ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಂಗಿನಗರಿ ಸೂರಿನ ಶಾಲೆಗೆ ತಾರಸಿ ಕಟ್ಟಡ

Last Updated 24 ಜನವರಿ 2012, 11:40 IST
ಅಕ್ಷರ ಗಾತ್ರ

ಮುಡಿಪು: ಶಾಲೆಗೆ ಸ್ವಂತ ಕಟ್ಟಡವಿಲ್ಲದೆ ತೆಂಗಿನಗರಿಯ ಸೂರಿನಡಿ ವರ್ಷವಿಡೀ ಪಾಠ ಕೇಳಿದ ಮಕ್ಕಳಿಗೆ ಇದೀಗ ಸುಸಜ್ಜಿತ ನೂತನ ಕಾಂಕ್ರೀಟ್ ಸೂರಿನ ಶಾಲೆಯಲ್ಲಿ ಕುಳಿತು ಪಾಠ ಕೇಳುವ ಅವಕಾಶ ದೊರೆತಿದೆ. ಮಳೆಗಾಲದಲ್ಲಿ ತೆಂಗಿನ ಗರಿಯ ನಡುವಿನಿಂದ ಸುರಿಯುವ ಮಳೆಯ ನೀರು, ಪೀಠೋಪಕರಣಗಳ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ಉತ್ತಮ ಸಾಧನೆ ತೋರಿದ್ದ ವಿದ್ಯಾರ್ಥಿಗಳು ಇದೀಗ ನೂತನ ಕಟ್ಟಡಕ್ಕೆ ತೆರಳಿ ಪಾಠ ಕೇಳುವ ತವಕದಲ್ಲಿದ್ದಾರೆ.

ಕೊಣಾಜೆಯ ಮಂಗಳೂರು ವಿ.ವಿ. ಬಳಿಯ ಕೊಣಾಜೆ ಪದವು ಸಕಾರಿ ಸಂಯುಕ್ತ ಪ್ರೌಢಶಾಲೆಯ ನೂತನ ಕಟ್ಟಡವನ್ನು ಸಚಿವ ಕೃಷ್ಣ ಪಾಲೆಮಾರ್ ಇದೇ 24ರಂದು ಉದ್ಘಾಟಿಸಲಿದ್ದಾರೆ.

ಕೊಣಾಜೆಯಲ್ಲಿ ಪ್ರೌಢಶಾಲೆ ಆರಂಭವಾಗಿ ಆರು ವರ್ಷಗಳಾದರೂ ಶಾಲೆಗೆ ಸ್ವಂತ ಕಟ್ಟಡ ಇರಲಿಲ್ಲ. ಶಾಲೆ ಬಳಿ ಇದ್ದ ಮಂಗಳ ಗ್ರಾಮೀಣ ಯುವಕ ಸಂಘದವರು ಶಾಲೆ ವಿದ್ಯಾರ್ಥಿಗಳ ಸಂಕಷ್ಟ ಅರಿತು ಪ್ರಾರಂಭದಿಂದಲೇ ಕಟ್ಟಡ ಶಾಲೆಗೆ ಬಿಟ್ಟುಕೊಟ್ಟಿದ್ದರು. ಆದರೆ ಆ ಕಟ್ಟಡದಲ್ಲಿ ಕೇವಲ ಎರಡು ಕೊಠಡಿಗಳು  ಇದ್ದುದರಿಂದ ಇನ್ನುಳಿದ ತರಗತಿಗಳಿಗೆ ಕೊಠಡಿ ಇರಲಿಲ್ಲ. ಸ್ವಂತ ಕಟ್ಟಡಕ್ಕಾಗಿ ಆ ಸಂದರ್ಭ ಶಿಕ್ಷಕಿಯರು ಹಾಗೂ ಸ್ಥಳೀಯರು ಬೇಡಿಕೆಯಿತ್ತರೂ ಸಮಸ್ಯೆ ಪರಿಹಾರ ಆಗಲಿಲ್ಲ. ಬಳಿಕ ವಿದ್ಯಾರ್ಥಿಗಳ ಸಂಕಷ್ಟ ಅರಿತ ಸ್ಥಳೀಯರು ಹಾಗೂ ಯುವಕ ಸಂಘಸದಸ್ಯರು ತೆಂಗಿನ ಗರಿಯ ಸೂರಿನ ಗುಡಿಸಲನ್ನು ವಿದ್ಯಾರ್ಥಿಗಳಿಗೆ ತರಗತಿಯಾಗಿ ನಿರ್ಮಿಸಿಕೊಟ್ಟಿದ್ದರು.

ಆದರೂ ಮಳೆಗಾಲದಲ್ಲಿ ತೆಂಗಿನ ಗರಿಯ ಸೂರಿನ ಶಾಲೆಯಲ್ಲಿ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದರು.

ಪ್ರತಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಪಲಿತಾಂಶವನ್ನು ನೀಡುತ್ತಾ ಬಂದಿದ್ದು, 2010-11ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.100 ಪಲಿತಾಂಶ ಗಳಿಸಿದ್ದರು. ಗ್ರಾಮಾಂತರ ಪ್ರದೇಶದ ತೆಂಗಿನಗರಿಯ ಸೂರಿನಡಿ ಕುಳಿತು ಪಾಠ ಕೇಳಿದ ವಿದ್ಯಾರ್ಥಿಗಳು ನೂರರಷ್ಟು ಫಲಿತಾಂಶವನ್ನು ದಾಖಲಿಸಿ ಸಾಧನೆಯ ಹಿರಿಮೆಯನ್ನು ತೋರಿಸಿ ರಾಜ್ಯಮಟ್ಟದಲ್ಲೇ ಮೆಚ್ಚುಗೆಗೆ ಪಾತ್ರವಾಗಿದ್ದರು.

ಕೊಣಾಜೆ ಪ್ರೌಢಶಾಲೆ ವಿದ್ಯಾರ್ಥಿಗಳು ಸ್ವಂತ ಕಟ್ಟಡವಿಲ್ಲದೆ ತೆಂಗಿನಗರಿಯ ಸೂರಿನಡಿ ಕುಳಿತು ಪಾಠ ಕೇಳುವ ಸಂಕಷ್ಟದ ಬಗ್ಗೆ `ಪ್ರಜಾವಾಣಿ~ 2010ರ ಜೂನ್ 11ರ ಸಂಚಿಕೆಯಲ್ಲಿ ಸಚಿತ್ರ ವರದಿಪ್ರಕಟಿಸಿತ್ತು.

ಇದಕ್ಕೆ ಸ್ಪಂದಿಸಿದ ಜನಪ್ರತಿನಿಧಿಗಳು ಹಾಗೂ ಸರ್ಕಾರ ಸ್ವಂತ ಕಟ್ಟಡಕ್ಕೆ ರಾಜ್ಯ ಯೋಜನೆಯಡಿ ರೂ.25 ಲಕ್ಷ, ನಬಾರ್ಡ್ ಯೋಜನೆಯಡಿ ರೂ.9 ಲಕ್ಷ, ಅಕ್ಷರ ದಾಸೋಹ ಯೋಜನೆಯಡಿ ರೂ.1.20 ಲಕ್ಷ, ಪಂಚಭೂತ ಸೌಲಭ್ಯದಡಿಯಲ್ಲಿ ರೂ.1.55 ಹಾಗೂ ರೂ.70 ಸಾವಿರ, ಪೀಠೋಪಕರಣಕ್ಕಾಗಿ ನಬಾರ್ಡ್‌ನಿಂದ ರೂ.1 ಲಕ್ಷ, ರಾಜ್ಯಯೋಜನೆಯಡಿ ಪೀಠೋಪಕರಣಕ್ಕಾಗಿ ರೂ.3 ಲಕ್ಷ, ಜಿ.ಪಂ ವತಿಯಿಂದ ರೂ.38 ಸಾವಿರ ಅನುದಾನ ಮಂಜೂರಾಗಿ ಕೊಣಾಜೆ ಪದವು ಪ್ರಾಥಮಿಕ ಶಾಲೆ ಬಳಿ ನೂತನ ಕಟ್ಟಡ ಕಾಮಗಾರಿ ಆರಂಭಗೊಂಡಿತ್ತು.
 
ಅಲ್ಲದೆ ಸ್ಥಳೀಯ ದಾನಿಗಳೂ ಶಾಲೆಯ ಕಾಮಗಾರಿಗೆ ಸಹಕರಿಸಿದರು. ಇದೀಗ ಸರ್ಕಾರಿ ಪ್ರೌಢಶಾಲೆಯ ನೂತನ ಕಟ್ಟಡ ಸುಸಜ್ಜಿತವಾಗಿ ನಿರ್ಮಾಣವಾಗಿದ್ದರೂ ಸುಮಾರು ರೂ.5.5 ಲಕ್ಷದಷ್ಟು ಅನುದಾನದ ಕೊರತೆ ಇದೆ. 

ಶಾಲೆ ಅಭಿವೃದ್ಧಿಗೆ ಸರ್ಕಾರ, ಜನಪ್ರತಿನಿಧಿಗಳು, ಸ್ಥಳೀಯರು ಹಾಗೂ ಮಂಗಳ ಗ್ರಾಮೀಣ ಯುವಕ ಸಂಘವು ಬಹಳಷು ಶ್ರಮಿಸಿದ್ದು ಇವರೆಲ್ಲರ ಪರಿಶ್ರಮದಿಂದ ವಿದ್ಯಾರ್ಥಿಗಳು ಇಂದು ಉತ್ತಮ ಸುಸಜ್ಜಿತ ಶಾಲೆಯಲ್ಲಿ ಕುಳಿತು ಪಾಠಕೇಳುವ ಅವಕಾಶ ದೊರೆತಿದೆ ಎಂದು ಶಾಲೆಮುಖ್ಯಶಿಕ್ಷಕಿ ಮೀನಾಗಾಂವ್ಕರ್ ಪ್ರಜಾವಾಣಿಗೆ ತಿಳಿಸಿದರು.

ಈಡೇರಿದ ಕನಸು: ಇಲ್ಲಿ ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ ನಿರ್ಮಾಣವಾಗ ಬೇಕೆಂಬುದು ಹಲವು ವರ್ಷದ ಕನಸು.  ಅಲ್ಲದೆ ಹೈಸ್ಕೂಲ್‌ಗೆ ಸ್ವಂತ ಕಟ್ಟಡ ಇಲ್ಲದಕ್ಕಾಗಿ ತೆಂಗಿನ ಗರಿಯ ಸೂರಿನ ಶಾಲಾ ಕೊಠಡಿಯನ್ನು ನಿರ್ಮಿಸಿ ಸ್ವಂತ ಕಟ್ಟಡಕ್ಕಾಗಿ ಬಹಳಷ್ಟು ಪ್ರಯತ್ನ ನಡಿಸಿದ್ದೆವು. ಇದೀಗ ನಮ್ಮ ಊರಿನ ಕನಸು ಈಡೇರಿದೆ ಎಂದು ಮಂಗಳಗ್ರಾಮೀಣ ಯುವಕ ಸಂಘದ ಸದಸ್ಯ, ಅಚ್ಯುತಗಟ್ಟಿ ಹರ್ಷ ವ್ಯಕ್ತಪಡಿಸಿದರು.

ಸಂತಸ: ನಮ್ಮ ಶಾಲೆಗೆ ಸ್ವಂತ ಕಟ್ಟಡ ಇಲ್ಲದೆ ತೆಂಗಿನ ಗರಿಯ ಗುಡಿಸಲಿನಲ್ಲಿ ಪಾಠ ಕೇಳುತ್ತಿದ್ದೆವು. ಮಳೆಗಾಲದಲ್ಲಿ ನೀರು ಬೀಳುತ್ತಿದ್ದರಿಂದ ಪಾಠ ಕೇಳಲು ತುಂಬಾ ಕಷ್ಟ ಆಗುತ್ತಿತ್ತು. ಆದರೆ ಇದೀಗ ಸ್ವಂತ ಕಟ್ಟಡದಲ್ಲಿ ಕುಳಿತುಕೊಳ್ಳುವ ಅವಕಾಶ ನಮಗೆ ದೊರೆತಿತ್ತು ಬಹಳಷ್ಟು ಖುಷಿ ತಂದಿದೆ ಎಂದು ಶಾಲೆಯ ಎಂಟನೆಯ ತರಗತಿ ವಿದ್ಯಾರ್ಥಿ ದರ್ಶನ್ ಪ್ರಜಾವಾಣಿಯೊಂದಿಗೆ ಸಂತಸ ಹಂಚಿಕೊಂಡ.

-ಸತೀಶ್ ಕೊಣಾಜೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT