ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕಡಿಕೆ ದೂರ ಮಾಡಿದ ಯಡಿಯೂರಪ್ಪ

Last Updated 7 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): `ಒಂಬತ್ತರ ನಂತರ ನೋಡಿ' ಎಂದು ಕೆ.ಎಸ್.ಈಶ್ವರಪ್ಪ ಶುಕ್ರವಾರ ವಿಧಾನಸೌಧದ ಒಳಗೆ ಗುಟುರು ಹಾಕಿದ ಕೆಲವೇ ನಿಮಿಷಗಳಲ್ಲಿ ಬಿ.ಎಸ್.ಯಡಿಯೂರಪ್ಪ, ಅದರ ಪಕ್ಕದ ಸಭಾಂಗಣ ಸೆಂಟ್ರಲ್ ಹಾಲ್‌ಗೆ ಬಂದು ಹವಾ ಎಬ್ಬಿಸಿದ್ದು, ಬಿಜೆಪಿಯ `ಅಸಹಾಯಕ ಸ್ಥಿತಿ'ಯನ್ನು ಅಣಕಿಸಿದಂತಿತ್ತು.

ಯಡಿಯೂರಪ್ಪ ಹಾವೇರಿಯಲ್ಲಿ ಭಾನುವಾರ ಆಯೋಜಿಸಿರುವ ಸಮಾವೇಶದಲ್ಲಿ ಭಾಗವಹಿಸಿದರೆ ಶಿಸ್ತುಕ್ರಮ ಕೈಗೊಳ್ಳುವ ಎಚ್ಚರಿಕೆಯ ಸಂದೇಶವನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆದ ಸಚಿವ ಈಶ್ವರಪ್ಪ ಸದನದ ಮೂಲಕವೇ ರವಾನಿಸಿದರೆ, ಸದನದ ಸದಸ್ಯರಲ್ಲದ ಯಡಿಯೂರಪ್ಪ ತಮ್ಮ `ಶಕ್ತಿಪ್ರದರ್ಶನ'ಕ್ಕೆ ಅದರ ಪಕ್ಕದ ಸಭಾಂಗಣವನ್ನು ಬಳಸಿಕೊಂಡರು.

ಧರಣಿ ಕಾರಣ ಕಲಾಪ ಸ್ವಾರಸ್ಯ ಕಳೆದುಕೊಂಡಿತ್ತು. ದಿನದ ಕಲಾಪ ಮುಂದಕ್ಕೆ ಹೋದರೆ ಎರಡು ದಿನಗಳ ಬಿಡುವು. ಸದಸ್ಯರು ಕ್ಷೇತ್ರಗಳತ್ತ ಹೊರಡುವ ತವಕದಲ್ಲಿದ್ದರು. ಇಂತಹ ತೂಕಡಿಕೆ ವಾತಾವರಣಕ್ಕೆ ದಿಢೀರನೆ ಹೊಸ ಹುರುಪು ತಂದರು ಯಡಿಯೂರಪ್ಪ. ಚದುರಿಹೋಗಿದ್ದ ಕ್ಯಾಮೆರಾಗಳು ಒಟ್ಟುಗೂಡಿ ಅವರತ್ತ ತಿರುಗಿದವು.

ನೋಡನೋಡುತ್ತಲೇ ಏಳು ಮಂದಿ ಸಚಿವರು, ಹಲವು ಶಾಸಕರು ಅವರ ಸುತ್ತ ಜಮಾಯಿಸಿದರು. ಜೆಡಿಎಸ್ ಮುಖಂಡ ಎಂ.ಸಿ.ನಾಣಯ್ಯ, ಕಾಂಗ್ರೆಸ್‌ನ ಕೆಲವು ಶಾಸಕರೂ ಬಂದು ಯಡಿಯೂರಪ್ಪ ಅವರನ್ನು ಮಾತನಾಡಿಸಿ ಹೋದರು. `ಯಾವುದೋ ಒಂದನ್ನು ಪರಿಸಮಾಪ್ತಿ ಮಾಡಲು ಹೊರಟಿದ್ದೀರಿ. ಅದನ್ನು ಮಾಡಿ' ಎಂದು ನಾಣಯ್ಯ ಹಾರೈಸುವ ಮೂಲಕ ಕರ್ನಾಟಕ ಜನತಾ ಪಕ್ಷವು ಗುಪ್ತ ಕಾರ್ಯಸೂಚಿ ಹೊಂದಿದೆ ಎಂಬ ಗುಮಾನಿಗೆ ಗಾಳಿ ತುಂಬಿದರು.  

ಮಾಧ್ಯಮ ಪ್ರತಿನಿಧಿಗಳೊಂದಿಗೆ ಯಡಿಯೂರಪ್ಪ ನಿರಾಳವಾಗಿ ಮಾತನಾಡಿದರಾದರೂ ಅದರಲ್ಲಿ ಸುದ್ದಿ ಹುಟ್ಟಿದ್ದು ಕಡಿಮೆ. ಆದರೆ, ಬಿಜೆಪಿಯಲ್ಲಿ ತಮ್ಮ ಬೆಂಬಲಿಗರ ಸಂಖ್ಯೆ ಕ್ಷೀಣಿಸಿಲ್ಲ ಎಂಬ ಸಂದೇಶವನ್ನು ಆ ಪಕ್ಷದ ಮುಖಂಡರಿಗೆ ರವಾನಿಸಿದರು.  ಸೆಂಟ್ರಲ್ ಹಾಲ್‌ನಿಂದ ಹೊರಟವರೇ ಸಭಾಧ್ಯಕ್ಷರ ಚಹಾ ಕೊಠಡಿ ಒಳಗೆ ಸೇರಿಕೊಂಡರು. ಅಲ್ಲಿಯೂ ಶಾಸಕರು, ಸಚಿವರ ದಂಡು ಸೇರಿತು. ಸುದ್ದಿಗಾರರ ಜೊತೆ ಮತ್ತೊಮ್ಮೆ ಮಾತುಕತೆ. ಹಾವೇರಿ ಸಮಾವೇಶಕ್ಕೆ ಆಹ್ವಾನ.

ಸಭಾಧ್ಯಕ್ಷರ ಚಹಾ ಕೊಠಡಿಯಲ್ಲಿ ಯಡಿಯೂರಪ್ಪ ತಮ್ಮ ಬೆಂಬಲಿಗರ ಜೊತೆ ಮಾತುನಾಡುತ್ತಿದ್ದರೆ, ಪಕ್ಕದ ಇನ್ನೊಂದು ಕೊಠಡಿಯಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು, ಧರಣಿ ಸಂಬಂಧ ಸಂಧಾನ ಸಭೆ ನಡೆಸುತ್ತಿದ್ದರು. ಇವರು ಇಲ್ಲಿ ಮಾತುಕತೆ ಮುಗಿಸುವಷ್ಟರಲ್ಲಿ ಅಲ್ಲಿಯೂ ಸಭೆ ಅಂತ್ಯಗೊಂಡಿತ್ತು. ಬಳಿಕ ಸ್ಪೀಕರ್ ಸಭೆ ನಡೆಸಿದ ಕೊಠಡಿಗೂ ತೆರಳಿ, ಬೋಪಯ್ಯ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಎಸ್.ಸುರೇಶಕುಮಾರ್ ಮತ್ತಿತರ ಮುಖಂಡರನ್ನು ಮಾತನಾಡಿಸಿದರು. 

ನಿಯಮ ಉಲ್ಲಂಘನೆ: ಸಭಾಧ್ಯಕ್ಷರ ಕೊಠಡಿಯನ್ನು ಬೇರೊಬ್ಬರು ಹೀಗೆ ರಾಜಕೀಯ ಉದ್ದೇಶಕ್ಕೆ ಬಳಸಬಹುದೆ? ಸಂಬಂಧಿಸಿದ ಅಧಿಕಾರಿಯೊಬ್ಬರ ಬಳಿ ಈ ಪ್ರಶ್ನೆ ಇಟ್ಟಾಗ `ನಿಯಮಗಳಲ್ಲಿ ಅವಕಾಶ ಇಲ್ಲ' ಎಂಬ ಉತ್ತರ ಬಂತು. 

ಯಡಿಯೂರಪ್ಪ ವಿಧಾನಸೌಧದಲ್ಲಿ ಒಂದೂಕಾಲು ತಾಸು ಇದ್ದರು. ಅಷ್ಟೂ ಹೊತ್ತು ಶಾಸಕರು, ಸಚಿವರು, ಮಾಧ್ಯಮ ಮಂದಿಯನ್ನು ಸೂಜಿಗಲ್ಲಿನಂತೆ ಸೆಳೆದರು. ಇದರಿಂದ ಸಂಕಟಕ್ಕೆ ಒಳಗಾದಂತೆ ಭಾಸವಾದ ಸಚಿವರೊಬ್ಬರು, `ಬಂಡಾಯದ ದನಿ ಮಾಧ್ಯಮಕ್ಕೆ ಮೊದಮೊದಲು ಆಪ್ಯಾಯಮಾನ. ಕ್ರಮೇಣ ಅದರ ಕಾವು ಕಡಿಮೆ ಅಗುತ್ತದೆ' ಎಂದು ವೇದಾಂತಿಯಂತೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT