ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೂಬಿಲ್ಲದ ಕೆರೆ- ನೀರು ನಿಲ್ಲುವುದು ಹೇಗೆ?

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಸಂಪಾದಕೀಯದಲ್ಲಿ (ಜುಲೈ 13) ಸಿದ್ದರಾಮಯ್ಯನವರ ಪರಿಷ್ಕೃತ ಮುಂಗಡ ಪತ್ರದ ಬಗ್ಗೆ ಬರೆಯುತ್ತಾ `ಕೃಷಿ ಮತ್ತು ನೀರಾವರಿಗೆ ನೀಡಿರುವ ಗಮನಾರ್ಹ ಪ್ರಮಾಣದ ಅನುದಾನವು ರೈತಾಪಿ ವರ್ಗದಲ್ಲಿ ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗಲಿದೆ ಎಂದು ಉಲ್ಲೇಖಿಸಿದ್ದೀರಿ. ಇದಕ್ಕೆ ವ್ಯಂಗ್ಯವೆಂಬಂತೆ ನೀರಾವರಿ ಇಲಾಖೆಯಲ್ಲಿ ಅಧಿಕಾರಿಶಾಹಿಯ ವರ್ತನೆಯೊಂದನ್ನು ಈ ಮೂಲಕ ತಮ್ಮ ಗಮನಕ್ಕೆ ತರಬಯಸುತ್ತೇನೆ.

ಮದ್ದೂರು ಕೆರೆಯು ಮಂಡ್ಯ ಜಿಲ್ಲೆಯ ಬೆರಳೆಣಿಕೆಯ ದೊಡ್ಡ ಕೆರೆಗಳಲ್ಲಿ ಒಂದು. ಈ ಕೆರೆಯ ಅಚ್ಚುಕಟ್ಟು ಸುಮಾರು ಒಂಬೈನೂರು ಎಕರೆ. ಈ ಕೆರೆಗೆ ಕೋಡಿ ಮತ್ತು ಮೂರು ನಾಲೆಗಳ ತೂಬು ಸೇರಿ ಐದು ತೂಬುಗಳಿವೆ. ಈ ಐದೂ ತೂಬುಗಳು ಕೆಟ್ಟು ಯಾವಾಗಲೂ ನೀರು ಹರಿಯುತ್ತಿರುತ್ತದೆ. ಹಾಗೆಯೆ ಬೇಸಿಗೆಯಲ್ಲಿ ಒಂದು ಹನಿ ನೀರು ಕೆರೆಯಲ್ಲಿ ಉಳಿಯದೆ ಖಾಲಿಯಾಯಿತು. ಈ ಒಂಬೈನೂರು ಎಕರೆಯಲ್ಲಿ ಬೆಳೆಯಲಾಗಿದ್ದ ಬೆಳೆ (ಕಬ್ಬು, ರಾಗಿ, ಭತ್ತ) ಒಣಗಿಹೋದವು. ಈ ಪತ್ರ ಬರೆಯುತ್ತಿರುವ ರೈತನಾದ ನನಗೆ ಎಪ್ಪತ್ತು ವರ್ಷ. ನನ್ನ ಆಯುಷ್ಯದಲ್ಲಿ ಹೀಗೆ ಕೆರೆ ಒಂದು ಹನಿ ನೀರೂ ಇಲ್ಲದೆ ಒಣಗಿದ್ದನ್ನು ಕಂಡಿಲ್ಲ.

ದೇವರ ದಯೆಯಿಂದ ಕನ್ನಂಬಾಡಿ ಕಟ್ಟೆ ತುಂಬುತ್ತಿದೆ. ವಿಶ್ವೇಶ್ವರಯ್ಯ ನಾಲೆಯಲ್ಲಿ ನೀರು ಹರಿಯುತ್ತಿದೆ. ಸದ್ಯದಲ್ಲೇ ನಮ್ಮ ಕೆರೆಗೆ ನೀರು ಸಹ ಬರಬಹುದು ಎಂಬುದು ನಮ್ಮ ನಿರೀಕ್ಷೆ.

ಆದರೆ ಕೆರೆಗೆ ತೂಬುಗಳೇ ಇಲ್ಲದಿದ್ದರೆ ನೀರು ಹೇಗಾದರೂ ನಿಂತೀತು? ನೀರಾವರಿ ಇಲಾಖೆಯ ಅಧಿಕಾರಿಗಳ ಉಡಾಫೆಯ ಉತ್ತರ ನಿಮಗೆ ಆಶ್ಚರ್ಯವೆನಿಸಬಹುದು. ಸಹಾಯಕ ಎಂಜಿನಿಯರ್ ಹೇಳುತ್ತಾರೆ, `ತೂಬು ಕೂಡಿಸುವ ಎಸ್ಟಿಮೇಟ್ ಮಾಡಿ ಕಳುಹಿಸಿದ್ದೇವೆ' ಎಂದು. ಸಹಾಯಕ ಕಾರ್ಯಪಾಲ ಎಂಜಿನಿಯರ್ ಉತ್ತರ `ಕಡತವನ್ನು ಮಂಡ್ಯ ಸಬ್‌ಡಿವಿಷನ್ ಕಚೇರಿಗೆ ಕಳುಹಿಸಿದ್ದೇವೆ' ಎಂದು.

ಮಂಡ್ಯದ ಸಬ್‌ಡಿವಿಷನ್ ಸಾಹೇಬರು ನಾಲ್ಕಾರು ಬಾರಿ ಅಲೆದ ನಂತರ ಸಿಕ್ಕಿದಾಗ ಉತ್ತರಿಸಿದ್ದು `ನಿಮ್ಮ ಕೆರೆಯೊಂದೇ ಅಲ್ಲ, ನನಗೆ ಜಿಲ್ಲೆಯಲ್ಲಿ ಬೇಕಾದಷ್ಟು ಕೆಲಸ. ಇದು ಹಣ ನೋಡಿಕೊಂಡು ಆದ್ಯತೆಯ ಮೇಲೆ ಮಾಡುತ್ತೇನೆ' ಎಂದು.

ಹೇಳಿ ಸ್ವಾಮಿ... ಸಿದ್ದರಾಮಯ್ಯನವರು ಎಷ್ಟು ಸಾವಿರ ಕೋಟಿ ನೀರಾವರಿಗೆ ಕೊಟ್ಟರೇನು? ರೈತರಲ್ಲಿ ಹರ್ಷ ತಂದೀತೆ? ಅತ್ಮವಿಶ್ವಾಸ ಹೆಚ್ಚಿಸೀತೆ? ದೇವರು ವರ ಕೊಟ್ಟರೇನು! ಪೂಜಾರಿ ಅದನ್ನು ಕರುಣಿಸದ ಹೊರತು!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT