಶಯದಿಂದ ಜಿಲ್ಲೆಯ ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ತಕ್ಷಣ ಕೈಗೆತ್ತಿಕೊಳ್ಳಬೇಕು'     
 -ಬಸವಂತಪ್ಪ ಮೇಟಿ, ಜಿ.ಪಂ.ಸದಸ್ಯ, ಬೇವೂರು ಕ್ಷೇತ್ರ, ಬಾಗಲಕೋಟೆ

`ಸಂಪೂರ್ಣ ಬೆಳೆ ನಾಶ ಭೀತಿ'
`ಬಾಗಲಕೋಟೆ ಜಿಲ್ಲೆಯ ಮಳೆಯಾಶ್ರಿತ ಖುಷ್ಕಿ ಭೂಮಿಯಲ್ಲಿ ಶೇ 81.96ರಷ್ಟು ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮಳೆ ಕೊರತೆಯಾಗಿ ರುವುದರಿಂದ ಶೇ 50ಕ್ಕೂ ಅಧಿಕ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ವಾರದೊಳಗೆ ಮಳೆಯಾಗದಿದ್ದರೆ ಸಂಪೂರ್ಣ ಬೆಳೆಯೇ ಕೈಕೊಡಲಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೊಲಗಳಿಗೆ ಭೇಟಿ ನೀಡಿ ಬೆಳೆ ನಷ್ಟದ ಸಮೀಕ್ಷೆಯಲ್ಲಿ ತೊಡಗಿದ್ದಾರೆ'
`ಬಾದಾಮಿ, ಕೆರೂರು, ಕುಳಗೇರಿ, ಬೇಲೂರ, ಕಲಾದಗಿ, ಬೀಳಗಿ, ಅನಗ ವಾಡಿ, ರಾಂಪುರ, ಬಾಗಲಕೋಟೆ, ಹುನಗುಂದ, ಕರಡಿ, ಸಾವಳಗಿ, ಮುಧೋಳ ಮತ್ತು ಲೋಕಾಪುರ ಹೋಬಳಿ ವ್ಯಾಪ್ತಿಯಲ್ಲಿ ಮಳೆ ಕೊರತೆ ಬರ ಪರಿಸ್ಥಿತಿ ತಲೆದೋರಿದೆ'
-ಎಂ.ಎಚ್.ಬಂಥನಾಳ, ಜಿಲ್ಲಾ ಜಂಟಿ ಕೃಷಿ ನಿರ್ದೇಶಕ, ಬಾಗಲಕೋಟೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT