ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಕದಲ್ಲಿ ವಂಚನೆ: ದೂರು ನೀಡಲು ಮನವಿ

Last Updated 16 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ತೂಕ ಮತ್ತು ಅಳತೆಯಲ್ಲಿ ವಂಚನೆಗೊಳಗಾಗುವ ಗ್ರಾಹಕರು ದೂರು ಸಲ್ಲಿಸಿದಲ್ಲಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಕಾನೂನು ಮಾಪನಶಾಸ್ತ್ರ ಇಲಾಖೆಯ ಮುಖ್ಯ ನಿಯಂತ್ರಕ ಷಡಕ್ಷರಿಸ್ವಾಮಿ ಗುರುವಾರ ಇಲ್ಲಿ ಭರವಸೆ ನೀಡಿದರು.

ಕರ್ನಾಟಕ ಕಾರ್ಮಿಕ ಕಲ್ಯಾಣ ಪ್ರತಿಷ್ಠಾನ ಯಶವಂತಪುರದ ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಗ್ರಾಹಕ ಜಾಗೃತಿ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.

`ರಾಜ್ಯದಲ್ಲಿ ವಿವಿಧ ರೀತಿಯ ವ್ಯಾಪಾರ ಮಾಡುವಂತಹ ಆರೇಳು ಲಕ್ಷ ವ್ಯಾಪಾರಿಗಳಿದ್ದು, ಈ ಪೈಕಿ 4.5 ಲಕ್ಷ ವ್ಯಾಪಾರಿಗಳು ತೂಕ ಮತ್ತು ಅಳತೆ ಸಾಧನೆಗಳನ್ನು ಬಳಸುತ್ತಿದ್ದಾರೆ. ತೂಕ ಮತ್ತು ಅಳತೆಯಲ್ಲಿ ಗ್ರಾಹಕರನ್ನು ವಂಚಿಸಿದ ಆರೋಪದ ಮೇರೆಗೆ ಇಲಾಖೆಯು ಕಳೆದ ವರ್ಷ 36 ಸಾವಿರ ಪ್ರಕರಣಗಳನ್ನು ದಾಖಲಿಸಿದೆ~ ಎಂದು ಅವರು ತಿಳಿಸಿದರು.

`ಬೆಂಗಳೂರಿನಲ್ಲಿ ಮುದ್ರಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಹಾಲಿನ ಪೊಟ್ಟಣಗಳನ್ನು ಗ್ರಾಹಕರಿಗೆ ಪೂರೈಸುತ್ತಿದ್ದವರ ವಿರುದ್ಧ ಇತ್ತೀಚೆಗಷ್ಟೇ 25 ಪ್ರಕರಣ ದಾಖಲಿಸಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.

`ಬೀದರ್‌ನಿಂದ ಚಾಮರಾಜನಗರದವರೆಗೆ ಇಲಾಖೆ ಅನಿರೀಕ್ಷಿತ ದಾಳಿ ನಡೆಸಿ ತೂಕ ಮತ್ತು ಅಳತೆಯಲ್ಲಾಗುವ ವಂಚನೆ ಪ್ರಕರಣಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದೆ. ಆದರೆ, ಇಲಾಖೆಯಲ್ಲಿನ ಕೇವಲ 150 ಮಂದಿ ಕಾರ್ಯನಿರ್ವಾಹಕರಿಂದಲೇ ವ್ಯವಸ್ಥೆಯನ್ನು ಸಂಪೂರ್ಣ ಸುಧಾರಿಸಲು ಕಷ್ಟ. ಈ ಹಿನ್ನೆಲೆಯಲ್ಲಿ ಗ್ರಾಹಕರು ವಂಚನೆಗೊಳಗಾಗುವ ನಿರ್ದಿಷ್ಟ ಪ್ರಕರಣಗಳ ಬಗ್ಗೆ ಇಲಾಖೆಗೆ ದೂರು ಸಲ್ಲಿಸಿದಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು~ ಎಂದು ಭರವಸೆ ನೀಡಿದರು.

ಕಾನೂನುಮಾಪನಶಾಸ್ತ್ರ ಇಲಾಖೆಯ ಉಪ ನಿರೀಕ್ಷಕ ಮಲ್ಲಿಕಾರ್ಜುನಯ್ಯ ಮಾತನಾಡಿ, `ತೂಕ ಮತ್ತು ಅಳತೆ ಮನುಷ್ಯನ ಹುಟ್ಟಿನಿಂದಲೇ ಶುರುವಾಗುತ್ತದೆ. ಅಂತೆಯೇ, ದಿನನಿತ್ಯ ಗ್ರಾಹಕ ಒಂದಲ್ಲಾ ಒಂದು ರೀತಿಯಲ್ಲಿ ತೂಕ ಮತ್ತು ಅಳತೆಯಲ್ಲಿ ಮೋಸ ಹೋಗುತ್ತಾನೆ.

ಇದನ್ನು ತಡೆಯಲು ಇಲಾಖೆ ಪ್ರತಿ 12 ತಿಂಗಳಿಗೊಮ್ಮೆ ವ್ಯಾಪಾರಿಗಳು ಬಳಸುವಂತಹ ತೂಕ ಮತ್ತು ಅಳತೆಯ ಸಾಧನಗಳನ್ನು ಸರ್ಕಾರಿ ಮಾನಕಗಳೊಂದಿಗೆ ಹೋಲಿಕೆ ಮಾಡಿ ಮುದ್ರೆ ಹಾಕುವುದರ ಜತೆಗೆ, ಪ್ರಮಾಣ ಪತ್ರಗಳನ್ನು ನೀಡುತ್ತಿದೆ~ ಎಂದರು.

`ಗ್ರಾಹಕರು ತೂಕ ಮತ್ತು ಅಳತೆಯಲ್ಲಿ ಮೋಸ ಹೋದಾಗ ಇಲಾಖೆಗೆ ದೂರು ನೀಡಬೇಕು. ಇದರಿಂದ ತಪ್ಪಿತಸ್ಥರ ವಿರುದ್ಧ ಕಾನೂನುರೀತ್ಯ ದಂಡ ವಿಧಿಸಲು ಸಹಕಾರಿಯಾಗಲಿದೆ. ಒಂದು ವೇಳೆ ತಪ್ಪಿತಸ್ಥರು ನ್ಯಾಯಾಲಯದ ಮೊರೆ ಹೋದರೂ ಇಲಾಖೆ ಕಾನೂನು ಹೋರಾಟ ನಡೆಸಲು ಅನುಕೂಲವಾಗಲಿದೆ.
 
ಈ ರೀತಿ ಗ್ರಾಹಕರನ್ನು ವಂಚಿಸುವ ವ್ಯಾಪಾರಸ್ಥರಿಗೆ 5ರಿಂದ 25 ಸಾವಿರ ರೂಪಾಯಿ ದಂಡ ವಿಧಿಸಲು ಅವಕಾಶವಿದೆ. ಮೂರನೇ ಬಾರಿ ಮಾಡುವಂತಹ ತಪ್ಪಿಗೆ ಜೈಲು ಶಿಕ್ಷೆ ಕೂಡ ವಿಧಿಸಬಹುದಾಗಿದೆ~ ಎಂದರು.
ಕಾನೂನು ಮಾಪನಶಾಸ್ತ್ರ ಇಲಾಖೆಯ ನಿರೀಕ್ಷಕ ಎಸ್.ಬಿ. ಸುಧಾಕರ್ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT