ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಕಾಯಿ ಕೀಳಲು ಟ್ರ್ಯಾಕ್ಟರ್‌ನಲ್ಲಿ ಸಾಧನ!

Last Updated 18 ಅಕ್ಟೋಬರ್ 2011, 5:05 IST
ಅಕ್ಷರ ಗಾತ್ರ

ದಾವಣಗೆರೆ: ಹಳ್ಳಿಗಳಲ್ಲಿ ತೆಂಗಿನಕಾಯಿಗಳನ್ನು ಕೀಳುವುದಕ್ಕೆ ಕೃಷಿ ಕಾರ್ಮಿಕರ ಕೊರತೆ ಕಂಡುಬರುತ್ತಿದೆ. ತೆಂಗಿನಕಾಯಿ ಬೆಲೆಯೂ ಹೆಚ್ಚೇನು ಇಲ್ಲದಿರುವುದರಿಂದ ಕೇವಲ ಕೀಳುವವರಿಗೇ ಹೆಚ್ಚಿನ ಕೂಲಿ ನೀಡುವುದು ನಷ್ಟವೇ. ಈ ತೊಂದರೆಯನ್ನು ನೀಗಿಸಲು ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು ಬೆಳ್ಳೊಡಿ ರೈತರೊಬ್ಬರು ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಮನೆಯಲ್ಲಿದ್ದ ಹಳೆಯ ವಸ್ತುಗಳನ್ನೇ ಬಳಸಿಕೊಂಡು ಕಾಯಿಕೀಳುವ ಸರಳ ಸಾಧನವನ್ನು ಆವಿಷ್ಕಾರ ಮಾಡಿದ್ದಾರೆ.

ಎನ್. ರೇವಣಸಿದ್ದಪ್ಪ ಈ ಆವಿಷ್ಕಾರ ಮಾಡಿರುವ ಪ್ರಗತಿಪರ ರೈತ. ಕೇವಲ ಎಸ್ಸೆಸ್ಸೆಲ್ಸಿ ಓದಿರುವ ಅವರು, ಕೃಷಿ ಚಟುವಟಿಕೆಗೆ ಅಗತ್ಯವಾದ ಸಾಧನ ರೂಪಿಸಿ ಸುತ್ತಮುತ್ತಲ ಗ್ರಾಮಗಳ ರೈತರ ಅಚ್ಚರಿ ಮತ್ತು ಮೆಚ್ಚುಗೆಗೆ ಕಾರಣರಾಗಿದ್ದಾರೆ. 

 ತಮ್ಮ ಟ್ರ್ಯಾಕ್ಟರ್‌ಗೆ ಸುಮಾರು 25 ಅಡಿ ಎತ್ತರದ ಏಣಿಯಂತಿರುವ ಕಬ್ಬಿಣದ ಸಾಧನವನ್ನು ಅಳವಡಿಸಿದ್ದಾರೆ. ಬೋರ್‌ವೆಲ್ ಕೊರೆಸಲು ತಂದಿದ್ದ ಕಬ್ಬಿಣದ ಪೈಪ್‌ಗಳು, ಸರಳು ಮತ್ತಿತರ ಸಾಮಗ್ರಿಗಳನ್ನು ಇದಕ್ಕೆ ಬಳಸಿದ್ದಾರೆ. ತುದಿಯಲ್ಲಿ ಒಬ್ಬರು ನಿಲ್ಲುವಂತೆ (ತೊಟ್ಟಿಲಿನ ರೀತಿ) ಬಾಕ್ಸ್ ಸಿದ್ಧಪಡಿಸಿದ್ದಾರೆ. ಇದರಲ್ಲಿ ನಿಂತು ತೆಂಗಿನಕಾಯಿ ಕೀಳಬಹುದು. ಟ್ರ್ಯಾಕ್ಟರ್ ಮುಂದಕ್ಕೆ ಸಾಗಿದರೆ ಮತೊಂದು ಮರದಲ್ಲಿ ಕಾಯಿ ಕೀಳಬಹುದು. ಇದರಿಂದ ಮರ ಹತ್ತಿಯೇ ಕಾಯಿ ಕೀಳಬೇಕಾದ ಪ್ರಸಂಗ ಇರುವುದಿಲ್ಲ. ಇದು ಸರಾಗವಾದ ಕೆಲಸವೂ ಹೌದು.

`ತಂದೆ ಅವರು ಮನೆಯಲ್ಲಿಯೇ ಇದ್ದ ಸಾಮಗ್ರಿಗಳನ್ನು ಬಳಸಿ 25 ಸಾವಿರ ವೆಚ್ಚದಲ್ಲಿ ಈ ಸಾಧನದ ಆವಿಷ್ಕಾರ ಮಾಡಿದ್ದಾರೆ. 8-10 ವರ್ಷಗಳಿಂದಲೂ ಇದನ್ನು ಬಳಸಿ ನಮ್ಮ ತೋಟದಲ್ಲಿ  ತೆಂಗಿನಕಾಯಿ ಕೀಳುತ್ತಿದ್ದೇವೆ. ಇದರ ಕೆಲ ಕೆಲಸಗಳನ್ನು ಮಾತ್ರವೇ ವರ್ಕ್‌ಶಾಪ್‌ನಲ್ಲಿ ಮಾಡಿಸಿದ್ದೇವೆ. ಉಳಿದ ಬಹುಪಾಲು ಸಿದ್ಧತಾ ಕೆಲಸವನ್ನು ಮನೆಯಲ್ಲಿಯೇ ಕೈಗೊಂಡೆವು.

ಇದರಿಂದ ಬಹಳಷ್ಟು ಉಪಯೋಗ ಆಗಿದೆ. ಕಾಯಿ ಕೀಳುವುದಕ್ಕೆ ಕೂಲಿಯವರನ್ನು ಅವಲಂಬಿಸುವುದು ಮತ್ತು ಹುಡುಕಾಡುವುದು ತಪ್ಪಿದೆ~ ಎಂದು ದಾವಣಗೆರೆಯಲ್ಲಿ ಆಯೋಜಿಸಿದ್ದ ತೋಟಗಾರಿಕೆ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಜಯ್ (ಸಾಧನ ಸಿದ್ಧಪಡಿಸಿದ್ದ ರೈತ ಎನ್. ರೇವಣಸಿದ್ದಪ್ಪ) `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.

ನಮ್ಮದು 37 ಎಕರೆ ಜಮೀನಿದೆ. 10 ಎಕರೆಯಲ್ಲಿ 400 ತೆಂಗಿನ ಮರಗಳಿವೆ. ಇವುಗಳಲ್ಲಿ ತೆಂಗಿನಕಾಯಿ ಕೀಳಲು ಈ ಟ್ರ್ಯಾಕ್ಟರ್‌ನಲ್ಲಿರುವ ಏಣಿಯ ಸಾಧನ ಬಳಸುತ್ತಿದೇವೆ. ಮಾವಿನಕಾಯಿಯನ್ನೂ ಇದರಲ್ಲೇ ಕೀಳುತ್ತಿದ್ದೇವೆ. ನುಸಿರೋಗಕ್ಕೆ ಔಷಧಿ ಸಿಂಪಡಿಸುವ ಕೆಲಸವನ್ನೂ ಮಾಡುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಈ ಸಾಧನವನ್ನು ಅಳವಡಿಸುವುದು ಮತ್ತು ತೆಗೆಯುವುದು ಸುಲಭ. ಕೃಷಿ ಕಾರ್ಮಿಕರಾದರೆ ಕಾಯಿ ಕೀಳಲು ಮರವೊಂದಕ್ಕೆ ರೂ. 20 ಕೇಳುತ್ತಾರೆ. ಈ ಕೂಲಿ ಹಣವೂ ತೆಂಗಿನಕಾಯಿ ಮಾರಾಟದಿಂದ ಸಿಗುವುದಿಲ್ಲ. ಇದರಿಂದ ನಷ್ಟವೇ ಹೆಚ್ಚು. ಆದರೆ, ಟ್ರ್ಯಾಕ್ಟರ್‌ನ ಸಾಧನದಲ್ಲಿ ದಿನಕ್ಕೆ 200 ಮರಗಳಲ್ಲಿ ಕಾಯಿ ಕೀಳಬಹುದು. ಇದಕ್ಕೆ 5 ಲೀಟರ್ ಡೀಸೆಲ್ ಸಾಕಾಗುತ್ತದೆ. ಚಾಲಕ ಹಾಗೂ ಕಾಯಿ ಕೀಳುವವರಿಗೆ ತಲಾ ರೂ. 150 ಕೊಟ್ಟರೆ ಸಾಕು. ಹೀಗಾಗಿ, ಇತರೆ ಖರ್ಚು ಉಳಿಸಬಹುದು ಎನ್ನುತ್ತಾರೆ ಅವರು.

ನಮ್ಮ ತೋಟದಲ್ಲಿ ಮಾತ್ರವೇ ಇದನ್ನು ಬಳಸುತ್ತೇವೆ, ಬಾಡಿಗೆ ಹೋಗುವುದಿಲ್ಲ ಮತ್ತು ಕೊಡುವುದಿಲ್ಲ. ಟ್ರ್ಯಾಕ್ಟರ್ ಹೊಂದಿರುವ ಆಸಕ್ತರಿಗೆ ಸಿದ್ಧಪಡಿಸುವುದು ಹೇಗೆ ಎಂದು ಹೇಳಿಕೊಡುತ್ತೇವೆ (ಮೊಬೈಲ್: 90089 38494) ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT