ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನ ಕೃಷಿಗೂ ಬಂತು ವಿಮಾ ಸೌಲಭ್ಯ; ಬೆಳೆಹಾನಿಗೆ ಪರಿಹಾರ

Last Updated 17 ಜೂನ್ 2011, 10:25 IST
ಅಕ್ಷರ ಗಾತ್ರ

ಸುಳ್ಯ:ತೆಂಗು ಕಲ್ಪವೃಕ್ಷ. ಕರಾವಳಿಯಲ್ಲಿ ತೆಂಗು ಕೃಷಿ ಇಲ್ಲದ ಮನೆಗಳಿಲ್ಲ. ಕನಿಷ್ಠ ಮನೆ ಖರ್ಚಿಗಾದರೂ ಎಲ್ಲರೂ ತೆಂಗನ್ನು ಬೆಳೆಯುತ್ತಾರೆ. ವಾಣಿಜ್ಯಿಕವಾಗಿ ತೆಂಗು ಲಾಭಧಾಯಕವಲ್ಲದೇ ಹೋದರೂ ಅದು ದೀರ್ಘಾಯುಷಿ. ಈ ವರ್ಷ ತೆಂಗಿನ ಕಾಯಿ, ಕೊಬ್ಬರಿ, ಎಣ್ಣೆ ಧಾರಣೆ ಏರಿದ್ದರಿಂದ ಮತ್ತೆ ತೆಂಗು ಕೃಷಿ ಬಗ್ಗೆ ರೈತರಲ್ಲಿ ಆಸಕ್ತಿ ಮೂಡಿದೆ. 
ರಾಜ್ಯ ಸರ್ಕಾರ ತೋಟಗಾರಿಕೆ ಇಲಾಖೆ ಮೂಲಕ ತೆಂಗು ಕೃಷಿಗೂ ವಿಮಾ ಸೌಲಭ್ಯ ಕಲ್ಪಿಸಿದ್ದು, ಈ ವರ್ಷದಿಂದಲೇ ಜಾರಿಗೆ ಬಂದಿದೆ. ನೈಸರ್ಗಿಕ ಅಥವಾ ಇತರ ವಿಕೋಪಗಳಿಂದ ಉಂಟಾಗಬಹುದಾದ ಹಾನಿಗೆ ಇದರಲ್ಲಿ ಪರಿಹಾರ ಪಡೆಯಬಹುದು.

2009-10ರಲ್ಲಿ ಕಲ್ಪವೃಕ್ಷದ ನಾಡು ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನಲ್ಲಿ ಪ್ರಯೋಗಾರ್ಥ ವಿಮಾ ಯೋಜನೆ ಜಾರಿಗೆ ತಂದಿದ್ದು, ಅದನ್ನು ರಾಜ್ಯದ ಇತರ ಕಡೆಗೂ ಈ ವರ್ಷದಿಂದ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಭಾರತೀಯ ಕೃಷಿ ವಿಮಾ ಕಂಪೆನಿ ಹಾಗೂ ತೆಂಗು ಅಭಿವೃದ್ಧಿ ಮಂಡಳಿ ಸಹಯೋಗದಲ್ಲಿ ತೆಂಗು ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದೆ.

ವಿಮೆ ಮಾಡಿಸುವುದು ಹೇಗೆ?: 4 ವರ್ಷದಿಂದ ಮೇಲ್ಪಟ್ಟ 60 ವರ್ಷಗಳ ಒಳಗಿನ ಮರಗಳಿಗೆ ವಿಮೆ ಮಾಡಿಸಬಹುದು. ಫಲ ಬರುವ ಮರಗಳಿಗೆ ಮಾತ್ರ ವಿಮೆ ಮಾಡಿಸಲು ಆಗುವುದರಿಂದ ಎತ್ತರ ಬೆಳೆಯುವ ಸ್ಥಳೀಯ ತಳಿಗಳಾದಲ್ಲಿ 7 ವರ್ಷಗಳ ನಂತರ ವಿಮೆ ಮಾಡಿಸಬಹುದು. ಒಂದು ಪ್ರದೇಶದಲ್ಲಿ ಕನಿಷ್ಠ ಹತ್ತು ಮರಗಳಿರಬೇಕು, ಗರಿಷ್ಠ ಮಿತಿ ಇಲ್ಲ.

15 ವರ್ಷದೊಳಗೆ ಇರುವ ಪ್ರತಿ ಮರಕ್ಕೆ ರೂ. 600 ವಿಮಾ ಮೊತ್ತ ನಿಗದಿಪಡಿಸಲಾಗಿದೆ. ಪ್ರತಿ ಮರಕ್ಕೆ ವರ್ಷಕ್ಕೆ 4.69 ರೂಪಾಯಿ ವಿಮಾ ಕಂತು ಇರುತ್ತದೆ. ಇದರಲ್ಲಿ ರೈತರು ಶೇ. 25ನ್ನು ಅಂದರೆ ರೂ.1.17 ಪಾವತಿಸಿದರೆ ಸಾಕು. 16 ವರ್ಷ ಮೇಲ್ಪಟ್ಟ ಮರಗಳಿಗೆ ರೂ.1,150 ವಿಮಾ ಮೊತ್ತ, ವಿಮಾ ಕಂತು ರೂ. 6.35 ಆಗಿದೆ.

ಇದರಲ್ಲಿ ರೈತರು ರೂ.1.59  ಪಾವತಿಸಬೇಕು. ಉಳಿಕೆ ವ್ಯತ್ಯಾಸದ ಹಣದಲ್ಲಿ ಶೇ.25ರಷ್ಟನ್ನು ತೋಟಗಾರಿಕಾ ಇಲಾಖೆ ಹಾಗೂ ಶೇ. 50ರಷ್ಟನ್ನು ತೆಂಗು ಅಭಿವೃದ್ಧಿ ಮಂಡಳಿ ಭರಿಸುತ್ತವೆ. 100 ತೆಂಗಿನ ಮರವಿದ್ದರೆ ರೂ. 117ರಿಂದ 159ರವರೆಗೆ ವಿಮಾ ಕಂತು ಕಟ್ಟಿದರೆ, ರೂ. 6000ದಿಂದ ರೂ. 11,500ರವರೆಗೆ ಪರಿಹಾರ ಪಡೆಯಬಹುದು.

ಪರಿಹಾರ ಹೇಗೆ ಪಡೆಯುವುದು?: ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲಿನಿಂದ ಕೂಡಿದ ಬಿರುಗಾಳಿ, ಚಂಡಮಾರುತ, ಪ್ರವಾಹ ಮತ್ತು ಜಲಾವೃತ್ತ, ಕೀಟ, ರೋಗಬಾಧೆಯಿಂದ ಮರಗಳ ಸಾವು, ಆಕಸ್ಮಿಕ ಬೆಂಕಿ, ಕಾಡ್ಗಿಚ್ಚು, ಸಿಡಿಲು, ಭೂಕಂಪ, ಭೂಕುಸಿತ, ಸುನಾಮಿಯಿಂದ ಮರಗಳು ಸಾಯುವುದು ಅಥವಾ ಅನುತ್ಪಾದಕವಾದಲ್ಲಿ ಒಟ್ಟು ನಷ್ಟದ ಶೇ.80ರಷ್ಟು ಪರಿಹಾರ ನೀಡಲಾಗುತ್ತದೆ. ಆದರೆ ವಿಮಾ ಕಂತು ಕಟ್ಟಿದ ಮೊದಲ ತಿಂಗಳೊಳಗೆ ಹಾನಿ ಸಂಭವಿಸಿದಲ್ಲಿ ಪರಿಹಾರ ಸಿಗಲಾರದು.

ವಿಮೆ ಮಾಡಿಸಲು ಹಾಗೂ ಪರಿಹಾರ ಪಡೆಯಲು ತೋಟಗಾರಿಕಾ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಹುದು. ಪ್ರಕೃತಿ ವಿಕೋಪದಿಂದ ಕೃಷಿ ಹಾನಿಯಾದಾಗ, ಸರ್ಕಾರ ಯಾವುದೇ ಪರಿಹಾರ ನೀಡಿದ ನಿದರ್ಶನಗಳಿಲ್ಲ. ಹಾಗಿರುವಾಗ ವಿಮಾ ಕಂತು ಕಟ್ಟಿದರೆ ಪರಿಹಾರ ಕೇಳುವ ಹಕ್ಕು ರೈತನಿಗಿದೆ. ಹಾಗಿದ್ದೂ ತೆಂಗಿನ ಮರಕ್ಕೆ ರೂ. 600ರಿಂದ 1150 ಎಂದು ದರ ನಿಗದಿ ಮಾಡಿದ್ದು ಅತ್ಯಲ್ಪವಾಯಿತು ಎನ್ನುವುದು ರೈತರ ಅನಿಸಿಕೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT